
ಬೆಂಗಳೂರು: ಐಟಿ ಕ್ಷೇತ್ರ ಸೇರಿದಂತೆ ಬಹುತೇಕ ಉದ್ಯಮಗಳಲ್ಲಿ ಆರ್ಥಿಕ ಹಿಂಜರಿತ ಮತ್ತು ಎಐ ಪ್ರಭಾವದೊಂದಿಗೆ ಕುಸಿಯುತ್ತಿರುವ ಉದ್ಯೋಗಳ ಅವಕಾಶ ನಡುವೆ ಬೆಂಗಳೂರಿನ ಟೆಕ್ಕಿಯ ಸ್ಪೂರ್ತಿದಾಯಕ ಕಥೆ ಇದಾಗಿದೆ. ಕಳೆದ ಐದು ತಿಂಗಳಿನಿಂದ ಖಾಲಿ ಕುಳಿತು ಉದ್ಯೋಗ ಹುಡುಕುತ್ತಿದ್ದರು, ಈ ಸಂದರ್ಭದಲ್ಲಿ 36 ಬಾರಿ ಸಂದರ್ಶನಗಳಲ್ಲಿ ತಿರಸ್ಕಾರಗೊಂಡಿದ್ದರು. ಆದರೆ 30 ಲಕ್ಷ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ಬೆಂಗಳೂರಿನ ಸ್ಟಾಕ್ ಡೆವಲಪರ್‌ಗೆ ಹೈದರಾಬಾದ್‌ನಲ್ಲಿ ಉದ್ಯೋಗ ಸಿಕ್ಕಿದೆ.
ಬೆಂಗಳೂರಿನ ಯುವಕ ರೆಡ್ಡಿಟ್‌ನಲ್ಲಿ ಈ ಕುರಿತಂತೆ ಬರೆದುಕೊಂಡಿದ್ದು, ದೀರ್ಘ ಅನಾರೋಗ್ಯ ಸೇರಿದಂತೆ ಡೆಲಾಯ್ಟ್, ವೆಲ್ಸ್ ಫಾರ್ಗೋದಂತಹ ದೊಡ್ಡ ದೊಡ್ಡ ಕಂಪನಿಗಳಿಂದ ತಿರಸ್ಕಾರಗೊಂಡ ನಂತರವೂ ಈ ಯಶಸ್ಸು ಹೇಗೆ ಸಿಕ್ತು ಎಂದು ರಿವೀಲ್ ಮಾಡಿದ್ದಾರೆ. ಬೆಂಗಳೂರು ಯುವಕನ ಈ ಪೋಸ್ಟ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಈ ಜರ್ನಿ ಹಲವರಿಗೆ ಸ್ಪೂರ್ತಿಯಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ದೊಡ್ಡ ಸಂಬಳ ಸಿಕ್ಕಿಲ್ಲ, ಆದರೆ ಇಷ್ಟು ತಿಂಗಳುಗಳ ನಂತರ ನನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಸಿಲು ಇದರಿಂದ ನನಗೆ ಸಾಧ್ಯವಾಗಿದೆ. ಸಿಯಾಟಿಕಾ ಆರೋಗ್ಯ ಸಮಸ್ಯೆಯ ಕಾರಣ ನಾನು ನನ್ನ ಹಳೆಯ ಕಂಪನಿಯನ್ನು ಬಿಟ್ಟಿದ್ದೆ. ಆದರೆ ಕೆಲಸ ಇಲ್ಲದ ಈ ಐದು ತಿಂಗಳು ಸಮಯದಲ್ಲಿ ನಾನು ಜನರೇಟಿವ್ ಎಐನಲ್ಲಿ ಹೊಸ ಕೌಶಲ್ಯಗಳನ್ನು ಪಡೆದುಕೊಂಡಿದ್ದೇನೆ. ಪೈಥಾನ್, ರಿಯಾಕ್ಟ್ ಮತ್ತು ಎಡ್ಲ್ಯೂಎಸ್ ನಲ್ಲಿ ಕೌಶಲ್ಯವನ್ನು ಹೊಂದಿದ್ದೇನೆ. ಆದರೆ ಹೊಸ ಕೆಲಸ ಹುಡುಕಾಟದ ಸಂದರ್ಭದಲ್ಲಿ ಹಲವು ಹಿನ್ನಡೆಗಳು ಎದುರಾಯ್ತು. ಹಲವು ಕಂಪನಿಗಳ ಸಂದರ್ಶನಗಳಲ್ಲಿ ನಾಲ್ಕನೇ ಸುತ್ತಿನವರೆಗೂ ತಲುಪಿ ಅವಕಾಶಗಳನ್ನು ಕಳೆದುಕೊಂಡಿದ್ದೆ ಎಂದು ಆತನ ತಿಳಿಸಿದ್ದಾನೆ.
ಕೊನೆಗೆ ಹೈದರಾಬಾದ್ ಮೂಲದ ಅಲ್ಗೋಲೀಪ್ ಕಂಪನಿಯಲ್ಲಿ ವಾರ್ಷಿಕ 30 ಲಕ್ಷ ರೂಪಾಯಿಗಳ ಪ್ಯಾಕೇಜ್ ನೊಂದಿಗೆ ಎಸ್‌ಡಿಇ-3 ಉದ್ಯೋಗದ ಆಫರ್ ಸಿಕ್ಕಿದೆ. ಈ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಕುಟುಂಬವನ್ನು ಬಿಟ್ಟು ಏಕಾಂಗಿಯಾಗಿ ಹೈದರಾಬಾದ್ಗೆ ಪ್ರಯಾಣ ಮಾಡಬೇಕಿದೆ. ಇದು ಜೀವನ ಪ್ರಯಾಣದ ಒಂದು ಭಾಗ ಎಂದು ತಿಳಿದಿದ್ದೇನೆ ಎಂದು ಟೆಕ್ಕಿ ಬರೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮಂತಹ ಹಲವರಿಗೆ ಸಲಹೆಯನ್ನು ನೀಡಿರುವ ಆತ, ಸೋಲೊಪ್ಪಿಕೊಳ್ಳಬೇಡಿ. ಪ್ರತಿ ಬಾರಿ ರಿಜೆಕ್ಷನ್ ಎದುರಾದ ಸಂದರ್ಭದಲ್ಲಿ ಹೊಸತನ್ನು ಕಲಿಯಲು ಯತ್ನಿಸಿ. ಕಠಿಣ ಪರಿಶ್ರಮ ಎಂದಿಗೂ ಕೈಬಿಡೋದಿಲ್ಲ, ಖಂಡಿತ ಫಲ ಕೊಡುತ್ತದೆ ಎಂದು ಹೇಳಿದ್ದಾರೆ. ಯುವಕನ ಈ ಜರ್ನಿ ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅನೇಕ ಮಂದಿಗೆ ಪ್ರೇರಣೆ ನೀಡಿದೆ.