ಪುಸ್ತಕ ಪ್ರಿಯರಿಗಿದು ಸರಸ್ವತಿ ದೇವಿಯ ದೇವಾಲಯ!

By Web Desk  |  First Published Jun 1, 2019, 12:49 PM IST

ಜೀವನದಲ್ಲಿ ಗುರು ಇದ್ದರೆ ಗುರಿ ಮುಟ್ಟಲು ಸುಲಭ. ಅದಕ್ಕಿಂತ ಜೀವನದಲ್ಲಿ ಪುಸ್ತಕ ಪ್ರೀತಿ, ಬರೀ ಪ್ರೀತಿಯಷ್ಟೇ ಅಲ್ಲ ಓದುವ ಹವ್ಯಾಸ ಇದ್ದರೆ ಅದೇ ಗುರಿಯತ್ತ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಬಿಸಿಲ ನಾಡಿನ ಈ ಸರಸ್ವತಿ ದೇವರ ಆಲಯ ಸಾಕ್ಷಿ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿರಕ್ತಮಠದಲ್ಲಿ ‘ಪಂ.ಸಿದ್ಧಲಿಂಗ ಶಾಸ್ತ್ರಿ ಸ್ಮಾರಕ ಗ್ರಂಥಾಲಯ’ ಪ್ರಾಚೀನ ಕಾಲದ ಪುಸ್ತಕದಿಂದ ಇಂದಿನ ಕಾಲದ ಪುಸ್ತಕಗಳು ಇಲ್ಲಿದೆ. ಇದು ಓದಿನ ಜೊತೆಗೆ ಅನೇಕ ವಿದ್ಯಾರ್ಥಿಗಳ ಸಂಶೋಧನೆಗೂ ಅನುಕೂಲವಾಗಿದೆ. ಮಠದ ಶ್ರೀಪ್ರಭುದೇವರ ಸಂಸ್ಥಾನ ಸಾವಿರಾರು ಪುಸ್ತಕ ಪ್ರಿಯರ ನೆಚ್ಚಿನ ತಾಣವೂ ಹೌದು. ಈ ಗ್ರಂಥಾಲಯದ ಕುರಿತ ಪರಿಚಯ ಇಲ್ಲಿದೆ.


ಕೆ.ಎಂ.ಮಂಜುನಾಥ್‌, ಬಳ್ಳಾರಿ

ವಿರಕ್ತ ಮಠಕ್ಕೆ ಕಾಲಿಡುತ್ತಿದ್ದಂತೆಯೇ ಸಾರಸ್ವತ ಲೋಕಕ್ಕೆ ಕಾಲಿಟ್ಟಅನುಭೂತಿ ನೀಡುತ್ತದೆ. ಸಾವಿರಾರು ಪುಸ್ತಕಗಳ ಸಂಗ್ರಹ, ಸಮೃದ್ಧ ಗ್ರಂಥಾಲಯದಿಂದ ಈ ‘ಮಠ’ದಲ್ಲಿ ಸರಸ್ವತಿ ಭದ್ರವಾಗಿ ನೆಲೆಯೂರಿದ್ದಾಳೆ ಎಂದು ಅಕ್ಷರ ಪ್ರಿಯರಿಗೆ ಗೋಚರಿಸುತ್ತದೆ. ಮಠದ ಶ್ರೀಪ್ರಭುಸ್ವಾಮೀಜಿ ಅವರ ಪುಸ್ತಕ ಪ್ರೀತಿಯಿಂದಾಗಿ ಬರೋಬ್ಬರಿ 27 ಸಾವಿರಕ್ಕೂ ಅಧಿಕ ನಾನಾ ಪ್ರಕಾರಗಳ ಪುಸ್ತಕಗಳು ಸಂಗ್ರಹವಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯ ಆಕರ ಸಂಗ್ರಹವಾಗಿದೆ. ಹೀಗೆ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ಜನರಲ್ಲಿ ಓದುವ ಹವ್ಯಾಸ ಬೆಳೆಸುವುದರ ಮೂಲಕ ಪುಸ್ತಕ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ.

