
ಮಹಾನಗರಗಳಲ್ಲಿ ಸಂಚಾರ ದಟ್ಟಣೆ (Traffic Congestion) ದೊಡ್ಡ ಸಮಸ್ಯೆಯಾಗುತ್ತಿದೆ. ಭಾರತದ ಹೆಚ್ಚಿನ ಮೆಟ್ರೋ ನಗರಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಾಗಿರುವಂತೆಯೇ, ಬೆಂಗಳೂರಿನಲ್ಲಿಯೂ ಈ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಕೆಲವೇ ಕಿಲೋಮೀಟರ್ ಪ್ರಯಾಣಿಸಲು ಜನರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಈ ಕುರಿತು ರೆಡ್ಡಿಟ್ ಬಳಕೆದಾರರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ರೆಡ್ಡಿಟ್ ಬಳಕೆದಾರರು ಹೇಳಿರುವ ಪ್ರಕಾರ, ಕೇವಲ 7.3 ಕಿಲೋಮೀಟರ್ ಪ್ರಯಾಣಿಸಲು 73 ನಿಮಿಷ ತೆಗೆದುಕೊಂಡರು. ಈ ಸಮಯದಲ್ಲಿ ಅವರ ಹೊಚ್ಚ ಹೊಸ ಕಾರು ಕೇವಲ 4.4 ಕಿಲೋಮೀಟರ್ ಮೈಲೇಜ್ ನೀಡಿತು ಎಂದು ಹೇಳಿದ್ದಾರೆ. ಇದರಿಂದ ಹತಾಶೆಗೊಂಡ ವ್ಯಕ್ತಿ ನಗರದ ರಸ್ತೆಗಳ ನ್ಯೂನತೆಗಳ ಬಗ್ಗೆ ದೀರ್ಘವಾಗಿ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್ ರೆಡ್ಡಿಟ್‌ನಲ್ಲಿ ವೈರಲ್ ಆದ ತಕ್ಷಣ, ಬಳಕೆದಾರರು ಸಹ ಇದಕ್ಕೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಸದ್ಯ ಈ ಪೋಸ್ಟ್ ರೆಡ್ಡಿಟ್‌ನಿಂದ ಡಿಲೀಟ್ ಆಗಿರುವುದನ್ನು ಸಹ ನೀವು ನೋಡಬಹುದು.
ರೆಡ್ಡಿಟ್‌ನಲ್ಲಿ ಬಳಕೆದಾರರು ತಮ್ಮ ನೋವನ್ನು ವ್ಯಕ್ತಪಡಿಸಿದ್ದು, ಇಂದು ಬೆಳಗ್ಗೆ 7.3 ಕಿ.ಮೀ ಓಡಿಸಲು ನನಗೆ 73 ನಿಮಿಷಗಳು ಬೇಕಾಯ್ತು. ಕಾರು ಲೀಟರ್‌ಗೆ 4.4 ಕಿ.ಮೀ ಮೈಲೇಜ್ ನೀಡಿದೆ. ಇದು ಪ್ರತಿದಿನ ಸಂಭವಿಸುತ್ತದೆ. ಅದೇ ರಸ್ತೆ...ಅದೇ ಮಣ್ಣು...
ನಗರದ ಸಮಸ್ಯೆ ಇಷ್ಟುದ್ದ ಪಟ್ಟಿ ಮಾಡಿದ ವ್ಯಕ್ತಿ
ಬೆಂಗಳೂರಿನ ನಿವಾಸಿಯಾದ ಬಳಕೆದಾರರು ನಾವು ದೇಶದಲ್ಲೇ ಅತಿ ಹೆಚ್ಚು ರಸ್ತೆ ತೆರಿಗೆ ಪಾವತಿಸುತ್ತೇವೆ. ಯಾವುದಕ್ಕಾಗಿ?. ಇಂತಹ ಶೋಚನೀಯ ಮೂಲಸೌಕರ್ಯಕ್ಕಾಗಿ. ರಸ್ತೆಗಳು ಅಗೆದಂತಿರುತ್ತವೆ. ಯಾವುದೇ ಯೋಜನೆ ಇಲ್ಲ. ಅಗತ್ಯವಿರುವ ಕಡೆ ಸಂಚಾರ ಪೊಲೀಸರಿಲ್ಲ. ಬಿಬಿಎಂಪಿ, ಬಿಟಿಪಿ ಅಥವಾ ಜವಾಬ್ದಾರಿಯುತವಾಗಿರಬೇಕಾದವರ ನಡುವೆ ಯಾವುದೇ ಸಮನ್ವಯವಿಲ್ಲ. ಮೂಲಭೂತ ವಿಷಯಗಳು ಕೆಲಸ ಮಾಡುವುದಿಲ್ಲ.
ಹೀಗೆ ನಗರದ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಆ ವ್ಯಕ್ತಿ ಬರೆಯುತ್ತಾರೆ, 'ಪಾದಚಾರಿ ಮಾರ್ಗಗಳು ಹಾಳಾಗಿವೆ. ಲೇನ್ ಗುರುತುಗಳು ಗೋಚರಿಸುವುದಿಲ್ಲ. ಸಿಗ್ನಲ್‌ಗಳು ಸಿಂಕ್ ಆಗಿಲ್ಲ. ಪ್ರತಿಯೊಂದು ಜಂಕ್ಷನ್ ಕೂಡ ಒಂದು ಅಡಚಣೆಯಾಗಿದೆ. ಅವರು ಏನು ಮಾಡುತ್ತಿದ್ದಾರೆಂದು ಯಾರಿಗೂ ತಿಳಿದಿಲ್ಲ. ಇದರ ಬಗ್ಗೆ ಮೌನವಾಗಿರುವುದರಲ್ಲಿ ನಾನು ಬೇಸತ್ತಿದ್ದೇನೆ. ಈ ನಗರವು ತನ್ನ ನಾಗರಿಕರನ್ನು ನಿರಾಶೆಗೊಳಿಸುತ್ತಿದೆ. ಕಚೇರಿಯನ್ನು ತಲುಪಲು ಮತ್ತು ಮನೆಗೆ ಹಿಂತಿರುಗಲು ಪ್ರಯತ್ನಿಸುತ್ತಾ ಜನರು ಪ್ರತಿದಿನ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಇಲ್ಲಿಯೇ ಕಳೆಯುತ್ತಿದ್ದಾರೆ'.
ಇದು ಸರಿಯಲ್ಲ. ನಾವು ಇದರ ಬಗ್ಗೆ ಅಸಡ್ಡೆ ತೋರಬಾರದು. ನಾನು 30 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿಲ್ಲ. ನನ್ನ ಕಚೇರಿಯಿಂದ ಕೇವಲ 10 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿ ವಾಸಿಸುತ್ತೇನೆ. ಇದನ್ನು ಯಾರು ಸರಿಪಡಿಸುತ್ತಾರೆ? ಇವರ ಯೋಜನೆ ಏನು?, ಹೋಗಲಿ ಯೋಜನೆ ಇದೆಯೇ?
ನಾನು ಎಕ್ಸ್‌ಪ್ರೆಸ್‌ವೇ ಬೇಕೆಂದು ಕೇಳುತ್ತಿಲ್ಲ. ಬೆಳಗ್ಗೆ 10 ಗಂಟೆಯ ಮೊದಲು ನನ್ನ ಮನಸ್ಸು ಹಾಳಾಗದೆ ಅಥವಾ ನನ್ನ ಇಂಧನ ಟ್ಯಾಂಕ್ ಅನ್ನು ಅರ್ಧ ತುಂಬಿಸದೆ ಸಾಮಾನ್ಯ ವೇಗದಲ್ಲಿ ಓಡಿಸಲು ಬಯಸುತ್ತೇನೆ. ನೀವು ಬಿಬಿಎಂಪಿ ಅಥವಾ ಸಂಚಾರ ಪೊಲೀಸ್ ಅಥವಾ ನಗರ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ ನೀವೆಲ್ಲರೂ ಇದನ್ನು ಸಹನೀಯ ಎಂದು ಭಾವಿಸುತ್ತೀರಾ? ಅಥವಾ ಇದು ನಿಮ್ಮ ಸಮಸ್ಯೆಯಲ್ಲವೇ?" ಎಂದು ಬಳಕೆದಾರರು ಪ್ರಶ್ನಿಸಿರುವುದನ್ನು ನೀವಿಲ್ಲಿ ಗಮನಿಸಬಹುದು.
73 ನಿಮಿಷಗಳಲ್ಲಿ 7.3 ಕಿಮೀ…
ರೆಡ್ಡಿಟ್ ಪೇಜ್‌ನಲ್ಲಿ @lefttothecentre ಎಂಬ ಬಳಕೆದಾರರು '73 ನಿಮಿಷಗಳಲ್ಲಿ 7.3 ಕಿಮೀ. ಲೀಟರ್‌ಗೆ 4.4 ಕಿಮೀ. ಬೆಂಗಳೂರು, ಏನೀ ಜೀವನ?' ಎಂಬ ಶೀರ್ಷಿಕೆ ನೀಡಿ ರೆಡ್ಡಿಟ್ ಪೋಸ್ಟ್ ಅನ್ನು ಬರೆದಿದ್ದಾರೆ. ಇದುವರೆಗೆ ಪೋಸ್ಟ್ ಸುಮಾರು 250 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದಿದೆ.
ಬಳಕೆದಾರರು ಹೇಳಿದ್ದೇನು?
ಬೆಂಗಳೂರಿನ ಬಗ್ಗೆ ತಿಳಿದ ನಂತರ, ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. "ನಿಜ! ಮೊದಲು ನಾನು ನನ್ನ ಕಚೇರಿಯಿಂದ 7 ಕಿ.ಮೀ ದೂರದಲ್ಲಿದ್ದೆ ಮತ್ತು ಕಚೇರಿಯನ್ನು ತಲುಪಲು ನನಗೆ 1.15 ಗಂಟೆಗಳು ಬೇಕಾಯಿತು. ನಂತರ ನಾನು ಅದನ್ನು 1.5 ಕಿ.ಮೀ.ಗೆ ಇಳಿಸಿದೆ. ಈಗ ನಾನು ಕಚೇರಿಗೆ ಕಾಲ್ನಡಿಗೆಯಲ್ಲಿ ಹೋಗುತ್ತೇನೆ. ಇದು 12-15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮತ್ತು ನಾನು ಬೈಕ್‌ನಲ್ಲಿ ಹೋದಾಗ, ಭಾರೀ ಟ್ರಾಫಿಕ್ ಮತ್ತು ಒನ್ ವೇ ರಸ್ತೆಯಿಂದಾಗಿ ತಲುಪಲು 40 ನಿಮಿಷಗಳು ಬೇಕಾಗುತ್ತದೆ. ಪರಿಸ್ಥಿತಿ ನಿಜಕ್ಕೂ ಶೋಚನೀಯ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸರ್ಕಾರಕ್ಕೆ ಏನೂ ಅರ್ಥವಾಗುತ್ತಿಲ್ಲ. ಮೂಲಸೌಕರ್ಯ ದುರಸ್ತಿ ಕೆಲಸವನ್ನು ಖಾಸಗಿ ಕಂಪನಿಗಳಿಗೆ ವಹಿಸಬೇಕು ಎಂದಿದ್ದಾರೆ.