ರಾಜಕಾರಣಿಗಳನ್ನು ಬೈಯ್ದು ದಕ್ಕಿಸಿಕೊಳ್ಳುತ್ತಿದ್ದರು ಮಾಸ್ಟರ್ ಹಿರಣ್ಣಯ್ಯ

By Web Desk  |  First Published May 3, 2019, 10:08 AM IST

ಕನ್ನಡ ರಂಗಭೂಮಿಯ ಸೂಪರ್‌ಸ್ಟಾರ್ ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರ ನಾಟಕ ದೇಶವಿದೇಶಗಳೂ ಸೇರಿದಂತೆ ಹನ್ನೊಂದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.   ಕನ್ನಡ ಚಿತ್ರರಂಗ ವಿದೇಶದಲ್ಲಿ ಬಾವುಟ ಹಾರಿಸುವ ಮೊದಲೇ ಅಮೆರಿಕಾ, ಇಂಗ್ಲೆಂಡು, ಆಸ್ಟ್ರೇಲಿಯಾಗಳಲ್ಲಿ ನಾಟಕ ಮಾಡಿದವರು ಹಿರಣ್ಣಯ್ಯ. 


ಅದು ಬೆಂಗಳೂರಿನ ಬನಶಂಕರಿಯಲ್ಲಿರುವ ‘ರಂಗಭೂಮಿ’ ಹೆಸರಿನ ಮನೆ. ಆ ಮನೆಯ ಮುಂದೆ ನಿಶ್ಚಲವಾಗಿ ಮಲಗಿದ್ದ ದೇಹ, ಒಂದು ಕಾಲದಲ್ಲಿ ಎಷ್ಟೊಂದು ಮಾತನಾಡಿತ್ತು! ‘ಮಾತು ಮನೆ ಕೆಡಿಸಿತು’ ಅಂತಾರೆ. ಆದರೆ, ಆ ಮಾತೇ ಒಂದು ಕಾಲದಲ್ಲಿ ತೀರಾ ಸಾಮಾನ್ಯನ ಪಾಲಿನ ಹೀರೋ ಆಗಿತ್ತು, ಅವನ ಪಾಲಿಗೆ ಅದೇ ಆಯುಧವಾಗಿತ್ತು.

ಯಾರ ಭಯವೂ ಇಲ್ಲದೆ ಆ ಮಾತನಾಡುತ್ತಿದ್ದ, ಭ್ರಷ್ಟರಾಜಕಾರಣಿಗಳನ್ನು ಮಾತಿನ ಮೂಲಕವೇ ಜಾಲಾಡುತ್ತಿದ್ದ ವ್ಯಕ್ತಿ ಸಾಮಾನ್ಯರ ಪಾಲಿನ ಹೀರೋ, ಭ್ರಷ್ಟರಾಜಕಾರಣಿಗಳ ಪಾಲಿಗೆ ಖಳನಾಯಕನಾಗಿ ಕಾಣಲಿಲ್ಲ ನೋಡಿ! ಅದು ಮಾಸ್ಟರ್‌ ಹಿರಣ್ಣಯ್ಯ ಎನ್ನುವ ರಂಗಭೂಮಿಯ ಮಾಸ್ಟರ್‌ ಮಾತಿನ ತಾಕತ್ತು ಮತ್ತು ಶಕ್ತಿ.