Tap to resize

Latest Videos

undefined

ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಶೈಕ್ಷಣಿಕ ಸೇವೆ, ಕೃಷಿ, ಧರ್ಮ ಪ್ರಸಾರ- ಪರಿಚಲನೆಗಳನ್ನು ಕಾಯಕ ರೂಪದಲ್ಲಿ ಅನುಷ್ಠಾನಗೊಳಿಸುತ್ತಿರುವ ಶ್ರೀಗಳು, ಜನರನ್ನು ಓದಿಗೆ ಹಚ್ಚಿ ಪುಸ್ತಕದ ಹುಚ್ಚು ಹೆಚ್ಚಿಸಿದ್ದಾರೆ. ನಿರಂತರ ಅಧ್ಯಯನದ ಲಾಭ ಸಮಾಜಕ್ಕಾಗಬೇಕು ಎಂಬ ಆಶಯದಿಂದ 1997ರಿಂದ ‘ಪಂ.ಸಿದ್ಧಲಿಂಗ ಶಾಸ್ತ್ರಿ ಸ್ಮಾರಕ ಗ್ರಂಥಾಲಯ’ವನ್ನು ಆರಂಭಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಓದಿನ ಆಸಕ್ತಿ ಜನರಿಗಾಗಿ ಪ್ರಾಚೀನ ಹಾಗೂ ಆಧುನಿಕ ಗ್ರಂಥ ಭಂಡಾರವನ್ನೇ ಸ್ಥಾಪಿಸಿದ್ದಾರೆ.

ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

ಗ್ರಂಥಾಲಯ ಪ್ರಾರಂಭ

ಸಂಡೂರು ವಿರಕ್ತಮಠದ ಶ್ರೀ ಪ್ರಭು ಸ್ವಾಮಿಗಳ ಓದಿನ ಆಸಕ್ತಿಯಿಂದಾಗಿ 1997ರಲ್ಲಿ ಒಂದು ಸಾವಿರ ಪುಸ್ತಕಗಳೊಂದಿಗೆ ಗ್ರಂಥಾಲಯ ಸ್ಥಾಪಿಸಲಾಯಿತು. ವರ್ಷದಿಂದ ವರ್ಷಕ್ಕೆ ಇಲ್ಲಿನ ಪುಸ್ತಕಗಳ ಸಂಖ್ಯೆ ಏರುತ್ತಲಿದೆ. ಇದೀಗ ಗ್ರಂಥಾಲಯದಲ್ಲಿ ಬರೋಬ್ಬರಿ 27 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಉರ್ದು ಭಾಷೆಯ ಪುಸ್ತಕಗಳು ಓದಲು ಇಲ್ಲಿ ಸಿಗುತ್ತವೆ.

ಗ್ರಂಥಾಲಯ ಸ್ಥಾಪನೆಯ ಉದ್ದೇಶ

1984ರಲ್ಲಿ ಸಂಡೂರು ವಿರಕ್ತಮಠಕ್ಕೆ ಬಂದ ಶ್ರೀಪ್ರಭುದೇವರಿಗೆ 1994ರಲ್ಲಿ ಪಟ್ಟಾಧಿಕಾರವಾಯಿತು. ಈ ಮೊದಲೇ ಇದ್ದ ಓದಿನ ಹವ್ಯಾಸ ಮಠಕ್ಕೆ ಬಂದ ಬಳಿಕ ಮತ್ತಷ್ಟುಹೆಚ್ಚಾಯಿತು. ಅಂದಿನಿಂದ ಪುಸ್ತಕಗಳನ್ನು ಓದುವ, ಖರೀದಿಸುವುದು ಹೆಚ್ಚಾಯಿತು. ಶ್ರೀಗಳು ಓದಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಓದಿನಿಂದ ಮಾತ್ರ ಯಾವುದೇ ವಿಷಯದ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯ. ಹೀಗಾಗಿಯೇ ನಾನು ಪುಸ್ತಕಗಳನ್ನು ಓದುವ ಹಾಗೂ ಖರೀದಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಂಡೆ ಎನ್ನುತ್ತಾರೆ ಶ್ರೀಗಳು.

