
ಬೆಂಗಳೂರು (ಜು.1): ಇಂದಿನ ಪೋಷಕರು ಎರಡು-ಮೂರು ವರ್ಷದ ಮಗುವನ್ನೇ ಶಾಲೆಗೆ ಕಳುಹಿಸುವ ತೊಂದರೆಯಲ್ಲಿ ಬೀಳುತ್ತಿದ್ದಾರೆ. 'ಸ್ಪರ್ಧೆ ಇದೆ' ಎಂಬ ಕಾರಣದಿಂದ ಮಕ್ಕಳು ಇನ್ನೂ ಮಾತುಗಳು ಸರಿಯಾಗಿ ಉಚ್ಚರಿಸದ ವಯಸ್ಸಲ್ಲೇ ಪುಸ್ತಕ, ಪಾಠಶಾಲೆ, ಪರೀಕ್ಷೆಗಳ ಜಗತ್ತಿಗೆ ತಳ್ಳಲ್ಪಡುತ್ತಿದ್ದಾರೆ. ಆದರೆ ಈ ಸತತ ಓಟದ ಮಧ್ಯೆ ಅವರು ತಮ್ಮ ಬಾಲ್ಯವನ್ನೇ ಮರೆತುಬಿಡುತ್ತಾರೆ.
ಬಾಲ್ಯ ಸ್ಪರ್ಧೆಯ ವೇದಿಕೆಯಲ್ಲ
ವೈರಲ್ ಆಗಿರುವ ಈ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಬಹುಶಃ ಎರಡು ಅಥವಾ ಎರಡೂವರೆ ವರ್ಷದ ಮಗು ಶಾಲೆಯ ಹೊರಗೆ ಕುಳಿತಾಗಲೇ ನಿದ್ರೆಗೆ ಜಾರುತ್ತಿದೆ. ಈ ದೃಶ್ಯ ಪೋಷಕರಿಗೆ ಪ್ರತ್ಯಕ್ಷ ಸಂದೇಶ ನೀಡುವಂತೆ ಆಗಿದೆ. 'ನೀವು ನಿಮ್ಮ ಮಗುವಿಗೆ ಶಿಕ್ಷಣ ಕೊಡಿಸುತ್ತಿದ್ದೀರಾ? ಅಥವಾ ಅವರ ಬಾಲ್ಯವನ್ನು ಕಿತ್ತುಕೊಂಡು ಉನ್ನತ ಸಾಧನೆಗಳ ಹೆಸರಲ್ಲಿ ಒತ್ತಡ ನೀಡುತ್ತಿದ್ದೀರಾ? ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ Rahul Kapadnis ಎನ್ನುವವರು @jaykar928 ಎಂಬ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ಜೂ.17ರಂದು ಹಂಚಿಕೊಳ್ಳಲಾದ ವಿಡಿಯೋವನ್ನು 7.7 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ. ಈ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸುತ್ತ ಹಲವರು ತಮ್ಮ ಮನಸ್ಸಿನ ತಳಮಳವನ್ನು ಕಾಮೆಂಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ.
‘ಬಾಲ್ಯವೆಂಬ ಪಠ್ಯಪುಸ್ತಕವೇ ಬದುಕಿನ ಸರ್ವಶ್ರೇಷ್ಠ ಪಾಠ’ ಎಂದು ಒಬ್ಬರು ಬರೆದುಕೊಂಡಿದ್ದಾರೆ. 'ಜಗತ್ತಿನ ಸ್ಪರ್ಧೆಗೆ ತಯಾರಿಸಲು ನಾನು ನನ್ನ ಮಕ್ಕಳ ಹಾಸ್ಯವನ್ನೂ, ಆಟವನ್ನೂ ಕಳೆದುಕೊಂಡಿಲ್ಲ' ಎಂದು ಇನ್ನೊಬ್ಬ ತಂದೆ ಹೆಮ್ಮೆಪಟ್ಟು ಹೇಳಿದ್ದಾರೆ. ಹಲವರು 'ಪಾಲಕರ ನಿರೀಕ್ಷೆಗಳ ಜತೆಗೆ ಮಕ್ಕಳ ಮಾನಸಿಕ ಸ್ಥಿತಿಗೂ ಬೆಲೆ ಕೊಡಬೇಕು' ಎಂದು ಹೇಳಿದ್ದಾರೆ.
ನನ್ನ ಮಗ ಸರ್ಕಾರಿ ಶಾಲೆಗೆ ಹೋಗ್ತಿದ್ದಾನೆ: 'ನಾನು ನನ್ನ ಮಗುವನ್ನು ಇಂಗ್ಲಿಷ್ ಶಾಲೆಗೆ ಕಳಿಸುವ ಬದಲು, ನನ್ನ ಊರಿನ ಸರಕಾರಿ ಶಾಲೆಯಲ್ಲಿ ನವಿಲಂತೆ ಬೆಳೆಸುತ್ತಿದ್ದೇನೆ. ಅಲ್ಲಿ ಅವರು ಹಸು-ಹಕ್ಕಿಗಳ ನಡುವೆ ಬೆಳೆದು ಹಿತಕರ ಬಾಲ್ಯವನ್ನು ಅನುಭವಿಸುತ್ತಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಈ ಎಲ್ಲ ನೆಟ್ಟಿಗರ ಕಾಮೆಂಟ್‌ಗೆ ತಿರುಗೇಟು ಎಂಬಂತೆ ಕಾಮೆಂಟ್ ಮಾಡಿದ್ದಾರೆ. 'ಶಾಲೆಗೆ ಬೇಗ ಹೋಗುವುದರಿಂದ ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸವೂ ಮಕ್ಕಳಲ್ಲಿ ಬೆಳೆಯುತ್ತದೆ. ಇದು ನಕಾರಾತ್ಮಕ ಚಿಂತನೆಯಲ್ಲ. 2 ಗಂಟೆ ಶಾಲೆಗೆ ಹೋಗುವುದನ್ನು ಬಾಲ್ಯ ಕಳೆದುಕೊಳ್ಳುವುದಕ್ಕೆ ಹೋಲಿಸುವುದು ಅರ್ಥವಾಗದಿರುವ ಪ್ರಶ್ನೆ ಎಂದು ಹೇಳಿದ್ದಾರೆ.
ಸ್ಪರ್ಧೆಯ ಜಗತ್ತಿಗೆ ತಯಾರಾಗುವುದು ಮುಖ್ಯ. ಆದರೆ ಅದರ ಬೆಲೆಯಲ್ಲಿ ಮುದ್ದಾದ ಬಾಲ್ಯವನ್ನೇ ಕಳೆದುಕೊಳ್ಳುವುದು ಕೇವಲ ನಷ್ಟವೇ ಆಗುತ್ತದೆ. ಮಕ್ಕಳಲ್ಲಿ ಮಾನಸಿಕ ಸಮತೋಲನ, ಸ್ವಾತಂತ್ರ್ಯ, ನಿರ್ಬಂಧರಹಿತ ಆಟ ಈ ಎಲ್ಲವೂ ಅವರ ಬೆಳವಣಿಗೆಗೆ ಅತ್ಯಗತ್ಯ. ಅವರು ಶಿಕ್ಷಣದಲ್ಲಿ ಮುನ್ನುಗ್ಗಬೇಕಾದರೂ, ಅದು ಪ್ರೀತಿ ಮತ್ತು ಸಹಾನುಭೂತಿಯ ಹಾದಿಯಲ್ಲಿ ಇರಬೇಕು ಎಂದು ಶಿಕ್ಷಣ ತಕ್ಞರು ಹೇಳುತ್ತಾರೆ.