Tap to resize

Latest Videos

undefined

ಜನರ ಸ್ಮೃತಿಪಟಲದಿಂದ ಮರೆಯಾಗದವರನ್ನು ಅವರ ಪ್ರತಿಭೆಯ ಜತೆಗೆ ಅವರ ಹೊರ ನೋಟ (ಔಟ್‌ ಲುಕ್‌)ದಿಂದಲೇ ಗುರುತಿಸಿಬಿಡುತ್ತೇವೆ. ದೊಗಲೇ ಪ್ಯಾಂಟು, ಹರಿದು ಹೋದ ಬೂಟುಗಳು, ಕೈಯಲ್ಲೊಂದು ಸ್ಟಿಕ್‌, ತಲೆ ಮೇಲೆ ಹ್ಯಾಟು, ಜಿರಲೆಯನ್ನು ನೆನಪಿಸುವ ಮೀಸೆ. ಒಟ್ಟಾರೆ ಚಿಂದಿ ಬಟ್ಟೆಯ ಬುಟ್ಟಿಯಂತೆ ಕಾಣುವ ಚಾರ್ಲಿಚಾಪ್ಲಿನ್‌ ಅವರಂತೆಯೇ ನಮ್ಮ ಹಿರಣ್ಣಯ್ಯ ಅವರ ಔಟ್‌ ಲುಕ್‌. ಹೌದು, ಮೂಲ ಹೆಸರಿಗೆ ಅಪರಿಚಿತವಾಗಿ, ಮಾಸ್ಟರ್‌ ಎನ್ನುವ ಜನರ ಪ್ರೀತಿಗೆ ಪರಿಚಿತವಾದ ಹಿರಣ್ಣಯ್ಯ ಅವರ ಬಲವೇ ಮಾತು, ವ್ಯಂಗ್ಯ, ಹಾಸ್ಯ, ವಿಡಂಬನೆ.

ತಮ್ಮ ಮಾತಿಗೆ ತಕ್ಕಂತೆ ವೇಷ. ತಲೆ ಮೇಲೊಂದು ಟೋಪಿ, ಗುಂಡಿ ಬಿಚ್ಚಿಕೊಂಡ ಶರ್ಟ್‌ ಅಥವಾ ಬರೀ ಮೈ ಮೇಲೆ ಸ್ಲೀವ್‌ಲೆಸ್‌ ಕೋಟ್‌, ಇಲ್ಲವೇ ಬಿಳಿ ಬನಿಯನ್‌, ಪಟಾಪಟಿ ನಿಕ್ಕರ್‌ನೊಂದಿಗೆ ವೇದಿಕೆ ಏರಿದರೆ ಜಗತ್ತಿನ ಸಮಸ್ತ ವಿಚಾರಗಳನ್ನೂ ವೇದಿಕೆ ಮುಂದಿದ್ದವರ ಮುಂದೆ ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಿದ್ದರು.

ವಾಕ್ಚಿತ್ರದ ಜತೆ ಮಾತಿನ ವ್ಯಕ್ತಿ ಜನನ

ನರಸಿಂಹಮೂರ್ತಿ ಅಲಿಯಾಸ್‌ ಮಾಸ್ಟರ್‌ ಹಿರಣ್ಣಯ್ಯ ಹುಟ್ಟಿದ್ದು 1934 ಫೆಬ್ರವರಿ 15ರಂದು. ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ಹುಟ್ಟಿದ್ದು ಅರ್ಥಾತ್‌ ತೆರೆಗೆ ಬಂದಿದ್ದು 1934 ಮೇ 3ರಂದು. ಒಂದೇ ವರ್ಷ, ಒಂದು ತಿಂಗಳ ಅಂತರದಲ್ಲಿ ಮಾತಿನ ಚಿತ್ರ ಮತ್ತು ಮಾತಿನ ವ್ಯಕ್ತಿ ಹುಟ್ಟಿಕೊಂಡಿದ್ದು ಕಾಕತಾಳೀಯ.

