
ಜನಪ್ರಿಯ ಹಾಗೂ ಕಟ್ಟುನಿಟ್ಟಿನ ಐಎಎಸ್ ಅಧಿಕಾರಿ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಆಯುಕ್ತರಾದ ತುಕಾರಾಂ ಮುಂಢೆ ಅವರು ಇತ್ತೀಚೆಗೆ ನಡೆದ 'ಗ್ಲೋಬಲ್ ಜೆಂಜಿ ಶೃಂಗಸಭೆ'ಯಲ್ಲಿ ತಮ್ಮ ಕೆಲಸದ ವೈಖರಿ ಹಾಗೂ ವೈಯಕ್ತಿಕ ಜೀವನದ ಕುರಿತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆಹಾರ ಭದ್ರತೆ ಮತ್ತು ಕಲಬೆರಕೆ ತಡೆಯುವಲ್ಲಿ ಖಡಕ್ ನಿರ್ಧಾರಗಳಿಗೆ ಹೆಸರಾಗಿರುವ ಅವರು, ತಾವು ಮತ್ತು ತಮ್ಮ ಕುಟುಂಬದವರು ಹೊರಗಿನ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡದಿರುವ ಅಸಲಿ ಕಾರಣವನ್ನು ಮುಕ್ತವಾಗಿ ಬಹಿರಂಗಪಡಿಸಿದ್ದಾರೆ.
ಸಮಾವೇಶದಲ್ಲಿ ಮಾತುಕತೆಯ ವೇಳೆ, "ನಿಮ್ಮ ಆಡಳಿತಾವಧಿಯಲ್ಲಿ ಅನೇಕ ಪ್ರಸಿದ್ಧ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸುತ್ತೀರಿ. ನಿಮ್ಮ ಕುಟುಂಬಕ್ಕೂ ಯಾವುದಾದರೂ ನೆಚ್ಚಿನ ರೆಸ್ಟೋರೆಂಟ್ ಇರುತ್ತದಲ್ಲವೇ? ದಾಳಿಯ ನಂತರ ಅಲ್ಲಿಗೆ ಹೋಗುವುದನ್ನು ನಿಲ್ಲಿಸುತ್ತೀರಾ ಅಥವಾ ಆ ಹೋಟೆಲನ್ನೇ ಮುಚ್ಚಿಸುತ್ತೀರಾ?" ಎಂದು ಪ್ರಶ್ನಿಸಲಾಯಿತು.
ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ತುಕಾರಾಂ ಮುಂಢೆ, "ಇತ್ತೀಚಿನ ದಿನಗಳಲ್ಲಿ ನಾನು ಹೊರಗಡೆ ರೆಸ್ಟೋರೆಂಟ್‌ಗಳಿಗೆ ಹೋಗುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ನಮ್ಮ ಕುಟುಂಬವೂ ಹೆಚ್ಚಾಗಿ ಹೊರಗೆ ಎಲ್ಲೂ ಹೋಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು. ಆಹಾರ ಭದ್ರತಾ ಅಧಿಕಾರಿಯಾಗಿ ಸಾರ್ವಜನಿಕರಿಗೆ ತಿಳಿಯದ ಅನೇಕ ಆಂತರಿಕ ಸತ್ಯಗಳು ಮತ್ತು ಹೋಟೆಲ್‌ಗಳಲ್ಲಿ ಬಳಸುವ ಪದಾರ್ಥಗಳ ಸತ್ಯಾಸತ್ಯತೆ ತಮಗೆ ಚೆನ್ನಾಗಿ ತಿಳಿದಿರುವುದರಿಂದ, ತಾವು ಹೊರಗಿನ ಆಹಾರ ಸೇವನೆಯಲ್ಲಿ ಅತ್ಯಂತ ಜಾಗರೂಕರಾಗಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಇಂದಿನ ದಾಳಿಗಳ ಸ್ವರೂಪ ಮತ್ತು ಅಧಿಕಾರಿಗಳು ತಲುಪುವ ಮುನ್ನವೇ ಕ್ಯಾಮೆರಾಗಳು ತಲುಪುವ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಅಂದರೆ, ದಾಳಿ ನಡೆಯುವ ಮುಂಚೆಯೇ ಮಾಹಿತಿ ಸೋರಿಕೆಯಾಗುತ್ತದೆಯೇ ಎಂಬ ಕುರಿತು ಅವರು ಸ್ಪಷ್ಟನೆ ನೀಡಿದರು.
