ಥೈಲ್ಯಾಂಡ್‌ನ ಅತ್ಯಂತ ಪ್ರಭಾವಶಾಲಿ ಉದ್ಯಮಿ ಕುಟುಂಬಗಳಲ್ಲಿ ಒಂದಾದ 'ಸಿಂಘಾ ಬೀರ್' (Singha beer) ಸಾಮ್ರಾಜ್ಯದ ಸದಸ್ಯರೊಬ್ಬರು, ತಮ್ಮ ಸ್ವಂತ ಅಣ್ಣನ ವಿರುದ್ಧವೇ ಹತ್ತು ವರ್ಷಗಳಿಗೂ ಹೆಚ್ಚು ಕಾಲ ತಮಗೆ ಲೈಂಗಿಕ ದೌರ್ಜನ್ಯ ನೀಡಿದ ಗಂಭೀರ ಆರೋಪ ಮಾಡಿದ್ದಾರೆ. ಬಿರೋಮ್‌ಭಕ್ತಿ ಕುಟುಂಬದ ನಾಲ್ಕನೇ ತಲೆಮಾರಿನ ಸದಸ್ಯ ಹಾಗೂ ಪರಿಸರ ಕಾರ್ಯಕರ್ತರಾಗಿರುವ ಸಿರಾನುದ್ "ಪ್ಸಿ" ಸ್ಕಾಟ್, ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಕಣ್ಣೀರು ಹಾಕುತ್ತಾ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ, "ಯಾರೂ ನನ್ನನ್ನು ಸಿಂಘಾ ಬೀರ್ ಸಂಸ್ಥೆಯ ವಾರಸುದಾರ ಎಂದು ಕರೆಯಬೇಡಿ" ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.
ಬ್ಯಾಂಕಾಕ್ ಪೋಸ್ಟ್ ವರದಿಯ ಪ್ರಕಾರ, "ನನ್ನನ್ನು ಯಾರೂ ಸಿಂಘಾ ವಾರಸುದಾರ ಎಂದು ಕರೆಯುವುದು ನನಗೆ ಇಷ್ಟವಿಲ್ಲ. ಜನರಿಗೆ ಇದರ ಹಿಂದಿನ ಅಸಲಿ ಸತ್ಯ ಗೊತ್ತಿಲ್ಲ" ಎಂದು ಅವರು ಥಾಯ್ ಭಾಷೆಯಲ್ಲಿ ಹೇಳಿದ್ದಾರೆ.
ಅಳುತ್ತಲೇ ತಮ್ಮ ನೋವನ್ನು ತೋಡಿಕೊಂಡ ಸಿರಾನುದ್ (29), ತಮ್ಮ ಅಣ್ಣ ಸುನಿತ್ "ಪಿ" ಸ್ಕಾಟ್ ತಮಗೆ 12 ರಿಂದ 24 ವರ್ಷ ವಯಸ್ಸಿನವರೆಗೆ ಮನೆಯಲ್ಲೇ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ತಮಗೆ ಬೇರೆಯವರ ಜೊತೆ ಸಾಮಾನ್ಯ ಜೀವನ ಹಾಗೂ ಸಂಬಂಧಗಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಬಲವಾದ ಸಾಕ್ಷ್ಯಗಳು ತನ್ನ ಬಳಿ ಇವೆ ಎಂದು ಸಿರಾನುದ್ ಹೇಳಿದ್ದಾರೆ. ಅವರ ಪ್ರಕಾರ, ಈ ವಿಷಯ ಇಡೀ ಕುಟುಂಬಕ್ಕೆ ತಿಳಿದಿದ್ದರೂ ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ. "ಅವನು (ಅಣ್ಣ) ತಪ್ಪು ಒಪ್ಪಿಕೊಂಡಿರುವ ಆಡಿಯೋ ಟೇಪ್ ಅನ್ನು ನನ್ನ ಕುಟುಂಬದವರೆಲ್ಲರೂ ಕೇಳಿದ್ದಾರೆ, ಹೀಗಾಗಿ ಇಡೀ ಕುಟುಂಬಕ್ಕೆ ಈ ವಿಷಯ ಗೊತ್ತಿದೆ" ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ತಾವು ಕುಟುಂಬದ ಹಿರಿಯರ ಮತ್ತು ಸಂಬಂಧಿಕರ ಸಹಾಯ ಕೋರಿದರೂ ಯಾರೂ ತಮಗೆ ಬೆಂಬಲ ನೀಡಲಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆ, ಸಿಂಘಾ ಕಾರ್ಪೊರೇಷನ್‌ನ ಮಾಜಿ ಅಧ್ಯಕ್ಷರಾಗಿದ್ದ ತಮ್ಮ ದಿವಂಗತ ತಾತ ಚಾಮ್ನಾಂಗ್ ಬಿರೋಮ್‌ಭಕ್ತಿ ಅವರು ತಮಗೆ ನೀಡಿದ್ದ ಆಸ್ತಿಯನ್ನು ವಾಪಸ್ ಪಡೆಯಲು ಸ್ವಂತ ತಾಯಿಯೇ ಕೋರ್ಟ್ ಮೆಟ್ಟಿಲೇರಿರುವುದು ಅವರ ನೋವನ್ನು ಇಮ್ಮಡಿಗೊಳಿಸಿದೆ. ಅಣ್ಣನ ದೌರ್ಜನ್ಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಕ್ಕಾಗಿ ತಾಯಿ ತಮ್ಮನ್ನು 'ಗುಣಹೀನ/ಕೃತಘ್ನ ಮಗ' ಎಂದು ಕರೆಯುತ್ತಿದ್ದಾರೆ ಎಂದು ಸಿರಾನುದ್ ಹೇಳಿದ್ದಾರೆ.
"ಈ ವರ್ಷ ನನ್ನ ತಾಯಿ, ತಾತ ನನಗೆ ಕೊಟ್ಟಿದ್ದ ಆಸ್ತಿಯನ್ನು ಕಸಿದುಕೊಳ್ಳಲು ನನ್ನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ನನ್ನನ್ನು ಸಾಕಿ ಬೆಳೆಸಿದವರು ಮಾಡಿದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅವರು ನನ್ನನ್ನು ಕೃತಘ್ನ ಮಗ ಎನ್ನುತ್ತಿದ್ದಾರೆ. ನಾನು ಕುಟುಂಬದ ಹಿರಿಯರ ಬಳಿ ಸಹಾಯ ಕೇಳಿದಾಗ, ಅವರು ನನ್ನನ್ನೇ ತಾಯಿಯ ಬಳಿ ಕ್ಷಮೆಯಾಚಿಸಲು ಹೇಳಿದರು" ಎಂದು ಸಿರಾನುದ್ ಬೇಸರ ವ್ಯಕ್ತಪಡಿಸಿದ್ದಾರೆ.
ಅವರ ಈ ಕಣ್ಣೀರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಸಿರಾನುದ್ ಅವರ ಅಣ್ಣ ಸುನಿತ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಮತ್ತು ಇವೆಲ್ಲವೂ ಸುಳ್ಳು ಎಂದಿದ್ದಾರೆ. ತಮ್ಮ ನಟಿ-ಪತ್ನಿ ಲಪಸ್ಸಲನ್ "ಮೈಲ್ಡ್" ಜಿರಾವೆಚಸೂಂಟೊರ್ನಕುಲ್ ಅವರ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಸುನಿತ್, ಸಿರಾನುದ್ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವಾದಿಸಿದ್ದಾರೆ.
"ಈ ಆರೋಪಗಳು ಸತ್ಯಕ್ಕೆ ದೂರವಾದವು ಮತ್ತು ನನಗೆ ತುಂಬಾ ಬೇಸರ ತಂದಿವೆ. ನಾನು ಯಾರೊಂದಿಗೂ ಇಂತಹ ಕ್ರೂರವಾಗಿ ನಡೆದುಕೊಳ್ಳುವ ಆಲೋಚನೆ ಮಾಡಿದವನಲ್ಲ, ಅದರಲ್ಲೂ ನನ್ನ ಸ್ವಂತ ತಮ್ಮನಿಗೆ ಹೀಗೆ ಮಾಡಲು ಹೇಗೆ ಸಾಧ್ಯ?" ಎಂದು ಸುನಿತ್ ಪ್ರಶ್ನಿಸಿದ್ದಾರೆ.
ಥಾಯ್ ಮಾಧ್ಯಮಗಳ ಪ್ರಕಾರ, ಬಾಲ್ಯದಲ್ಲಿ ತಮಗೂ ಮತ್ತು ತಮ್ಮನಿಗೂ ಆಗಾಗ ಜಗಳವಾಗುತ್ತಿತ್ತು ಎಂಬುದನ್ನು ಸುನಿತ್ ಒಪ್ಪಿಕೊಂಡಿದ್ದಾರೆ. ತಾವು ತಮ್ಮನನ್ನು ಕಾಡಿಸುತ್ತಿದ್ದದ್ದು ಮತ್ತು ಅದು ಕೆಲವೊಮ್ಮೆ ಗಂಭೀರ ಜಗಳಕ್ಕೆ ಕಾರಣವಾಗುತ್ತಿದ್ದುದು ನಿಜ, ಆದರೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಸಮಯದಲ್ಲಿ ತಾವು ತುಂಬಾ ಚಿಕ್ಕವರಾಗಿದ್ದರಿಂದ ತಮ್ಮ ನಡವಳಿಕೆ ತಪ್ಪು ಎಂಬುದು ಅರಿವಿರಲಿಲ್ಲ ಎಂದಿರುವ ಅವರು, ಈ ಹಿಂದೆ ಈ ಸಮಸ್ಯೆಯನ್ನು ಬಗೆಹರಿಸಲು ಹಲವು ಬಾರಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಮಾತುಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳಲಾಗಿರುವ ಆಡಿಯೋ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಸ್ತಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸುನಿತ್, ಆ ಆಸ್ತಿ ಇಬ್ಬರೂ ಸಹೋದರರಿಗೆ ಜಂಟಿಯಾಗಿ ಸೇರಿದ್ದಾಗಿದೆ. ಆದರೆ ಸಿರಾನುದ್ ಅವರ ಮೇಲ್ವಿಚಾರಣೆಯಲ್ಲಿ ಆಸ್ತಿಯ ಕೆಲವು ಭಾಗಗಳು ಹಾನಿಗೊಳಗಾದ ಕಾರಣ ತಾಯಿ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಅವರ ಪತ್ನಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.