
ಲಕ್ಷಗಟ್ಟಲೆ ಸಂಬಳದ ಐಟಿ ಕೆಲಸ ಬಿಟ್ಟು ಫುಲ್-ಟೈಮ್ ಕಂಟೆಂಟ್ ಕ್ರಿಯೇಟರ್‌ಗಳಾದ ದಂಪತಿ, ತಮ್ಮ ಆದಾಯದ ಬೆಳವಣಿಗೆಯನ್ನು ಹಂಚಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಟೆಕ್ ಉದ್ಯೋಗಿಗಳಾಗಿದ್ದಾಗಿನ ಸಂಬಳ ಮತ್ತು ಈಗಿನ ಆದಾಯವನ್ನು ಹೋಲಿಕೆ ಮಾಡಿ ಮುಸ್ಕಾನ್ ಮಿತ್ತಲ್ ಮತ್ತು ಆಶಿಶ್ ಗುಪ್ತಾ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಈ ಜೋಡಿ ತಮ್ಮ ವಿಯೆಟ್ನಾಂ ಪ್ರವಾಸದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಅವರ ಕಂಟೆಂಟ್ ಕ್ರಿಯೇಷನ್ ಪಯಣ ಶುರುವಾಯ್ತು. ಮೊದಲ ವಿಡಿಯೋಗೆ ಬರೋಬ್ಬರಿ 20,000ಕ್ಕೂ ಹೆಚ್ಚು ವೀವ್ಸ್ ಬಂದಿತ್ತು. ಸದ್ಯಕ್ಕೆ ಇವರು ಹೆಚ್ಚಾಗಿ ಟ್ರಾವೆಲ್ ವಿಡಿಯೋಗಳನ್ನು ಮಾಡುತ್ತಾರಾದರೂ, ಸಂಬಂಧಗಳು ಮತ್ತು ಆರೋಗ್ಯದ ಬಗ್ಗೆಯೂ ಕಂಟೆಂಟ್ ಹಂಚಿಕೊಳ್ಳುತ್ತಾರೆ. ಫುಲ್-ಟೈಮ್ ಕಂಟೆಂಟ್ ಕ್ರಿಯೇಷನ್ ಲೈಫ್‌ಸ್ಟೈಲ್ ಬಗ್ಗೆ ಫಾಲೋವರ್ಸ್ ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರವಾಗಿ, ಈ ಜೋಡಿ ತಮ್ಮ ಆದಾಯದ ನಿಖರವಾದ ಲೆಕ್ಕಾಚಾರವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ.
ಕಂಟೆಂಟ್ ಕ್ರಿಯೇಷನ್‌ಗೆ ಬರುವ ಮುನ್ನ, ಆಶಿಶ್ ವಾರ್ಷಿಕ 12 ಲಕ್ಷ ರೂ. ಇನ್-ಹ್ಯಾಂಡ್ ಸಂಬಳಕ್ಕೆ ಡೇಟಾ ಅನಲಿಸ್ಟ್ ಆಗಿ ಮತ್ತು ಮುಸ್ಕಾನ್ ವಾರ್ಷಿಕ 23 ಲಕ್ಷ ರೂ. ಸಂಬಳಕ್ಕೆ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದರು. 2023ರ ಮೇ ತಿಂಗಳಲ್ಲಿ ಇವರು ಪಾರ್ಟ್-ಟೈಮ್ ಆಗಿ ವಿಡಿಯೋ ಮಾಡಲು ಶುರು ಮಾಡಿದರು. ಅದೇ ವರ್ಷ ಅಕ್ಟೋಬರ್‌ನಲ್ಲಿ 15,000 ರೂಪಾಯಿಯ ಮೊದಲ ಪೇಯ್ಡ್ ಸಹಯೋಗ (collaboration) ಸಿಕ್ಕಿತು. ಮೊದಲ ವರ್ಷ ಪಾರ್ಟ್-ಟೈಮ್ ಆಗಿಯೇ ಇವರು 6.5 ಲಕ್ಷ ರೂಪಾಯಿ ಸಂಪಾದಿಸಿದರು.
2024ರಲ್ಲಿ ಇಬ್ಬರೂ ಕೆಲಸ ಬಿಟ್ಟು ಫುಲ್-ಟೈಮ್ ಕಂಟೆಂಟ್ ಕ್ರಿಯೇಟರ್‌ಗಳಾದರು. ಐಟಿ ಕ್ಷೇತ್ರದಲ್ಲಿ ಇಬ್ಬರಿಗೂ ಸೇರಿ ಸಿಗುತ್ತಿದ್ದ 35 ಲಕ್ಷ ರೂಪಾಯಿ ವಾರ್ಷಿಕ ಸಂಬಳಕ್ಕಿಂತ ಹೆಚ್ಚು, ಅಂದರೆ 45.3 ಲಕ್ಷ ರೂಪಾಯಿಗಳನ್ನು ಆ ವರ್ಷ ಗಳಿಸಿದರು. ಬ್ರ್ಯಾಂಡ್ ಏಜೆನ್ಸಿಗಳೊಂದಿಗಿನ ಸಹಯೋಗ, ಅಫಿಲಿಯೇಟ್ ಮಾರ್ಕೆಟಿಂಗ್ ಮತ್ತು ಗ್ರೂಪ್ ಟ್ರಿಪ್‌ಗಳನ್ನು ಆಯೋಜಿಸಿದ್ದು ಅವರ ಆದಾಯವನ್ನು ಹೆಚ್ಚಿಸಿತು. ನಂತರ 2025ರಲ್ಲಿ ಇವರು ತಮ್ಮ ಅತಿ ಹೆಚ್ಚು ಆದಾಯ ಗಳಿಸಿದರು. ತಮಗೆ ಸರಿಯಾಗಿ ಸಪೋರ್ಟ್ ಮಾಡದ ಏಜೆನ್ಸಿಯನ್ನು ಕೈಬಿಟ್ಟು, ಯೂಟ್ಯೂಬ್-ಫೇಸ್‌ಬುಕ್ ಮಾನಿಟೈಸೇಶನ್ ಮೇಲೆ ಗಮನ ಹರಿಸಿದರು.
ಜೊತೆಗೆ ತಮ್ಮದೇ ಆದ ಡಿಜಿಟಲ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಶುರು ಮಾಡಿದ ಮೇಲೆ, ಅವರ ಆದಾಯ 1.09 ಕೋಟಿ ರೂಪಾಯಿಗೆ ಏರಿತು. 2026ರ ಮೊದಲ ನಾಲ್ಕು ತಿಂಗಳಲ್ಲೇ ಇವರು 21.6 ಲಕ್ಷ ರೂಪಾಯಿ ಗಳಿಸಿದ್ದಾರೆ. ಕಂಟೆಂಟ್ ಕ್ರಿಯೇಷನ್ ಒಂದು ಸೀಸನಲ್ ಇಂಡಸ್ಟ್ರಿ. ಈ ಲೆಕ್ಕದಲ್ಲಿ ತಮ್ಮ ಪ್ರಯಾಣದ ಖರ್ಚು ಅಥವಾ ಇತರ ನಿರ್ವಹಣಾ ವೆಚ್ಚಗಳು ಸೇರಿಲ್ಲ ಎಂದು ಇಬ್ಬರೂ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ವೀಕ್ಷಿಸಿ