ಮೂಕಿ ಚಿತ್ರಗಳೇ ಆವರಿಸಿಕೊಂಡು ಜನರನ್ನು ಸೆಳೆಯುತ್ತಿದ್ದಾಗ ಮಾತಿನ ಚಿತ್ರ ಬಂದು ಅದೇ ಜನರಲ್ಲಿ ಕುತೂಹಲ, ರೋಚಕತೆ ‘ಸತಿ ಸುಲೋಚನ’ ಮೂಡಿಸಿದರೆ, ವ್ಯವಸ್ಥೆಯ ಹುಳುಕುಗಳ ಬಗ್ಗೆ ಹೀಗೂ ಮಾತನಾಡಬಹುದು ಮತ್ತು ಭ್ರಷ್ಟರ ಪಾಲಿಗೆ ವ್ಯಂಗ್ಯಭರಿತ ತೀಕ್ಷಣವಾದ ಮಾತುಗಳು ಕೂಡ ಕಿಡಿಯಾಗಿ ಪರಿವರ್ತನೆಯಾಗುತ್ತದೆ ಎಂದು ತೋರಿಸಿಕೊಟ್ಟವರು ಮಾಸ್ಟರ್‌ ಹಿರಣ್ಣಯ್ಯ.

ಜೀವನದ ನಾಟಕ ಮುಗಿಸಿದ ರಂಗಭೂಮಿಯ ಹಿರಿ ಅಣ್ಣಯ್ಯ!

ತಂದೆ ಹೆಸರಿನ ಮಾಸ್‌ ಹೀರೋ

ಬಾಲ ನಟನಾಗಿ ಬಂದು ನಟರತ್ನಾಕರ ಆದ ಮಾಸ್ಟರ್‌ ಹಿರಣ್ಣಯ್ಯ ಅವರು, ತಮ್ಮ ತಂದೆಯ ಹೆಸರಿನ ಸ್ಟಾರ್‌, ತಂದೆ ತಕ್ಕ ಮಗನೂ ಹೌದು. ಯಾಕೆಂದರೆ ಹಿರಣ್ಣಯ್ಯ ಎನ್ನುವುದು ಅವರಿಗೆ ಯಾರೂ ಕೊಟ್ಟಬಿರುದಲ್ಲ. ಇವರ ತಂದೆ ಹೆಸರಾಂತ ರಂಗಭೂಮಿ ಕಲಾವಿದ. ಅವರ ಹೆಸರೇ ಹಿರಣ್ಣಯ್ಯ. ಮುಂದೆ ತಮ್ಮ ತಂದೆ ನಿರ್ದೇಶನದ, 1944ರಲ್ಲಿ ತೆರೆಗೆ ಬಂದ ‘ವಾಣಿ’ ಎನ್ನುವ ಚಿತ್ರಕ್ಕೆ ಬಾಲ ನಟರಾಗಿ ಹಿರಣ್ಣಯ್ಯ ಬಣ್ಣ ಹಚ್ಚಿದರು. ಅಲ್ಲಿಂದಲೇ ಹಿರಣ್ಣಯ್ಯ ಪುತ್ರ ಮಾಸ್ಟರ್‌ ಹಿರಣ್ಣಯ್ಯನಾಗಿ ಚಾಲ್ತಿಗೆ ಬಂದರು.

ತಮ್ಮ ಮೂಲ ಹೆಸರು ನರಸಿಂಹಮೂರ್ತಿ ಎನ್ನುವ ಹೆಸರನ್ನು ಮರೆತರು. ಕಾಲೇಜು ಓದುವಾಗಲೇ ತಮ್ಮ ತಂದೆಯನ್ನು ಕಳೆದುಕೊಂಡು ಮಾಸ್ಟರ್‌ ಹಿರಣ್ಣಯ್ಯ, ಓದನ್ನು ಅರ್ಧಕ್ಕೆ ನಿಲ್ಲಿಸಿದರು. ತಮ್ಮ ತಂದೆ ಕಟ್ಟಿದ ‘ಹಿರಣ್ಣಯ್ಯ ನಾಟಕ ಮಂಡಳಿ’ಯ ಚುಕ್ಕಾಣಿ ಹಿಡಿದರು. ತಮ್ಮ ತಂದೆಯವರ ನಾಟಕಗಳಿಗೆ ಹೊಸ ರೂಪ ಕೊಡುವ ಜತೆಗೆ ತಾವೇ ನಾಟಕ ಬರೆದು ನಿರ್ದೇಶಿಸಿದರು. ಈ ಸಂದರ್ಭದಲ್ಲೇ ಬಳ್ಳಾರಿಯಲ್ಲೊಂದು ನಾಟಕ ತಂಡಕ್ಕೆ ಕಾಯಕಲ್ಪ ತಂದುಕೊಟ್ಟರು. ಆ ಮೂಲಕ ತಮ್ಮ ತಂದೆಯ ಹೆಸರಿನಲ್ಲೇ ಮಾಸ್‌ ಹೀರೋ ಆದರು. ‘ಲಂಚಾವತಾರ’, ‘ಭ್ರಷ್ಟಾಚಾರ’, ‘ಅನಾಚಾರ’, ‘ಕಪಿಮುಷ್ಟಿ,’ ‘ದೇವದಾಸಿ’, ‘ನಡುಬೀದಿ ನಾರಾಯಣ’, ‘ಪಶ್ಚಾತ್ತಾಪ’ ಅವರ ಕೆಲವು ಅತ್ಯಂತ ಜನಪ್ರಿಯ ನಾಟಕಗಳು.

