
ಭಾರತೀಯ ಮಾರುಕಟ್ಟೆಯ ಇಂದಿನ ಮತ್ತು ನಾಳಿನ ಅತಿ ದೊಡ್ಡ ಆರ್ಥಿಕ ಶಕ್ತಿ ಎಂದರೆ ಅದು 'ಜೆನ್ ಜಿ' (Gen Z - 1997 ರಿಂದ 2012 ರ ನಡುವೆ ಜನಿಸಿದವರು). ಮುಂದಿನ ಒಂದು ದಶಕದಲ್ಲಿ ಭಾರತದ ಆರ್ಥಿಕತೆಯ ಒಟ್ಟಾರೆ ಚಿತ್ರಣವನ್ನೇ ಬದಲಾಯಿಸುವ ಶಕ್ತಿ ಈ ಹೊಸ ತಲೆಮಾರಿಗಿದೆ. ವಿಶ್ವದ ಪ್ರತಿ ಐದು ಯುವಕರಲ್ಲಿ ಒಬ್ಬರು ಭಾರತದಲ್ಲಿದ್ದಾರೆ. ಕೇವಲ ಬ್ರ್ಯಾಂಡ್‌ಗಳ ಬೆನ್ನತ್ತದೆ, ತಮ್ಮದೇ ಆದ ಆದ್ಯತೆಗಳ ಮೇಲೆ ಶಾಪಿಂಗ್ ಮಾಡುವ ಈ ಜನಾಂಗ ಭಾರತೀಯ ಮಾರುಕಟ್ಟೆಗೆ ಎಷ್ಟು ದೊಡ್ಡ ಆಸ್ತಿ? ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
Snap Inc. ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG) ಜಂಟಿ ವರದಿಯ ಪ್ರಕಾರ.. ಭಾರತದಲ್ಲಿ ಜೆನ್ ಜಿ ಜನಾಂಗದ ಜನಸಂಖ್ಯೆ ಬರೋಬ್ಬರಿ 37.7 ಕೋಟಿಯಷ್ಟಿದೆ. ಇದು ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 27 ರಷ್ಟಾಗುತ್ತದೆ. ಅಂದರೆ ಭಾರತದಲ್ಲಿನ ಪ್ರತಿ ನಾಲ್ಕರಲ್ಲಿ ಒಬ್ಬರು ಜೆನ್ ಜಿ ಸದಸ್ಯರಾಗಿದ್ದಾರೆ. 15 ರಿಂದ 29 ವರ್ಷದೊಳಗಿನ ಯುವ ಪೀಳಿಗೆಯೇ ಇಂದಿನ ದೇಶದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ.
ಡೆಲಾಯ್ಟ್-ಫಿಕ್ಕಿ (Deloitte-FICCI) ವರದಿಯ ಪ್ರಕಾರ ಜೆನ್ ಜಿ ಜನಾಂಗದ ನೇರ ಖರ್ಚು ಮಾಡುವಿಕೆ (Direct Spending) ಸುಮಾರು 250 ಬಿಲಿಯನ್ ಡಾಲರ್ (ಅಂದಾಜು 23.85 ಲಕ್ಷ ಕೋಟಿ ರೂ.) ತಲುಪಿದೆ. ಭಾರತದ ಒಟ್ಟು ಮಾರುಕಟ್ಟೆ ಬಳಕೆಯಲ್ಲಿ ಜೆನ್ ಜಿ ಪಾಲು ಶೇಕಡಾ 43 ರಷ್ಟಿದೆ. ಅಂದರೆ ಇವರ ಒಟ್ಟು ವೆಚ್ಚ ಸುಮಾರು 860 ಬಿಲಿಯನ್ ಡಾಲರ್ (ಅಂದಾಜು 82.07 ಲಕ್ಷ ಕೋಟಿ ರೂ.) ಆಗಿದೆ. ಇದರಲ್ಲಿ 660 ಬಿಲಿಯನ್ ಡಾಲರ್‌ನಷ್ಟು ವೆಚ್ಚವು ಜೆನ್ ಜಿ ಪ್ರಭಾವದಿಂದ (Influence) ನಡೆಯುತ್ತದೆ. ಉದಾಹರಣೆಗೆ, ಪೋಷಕರು ತಮ್ಮ ಮಕ್ಕಳ ಇಷ್ಟದಂತೆ ಗೃಹೋಪಯೋಗಿ ವಸ್ತುಗಳು ಅಥವಾ ಗ್ಯಾಜೆಟ್‌ಗಳನ್ನು ಖರೀದಿಸುವುದು ಇದರಲ್ಲಿ ಸೇರಿದೆ. 