
ಅಚ್ಚರಿ ಹಾಗೂ ಆತಂಕಕ್ಕಾರಿ ಬೆಳವಣಿಗೆಯೊಂದರಲ್ಲಿ ಮಕ್ಕಳು ಹೆಬ್ಬಾವೊಂದನ್ನು ಹಿಡಿದು ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶೆಹರ್‌ನಲ್ಲಿ ನಡೆದಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲ ಅಂಗ್ಲ ಮಾಧ್ಯಮಗಳ ವರದಿಯ ಪ್ರಕಾರ, ಬೃಹತ್ ಗಾತ್ರದ ಹೆಬ್ಬಾವನ್ನು ಮಕ್ಕಳು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಮೆರವಣಿಗೆ ಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋದಲ್ಲಿ ಕಾಣುವಂತೆ ಒಬ್ಬ ಹುಡುಗ ಅದರ ತಲೆ ಬಳಿ ಹಿಡಿದುಕೊಂಡಿದ್ದರೆ, ಮತ್ತೆ ಕೆಲವರು ಹಾವಿನ ಮಧ್ಯಭಾಗದಲ್ಲಿ ಹಿಡಿದುಕೊಂಡಿದ್ದಾರೆ ಹಾಗೆಯೇ ಇನ್ನು ಕೆಲ ಮಕ್ಕಳು ಅದರ ಬಾಲದ ಕಡೆ ಹಿಡಿದು ರಸ್ತೆಯಲ್ಲಿ ಸಾಗಿದ್ದಾರೆ.
ಮಕ್ಕಳ ಕಿತಾಪತಿ ನೋಡಿ ನೆಟ್ಟಿಗರು ಶಾಕ್
ಮಕ್ಕಳ ಈ ಕಿತಾಪತಿ ದಾರಿಯಲ್ಲಿ ಸಾಗುತ್ತಿದ್ದ ಅನೇಕರನ್ನು ಸೆಳೆದಿದ್ದು, ಅನೇಕರು ಈ ಹಾವಿನೊಂದಿಗೆ ಫೋಟೋ ವೀಡಿಯೋ ತೆಗೆಸಿಕೊಂಡಿದ್ದಾರೆ. ಬರೀ ಇಷ್ಟೇ ಅಲ್ಲ, ಮಕ್ಕಳ ಹಿಂದೆ ತಾವು ಸಾಗಲು ಶುರು ಮಾಡಿದ್ದಾರೆ. ಈ ಬರೀ ಗಾತ್ರದ ಹೆಬ್ಬಾವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ ಬಳಿಕ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಬದಲು ಹತ್ತಿರದ ಕಾಡಿಗೆ ಬಿಟ್ಟಿದ್ದಾರೆ. ಇದು ಇನ್ನೂ ಆತಂಕಕ್ಕೆ ಕಾರಣವಾಗಿದೆ.
ಹಾವನ್ನು ಬೀದಿಯಲ್ಲಿ ಮೆರವಣಿಗೆ ಮಾಡಿದ ಮಕ್ಕಳು
ವೈರಲ್ ಆದ ವೀಡಿಯೋದಲ್ಲಿ ಮಕ್ಕಳು ಹಾವನ್ನು ಅದರ ತಲೆ ಬಾಲ ಹಾಗೂ ಮಧ್ಯಭಾಗದಲ್ಲಿ ಹಿಡಿದುಕೊಂಡು ಬೀದಿಗಳಲ್ಲಿ ಸುಮಾರು 3 ಕಿಲೋ ಮೀಟರ್ ದೂರದವರೆಗೆ ಸಾಗಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಆದರೆ ಈ ವಿಚಾರದ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ, ಹಾಗೂ ಯಾರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
The Whatup ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಈಗ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ 15 ಅಡಿ ಉದ್ದದ ದೈತ್ಯ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಈ ಹಾವನ್ನು ಮಕ್ಕಳು ಹಾಗೂ ಗ್ರಾಮಸ್ಥರು ಬರಿ ಕೈಗಳಲ್ಲಿ ಸೆರೆಹಿಡಿದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇಷ್ಟು ದೊಡ್ಡ ಗಾತ್ರದ ಹೆಬ್ಬಾವನ್ನು ಮಕ್ಕಳು ಸ್ವಲ್ಪವೂ ಭಯಗೊಳ್ಳದೇ ಹೀಗೆ ಹಿಡಿದುಕೊಂಡು ಹೋಗಲು ಹೇಗೆ ಸಾಧ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಮಕ್ಕಳು ಈ ಹಾವನ್ನು ತಮ್ಮ ಕಳೆದುಹೋದ ಸಹೋದರನನ್ನು ಹೊತ್ತುಕೊಂಡು ಹೋದಂತೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಈಗಿನ ಮಕ್ಕಳು ಹಾವನ್ನೇ ಮೆರವಣಿಗೆ ಮಾಡುತ್ತಿದ್ದಾರೆ. ಆದರೆ ನಾನು ಈ ವಯಸ್ಸಲ್ಲಿ ಮಾತನಾಡುವುದಕ್ಕೂ ಕಷ್ಟಪಡ್ತಿದ್ದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಭಾರತ ಹೊಸಬ್ಬರಿಗೆ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಇದು ವನ್ಯಜೀವಿ ಆದ ಕಾರಣಕ್ಕೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ವನ್ಯಲೋಕದ ಅಳಿವಿನಂಚಿನಲ್ಲಿರುವ ಪ್ರಬೇಧವನ್ನು ಇವರು ಈ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಯಾರು ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ವನ್ಯಜೀವಿಗಳಿಗೆ ಮೀಸಲಾಗಿರುವ ವೆಬ್‌ಸೈಟ್ ವೈಲ್ಡ್‌ಲೈಫ್ SOS ಪ್ರಕಾರ, ಭಾರತೀಯ ರಾಕ್ ಪೈಥಾನ್ ಅಥವಾ ಹೆಬ್ಬಾವು ದೇಶದಲ್ಲಿ ಕಂಡುಬರುವ ಅತಿ ಉದ್ದ ಮತ್ತು ದೊಡ್ಡ ಹಾವುಗಳಲ್ಲಿ ಒಂದಾಗಿದೆ. ಈ ಹಾವು 20 ಅಡಿ ಉದ್ದದವರೆಗೆ ಬೆಳೆಯಬಹುದು ಮತ್ತು 90 ಕೆಜಿ ವರೆಗೆ ತೂಗಬಹುದು ಮತ್ತು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ರಕ್ಷಿಸಬೇಕಾದ ಜೀವಿಯಾಗಿದೆ.
ಕಾಯಿದೆಯ ಸೆಕ್ಷನ್ 9 ರ ಪ್ರಕಾರ, ಅಂತಹ ಸಂರಕ್ಷಿತ ವನ್ಯಜೀವಿಗಳನ್ನು ಬೇಟೆಯಾಡುವುದು, ಸೆರೆಹಿಡಿಯುವುದು ಅಥವಾ ತೊಂದರೆಗೊಳಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇಂತಹ ಕೃತ್ಯಗಳಿಗೆ ಮೂರರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 25,000 ರೂ. ದಂಡ ವಿಧಿಸಲಾಗುತ್ತದೆ.