ಹಿರಿತೆರೆಯನ್ನು ಬೆಳಗಿದ ಹಿರಣ್ಣಯ್ಯ

ರಂಗಭೂಮಿಯ ಈ ದೈತ್ಯ ಪ್ರತಿಭೆ ಮೊದಲು ಬಣ್ಣ ಹಚ್ಚಿದ್ದೇ ಸಿನಿಮಾದಲ್ಲಿ. ಹೀಗಾಗಿ ಮುಂದೆ ರಂಗಭೂಮಿಯಲ್ಲೇ ಹೆಚ್ಚು ತೊಡಗಿಸಿಕೊಂಡರೂ ಸಿನಿಮಾಗಳನ್ನೂ ಮರೆಯಲಿಲ್ಲ. ‘ವಾಣಿ’ ಚಿತ್ರದ ನಂತರ ಬಿ.ಆರ್‌ ಪಂತಲು ನಿರ್ದೇಶಿಸಿದ ‘ಮೊದಲತೇದಿ’ ಚಿತ್ರದಲ್ಲೂ ನಟಿಸಿದರು. ನಂತರ ‘ಮುತ್ತೈದೆ ಭಾಗ್ಯ’, ‘ಕಚದೇವಯಾನಿ’, ‘ದೇವದಾಸಿ’, ‘ಆನಂದಸಾಗರ’, ‘ಋುಣಮುಕ್ತಳು’, ‘ಶಾಂತಿನಿವಾಸ’, ‘ಗಜ’ ಅವರ ಅಭಿನಯದ ಪ್ರಮುಖ ಚಿತ್ರಗಳು. ಒಂದು ಕಡೆ ರಂಗಭೂಮಿ ಮತ್ತೊಂದು ಕಡೆ ಸಿನಿಮಾ.

ಇದರ ನಡುವೆ ಆಗಾಗ ನೀಡುವ ಸಾರ್ವಜನಿಕ ಕಾರ್ಯಕ್ರಮಗಳ ಜತೆಗೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ‘ಎತ್ತಂಗಡಿ ಎಂಕ್ಟಪ್ಪ’, ‘ಗೃಹಲಕ್ಷ್ಮಿ’, ‘ಪುಣ್ಯಕೋಟಿ’, ‘ವಸುದೈವ ಕುಟುಂಬ’, ‘ಸೌಂದರ್ಯ ಲಹರಿ’ ಮುಂತಾದವು ಅವರ ಜನಪ್ರಿಯ ಧಾರಾವಾಹಿಗಳು. ಅಂದಹಾಗೆ ಒಂದು ಚಿತ್ರವನ್ನು ನಿರ್ದೇಶನ ಕೂಡ ಮಾಡಿದ್ದಾರೆ ಮಾಸ್ಟರ್‌ ಹಿರಣ್ಣಯ್ಯ. ಅವರೇ ಕತೆ, ಸಂಭಾಷಣೆ ರಚಿಸಿ ನಿರ್ದೇಶಿಸಿದ ಸಿನಿಮಾ ‘ಸಂಪ್ರದಾಯ’.

