ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ಉದ್ಯೋಗ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸವಾಲು. ಇಂತಹ ಪರಿಸ್ಥಿತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ ವಿಶ್ವದ ದಿಗ್ಗಜ ಕಂಪನಿಗಳಿಂದ 20ಕ್ಕೂ ಹೆಚ್ಚು ಆಫರ್ ಬಂದಿದೆ ಎಂದರೆ ನಂಬಲೇಬೇಕು. ನಿಶ್ಚಯ್ ಅಗರ್ವಾಲ್ ಎಂಬುವವರ ಈ ಸ್ಪೂರ್ತಿದಾಯಕ ಕಥೆ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.
ಲಿಂಕ್ಡ್‌ಇನ್ (LinkedIn) ಬಳಕೆದಾರರಾದ ನಿಶ್ಚಯ್ ಅಗರ್ವಾಲ್ ಅವರು ಇತ್ತೀಚೆಗೆ ತಮ್ಮ ವೃತ್ತಿಜೀವನದ ಮೈಲಿಗಲ್ಲನ್ನು ಹಂಚಿಕೊಂಡಿದ್ದಾರೆ. ಉದ್ಯೋಗ ಹುಡುಕಾಟದ ಸಮಯದಲ್ಲಿ ಅವರಿಗೆ Adobe, Amazon, Tesla, Salesforce, JioHotstar, eBay, CRED, Twilio ಮತ್ತು Autodesk ನಂತಹ ಪ್ರತಿಷ್ಠಿತ ಕಂಪನಿಗಳಿಂದ 20ಕ್ಕೂ ಹೆಚ್ಚು ಆಫರ್ ಲೆಟರ್‌ಗಳು ಬಂದಿವೆ. ಅಷ್ಟೇ ಅಲ್ಲದೆ, ಅವರಿಗೆ ವಿದೇಶಿ ಕಂಪನಿಯೊಂದರಿಂದ ಅಂತರಾಷ್ಟ್ರೀಯ ಆಫರ್ ಕೂಡ ಲಭಿಸಿದೆ.
ಈ ಯಶಸ್ಸಿನ ಬಗ್ಗೆ ಮಾತನಾಡಿರುವ ನಿಶ್ಚಯ್, "ಇದು ಕೇವಲ ಕಂಪನಿಗಳ ಲೋಗೋ ಅಥವಾ ಹೆಸರಿನ ಕಥೆಯಲ್ಲ, ಇದರ ಹಿಂದೆ ದೊಡ್ಡ ಹೋರಾಟವಿದೆ" ಎಂದಿದ್ದಾರೆ. ಈ ಹಂತಕ್ಕೆ ತಲುಪಲು ಅವರು ಅನೇಕ ರಾತ್ರಿಗಳನ್ನು ಕಲಿಕೆಯಲ್ಲಿ ಕಳೆದಿದ್ದಾರೆ. ವೀಕೆಂಡ್‌ಗಳಲ್ಲೂ ವಿಶ್ರಾಂತಿ ಪಡೆಯದೆ ಸಿದ್ಧತೆ ನಡೆಸಿದ್ದಾರೆ. ಹಲವು ಸಂದರ್ಶನಗಳಲ್ಲಿ ತಿರಸ್ಕಾರವನ್ನು ಎದುರಿಸಿದ್ದಾರೆ. ದೀರ್ಘಕಾಲದ ಕೋಡಿಂಗ್ ಮತ್ತು ಡಿಬಗ್ಗಿಂಗ್ ಅವರ ತಾಳ್ಮೆಯನ್ನು ಪರೀಕ್ಷಿಸಿತ್ತು. ಆತ್ಮವಿಶ್ವಾಸ ಕುಗ್ಗಿದಾಗಲೂ ಸತತ ಕಲಿಕೆಯ ಹಂಬಲ ಅವರನ್ನು ಮುನ್ನಡೆಸಿದೆ.
ನೌಕರಿಗಾಗಿ ಹುಡುಕುತ್ತಿರುವ ಯುವಕರಿಗೆ ನಿಶ್ಚಯ್ ಒಂದು ಮಹತ್ವದ ಸಲಹೆ ನೀಡಿದ್ದಾರೆ. "ನಿಮ್ಮ ಆರಂಭದ ಹಂತವನ್ನು ಬೇರೆಯವರ ಯಶಸ್ಸಿನ ಮುಂದಿನ ಹಂತದೊಂದಿಗೆ ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರ ಜೀವನದ ಪ್ರಯಾಣವೂ ಭಿನ್ನವಾಗಿರುತ್ತದೆ. ನಿರಂತರವಾಗಿ ಹೊಸದನ್ನು ಕಲಿಯಿರಿ, ಹೊಸ ಪ್ರಾಜೆಕ್ಟ್ ಮಾಡಿ ಮತ್ತು ನಿಮ್ಮ ಮೇಲೆ ನಂಬಿಕೆ ಇಡಿ" ಎಂದಿದ್ದಾರೆ. ತಮ್ಮ ಯಶಸ್ಸಿನ ಶ್ರೇಯಸ್ಸನ್ನು ಅವರು ಕುಟುಂಬ, ಮ್ಯಾನೇಜರ್‌ಗಳು ಮತ್ತು ತಮ್ಮ ತಂಡಕ್ಕೆ ನೀಡಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು "ನೀವು ಪೋಕಿಮನ್ ಕಾರ್ಡ್ ಕಲೆಕ್ಟ್ ಮಾಡಿದ ಹಾಗೆ ಆಫರ್ ಲೆಟರ್‌ಗಳನ್ನು ಕಲೆಕ್ಟ್ ಮಾಡಿದ್ದೀರಾ!" ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದು ಪ್ರತಿಯೊಬ್ಬ ಟೆಕ್ ಇಂಜಿನಿಯರ್‌ನ ಕನಸು ಎಂದು ಬಣ್ಣಿಸಿದ್ದಾರೆ.
ಯಶಸ್ಸು ಎಂಬುದು ರಾತ್ರೋರಾತ್ರಿ ಬರುವುದಿಲ್ಲ; ಇದು ಸತತ ಪ್ರಯತ್ನ ಮತ್ತು ನೂರಾರು ಸೋಲುಗಳ ನಂತರ ಸಿಗುವ ಪ್ರತಿಫಲ. ನಿಶ್ಚಯ್ ಅವರ ಸಾಧನೆಯು ಉದ್ಯೋಗಾಕಾಂಕ್ಷಿಗಳಿಗೆ "ಮಾರುಕಟ್ಟೆ ಎಷ್ಟೇ ಕಠಿಣವಾಗಿದ್ದರೂ, ಪ್ರತಿಭೆ ಮತ್ತು ಕೌಶಲವಿದ್ದರೆ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ" ಎಂಬ ಭರವಸೆ ನೀಡುತ್ತದೆ.
Bro is suffering from success
16+ offers at this time 🙇 pic.twitter.com/BQgw9v5NfH— Ajay (@ajay_2512x) July 31, 2026