
ಕೆಲವರಿಗೆ ಕುಡಿದ ಮೇಲೆ ಮೈಮೇಲೆ ಪ್ರಜ್ಞೆ ಇರುವುದಿಲ್ಲ, ತಾವು ಏನು ಮಾಡಿದ್ದೇವೆ ಎಂಬುದರ ಅರಿವು ಅವರಿಗೆ ಇರುವುದಿಲ್ಲ, ಕುಡಿದಿದ್ದು, ಬೀರಿದ ನಂತರ ಅವರಾಡಿದ ಆಟವನ್ನು ಹೇಳಿದ್ರೆ ಹೌದಾ ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಂಡು ನಾವು ಹೀಗೆ ಮಾಡಿದ್ವಾ ಅಂತ ಅಚ್ಚರಿಯಿಂದ ಮುಖ ಮುಖ ನೋಡುತ್ತಾರೆ. ಇಂತಹ ವ್ಯಕ್ತಿಗಳ ಬಗ್ಗೆ ನಿಮಗೂ ಅನುಭವ ಆಗಿರಬಹುದು. ಅದೇ ರೀತಿ ಇಲ್ಲೊಂದು ಕಡೆ ಕುಡುಕನೋರ್ವನ ಕತೆ ಕೇಳಿದ್ರೆ ನಿಮಗೆ ನಗಬೇಕೋ ಅಳಬೇಕೋ ತಿಳಿಯದು.
ಟರ್ಕಿಯ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಕಾಡೊಂದಕ್ಕೆ ತೆರಳಿ ಅಲ್ಲಿ ನಿಸರ್ಗದ ನಡುವೆ ಕುಳಿತು ಪಾರ್ಟಿ ಮಾಡಿದ್ದಾನೆ. ಎಲ್ಲರೂ ಸೇರಿ ಕಂಠಪೂರ್ತಿ ಕುಡಿದಿದ್ದಾರೆ. ಇದಾದ ಬಳಿಕ ಆತ ಸ್ನೇಹಿತರ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾನೆ. ಇದರಿಂದ ಗಾಬರಿಯಾದ ಸ್ನೇಹಿತರು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದು, ಕಾಡಿನಲ್ಲಿ ಹುಡುಕಲು ಆರಂಭಿಸಿದ್ದಾರೆ. ಇತ್ತ ಈತ ಸ್ನೇಹಿತರ ಕಣ್ಣಿಂದ ಮಿಸ್ ಆಗಿದ್ನೇ ಹೊರತು ನಾಪತ್ತೆ ಆಗಿರಲಿಲ್ಲ, ಆತನಿಗೆ ತಾನು ಕಾಣೆಯಾಗಿರುವುದು ತನಗಾಗಿ ರಕ್ಷಣಾ ತಂಡವೊಂದು ಹುಡುಕಾಡುತ್ತಿರುವುದು ಯಾವುದು ಕೂಡ ಗೊತ್ತಿಲ್ಲ.
ಗುಂಪಿನಲ್ಲಿ ಗೋವಿಂದ ಎಂಬಂತೆ ತಾನು ಕೂಡ ರಕ್ಷಣಾತಂಡದ ಜೊತೆ ಸೇರಿ ಹುಡುಕಾಟ ಆರಂಭಿಸಿದ್ದಾನೆ. ಇತ್ತ ರಕ್ಷಣಾ ತಂಡ ತನಗಾಗಿಯೇ ಹುಡುಕಾಡುತ್ತಿದೆ ಎಂಬುದು ಕೂಡ ಆತನಿಗೆ ಗೊತ್ತಿಲ್ಲ, ಈ ಮಧ್ಯೆ ತಂಡದಲ್ಲಿ ಇದ್ದವರು ಹಾಗೂ ಆತನ ಸ್ನೇಹಿತರು ಆತನ ಹೆಸರನ್ನು ಕೂಗಿ ಕರೆಯಲು ಶುರು ಮಾಡಿದಾಗ ಆತ ಹೂಂಗುಟ್ಟಿದ್ದು, ಇದರಿಂದ ಆತನಿಗೆ ರಕ್ಷಣಾ ತಂಡ ಹುಡುಕುತ್ತಿದ್ದಿದ್ದು ತನ್ನನ್ನೇ ಎಂಬುದರ ಅರಿವಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಟರ್ಕಿಯಲ್ಲಿ. ಈ ನಿಜ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವಾಯುವ್ಯ ಟರ್ಕಿಯ ಇನೆಗೋಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 51 ವರ್ಷದ ಬೇಹಾನ್ ಮುಟ್ಲು, ತನ್ನ ಸ್ನೇಹಿತನೊಂದಿಗೆ ಕಾಡಿನಲ್ಲಿ ಕುಡಿಯಲು ಹೋದವನು ಮರಳಿ ಮನೆಗೆ ಬಂದಿರಲಿಲ್ಲ, ಹೀಗಾಗಿ ಆತನ ಹೆಂಡತಿ ಆತ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಳು. ಕುಡಿದ ಮತ್ತಿನಲ್ಲಿ ಆತ ಆತನ ಸ್ನೇಹಿತರಿಂದ ದೂರ ಆಗಿದ್ದಾನೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು.