2035 ರ ವೇಳೆಗೆ ಜೆನ್ ಜಿ ಜನಾಂಗದ ಒಟ್ಟು ವೆಚ್ಚದ ಸಾಮರ್ಥ್ಯವು 2 ಟ್ರಿಲಿಯನ್ ಡಾಲರ್‌ಗೆ (ಅಂದಾಜು 190 ಲಕ್ಷ ಕೋಟಿ ರೂ.) ತಲುಪುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ವರದಿಗಳ ಪ್ರಕಾರ, ಜೆನ್ ಜಿ ಜನಾಂಗದ ಸರಾಸರಿ ಮಾಸಿಕ ವೇತನ 20,000 ದಿಂದ 27,000 ರೂಪಾಯಿಗಳಷ್ಟಿದೆ. ಆಶ್ಚರ್ಯಕರ ಸಂಗತಿಯೆಂದರೆ, ಹೊಸದಾಗಿ ಕ್ರೆಡಿಟ್ ಕಾರ್ಡ್ ಅಥವಾ ಸಾಲ ಪಡೆಯುವವರಲ್ಲಿ ಶೇ. 41 ರಷ್ಟು ಮಂದಿ ಜೆನ್ ಜಿ ಸದಸ್ಯರಾಗಿದ್ದಾರೆ. ಇವರು ಪ್ರವಾಸ (Travel) ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿಸಲು ಇಎಂಐ (EMI) ಮತ್ತು ವೈಯಕ್ತಿಕ ಸಾಲಗಳನ್ನು (Personal Loans) ಹೆಚ್ಚಾಗಿ ಬಳಸುತ್ತಿದ್ದಾರೆ. ಸದ್ಯ ಭಾರತದ ಇ-ಕಾಮರ್ಸ್ ವಹಿವಾಟುಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಭಾಗವು ಟೈರ್-2 ಮತ್ತು ಟೈರ್-3 ನಗರಗಳಿಂದ (ಸಣ್ಣ ನಗರಗಳು ಮತ್ತು ಪಟ್ಟಣಗಳು) ನಡೆಯುತ್ತಿದೆ. ಅಂದರೆ ಜೆನ್ ಜಿ ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ. ಆದರೆ ಶೇ. 45 ರಷ್ಟು ಬ್ರ್ಯಾಂಡ್‌ಗಳು ಜೆನ್ ಜಿ ಜನಾಂಗದ ಮಹತ್ವವನ್ನು ಅರಿತಿದ್ದರೂ, ಕೇವಲ ಶೇ. 15 ರಷ್ಟು ಬ್ರ್ಯಾಂಡ್‌ಗಳು ಮಾತ್ರ ಇವರನ್ನು ಗುರಿಯಾಗಿಸಿಕೊಂಡು ವಿಶೇಷ ಮಾರ್ಕೆಟಿಂಗ್ ತಂತ್ರಗಳನ್ನು ರೂಪಿಸಿವೆ. ಶೇ. 85 ರಷ್ಟು ಬ್ರ್ಯಾಂಡ್‌ಗಳು ಇನ್ನೂ ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬೇಕಿದೆ.
ಭಾರತದ ಆನ್‌ಲೈನ್ ರಿಟೇಲ್ ಮಾರ್ಕೆಟ್ 2030 ರ ವೇಳೆಗೆ 260 ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ. ಈ ಯಶಸ್ಸಿನಲ್ಲಿ ಜೆನ್ ಜಿ ಪ್ರಮುಖ ಪಾತ್ರ ವಹಿಸಲಿದೆ. ಕೇವಲ ವಸ್ತುಗಳನ್ನು ಮಾರಾಟ ಮಾಡುವುದಕ್ಕಿಂತ ಹೆಚ್ಚಾಗಿ ನಂಬಿಕೆ (Authenticity), ಅನುಭವ ಮತ್ತು ಕಮ್ಯುನಿಟಿಯನ್ನು ಒದಗಿಸುವ ಬ್ರ್ಯಾಂಡ್‌ಗಳನ್ನು ಈ ಯುವ ಪೀಳಿಗೆ ಹೆಚ್ಚು ಇಷ್ಟಪಡುತ್ತದೆ. ಜೆನ್ ಜಿ ಜನಾಂಗ ಭಾರತೀಯ ಮಾರುಕಟ್ಟೆಯ ಕೇವಲ ಗ್ರಾಹಕರಲ್ಲ, ಬದಲಿಗೆ ಭವಿಷ್ಯದ ಆರ್ಥಿಕತೆಯ ನಿರ್ಧಾರಕ ಶಕ್ತಿಯಾಗಿದ್ದಾರೆ.