
ಭಾರತ ಸೇರಿದಂತೆ ಹಲೆವೆಡೆ ಉದ್ಯೋಗ ಕಡಿತಗಳು ಒಂದಡೆಯಾದರೆ, ಉದ್ಯೋಗದಲ್ಲಿರುವರಿಗೆ ಒತ್ತಡ, ಟಾರ್ಗೆಟ್‌ಗಳು ಇಷ್ಟವಾಗುತ್ತಿಲ್ಲ. ಹೀಗೆ ಯುವತಿಯೊಬ್ಬಳು ಎಂಬಿಎಂ ಮುಗಿಸಿ ಕಾರ್ಪೋರೇಟ್ ಉದ್ಯೋಗ ಗಿಟ್ಟಿಸಿಕೊಂಡಿದ್ದಳು. ಕಳೆದ ನಾಲ್ಕುವರೆ ವರ್ಷಗಳಿಂದ ಕಾರ್ಪೋರೇಟ್ ವಲಯದಲ್ಲಿ ಉತ್ತಮ ವೇತನದೊಂದಿಗೆ ಕೆಲಸ ಮಾಡುತ್ತಿದ್ದ ಯುವತಿ ರಾಜೀನಾಮೆ ನೀಡಿ ಹೊರಬಂದಿದ್ದಾಳೆ. ಇಷ್ಟೇ ಅಲ್ಲ ಕಾರ್ಪೋರೇಟ್ ವಲಯದಿಂದ ಹೊರಬಂದು ಸ್ವಾತಂತ್ರ್ಯ ದಿನಾಚರಿಸಿದ್ದಾಳೆ.
ಅರ್ಪಿತಾ ಸಾಹು ವಿಡಿಯೋ ಮೂಲಕ ಕೆಲಸಕ್ಕೆ ರಾಜೀನಾಮೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕುರಿತು ವಿವರಿಸಿದ್ದಾರೆ. ಅರ್ಪಿತಾ ಸಾಹು ವಿಡಿಯೋದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ ಕಾರಣಗಳನ್ನೂ ಹೇಳಿದ್ದಾರೆ. ನಾಲ್ಕೂವರೆ ವರ್ಷ ಸತತವಾಗಿ , ಶ್ರಮವಹಿಸಿ ಕೆಲಸ ಮಾಡಿದ್ದೇನೆ. ನನ್ನ ಆಸಕ್ತಿ, ಮನಶಾಂತಿ, ಜೀವನದ ನೈಜ ಉದ್ದೇಶ ಕಂಡುಕೊಳ್ಳಲು ರಾಜೀನಾಮೆ ನೀಡಿದ್ದೇನೆ ಎಂದು ಅರ್ಪಿತಾ ಸಾಹು ಹೇಳಿದ್ದಾರೆ. ರಾಜೀನಾಮೆ ಕೆಲವರಿಗೆ ಹಠಾತ್ ಎನಿಸಬಹುದು. ಆದರೆ ನಾನು ಸುದೀರ್ಘ ದಿನಗಳಿಂದ ಆಲೋಚಿಸಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದಿದ್ದಾರೆ.
ಪ್ರತಿ ದಿನ ಒತ್ತಡದ ಕೆಲಸ, ವೈಯುಕ್ತಿಕ ಜೀವನ, ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳು ತಡೆಯುವುದು ಅನಿವಾರ್ಯವಾಗಿತ್ತು. ತಿಂಗಳ ಸ್ಯಾಲರಿಗಾಗಿ ಯಾಂತ್ರಿಕವಾಗಿ ದುಡಿಯುವ ಬದಲು ನನ್ನ ಇಷ್ಟದ ಪ್ರಕಾರ ದುಡಿಯಲು ಬಯಸುತ್ತೇನೆ. ನನ್ನ ಆಸಕ್ತಿ, ಭವಿಷ್ಯದ ಕನಸು ನನಸಾಗಿಸಲು ಪ್ರಯತ್ನಿಸುವುದಾಗಿ ಅರ್ಪಿತಾ ಸಾಹು ಹೇಳಿದ್ದಾರೆ. ಕಾರ್ಪೋರೇಟ್ ವಲಯದಿಂದ ಹೊರಬಂದು ಸ್ವತಂತ್ರವಾಗಿ ಜೀವನ ಸಾಗಿಸಬೇಕು ಎಂದು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸ್ವತಂತ್ರ ಬದುಕಿನ ಕಡೆ ಹೆಜ್ಜೆ ಇಟ್ಟಿರುವ ನನಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಅರ್ಪಿತಾ ಸಾಹು ಹೇಳಿದ್ದಾರೆ.
ಕಾರ್ಪೋರೇಟ್ ಜಗತ್ತಿನ ಒತ್ತಡದ ಕೆಲಸದಿಂದ ಹೊರಬರಲು ಹಲವರು ಯೋಚಿಸುತ್ತಿದ್ದಾರೆ. ವರ್ಕ್ ಲೈಫ್ ಬ್ಯಾಲೆನ್ಸ್ ಸೇರಿದಂತೆ ಹಲವು ಚರ್ಚೆಗಳು ಜೋರಾುತ್ತಿರುವ ಬೆನ್ನಲ್ಲೇ ಯುವತಿಯ ರಾಜೀನಾಮೆ ನಿರ್ಧಾರ ಇದೀಗ ಚರ್ಚೆಯಾಗುತ್ತಿದೆ. ಮಿಶ್ರ ಪ್ರತಿಕ್ರಿಯಗೆಗಳು ವ್ಯಕ್ತವಾಗಿದೆ. ಹಣಕ್ಕಿಂತ ಮನಶಾಂತಿ, ನೆಮ್ಮದಿ ಮುಖ್ಯ . ಕಾರ್ಪೋರೇಟ್ ಜಗತ್ತಿನಿಂದ ಹೊರಬರುವ ಧೈರ್ಯ ತೋರಿದ್ದೀರಿ. ಮುನ್ನಡೆಯಿರಿ ಜಯ ನಿಮ್ಮದಾಗಲಿದೆ ಎಂದು ಹಲವರು ಶುಭಕೋರಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ಪರ್ಯಾ ಆದಾಯ ಮಾರ್ಗ ಕಂಡುಕೊಳ್ಳದೇ ಉದ್ಯೋಗ ತೊರೆಯುವುದು ಉತ್ತಮ ನಿರ್ಧಾರವಲ್ಲ ಎಂದಿದ್ದಾರೆ. ಸದ್ಯ ಮಾರ್ಕೆಟ್ ಸ್ಥಿತಿ ಉತ್ತಮವಿಲ್ಲ. ಹೀಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.