ಮರೆಯಾಗದ ಆ ಪಾತ್ರ- ಸನ್ನಿವೇಶಗಳು

ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕಗಳು ಎಂದಾಗ ನೆನಪಿಗೆ ಬರುವುದು ಮೊದಲು ‘ಲಂಚಾವತಾರ’. ಈ ನಾಟಕದಷ್ಟೆಅವರ ಕೆಲವು ಪಾತ್ರಗಳು ಅತ್ಯಂತ ಜನಪ್ರಿಯತೆಗೆ ಸಾಕ್ಷಿಯಾಗಿದ್ದವು. ಮುರಾರಿ, ತೀರ್ಥರೂಪ, ದತ್ತು, ನಾಜೂಕಯ್ಯ, ಕಸ್ತೂರಿ ಪಾತ್ರಗಳಲ್ಲಿ ತಮಗೆ ತಾವೇ ಸಾಟಿ ಎನ್ನುವಂತೆ ನಟಿಸಿದ್ದರು ಮಾಸ್ಟರ್‌.

ಇನ್ನೂ ದೂರದರ್ಶನದಲ್ಲಿ ‘ಎತ್ತಂಗಡಿ ಎಂಕ್ಟಪ್ಪ’ ಧಾರಾವಾಹಿ ಯಾರೂ ಮರೆಯಲಿಕ್ಕೇ ಆಗದು ಎನ್ನುವುದಕ್ಕೆ ಬಲವಾದ ಕಾರಣ ಅಲ್ಲಿ ಮಾಸ್ಟರ್‌ ಹಿರಣ್ಣಯ್ಯ ಮಾಡಿದ್ದ ಪಾತ್ರ. ಹೀಗೆ ಎಂದೋ ಬಂದಿದ್ದ ಧಾರಾವಾಹಿ, ಸಿನಿಮಾ, ನಾಟಕವನ್ನೂ ಇಂದಿಗೂ ನೆನಪಾಗುತ್ತದೆ ಎಂದರೆ ಅದಕ್ಕೆ ಕಾರಣ ಮಾಸ್ಟರ್‌ ಹಿರಣ್ಣಯ್ಯ ಅವರೇ.

ಕಾಲೆಳೆದವರ ಜತೆಯೇ ಕಾಲ ಕಳೆಯುತ್ತಿದ್ದರು

ಮಾಸ್ಟರ್‌ ಹಿರಣ್ಣಯ್ಯ ಮಾತಿನ ಪೆಟ್ಟಿಗೆ ತುತ್ತಾಗದವರೇ ಇಲ್ಲ. ‘ಸಾವಿನ ಮನೆಗೆ ಸದಾನಂದ ಗೌಡ, ಮದುವೆ ಮನೆಗೆ ದೇವೇಗೌಡ ಅವರನ್ನು ಕರೆಯಬಾರದು’ ಎಂಬ ಜೋಕಿನ ಪಿತಾಮಹ ಇದೇ ಮಾಸ್ಟರ್‌ ಹಿರಣ್ಣಯ್ಯ. ಆದರೆ, ಹೀಗೆ ಕಾಲೆಳೆದವರ ಜತೆಯೇ ಸ್ನೇಹ, ಕಾಲಹರಣ ಮಾಡುವಷ್ಟುಆತ್ಮೀಯತೆ ಬೆಳೆಸಿಕೊಂಡಿದ್ದರು. ಯಾಕೆಂದರೆ ಮದುವೆ ಮನೆಗೆ ಯಾರನ್ನು ಕರೆಯಬಾರದು ಎಂದು ಜೋಕ್‌ ಮಾಡಿದ್ದರೂ ಅದೇ ಎಚ್‌.ಡಿ ದೇವೇಗೌಡ ಅವರನ್ನು ತಮ್ಮ ಮೊಮ್ಮಗಳ ಮದುವೆಗೆ ಅಹ್ವಾನಿಸಿದ್ದರು.

