'ನೀಲಿ ಬಣ್ಣದ್ದು ಟಾಯ್ಲೆಟ್‌ಗೆ...': RAF ಯುನಿಫಾರ್ಮ್‌ ಬಣ್ಣ ಅಪಹಾಸ್ಯ ಮಾಡಿದ್ದ CJP ಇನ್‌ಫ್ಲುಯೆನ್ಸರ್‌ ಶ್ರದ್ಧಾ ಸಿಂಗ್‌ ಫುಲ್‌ ಟ್ರೋಲ್‌!

Published : Jul 29, 2026, 06:01 PM IST
Shraddha Singh RAF blue uniform reel

ಸಾರಾಂಶ

ಇನ್‌ಫ್ಲುಯೆನ್ಸರ್ ಶ್ರದ್ಧಾ ಸಿಂಗ್, RAF ಯೋಧರ ನೀಲಿ ಸಮವಸ್ತ್ರವನ್ನು ಲೇವಡಿ ಮಾಡಿದ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ವೀಡಿಯೋ ವೈರಲ್ ಆಗಿ ತೀವ್ರ ಟ್ರೋಲಿಂಗ್ ಎದುರಿಸಿದ ಅವರು, ತಮ್ಮ ತಪ್ಪಿನ ಅರಿವಾಗಿ ವೀಡಿಯೋ ಡಿಲೀಟ್ ಮಾಡಿ ಸ್ಪಷ್ಟನೆ ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕಡಿಮೆಯಾಗಿಲ್ಲ.

ನವದೆಹಲಿ (ಜು.29): ಸಂಸತ್ ಚಲೋ ಮತ್ತು ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಕಾರ್ಯದಲ್ಲಿದ್ದ ರಾಪಿಡ್‌ ಆಕ್ಷನ್ ಫೋರ್ಸ್ (RAF) ಯೋಧರ ನೀಲಿ ಸಮವಸ್ತ್ರವನ್ನು (Uniform) ವಸ್ತುವಾಗಿಸಿಕೊಂಡು ರೀಲ್ಸ್ (Reels) ಮಾಡಿ ಲೇವಡಿ ಮಾಡಿದ್ದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ (Instagram Influencer) ಶ್ರದ್ಧಾ ಸಿಂಗ್ ಭಾರಿ ವಿವಾದಕ್ಕೆ ಸಿಲುಕಿದ್ದಾರೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರಿಂದ ತೀವ್ರ ಟ್ರೋಲಿಂಗ್ ಎದುರಿಸುತ್ತಿರುವ ಅವರು, ಸ್ಪಷ್ಟನೆ ನೀಡಿದ ಹೊರತಾಗಿಯೂ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ತಣ್ಣಗಾಗಿಲ್ಲ.

ಸಂಸತ್ ಚಲೋ ಪ್ರತಿಭಟನೆ ವೇಳೆ ದೆಹಲಿಯ ಬೀದಿಗಳಲ್ಲಿ ನೀಲಿ ಸಮವಸ್ತ್ರ ಧರಿಸಿದ್ದ RAF ಯೋಧರು ಎಲ್ಲೆಲ್ಲೂ ಕಂಡುಬರುತ್ತಿದ್ದರು. ಈ ನಡುವೆ, ಶ್ರದ್ಧಾ ಸಿಂಗ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಡಿಯೋ ಒಂದಕ್ಕೆ ನಟಿಸಿ ವೀಡಿಯೋ ಹಂಚಿಕೊಂಡಿದ್ದರು. ಅದರಲ್ಲಿ "ನೀಲಿ ಬಣ್ಣದ್ದು ಟಾಯ್ಲೆಟ್‌ಗೆ..." ಎಂಬ ಸಾಲುಗಳು ಬಂದಾಗ, ಅವರು ಸ್ಥಳದಲ್ಲಿದ್ದ RAF ಯೋಧರತ್ತ ಕೈ ತೋರಿಸಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಭದ್ರತಾ ಪಡೆಗಳ ಯುನಿಫಾರ್ಮ್ ಅನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 3.75 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಶ್ರದ್ಧಾ ಸಿಂಗ್ ವೀಡಿಯೋ ವೈರಲ್ ಆದ ನಂತರ ಭಾರಿ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ವಿವಾದ ತೀವ್ರಗೊಳ್ಳುತ್ತಿದ್ದಂತೆ ಸ್ಪಷ್ಟನೆ ನೀಡಿದ ಅವರು, "ಮೀಮ್ ಪೇಜ್‌ಗಳು ಹಣದಾಸೆಗೆ ನನ್ನ ವೀಡಿಯೋವನ್ನು ಪ್ರಸಾರ ಮಾಡುತ್ತಿವೆ. ನೀವುಗಳು ನನಗೆ ಈ ಮಟ್ಟದ ಅಸಭ್ಯ ಬೈಗುಳಗಳನ್ನು ಕೊಡುವಷ್ಟು ದೊಡ್ಡ ತಪ್ಪನ್ನೇನೂ ನಾನು ಮಾಡಿಲ್ಲ" ಎಂದು ಹೇಳಿಕೊಂಡಿದ್ದಾರೆ. ತಮಗೆ ತಪ್ಪಿನ ಅರಿವಾಗಿ ವೀಡಿಯೋವನ್ನು ಕೇವಲ 1 ಗಂಟೆಯಲ್ಲೇ ಡಿಲೀಟ್ ಮಾಡಿದ್ದರೂ ಸಹ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ವಾಗ್ದಾಳಿ ಮುಂದುವರಿದಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಏನಿದು ಇಡೀ ಪ್ರಕರಣ?

