
ಜೈಪುರ (ಆ.09) ಕಾಲ ಬದಲಾಗಿದೆ. ಹಿಂದಿನಂತೆ ಕಡಿಮೆ ಸಂಬಳ, ಚೆನ್ನಾಗಿ ದುಡಿಸಿಕೊಳ್ಳುವುದು, ಜೊತೆಗೆ ಒಂದಷ್ಟು ಕಂಡೀಷ್ ಹಾಕುವುದು ಈಗಿನ ಜನರೇಶನ್‌ಗೆ ಇಷ್ಟವಾಗಲ್ಲ. ಎರಡೇ ಮಾತು ಸಾಕು ಮರುದಿನ ಬರೋದೆ ಇಲ್ಲ. ಹೀಗಾಗಿ ಉದ್ಯೋಗ ನೇಮಕಾತಿ ವೇಳೆ ಹಲವು ಕಂಪನಿಗಳು ಅಳೆದು ತೂಗಿ ನೇಮಕಾತಿ ಮಾಡುತ್ತಿದೆ. ಹೀಗೆ ಹಲವು ಸುತ್ತಿನ ಸಂದರ್ಶನ, ಮಾತುಕತೆ ಬಳಿಕ ಯುವತಿಯನ್ನು ಕಂಪನಿ ನೇಮಕಾತಿ ಮಾಡಿಕೊಂಡಿತು. ನೇಮಕಾತಿ ವೇಳೆಯೂ ಯುವತಿ ಹಾಕಿದ ಕಂಡೀಷನ್‌ಗೆ ಕಂಪನಿ ಒಪ್ಪಿಕೊಂಡಿದೆ. ಆದರೆ ಕೆಲಸಕ್ಕೆ ಸೇರಿದ ಮರುದಿನವೇ ರಾಜೀನಾಮೆ ನೀಡಿದ ಘಟನೆ ನಡೆದಿದೆ. ರಾಜೀನಾಮೆ ಶಾಕ್ ಬೆನ್ನಲ್ಲೇ ಯುವತಿ ಬಳಿ ಇರುವ ಆಫೀಸ್ ಲ್ಯಾಪ್ ಕುರಿತು ನೀಡಿದ ಹೇಳಿಕೆ ಕಂಪನಿ ಸಿಇಒ ದಂಗಾದ ಘಟನೆ ಜೈಪುರದಲ್ಲಿ ನಡೆದಿದೆ.
ಜೈಪುರ ಮೂಲದ ಕಂಪನಿ ಸಿಇಒ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಸಿಇಒ, ಈ ರೀತಿಯ ನಡೆಗೆ ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಸಂಬಳ ಹೆಚ್ಚಿಸಲು ಬೇಡಿಕೆ ಇಟ್ಟಿದ್ದಳು, ಅದನ್ನು ಒಪ್ಪಿಕೊಂಡೆವು. ಆದರೆ ರಾಜೀನಾಮೆ ನೀಡಿದ್ದು ಮಾತ್ರವಲ್ಲ, ಹೇಗೆ ನಡೆದುಕೊಳ್ಳಬೇಕು ಅನ್ನೋ ಮೌಲ್ಯಗಳು ತಿಳಿದಿಲ್ಲ ಎಂದು ಸಿಇಒ ಗರಂ ಆಗಿದ್ದಾರೆ.
ಕಂಪನಿ ಸಿಇಒ ಗೌರವ್ ಕೇತರ್‌ಪಾಲ್ ಈ ಘಟನೆ ಹಂಚಿಕೊಂಡಿದ್ದಾರೆ. ಅಭ್ಯರ್ಥಿಗಾಗಿ ಮೂರು ತಿಂಗಳ ಕಾಲ ಕಾದಿದ್ದೇವೆ. ಹಲವು ಸುತ್ತಿನ ಸಂದರ್ಶನ ಬಳಿಕ ಇನ್ನೇನು ಕಂಪನಿ ಸೇರಿಕೊಳ್ಳಲು ಮೂರು ತಿಂಗಳು ಇರುವಾಗ ನನಗೆ 25,000 ರೂಪಾಯಿ ಸ್ಯಾಲರಿ ಸಾಕಗಲ್ಲ, 50 ಸಾವಿರ ಮಾಡಿ ಎಂದು ಬೇಡಿಕೆ ಇಟ್ಟಿದ್ದಾಳೆ. ಮೂರು ತಿಂಗಳ ಪರಿಶ್ರಮ ಬಳಿಕ ಕೊನೆ ಕ್ಷಣದಲ್ಲಿ ಮತ್ತೊಬ್ಬ ಅಭ್ಯರ್ಥಿ ಹುಡುಕುವುದು, ನೇಮಕಾತಿ ಕಷ್ಟ ಎಂದು ಆಕೆಯ ಬೇಡಿಕೆ ಒಪ್ಪಿಕೊಂಡೆವು. ಆಫರ್ ಲೆಟರ್ ಕಳುಹಿಸಿದ ಬೆನ್ನಲ್ಲೇ ಯುವತಿ ತನಗೆ ವೈಯುಕ್ತಿಕ ಕೆಲ ಸಮಸ್ಯೆಗಳಿರುವ ಕಾರಣ ವರ್ಕ್ ಫ್ರಮ್ ಹೋಮ್ ನೀಡಿ ಎಂದು ಬೇಡಿಕೆ ಇಟಿದ್ದಾಳೆ. ಇದನ್ನು ಒಪ್ಪಿಕೊಂಡೆವು. ಆಕೆಯ ಎಲ್ಲಾ ಡಿಮ್ಯಾಂಡ್ ಪೂರೈಸಿ ಕೆಲಸಕ್ಕೆ ಸೇರಿಸಿಕೊಂಡೆವು ಎಂದು ಗೌರವ್ ಹೇಳಿದ್ದಾರೆ.