ಅಲ್ಲದೆ ಹಿರಣ್ಣಯ್ಯ ಅವರ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ಕೆ ಗೌಡರಿಗೆ ಅಹ್ವಾನ ಇರುತ್ತಿತ್ತು. ಹೀಗೆ ರಾಜಕಾರಣಿಗಳನ್ನು ಬೈಯ್ದು ದಕ್ಕಿಸಿಕೊಳ್ಳುತ್ತಿದ್ದ ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಅದೇ ಮಾತು ತಿರುಗು ಬಾಣವಾಗಿ ಕೊನೆಗೂ ಅದರಿಂದ ಕ್ಷಮೆ ಕೇಳುವಂತಾಯಿತು. ಅಂಥದ್ದೊಂದು ಪ್ರಕರಣ ನಡೆದ್ದು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ.

ಕೊನೆವರೆಗೂ ಕಾಡಿದ ಆ ಕಹಿ ಘಟನೆ

ತಮ್ಮ ಮೊನಚು ಮಾತಿನ ಮೂಲಕವೇ ಎಲ್ಲರನ್ನು ಬೈಯ್ದು, ಟೀಕಿಸುತ್ತಿದ್ದ ಹಿರಣ್ಣಯ್ಯ, ಸಿದ್ದರಾಮಯ್ಯ ಅವರ ವಿಚಾರದಲ್ಲಿ ಮಾತ್ರ ಹಾಗೆ ಅವರು ದಕ್ಕಿಸಿಕೊಳ್ಳುವುದಕ್ಕೆ ಆಗಲಿಲ್ಲ. ಮೇ 11, 2014ರ ಭಾನುವಾರ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಾಗನವ ಕಲಾ ಸಾಹಿತ್ಯ ವೇದಿಕೆಯಿಂದ ಹಮ್ಮಿಕೊಳ್ಳಲಾದ ನಾಗಾಸ್‌ ನವಸಿರಿ ಪ್ರಶಸ್ತಿ ಸ್ವೀಕರಿಸಿದರು. ಬಳಿಕ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಗೆಲ್ಲುವವರೆಗೆ ವಿನಯದಿಂದ ನಡೆದುಕೊಳ್ಳುತ್ತಿದ್ದರು’ ಎಂದು ತಮ್ಮ ಮಾತಿನ ಓಘದಲ್ಲಿ ಹೇಳಿದರು.

ಸೋನಿಯಾ ಗಾಂಧಿ ಅವರ ಬಗ್ಗೆ ಕೆಲವು ಮಾತುಗಳನ್ನು ಹೀಗೇ ಆಡಿದ್ದರಂತೆ. ಇದು ಆಗ ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಿ ಹಿರಣ್ಣಯ್ಯ ವಿರುದ್ಧ ಪ್ರತಿಭಟನೆಗಳು ನಡೆದವು. ಇದರ ಗಂಭೀರತೆ ಅರಿತ ಹಿರಣ್ಣಯ್ಯ, ಸಿಎಂ ನಿವಾಸಕ್ಕೆ ತೆರಳಿ ಕ್ಷಮೆ ಯಾಚಿಸಿದರು ಮತ್ತು ಮುಂದೆ ಇನ್ನೆಂದೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದುಬಿಟ್ಟರು. ಈ ಘಟನೆ ಹಿರಣ್ಣಯ್ಯ ಅವರ ಬದುಕಿನಲ್ಲಿ ಕೊನೆಯವರೆಗೂ ಉಳಿದುಕೊಂಡಿತು. ಮುಂದೆ ಮಾತಿನ ಚಾಟಿ, ತನ್ನ ಮೊನಚು ಕಳೆದುಕೊಂಡಿತು.

ಆರ್‌. ಕೇಶವಮೂರ್ತಿ

click me!