
ಬೆಂಗಳೂರಿನ ಯಶಸ್ವಿ ಉದ್ಯಮಿ ವರ್ತಿಕಾ ಶುಕ್ಲಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತಮ್ಮ ಹೌಸಿಂಗ್ ಜರ್ನಿ ಕಥೆಯು ಲಕ್ಷಾಂತರ ಯುವಜನರಿಗೆ ಹಾಗೂ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ಪ್ರೇರಣೆಯನ್ನು ನೀಡುತ್ತಿದೆ. ಯಾವುದೇ ಆಸ್ತಿ, ತಂದೆ-ತಾಯಂದಿರ ಬಿಸಿನೆಸ್ ಹಿನ್ನೆಲೆ ಅಥವಾ ಬೆಂಬಲವಿಲ್ಲದೆ, ಕೇವಲ ಸ್ವಂತ ಶ್ರಮ, ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಶಿಕ್ಷಣದ ಬಲದಿಂದ ಶೂನ್ಯದಿಂದ ಬದುಕು ಆರಂಭಿಸಿ ಇಂದು ಅತ್ಯುನ್ನತ ಆರ್ಥಿಕ ಸ್ವತಂತ್ರವನ್ನು ಗಳಿಸಿಕೊಂಡಿದ್ದಾರೆ.
2020 ರಲ್ಲಿ: ಆರಂಭದ ದಿನಗಳಲ್ಲಿ 1RK (ಒಂದು ಕೊಠಡಿ ಮತ್ತು ಅಡುಗೆಮನೆ) ಸಣ್ಣ ಬಾಡಿಗೆ ಮನೆಯಲ್ಲಿ ಇದ್ದು, ತಿಂಗಳಿಗೆ ₹15,000 ಬಾಡಿಗೆ ಪಾವತಿಸುತ್ತಿದ್ದರು.
2021 ರಲ್ಲಿ: ವೃತ್ತಿಜೀವನದಲ್ಲಿ ಬೆಳೆದಂತೆ 2BHK ಮನೆಗೆ ಸ್ಥಳಾಂತರಗೊಂಡು, ಪ್ರತಿ ತಿಂಗಳು ₹1,00,000 ಬಾಡಿಗೆ ನೀಡಲು ಆರಂಭಿಸಿದರು.
2023 ರಲ್ಲಿ: ಮತ್ತಷ್ಟು ಪ್ರಗತಿ ಸಾಧಿಸಿ, ತಿಂಗಳಿಗೆ ₹2,00,000 ಬಾಡಿಗೆಯ 3BHK ಮನೆಯಲ್ಲಿ ವಾಸಿಸಲು ತೊಡಗಿದರು.
ಪ್ರಸ್ತುತ: ಇಂದು ಅವರು ತಿಂಗಳಿಗೆ ಬರೋಬ್ಬರಿ ₹1,81,000 ಬಾಡಿಗೆಯ ಅತ್ಯಂತ ಅತ್ಯಂತ ಐಷಾರಾಮಿ 5BHK ದೊಡ್ಡ ಮನೆಯಲ್ಲಿದ್ದಾರೆ.
ವರ್ತಿಕಾ ತಮ್ಮ 22 ನೇ ವಯಸ್ಸಿನಲ್ಲಿ ತಿಂಗಳಿಗೆ ₹50,000 ಸಂಬಳದ ಕೆಲಸಕ್ಕೆ ಸೇರಿ ಮನೆ ತೊರೆದಾಗ ಮುಂದಿನ ದಾರಿ ಸುಲಭವಾಗಿರಲಿಲ್ಲ. ಕೈಯಲ್ಲಿ ಯಾವುದೇ ಪಾರಂಪರಿಕ ಆಸ್ತಿಯಾಗಲಿ ಅಥವಾ ಯಾರೋ ನಿರ್ಧರಿಸಿದ ಸ್ಪಷ್ಟವಾದ ಹಾದಿಯಾಗಲಿ ಇರಲಿಲ್ಲ. ಆದರೆ, ಇತರರು ತಮಗಾಗಿ ನಿರ್ಧರಿಸಿದ ಸಾಮಾನ್ಯ ಜೀವನವನ್ನು ನಡೆಸಬಾರದು ಎಂಬ ದೃಢವಾದ ಛಲ ಒಂದೇ ಅವರಿಗಿತ್ತು. ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ, ಉತ್ತಮ ಅವಕಾಶಗಳಿಗಾಗಿ ಉದ್ಯೋಗಗಳನ್ನು ಬದಲಾಯಿಸುತ್ತಾ, ಕಷ್ಟಪಟ್ಟು ಎಂ.ಬಿ.ಎ (MBA) ಪೂರ್ಣಗೊಳಿಸಿದರು ಮತ್ತು ತಮ್ಮ ಸ್ವಂತ ಕೌಶಲ್ಯದ ಮೇಲೆ ನಿರಂತರವಾಗಿ ಹೂಡಿಕೆ ಮಾಡುತ್ತಾ ಸಾಗಿದರು.