ವೈರಲ್ ವೀಡಿಯೋದಲ್ಲಿ ಹಿನ್ನೆಲೆ ಆಡಿಯೋವೊಂದು ಚಾಲನೆಯಾಗುತ್ತದೆ. ಅದರಲ್ಲಿ "ನೀಲಿ ಬಣ್ಣದ್ದು..." ಮತ್ತು "ಕೆಂಪು ಬಣ್ಣದ್ದು..." ಎಂಬ ಸಾಲುಗಳನ್ನು ಕೇಳಬಹುದಾಗಿದೆ. ವೀಡಿಯೋದಲ್ಲಿ "ನೀಲಿ ಬಣ್ಣದ್ದು..." ಎಂಬ ಶಬ್ದ ಕೇಳಿಸಿದ ತಕ್ಷಣ ಶ್ರದ್ಧಾ ಸಿಂಗ್ ನೀಲಿ ಸಮವಸ್ತ್ರದಲ್ಲಿದ್ದ ಯೋಧರ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ತದನಂತರ "ಕೆಂಪು ಬಣ್ಣದ್ದು..." ಎಂದಾಗ ತಮ್ಮತ್ತಲೇ ಬೆರಳು ತೋರಿಸಿಕೊಳ್ಳುತ್ತಾರೆ.ಇದನ್ನು ಕಂಡ ನೆಟ್ಟಿಗರು ದೇಶದ ಭದ್ರತಾ ಪಡೆಯಾದ RAF ಸಮವಸ್ತ್ರಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ಹೊರಹಾಕಿದರೆ, ಇನ್ನು ಕೆಲವರು ಇದನ್ನು ಕೇವಲ ಒಂದು ತಮಾಷೆಯ ರೀಲ್ಸ್ ಅಥವಾ ಮೀಮ್ ಎಂದು ಪರಿಗಣಿಸಿದ್ದಾರೆ.

ಶ್ರದ್ಧಾ ಸಿಂಗ್ ನೀಡಿದ ಸ್ಪಷ್ಟನೆ ಏನು?

ಟ್ರೋಲಿಂಗ್ ಹೆಚ್ಚಾಗುತ್ತಿದ್ದಂತೆ ವೀಡಿಯೋ ಮೂಲಕ ವಿವರಣೆ ನೀಡಿದ ಶ್ರದ್ಧಾ ಸಿಂಗ್, ಮೀಮ್ ಪೇಜ್‌ಗಳಿಗೆ ಹಣ ಸಿಗುತ್ತಿರುವುದಕ್ಕಾಗಿಯೇ ಈ ವೀಡಿಯೋವನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದಾರೆ. ಜನರು ತಮ್ಮ ವಿರುದ್ಧ ಈ ಪರಿ ಅಸಭ್ಯ ಭಾಷೆ ಬಳಸಿ ನಿಂದಿಸುವಂತಹ ಸಣ್ಣ ತಪ್ಪನ್ನು ತಾವು ಮಾಡಿಲ್ಲ. ವೀಡಿಯೋವನ್ನು ತಪ್ಪಾಗಿ ಅರ್ಥೈಸಿ ಬೇರೆ ರೀತಿಯಲ್ಲೇ ಬಿಂಬಿಸಲಾಗುತ್ತಿದ್ದು, ಅದರಿಂದಲೇ ಈ ವಿವಾದ ಇಷ್ಟೊಂದು ದೊಡ್ಡದಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ನೆಟ್ಟಿಗರ ಅಭಿಪ್ರಾಯ ಇಬ್ಬಾಗವಾಗಿದೆ. ಒಂದು ಕಡೆ RAF ಯೋಧರ ಸಮವಸ್ತ್ರ ಮತ್ತು ಅವರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಅನೇಕರು ವಾದಿಸುತ್ತಿದ್ದರೆ, ಇನ್ನೊಂದೆಡೆ ಇದನ್ನು ಕೇವಲ ಒಂದು ಹಾಸ್ಯಮಯ ರೀಲ್ಸ್ ಅಷ್ಟೇ ಎಂದು ಪರಿಗಣಿಸಬೇಕು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಸದ್ಯ ಶ್ರದ್ಧಾ ಸಿಂಗ್ ಸ್ಪಷ್ಟನೆ ನೀಡಿದ ನಂತರವೂ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.

 

 

PREV
Read more Articles on
click me!

Recommended Stories

ಮಿಲೇನಿಯಲ್ಸ್‌ಗೆ ತಲೆಬಿಸಿ ತಂದ Gen-Z ಭಾಷೆ! ಈ ಟ್ರೆಂಡಿ ಪದಗಳ ಅರ್ಥ ಇಲ್ಲಿದೆ ನೋಡಿ
'ನನ್ನ ನೆನಪು ಬಂದಾಗೆಲ್ಲಾ ನಿನ್ನ ಜೊತೆ ಇರ್ತೀನಿ..' ಕ್ಯಾನ್ಸರ್‌ನಿಂದ ಸಾಯುವ ಕೊನೇ ಕ್ಷಣದಲ್ಲಿ ಮಗನಿಗೆ ಭಾವುಕವಾಗಿ ಹೇಳಿದ ಅಪ್ಪ!