
ಆನೆಗಳು ಬಹಳ ಸೂಕ್ಷ್ಮ ಹಾಗೂ ಭಾವುಕ ಜೀವಿಗಳು ಹಾಗೂ ಬುದ್ಧಿವಂತ ಪ್ರಾಣಿಯೂ ಹೌದು. ಅದರಲ್ಲೂ ಸಾಕಾನೆಗಳು ತಮ್ಮನ್ನು ಸಾಕಿದವರನ್ನು ಎಂದಿಗೂ ಮರೆಯುವುದಿಲ್ಲ, ಅವರನ್ನು ಬಿಟ್ಟು ದೂರ ಹೋಗುವುದಕ್ಕೆ ಅವು ಎಂದಿಗೂ ಒಪ್ಪುವುದಿಲ್ಲ. ಆದರೂ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಗಾಗಿ ಆನೆಗಳನ್ನು ಅವರು ಪ್ರೀತಿ ತೋರುವ ಮಾವುತರಿಂದ ದೂರ ಕಳಿಸುವಂತಹ ಸಂದರ್ಭ ಬರುತ್ತದೆ. ಸರ್ಕಾರ ಕೆಲವೊಮ್ಮೆ ಪ್ರಾಣಿಗಳ ವಿನಿಮಯ ಯೋಜನೆಯಡಿ ಆನೆಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸಿ ಬಿಡುತ್ತದೆ. ಹಾಗೆಯೇ ಕೆಲವೊಮ್ಮೆ ಕೆಲ ಕಾರ್ಯಾಚರಣೆಗಳಿಗಾಗಿಯೂ ಆನೆಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಳುಹಿಸಲಾಗುತ್ತದೆ.
ಅದೇ ರೀತಿ ಆನೆ ಅಭಿಮನ್ಯು ಸೇರಿದಂತೆ ರಾಜ್ಯದ ವಿವಿಧ ಆನೆ ಶಿಬಿರಗಳಲ್ಲಿ ಇದ್ದ ನಾಲ್ಕು ಸಾಕಾನೆಗಳನ್ನು ಕಳೆದ ಮೇ ತಿಂಗಳಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಗಾಗಿ ಅಂಧ್ರಪ್ರದೇಶ ಸರ್ಕಾರದ ಮನವಿಯ ಮೇರೆಗೆ ಅಲ್ಲಿಗೆ ಕಳುಹಿಸಲಾಗಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಉಪಮುಖ್ಯಂತ್ರಿಯೂ ಆದ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಈ ಆನೆಗಳನ್ನು ಹಸ್ತಾಂತರ ಮಾಡಿದ್ದರು. ಆನೆಗಳಿಗೆ ಪುಷ್ಪಾರ್ಚನೆ ಪೂಜೆ ಕಿರುಮೆರವಣಿಗೆ ನಡೆಸಿ ಈ ಆನೆಗಳನ್ನು ಹಸ್ತಾಂತರಿಸಲಾಗಿತ್ತು.