ತಮ್ಮ ಕಾರ್ಯವೈಖರಿಯನ್ನು ವಿವರಿಸಿದ ಮುಂಢೆ, ದಾಳಿಯ ಸಮಯದಲ್ಲಿ ಕೇವಲ ಪ್ರಚಾರಕ್ಕಾಗಿ ಸಿದ್ಧಪಡಿಸಿದ ಆಹಾರದ ಮಾದರಿಗಳನ್ನು ಪಡೆಯುವುದು ನಮ್ಮ ಉದ್ದೇಶವಲ್ಲ. ಯಾವುದೇ ಆಹಾರದ ಗುಣಮಟ್ಟವನ್ನು ಅಳೆಯಬೇಕಾದರೆ, ಮೊದಲು ಅದನ್ನು ತಯಾರಿಸಲು ಬಳಸುವ 'ಕಚ್ಚಾ ವಸ್ತುಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಹೀಗಾಗಿ, ಮೊದಲು ಅಡುಗೆಮನೆಯಲ್ಲಿರುವ ಹಿಟ್ಟು, ಎಣ್ಣೆ, ಮಸಾಲೆ ಹಾಗೂ ಇತರೆ ಮೂಲ ಪದಾರ್ಥಗಳನ್ನು ಪರೀಕ್ಷಿಸಲು ನನ್ನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಸಾಮಾನ್ಯವಾಗಿ ದಾಳಿ ನಡೆದಾಗ ಸಿದ್ಧವಾದ ಅಡುಗೆಯನ್ನು ಮಾದರಿಯಾಗಿ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ತುಕಾರಾಂ ಮುಂಢೆ ಅವರ ನೇತೃತ್ವದ ತಂಡವು ಈ ಹಳೆಯ ಪದ್ಧತಿಯನ್ನು ಬದಲಾಯಿಸಿದೆ.
ಮೊದಲ ಹಂತ; ಆಹಾರ ತಯಾರಿಸಲು ಬಳಸುವ ನೀರು, ಎಣ್ಣೆ, ತರಕಾರಿ ಮತ್ತು ಕಚ್ಚಾ ಸಾಂಬಾರು ಪದಾರ್ಥಗಳ ಶುದ್ಧತೆ ಪರಿಶೀಲನೆ.
ಎರಡನೇ ಹಂತ; ಆಹಾರ ತಯಾರಿಸುವ ಸ್ಥಳದ ನೈರ್ಮಲ್ಯ ಮತ್ತು ಪ್ರಕ್ರಿಯೆಯ ತಪಾಸಣೆ.
ಕೊನೆಯ ಹಂತ; ಇವೆಲ್ಲವೂ ಮುಗಿದ ನಂತರವಷ್ಟೇ ಸಿದ್ಧಪಡಿಸಿದ ಆಹಾರದ ಮಾದರಿಗಳ ಸಂಗ್ರಹ.
ಆಹಾರ ಉತ್ಪಾದನೆಯ ಪ್ರತಿಯೊಂದು ಹಂತದಲ್ಲೂ ನೈರ್ಮಲ್ಯ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ ಎಂಬುದನ್ನು ಈ ಮೂಲಕ ಅವರು ಪ್ರತಿಪಾದಿಸಿದ್ದಾರೆ. ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ತೋರಿಸಿಕೊಟ್ಟಿರುವ ಮುಂಢೆ ಅವರ ಈ ಮಾತುಗಳು, ಇಂದಿನ ಯುವ ಪೀಳಿಗೆಗೆ ಹೊರಗಿನ ಆಹಾರ ಸೇವನೆಯ ಬಗ್ಗೆ ಚಿಂತಿಸುವಂತೆ ಮಾಡಿವೆ.