ಯಾವೆಲ್ಲಾ ಪುಸ್ತಕಗಳಿವೆ

ವೀರಶೈವ ಲಿಂಗಾಯತ ಸಾಹಿತ್ಯ, ವ್ಯಕ್ತಿಚಿತ್ರ, ಅಭಿನಂದನಾ ಗ್ರಂಥ, ಕಾವ್ಯ, ನಿಘಂಟು, ಪ್ರವಾಸ ಸಾಹಿತ್ಯ, ಆತ್ಮಕಥೆ, ಮಹಿಳಾ ಸಾಹಿತ್ಯ, ಧರ್ಮ-ಸಂಸ್ಕೃತಿ, ವೇದ-ಉಪನಿಷತ್‌, ಭಗವದ್ಗೀತೆ, ರಾಮಾಯಣ, ಭಾಗವತ, ಮಹಾಭಾರತ, ಕುರಾನ್‌(ಕುರಾನ್‌ನ ತುಂಬಾ ಹಳೆಯ ಪುಸ್ತಕಗಳು ಗ್ರಂಥಾಲಯದಲ್ಲಿವೆ) ಬೈಬಲ್‌, ವಿಜ್ಞಾನ, ಸಂಶೋಧನೆ, ನಾಟಕಗಳು, ಜಾನಪದ, ಕಾದಂಬರಿ, ಕಥಾ ಸಾಹಿತ್ಯ ಹೀಗೆ ವಿವಿಧ ಪ್ರಕಾರಗಳು ಇವೆ. ಯಾವುದೇ ಪುಸ್ತಕದ ಹುಡುಕಾಟಕ್ಕೆ ಬಂದವರಿಗೆ ಇಲ್ಲಿ ನಿರಾಸೆಯಾಗುವುದಿಲ್ಲ. ನೂರಾರು ಸಂಖ್ಯೆಯಲ್ಲಿ ಎಲ್ಲ ಪ್ರಕಾರಗಳ ಪುಸ್ತಕಗಳಿರುವುದರಿಂದ ಓದುಗನಾಸಕ್ತಿಯ ಪುಸ್ತಕ ಇಲ್ಲಿ ಸಿಗುತ್ತದೆ.

ಪುಸ್ತಕ-ಸಾಹಿತ್ಯ ಕುರಿತು ವಿಚಾರ ಸಂಕಿರಣ

ಪುಸ್ತಕಗಳ ಖರೀದಿ, ಗ್ರಂಥಾಲಯ, ಓದುಗರಿಗೆ ಪುಸ್ತಕ ನೀಡುವಿಕೆಯ ಜೊತೆಗೆ ಶ್ರೀಮಠದಲ್ಲಿ ಪುಸ್ತಕ ಹಾಗೂ ಸಾಹಿತ್ಯ ಕುರಿತ ವಿಚಾರ ಸಂಕಿರಣ, ವಚನ ಸಾಹಿತ್ಯ ಸೇರಿದಂತೆ ವಿವಿಧ ಪ್ರಕಾರಗಳ ಕೃತಿಗಳು ಕುರಿತು ಸಂಕಿರಣ ಹಾಗೂ ಗೋಷ್ಠಿಗಳು ನಡೆಯುತ್ತದೆ. ಅನೇಕ ಪ್ರಾಜ್ಞರು ಭಾಗವಹಿಸಿ, ವಿಚಾರ ಮಂಡಿಸುತ್ತಾರೆ. ಎಂ.ಕೆ.ಇಂದಿರಾ, ಬೆಳಗೆರೆ ಕೃಷ್ಣಶಾಸ್ತ್ರಿ ಸೇರಿದಂತೆ ಏಳು ಸಾಹಿತಿಗಳ ಜನ್ಮಶತಮಾನೋತ್ಸವ ಹಾಗೂ ವಿಚಾರ ಸಂಕಿರಣವನ್ನು ಮಠದಲ್ಲಿ ನಡೆಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವವನ್ನೂ ಮಠದಲ್ಲಿ ಆಯೋಜಿಸಿ ಶ್ರೀಗಳು, ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಪರಿಷತ್ತಿನ ಸೇವೆಯನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದಾರೆ.