ಈ ತಂಡದಲ್ಲಿ ಆನೆ ಜ್ಯೂನಿಯರ್ ಅಭಿಮನ್ಯು ಕೂಡ ಇದ್ದ. (ಆದರೆ ಈತ ಮೈಸೂರ ದಸರಾದಲ್ಲಿ ಅಂಬಾರಿ ಹೊರುವ ಅಭಿಮನ್ಯು ಅಲ್ಲ.) ಹೀಗೆ ಅಂದು ಆಂಧ್ರಪ್ರದೇಶಕ್ಕೆ ಹೋದ ಜ್ಯೂನಿಯರ್ ಅಭಿಮನ್ಯುವನ್ನು ಬಹಳ ದಿನಗಳ ನಂತರ ಅದರ ಮಾವುತ ಭೇಟಿಯಾಗಿದ್ದು, ಈ ವೇಳೆ ಅಭಿಮನ್ಯು ವರ್ತಿಸಿದ ರೀತಿ ಅನೇಕರನ್ನು ಭಾವುಕರನ್ನಾಗಿಸಿದೆ. ತನ್ನನ್ನು ದಿನವೂ ನೋಡಿಕೊಳ್ಳುತ್ತಿದ್ದ ವ್ಯಕ್ತಿ ತನ್ನನ್ನು ಅಷ್ಟು ದೂರ ಕಳಿಸಿರುವುದಕ್ಕೆ ಆತ ಹುಸಿ ಕೋಪ ತೋರಿದಂತೆ ಕಾಣುತ್ತಿದೆ ಈ ವೀಡಿಯೋ
ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಅಲ್ಲಿ ಅಭಿಮನ್ಯುವಿನ ಎರಡು ಕಾಲುಗಳಿಗೆ ಸಂಕೋಲೆ ಹಾಕಲಾಗಿತ್ತು. ಇತ್ತ ತನ್ನ ಹಳೆಯ ಮಾವುತನನ್ನು ಕಂಡ ಕೂಡಲೇ ಆನೆ ಅಭಿಮನ್ಯು ತೀವ್ರವಾಗಿ ಭಾವುಕನಾಗಿದ್ದ. ಮಾವುತ ಹತ್ತಿರ ಹೋಗುತ್ತಿದ್ದಂತೆ ಅಭಿಮನ್ಯು ಈಗೇಕೆ ಬಂದೇ ಎಂದು ಮಾವುತನನ್ನು ದೂರ ತಳ್ಳುವುದಕ್ಕೆ ನೋಡುವುದನ್ನು ಕಾಣಬಹುದು. ಇತ್ತ ಮಾವುತನೂ ಭಾವುಕನಾಗಿ ಆನೆಯನ್ನು ಸೊಂಡಿಲಿನಲ್ಲಿ ಹಿಡಿದು ತಬ್ಬಿಕೊಂಡಿದ್ದಾನೆ. ಕೈನಲ್ಲಿ ಮಾವುತ ಅಭಿಮನ್ಯವನ್ನು ಸವರುತ್ತಿದ್ದರೆ ಅಭಿಮನ್ಯು ಮಾತ್ರ ಬೇಸರದಿಂದ ಮುಖವನ್ನು ಬೇರೆಡೆ ತಿರುಗಿಸಿದ್ದಾನೆ.
ಮಾವುತ ಆ ಬದಿ ಹೋದರೆ ಆನೆ ಈ ಬದಿ ತಿರುಗಿದೆ, ಮಾವುತ ಈ ಬದಿ ಬಂದಾಗ ಆನೆ ಆ ಬದಿ ಮುಖ ತಿರುಗಿಸಿ ತನ್ನ ಹುಸಿಕೋಪವನ್ನು ಆನೆ ಮಾವುತನ ಮೇಲೆ ತೋರಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ. Naveen Belchi ಎಂಬುವವರು ಇನ್ಸ್ಟಾದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇಷ್ಟು ದಿನ ಎಲ್ಲಿ ಹೋಗಿದ್ದೆ ಎಂದು ಅಭಿಮನ್ಯು ಹುಸಿಕೋಪ ತೋರ್ತಿದ್ದಾನೆ ಎಂದು ಒಬ್ಬರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ.