ವರ್ತಿಕಾ ಅವರ ಪ್ರಕಾರ, ಸಣ್ಣ ಬಾಡಿಗೆ ಕೊಠಡಿಯಿಂದ 5BHK ಯಂತಹ ದೊಡ್ಡ ಬಂಗಲೆಗೆ ತಲುಪುವುದು ಖಂಡಿತವಾಗಿಯೂ ಒಂದು ದೊಡ್ಡ ಸಾಧನೆಯೇ ಸರಿ. ಆದರೆ, ನಿಜವಾದ ಯಶಸ್ಸು ಎಂದರೆ ಕೇವಲ ದೊಡ್ಡ ಮನೆಯಲ್ಲಿ ವಾಸಿಸುವುದಲ್ಲ, ಬದಲಾಗಿ ತಮ್ಮ ಬದುಕಿನ ಪ್ರತಿಯೊಂದು ನಿರ್ಧಾರವನ್ನು ಸ್ವಂತ ಬಲದ ಮೇಲೆ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವುದು. ಇಂದು ತಲುಪಿರುವ ಎತ್ತರದ ಸ್ಥಾನದಲ್ಲಿ ನಿಂತು ತಮ್ಮ ಹಳೆಯ ಸೋಲುಗಳು ಮತ್ತು ಕಠಿಣ ಹೋರಾಟಗಳನ್ನು ನೆನಪಿಸಿಕೊಂಡರೆ ಅವರಿಗೆ ಸುಖದ ಅನುಭವವಾಗುತ್ತದೆ. "ಇಂದಿನ ವರ್ತಿಕಾ ಅಂದಿನ 22 ವರ್ಷದ ಹುಡುಗಿಯನ್ನು ಭೇಟಿಯಾದರೆ, 'ನೀನು ಎಲ್ಲೂ ಹಿಂದುಳಿದಿಲ್ಲ, ನಿನ್ನ ಬದುಕಿಗೆ ಅತ್ಯಂತ ಬಲವಾದ ತಳಪಾಯ ನಿರ್ಮಿಸುತ್ತಿದ್ದೀಯಾ' ಎಂದು ಹೇಳುತ್ತಿದ್ದೆ" ಎನ್ನುತ್ತಾರೆ ಅವರು.
ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಮತ್ತು ವೃತ್ತಿಜೀವನದಲ್ಲಿ ನಿರಂತರ ಶ್ರಮಿಸುತ್ತಿರುವ ಯುವಜನತೆಗೆ ಧೈರ್ಯ ತುಂಬಿರುವ ಅವರು, "ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು ನಿಮ್ಮ ಜೀವನದ ಬಲವಾದ ತಳಪಾಯವನ್ನು ನಿರ್ಮಿಸುವ ಒಂದು ಹಂತವಷ್ಟೇ. ಇಂದು ನೀವು ಒಂದು ಸಣ್ಣ 1RK ಕೊಠಡಿಯಲ್ಲಿ ವಾಸಿಸಲು ಬದ್ಧರಾಗಿದ್ದರೂ ಯಾವುದೇ ಕಾರಣಕ್ಕೂ ನಿರಾಶರಾಗಬೇಡಿ. ಏಕೆಂದರೆ, ನೀವು ಪ್ರಸ್ತುತ ಇರುವ ಈ ಅಧ್ಯಾಯವೇ ನಿಮ್ಮ ಜೀವನದ ಕೊನೆಯ ತಾಣವಲ್ಲ, ಮುಂದೆ ದೊಡ್ಡ ಅವಕಾಶಗಳಿವೆ" ಎಂದು ಸ್ಫೂರ್ತಿ ತುಂಬಿದ್ದಾರೆ.