ಇತ್ತ ಬೆಹಾನ್ ಮುಟ್ಲು, ಕುಡಿದು ಕಾಡೊಂದರ ಮನೆಯಲ್ಲಿ ಮಲಗಿದ್ದ. ಇದರ ಅರಿವಿರದ ರಕ್ಷಣಾ ತಂಡ ಆತನ ಹುಡುಕಾಟಕ್ಕೆ ಆಗಮಿಸಿದೆ. ಈ ನಡುವೆ ಬೆಳಗಾಗಿದ್ದು, ಈ ಶೋಧ ಕಾರ್ಯ ನಡೆಸುವವರ ತಂಡವನ್ನು ಬೇಹಾನ್ ಮುಟ್ಲು ಭೇಟಿ ಮಾಡಿದ್ದಾನೆ. ಆದರೆ ತಾವು ಹುಡುಕುತ್ತಿರುವ ವ್ಯಕ್ತಿಯೇ ಆತ ಎಂಬುದು ಅತ್ತ ಅವರಿಗೂ ಗೊತ್ತಿಲ್ಲ, ಇತ್ತ ತನಗಾಗಿ ಅವರು ಹುಡುಕುತ್ತಿದ್ದಾರೆ ಎಂಬ ವಿಚಾರ ಇವನಿಗೂ ಗೊತ್ತಿಲ್ಲ, ಹೀಗಾಗಿ ಆತನೂ ಅವರೊಂದಿಗೆ ಸೇರಿ ಹುಡುಕಾಟಕ್ಕೆ ನೆರವಾಗಲು ಮುಂದಾಗಿದ್ದಾನೆ. ಆದರೆ ನಂತರದಲ್ಲಿ ರಕ್ಷಣಾ ತಂಡ ಅವನ ಹೆಸರನ್ನೇ ಕೂಗಿ ಕೂಗಿ ಕರೆಯಲು ಆರಂಭಿಸಿದಾಗ ಆತನಿಗೆ ಇವರು ತನಗಾಗಿಯೇ ಹುಡುಕುತ್ತಿದ್ದಾರೆ ಎಂಬುದರ ಅರಿವಾಗಿದೆ.
ಈ ಬಗ್ಗೆ ಟರ್ಕಿಶ್ ನ್ಯೂಸ್ ಹೇಳಿಕೆ ನೀಡಿದ್ದ ಬೇಹಾನ್ ಮುಟ್ಲು ಅವರು ಹುಡುಕುತ್ತಿದ್ದ ವ್ಯಕ್ತಿ ಬೇಹಾನ್ ಮುಟ್ಲು ಎಂದು ಅವರು ಹೇಳಿದರು, ಆದರೆ ಅವರು ಹುಡುಕಾಟ ಮುಂದುವರೆಸಿದರು. ಅವರು ನನ್ನನ್ನು ನಂಬಲಿಲ್ಲ ಹಾಗೂ ನನ್ನ ಸ್ನೇಹಿತ ನನ್ನನ್ನು ನೋಡಿದ ನಂತರ ಸತ್ಯ ತಿಳಿಯಿತು ಎಂದು ಹೇಳಿಕೊಂಡಿದ್ದಾನೆ. ಅಂದಹಾಗೆ 2021ರಲ್ಲಿ ಟರ್ಕಿಯಲ್ಲಿ ನಡೆದ ಘಟನೆ ಇದಾಗಿದ್ದು, ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗ್ತಿದೆ.