ನನಗಂತೂ ಈ ವಿಡಿಯೋ ನೋಡಿ ಮನಸ್ಸಿಗೆ ಬಹಳ ಬೇಜಾರ್ ಆಯ್ತು ಯಾಕಂದ್ರೆ ಮನುಷ್ಯನಿಗೆ ಎಷ್ಟೆ ಪ್ರೀತಿ ಕೊಟ್ಟು ನಂಬಿ ಜೊತೆಯಲ್ಲಿ ಇಟ್ಟುಕೊಂಡ್ರೆ ಮನುಷ್ಯ ಒಂದೊಲ್ಲೊಂದಿನ ತನ್ನ ಮೇಲಿಟ್ಟಿರೊ ನಂಬಿಕೆಗೆ ಮೋಸ ಮಾಡಿ ದ್ರೋಹ ಬಗಿತಾನೆ ಆದ್ರೆ ಮನುಷ್ಯನ ಜೊತೆಗಿನ ಆ ಮೂಕ ಪ್ರಾಣಿಯ ನಿಷ್ಕಲ್ಮಶ ಪ್ರೀತಿ ಸಂಬಂಧವನ್ನು ದೂರ ಮಾಡಿದ ಸರ್ಕಾರಕ್ಕೆ ಧಿಕ್ಕಾರವಿರಲಿ ಮನುಷ್ಯರಾದ್ರೆ ತನ್ನ ಭಾವನೆಗಳನ್ನು ಇನ್ನೊಬ್ಬರ ಹತ್ತಿರ ಮಾತಾಡಿ ನೋವನ್ನು ಹಂಚಿಕೊಳ್ತಾನೆ ಆದ್ರೆ ಪಾಪ ಆ ಮೂಕ ಪ್ರಾಣಿ ಏನಂತ ಮಾತಾಡುತ್ತೆ ಏನಂತ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೆ ಅರ್ಥ ಮಾಡಿಕೊಳ್ಳೊ ಮಾವುತ ನಿಂದ ದೂರ ಮಾಡಿದಾಗ ಆ ಮೂಕ ಪ್ರಾಣಿಯ ರೋಧನೆ ಆ ಭಗವಂತನೆ ಬಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮನುಷ್ಯರೇ ಮರತೊಗೊ ಈ ಕಾಲದಲ್ಲಿ, ಈ ಮುಖಪ್ರಾಣಿ ನೋಡಿ ಕಣ್ಣೀರು ತುಂಬಿತಲ್ಲ ಗುರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೋಗು ನೀನು ಮಾತಾಡ್ಬೇಡ ಅಂತ ಹೇಳ್ತಿದ್ದಾನೆ ಅಭಿಮನ್ಯು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡುಗರ ಕಣ್ಣಂಚನ್ನು ತೇವಗೊಳಿಸಿದೆ.
ಈ ಜೂನಿಯರ್ ಅಭಿಮನ್ಯುವನ್ನು ಎರಡು ವರ್ಷದ ಹಿಂದೆ ದಾವಣಗೆರೆಯ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾಗಿತ್ತು. ನಂತರ ಈತನನ್ನು ಸಕ್ರೆಬೈಲಿನ ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು. 14 ವರ್ಷ ಪ್ರಾಯದ ಆನೆ ತನ್ನ ಮಾವುತ ಹಾಗೂ ಕಾವಡಿಗರ ಮಾತನ್ನು ಬಹಳ ವಿಧೇಯತೆಯಿಂದ ಕೇಳುತ್ತಾನೆ. ವಹಿಸಿದ ಕೆಲಸವನ್ನು ಮಾಡುತ್ತಿದ್ದ. ಆದರೆ ಈಗ ಆತನನ್ನು ಆಂಧ್ರಪ್ರದೇಶದ ಆನೆ ಶಿಬಿರಕ್ಕೆ ಹಸ್ತಾಂತರಿಸಲಾಗಿದೆ.
ಅಭಿಮನ್ಯು ಮಾತ್ರವಲ್ಲದೇ ಮೂರು ವರ್ಷಗಳ ಹಿಂದೆ ಸೆರೆಸಿಕ್ಕ ಕೃಷ್ಣ ಎನ್ನುವ ಆನೆಯನ್ನು ಕೂಡ ಆಂಧ್ರಕ್ಕೆ ಕಳುಹಿಸಲಾಗಿದೆ. ಕೃಷ್ಣನ ವಯಸ್ಸು 15 ಹಾಗೆಯೇ ಕೊಡಗಿನ ದುಬಾರೆ ಶಿಬಿರ 39 ವರ್ಷದ ಆನೆ ದೇವ ಹಾಗೂ ದುಬಾರೆಯಲ್ಲೇ ಜನಿಸಿದ 26 ವರ್ಷದ ರಂಜನ್ ಎನ್ನುವ ಆನೆಯನ್ನು ಕೂಡ ಆಂಧ್ರಕ್ಕೆ ಹಸ್ತಾಂತರ ಮಾಡಲಾಗಿದೆ.