ಯಾವುದೇ ಕ್ಷೇತ್ರದಲ್ಲಿಯಾಗಲಿ ನಿವೃತ್ತಿ ಹೊಂದಿದ ನಂತರ ಆ ವ್ಯಕ್ತಿಯನ್ನು ಸನ್ಮಾನಿಸಿ, ಗೌರವವಾಗಿ ಬೀಳ್ಕೊಡುವುದು ಸಾಮಾನ್ಯ. ಆದರೆ ಕೆಲವು ಬೀಳ್ಕೊಡುಗೆ ಸಮಾರಂಭಗಳು ಬಹಳ ವಿಶೇಷವಾಗಿರುತ್ತವೆ. ಮನಮುಟ್ಟುತ್ತವೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಪ್ರೀತಿಯ ಶಿಕ್ಷಕರು ನಿವೃತ್ತಿಯಾದಾಗ ವಿದ್ಯಾರ್ಥಿಗಳು ಗೊಳೋ ಎಂದು ಕಣ್ಣೀರು ಹಾಕಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಹಾಗೆಯೇ ಕಚೇರಿಯಲ್ಲಿ ನೆಚ್ಚಿನ ಸಹದ್ಯೋಗಿಗಳು ನಿವೃತ್ತಿಯಾದಾಗಲೂ ಅವರ ಮನಸ್ಸಿಗೆ ಖುಷಿಯಾಗುವ ಹಾಗೆ ಸಂಭ್ರಮದಿಂದಲೂ ಕಳುಹಿಸಿಕೊಟ್ಟಿರುವುದು ಉಂಟೂ. ಇದೀಗ ಇಂತಹುದೇ ಘಟನೆ ಬಾದಾಮಿಯಲ್ಲಿ ನಡೆದಿದೆ.
ಇವರ ಹೆಸರು ಪರಸಪ್ಪ ಚೌಡಕರ್ (Parasappa Choudaker). ಬಾಗಲಕೋಟೆ ಜಿಲ್ಲೆ ಬಾದಾಮಿ ವಲಯದ ಅರಣ್ಯ ಇಲಾಖೆಯ ನರ್ಸರಿಯಲ್ಲಿ, ಭರ್ತಿ 41 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಇದೀಗ ಅರಣ್ಯ ವೀಕ್ಷಕ ಪರಸಪ್ಪ ಚೌಡಕರ್ ರವರಿಗೆ, ಬಾದಾಮಿ ವಲಯದ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇದುವರೆಗೆ 19 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, 1.3 ಸಾವಿರಕ್ಕಿಂತ ಹೆಚ್ಚಿನ ಜನರು ವಿಡಿಯೋಗೆ ಲೈಕ್ಸ್ ಕೊಟ್ಟಿದ್ದಾರೆ. ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ದೀಪಿಕಾ ಬಾಜಪೈ ಅವರು ತಮ್ಮ ಎಕ್ಸ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
"ಅರಣ್ಯ ಇಲಾಖೆಯಲ್ಲಿ, ವಿಶೇಷವಾಗಿ ಕೌಶಲ್ಯ ಬೇಡುವ ನರ್ಸರಿಗಳಲ್ಲಿ ಅನುಭವಿ ನೌಕರರು ದೊಡ್ಡ ಆಸ್ತಿಯಾಗಿರುತ್ತಾರೆ. ಕೆಲವು ಸಿಬ್ಬಂದಿಗಳು ಅನುಭವದ ಜೊತೆಗೆ ಆಸಕ್ತಿ, ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ರವರು ಕೂಡ ಅರಣ್ಯ ವೀಕ್ಷಕಿಯಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಗಿಡ ಮರಗಳ ಕುರಿತು, ಅವುಗಳ ಬೆಳಸುವ ವಿಧಾನ ಕುರಿತು ಆಳವಾದ ಜ಼್ಞಾನ ಪಡೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದು" ಎಂದು ಪರಿಸರ ಪರಿವಾರ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಳ್ಳಲಾಗಿದೆ.
ಅರಣ್ಯ ಇಲಾಖೆಯ ಸಸ್ಯ ನರ್ಸರಿಯಲ್ಲಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದ ತುಳಸಿಗೌಡ, ಬಾಲ್ಯದಲ್ಲಿಯೇ ಆಗಾಗ್ಗೆ ನರ್ಸರಿಗಳಿಗೆ ಭೇಟಿ ನೀಡಿ, ಸಸಿಗಳ ಬೆಳವಣಿಗೆ ಕುರಿತು ಆಳವಾದ ಜ್ಞಾನ ಬೆಳೆಸಿಕೊಂಡಿದ್ದರು. ಅಂಕೋಲಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಮರಗಳನ್ನು ನೆಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಅವುಗಳಲ್ಲಿ ಬಹುತೇಕ ಸಸಿಗಳು ಕೆಲವೇ ವರ್ಷಗಳಲ್ಲಿ ಎತ್ತರಕ್ಕೆ ಬೆಳೆದಿದ್ದವು. ಅವರು ಪದ್ಮಶ್ರೀ ಮತ್ತು ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಹೂವಿನ ಮಳೆ
41 ವರ್ಷಗಳ ಸೇವೆಯ ನಂತರ ನಿವೃತ್ತರಾದ ಪರಸಪ್ಪ ಚೌಡಕರ್ ಅವರನ್ನು ಸನ್ಮಾನಿಸಲು ಕರ್ನಾಟಕದ ಬಾದಾಮಿ ಅರಣ್ಯ ಪ್ರದೇಶದ ಸಿಬ್ಬಂದಿ ಒಟ್ಟಾಗಿ ಸೇರಿ ಹೃತ್ಪೂರ್ವಕ ಬೀಳ್ಕೊಡುಗೆ ಸಮಾರಂಭ ನಡೆಸಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಚೌಡಕರ್ ಅವರ ನಿವೃತ್ತಿಯನ್ನು ಆಚರಿಸುತ್ತಾ ಅವರಿಗೆ ಹೂವಿನ ಮಳೆ ಸುರಿಸಿದ್ದಾರೆ. ಬಾದಾಮಿ ಅರಣ್ಯ ಸಿಬ್ಬಂದಿ ಇಷ್ಟು ಸುಂದರ ಮತ್ತು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟಿರುವುದು ಸದ್ಯ ನೆಟ್ಟಿಗರ ಮನಗೆದ್ದಿದೆ. "ನಿಮ್ಮ ನಿವೃತ್ತಿ ಜೀವನ ಚೆನ್ನಾಗಿರಲಿ" ಎಂದು ಆಶಿಸುತ್ತಾ ಪ್ರತಿಯೊಬ್ಬರು ಪರಸಪ್ಪ ಚೌಡಕರ್ ಅವರಿಗೆ ಹಾರೈಸಿದ್ದು, ಕಮೆಂಟ್ ಬಾಕ್ಸ್ ಹೃದಯದ ಇಮೋಜಿಗಳಿಂದ ತುಂಬಿಹೋಗಿದೆ.
ಕರ್ನಾಟಕದಲ್ಲಿ ಅರಣ್ಯ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿಯು ನರ್ಸರಿಯನ್ನು ಹೊಂದಿದ್ದು ಇಲ್ಲಿ ಅನೇಕ ಬಗ್ಗೆಯ ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳ ಸಸಿಗಳನ್ನು ತಯಾರಿಸಿ ಪ್ರತಿ ವರ್ಷ ಮಳೆಗಾಲದಲ್ಲಿ ರೈತರಿಗೆ ಅತಿ ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ.