
ಬೆಂಗಳೂರು ಯುವಕರ ಖರ್ಚಿನ ಅಭ್ಯಾಸಕ್ಕೆ ಮಹಿಳೆಯ ಪ್ರಶ್ನೆ?
ಬೆಂಗಳೂರು ಐಟಿ ಉದ್ಯೋಗ, ಸ್ಟಾರ್ಟ್‌ಅಪ್ ಸಂಸ್ಕೃತಿ ಮತ್ತು ಹೆಚ್ಚಿನ ಸಂಬಳಕ್ಕಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಆದರೆ ಇದೇ ನಗರದಲ್ಲಿ ಹೆಚ್ಚುತ್ತಿರುವ ಜೀವನಶೈಲಿ ವೆಚ್ಚದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ನಗರದಲ್ಲಿ ಕಳೆದ ಏಳು ತಿಂಗಳ ಅನುಭವದ ಆಧಾರದ ಮೇಲೆ ಯುವ ವೃತ್ತಿಪರರ ಖರ್ಚಿನ ಅಭ್ಯಾಸಗಳ ಬಗ್ಗೆ ಮಹಿಳೆಯೊಬ್ಬರು ಪ್ರಶ್ನೆ ಎತ್ತಿದ್ದು, ಅವರ ವಿಡಿಯೋ ವೈರಲ್ ಆಗಿದೆ.
ಹೆಚ್ಚು ಸಂಪಾದನೆ... ಮಿತಿಮೀರಿದ ಖರ್ಚಿಗೆ ಕಾರಣವೇ?
ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಸಿಮ್ರಿಧಿ ಮಖಿಜಾ, ಯುವಕರು ಅಗತ್ಯಕ್ಕಿಂತ ಹೆಚ್ಚು ಐಷಾರಾಮಿ ಜೀವನಶೈಲಿಯತ್ತ ಒಲವು ತೋರುತ್ತಿದ್ದಾರೆ ಎಂದು ಹೇಳಿದ್ದಾರೆ. ₹20 ಸಾವಿರಕ್ಕೆ ಉತ್ತಮ ಮನೆ ಸಿಗುವಾಗ ತಿಂಗಳಿಗೆ ₹40 ಸಾವಿರ ಬಾಡಿಗೆ ಪಾವತಿಸುವುದು, ಕೆಫೆಗಳಲ್ಲಿ ಒಂದೇ ಬಾರಿ ₹5 ಸಾವಿರ ಖರ್ಚು ಮಾಡುವುದು ಅಥವಾ ಒಂದೇ ಶಾಪಿಂಗ್‌ನಲ್ಲಿ ₹20 ಸಾವಿರ ವೆಚ್ಚ ಮಾಡುವುದು ಅವಶ್ಯಕವೇ ಎಂದು ಪ್ರಶ್ನಿಸಿದ್ದಾರೆ.
ಅವರ ಪ್ರಕಾರ, 20ರ ಹರೆಯದಲ್ಲಿ ಹೆಚ್ಚಿನ ಆದ್ಯತೆ ಉಳಿತಾಯ ಮತ್ತು ಭವಿಷ್ಯದ ಆರ್ಥಿಕ ಭದ್ರತೆಗೆ ನೀಡಬೇಕು. ಸಂಬಳ ಹೆಚ್ಚಾದ ಕೂಡಲೇ ಜೀವನಶೈಲಿಯನ್ನೂ ಅದೇ ಪ್ರಮಾಣದಲ್ಲಿ ದುಬಾರಿಗೊಳಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಲೈಫ್‌ಸ್ಟೈಲ್ ಇನ್‌ಫ್ಲೇಶನ್' ಬಗ್ಗೆ ಎಚ್ಚರಿಕೆ..!
ಸಿಮ್ರಿಧಿ ಹೇಳುವಂತೆ, ಹೆಚ್ಚು ಸಂಪಾದನೆ ಎಂದರೆ ಹೆಚ್ಚು ಖರ್ಚು ಮಾಡಲೇಬೇಕು ಎಂಬ ಮನೋಭಾವವೇ 'ಲೈಫ್‌ಸ್ಟೈಲ್ ಇನ್‌ಫ್ಲೇಶನ್'. ಆದಾಯ ಹೆಚ್ಚಾದಂತೆ ಅನಗತ್ಯ ವೆಚ್ಚಗಳೂ ಹೆಚ್ಚುತ್ತವೆ. ಆದರೆ ಅನಿರೀಕ್ಷಿತ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಉಳಿತಾಯಕ್ಕೆ ಆದ್ಯತೆ ನೀಡಿದರೆ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಸುಲಭವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ನೆಟ್ಟಿಗರಿಂದ ಪರ-ವಿರೋಧ ಚರ್ಚೆ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಯುವ ವಯಸ್ಸಿನಲ್ಲೇ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು "ಹಣ ಸಂಪಾದಿಸುವುದೇ ಜೀವನವನ್ನು ಆನಂದಿಸಲು" ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಕೆಲವರು ಬೆಂಗಳೂರಿನಲ್ಲಿ ಕಚೇರಿಗಳ ಸಮೀಪ ಮನೆ ಬಾಡಿಗೆಗಳು ಸಹಜವಾಗಿಯೇ ದುಬಾರಿಯಾಗಿರುವುದರಿಂದ ಹೆಚ್ಚಿನ ಬಾಡಿಗೆ ಪಾವತಿಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು ಐಷಾರಾಮಿ ಶಾಪಿಂಗ್‌ಗಿಂತ ಪ್ರವಾಸಗಳಿಗೆ ಹಣ ಖರ್ಚು ಮಾಡುವುದು ಹೆಚ್ಚು ಮೌಲ್ಯಯುತ ಹೂಡಿಕೆ ಎಂದು ಸಲಹೆ ನೀಡಿದ್ದಾರೆ.
ಹೆಚ್ಚು ಸಂಪಾದನೆಯೋ, ಹೆಚ್ಚು ಉಳಿತಾಯವೋ?
ಈ ಘಟನೆ ಮತ್ತೊಮ್ಮೆ ವೈಯಕ್ತಿಕ ಹಣಕಾಸು ನಿರ್ವಹಣೆ, ಜೀವನಶೈಲಿ ಹಣದುಬ್ಬರ ಮತ್ತು ಯುವಕರ ಆರ್ಥಿಕ ಆದ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿದೆ. ಹೆಚ್ಚು ಆದಾಯ ಗಳಿಸುವುದಕ್ಕಿಂತ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದೇ ದೀರ್ಘಾವಧಿಯ ಆರ್ಥಿಕ ಸ್ಥಿರತೆಗೆ ಮುಖ್ಯ ಎಂಬ ಸಂದೇಶವನ್ನು ಈ ಚರ್ಚೆ ಒತ್ತಿಹೇಳುತ್ತಿದೆ.