ಮಠದ ಪ್ರಕಾಶನಿಂದಲೂ ಪುಸ್ತಕ ಪ್ರಕಟಣೆ

ಶ್ರೀಗಳ ಜನಕಲ್ಯಾಣ ಸಂಸ್ಥೆಯ ಪ್ರಕಾಶನದಿಂದ ಈವರೆಗೂ 32 ಕೃತಿಗಳು ಬಿಡುಗಡೆಗೊಂಡಿವೆ. 6 ಪಿಎಚ್‌ಡಿ, 6 ಎಂಫಿಎಲ್‌, 2 ಅನುವಾದ ಸಾಹಿತ್ಯ ಪುಸ್ತಕಗಳು, ಸಮಗ್ರ ಕಾವ್ಯ ಸೇರಿ ತೆಲುಗು ಹಾಗೂ ತಮಿಳಿನಿಂದ ಅನುವಾದ ಪುಸ್ತಕಗಳನ್ನು ಹೊರ ತರಲಾಗಿದೆ. ಮಠದಿಂದ ಪ್ರತಿವರ್ಷ ರು. 50 ಸಾವಿರ ಪುಸ್ತಕ ಖರೀದಿಗಾಗಿಯೇ ಖರ್ಚು ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸಲಾಗಿದೆ. ಸಾಹಿತ್ಯ ಸಮ್ಮೇಳನಗಳು ಸೇರಿ ಬೆಂಗಳೂರು ಮತ್ತಿತರೆ ಭಾಗಗಳ ಪ್ರಕಾಶನಗಳಿಂದ ಶ್ರೀಗಳು ನೇರವಾಗಿ ಪುಸ್ತಕಗಳನ್ನು ಖರೀದಿಸುತ್ತಾರೆ.

ಭೂಮಿ ಮೇಲಿನ ಸ್ವರ್ಗ 'ಮಾಯಾ ಬೇ': ಆದರೆ ಪ್ರವಾಸಿಗರಿಗಿಲ್ಲ ಪ್ರವೇಶ!

ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲ

ಹಂಪಿ ಕನ್ನಡ ವಿಶ್ವವಿದ್ಯಾಲಯ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಸೇರಿ ಅನೇಕರು ಇಲ್ಲಿಗೆ ಬರುತ್ತಾರೆ. ಅವರಿಗೆ ಬೇಕಾದ ಪುಸ್ತಕಗಳು ಇಲ್ಲಿ ಸಿಗುತ್ತಿವೆ. ಪ್ರಾಚೀನ ಪುಸ್ತಕಗಳು ಸಹ ಅವರಿಗೆ ಸಿಗುವುದರಿಂದ ಸಂಶೋಧನೆಗೆ ಹೆಚ್ಚು ನೆರವಾಗುತ್ತದೆ. ಇದಲ್ಲದೆ, ಸ್ಥಳೀಯ ಓದುಗರಿಗೆ ಗ್ರಂಥಾಲಯದಿಂದ ಓದಲು ಪುಸ್ತಕ ಕೊಡಲಾಗುವುದು. ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ ಮನೆಗೆ ಕೊಂಡೊಯ್ಯಲು ಯಾವುದೇ ಹಣ ಮುಂಗಡ ಇಡಬೇಕಾಗಿಲ್ಲ. ಮನೆಗೆ ಒಯ್ದ ಪುಸ್ತಕ ತಂದುಕೊಡಬೇಕು. ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದು ನನಗೆ ಹೆಚ್ಚು ಖುಷಿ ನೀಡಿದೆ ಎನ್ನುತ್ತಾರೆ ಶ್ರೀಪ್ರಭುಸ್ವಾಮಿಗಳು.

click me!