ಮೊದಲ ದಿನ ಮನೆಯಿಂದ ಕೆಲಸ ಮಾಡಿದ್ದಾಳೆ. ಮೊದಲ ದಿನ ಕಂಪನಿಯ ಸಿಸ್ಟಮ್ ಕುರಿತ ಕೆಲ ಮಾಹಿತಿ, ಒರಿಯೆಂಟೇಶನ್ ನೀಡಲಾಗಿತ್ತು. ಇದರಲ್ಲೇ ಸಮಯ ಹೋಗಿದೆ. ಮರು ದಿನ ಯುವತಿ ಲಾಗಿನ್ ಆಗಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಇಮೇಲ್‌ಗ್ ಸ್ಪಂದಿಸುತ್ತಿಲ್ಲ. ಕೊನೆಗೆ ಬೇರೆ ಮೂಲಗಳಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಯಿತು. ಯಾಕೆ ಲಾಗಿನ್ ಆಗಿಲ್ಲ, ಕರೆಗಳಿಗೆ ಸ್ಪಂದಿಸುತ್ತಿಲ್ಲಾ, ಏನಾಗಿದೆ ಎಂದು ಖುದ್ದು ಸಿಇಒ ಕೇಳಿದ್ದಾರೆ. ನನಗೆ ವೈಯುಕ್ತಿಕ ಕಾರಣಗಳಿಂದ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ್ದಾಳೆ. ನಾವು ಆಕೆಯ ಎಲ್ಲಾ ಬೇಡಿಕೆ ಒಪ್ಪಿಕೊಂಡು ಒಂದೇ ದಿನಕ್ಕೆ ಹೀಗೆ ಉತ್ತರ ನೀಡಿದ್ದಾಳೆ ಎಂದು ಸಿಇಒ ಆಕ್ರೋಶ ಹೊರಹಾಕಿದ್ದಾರೆ.
ಸಾಮಾನ್ಯವಾಗಿ ಕೆಲಸ ಬಿಡುವಾಗ ಆಫೀಸ್‌ನಿಂದ ನೀಡಿರುವ ಲ್ಯಾಪ್‌ಟಾಪ್, ಐಡಿ ಕಾರ್ಡ್ ಸೇರಿದಂತೆ ಇತರ ಕೆಲ ಪ್ರಮುಖ ವಸ್ತುಗಳನ್ನು ಕಚೇರಿಗೆ ತೆರಳಿ ಹಿಂದಿರುಗಿಸಬೇಕು ಅಥವಾ ಕೊರಿಯರ್ ಮಾಡಬೇಕು. ಸಿಇಒ ಮಾತುಕತೆಲ್ಲಿ ಆಫೀಸ್ ಲ್ಯಾಪ್‌ಟಾಪ್ ಹಾಗೂ ಇತರ ವಸ್ತುಗಳನ್ನು ಕಚೇರಿಗೆ ಬಂದು ಕೊಡಲು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯುವತಿ ಕಚೇರಿಯಿಂದ ಯಾವುದಾದರು ಸಿಬ್ಬಂದಿಯನ್ನು ಕಳುಹಿಸಿ, ನನ್ನ ಮನೆಗೆ ಬಂದು ಆಫೀಸ್ ಲ್ಯಾಪ್‌ಟಾಪ್ ಕಲೆಕ್ಟ್ ಮಾಡಿ ಎಂದು ಉತ್ತರಿಸಿದ್ದಾಳೆ. ಅಲ್ಲೀವರೆಗೆ ತಾಳ್ಮೆಯಿಂದ ಇದ್ದ ಸಿಇಒ ಈ ಮಾತಿನಿಂದ ಕೆರಳಿದ್ದಾರೆ.
ಆಕ್ರೋಶಗೊಂಡ ಸಿಇಒ, ಇಮೇಲ್ ಮೂಲಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಕಂಪನಿ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಸೂಚಿಸಿರುವುದಾಗಿ ಇಮೇಲ್ ಕಳುಹಿಸಿದ್ದಾರೆ. ಕಾನೂನು ಕ್ರಮದ ಇಮೇಲ್ ತಲುಪುತ್ತಿದ್ದಂತೆ ಯುವತಿ ಗಾಬರಿಯಾಗಿದ್ದಾಳೆ. ತಕ್ಷಣವೇ ಲ್ಯಾಪ್‌ಟಾಪ್ ಹಿಡಿದು ಕಚೇರಿಗೆ ಬಂದು ಎಲ್ಲಾ ವಸ್ತುಗಳ ಹಿಂದಿರುಗಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಆಕೆ 25 ಸಾವಿರ ರೂಪಾಯಿ ಅಧಿಕ ಸ್ಯಾಲರಿಗೆ ಮತ್ತೊಂದು ಕಂಪನಿ ಸೇರಿಕೊಂಡಿದ್ದಳು ಅನ್ನೋದು ಬಯಲಾಗಿದೆ.