
ಜೈಪುರ: ಯುವಕನೋರ್ವ ತನಗೆ ಕಚ್ಚಿದ ಜೀವಂತ ಹಾವನ್ನು ಚೀಲವೊಂದಕ್ಕೆ ತುಂಬಿ ಆಸ್ಪತ್ರೆಗೆ ತೆಗೆದುಕೊಂಡು ಬಂದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆತ ಹಾವನ್ನು ಚೀಲದಿಂದ ತೆಗೆಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನ ಆರೋಗ್ಯ ವಿಜ್ಞಾನ ಸಂಸ್ಥೆಗೆ ಯುವಕನೋರ್ವ ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಬಂದಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಚ್ಚಿದ ಹಾವನ್ನು ಆಸ್ಪತ್ರೆಗೆ ತಂದ ಯುವಕ
ವರದಿಗಳ ಪ್ರಕಾರ ಯುವಕನೊಬ್ಬನಿಗೆ ಹಾವು ಕಚ್ಚಿದೆ. ಆದರೆ ತನಗೆ ಹಾವು ಕಚ್ಚಿತ್ತು ಎಂದು ಹೆದರಿ ಓಡುವ ಬದಲು ಆತ ಆ ಹಾವನ್ನು ಹಿಡಿದು ಅದನ್ನು ತನ್ನ ಬ್ಯಾಗ್‌ನಲ್ಲಿ ತುಂಬಿಸಿ ಆಸ್ಪತ್ರೆಗೆ ತಂದಿದ್ದಾನೆ. ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ತಲುಪಿದ ನಂತರ ಆತ ತನ್ನ ಬ್ಯಾಗ್ ಜೀಪ್ ತೆಗೆದು ಹಾವನ್ನು ಹೊರಗೆ ತೆಗೆದಿದ್ದಾನೆ. ಇದನ್ನು ನೋಡಿ ಅಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಕೂಡ ಹೌಹಾರಿ ಭಯದಿಂದ ಅಲ್ಲಿಂದ ಬೇರೆಡೆ ಓಡುವುದಕ್ಕೆ ನೋಡಿದ್ದಾರೆ. ಆದರೆ ಹಾವಿನಿಂದ ಕಚ್ಚಲ್ಪಟ್ಟ ಯುವಕ ಮಾತ್ರ ಯಾವುದೇ ಭಯಗೊಳ್ಳದೇ ಸಾವಧಾನದಿಂದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಇದೇ ಹಾವು ನನಗೆ ಕಚ್ಚಿದ್ದು ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಈ ಹಾವು ವಿಷಕಾರಿಯೇ ಅಲ್ಲವೇ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಕೇಳಿದ್ದಾನೆ.
ಯುವಕನ ಧೈರ್ಯಕ್ಕೆ ನೆಟ್ಟಿಗರ ಶ್ಲಾಘನೆ
ಈ ವೇಳೆ ಆಸ್ಪತ್ರೆ ಸಿಬ್ಬಂದಿ ಹಾವನ್ನು ಸುರಕ್ಷಿತವಾಗಿ ಬೇರೆಡೆ ಸಾಗಿಸುವುದರ ಜೊತೆಗೆ ಯುವಕನನ್ನು ಆಸ್ಪತ್ರೆಗೆ ಕೂಡಲೇ ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಶುರು ಮಾಡಿದ್ದಾರೆ. ಆದರೆ ಯುವಕನಿಗೆ ಕಚ್ಚಿದ ಹಾವು ವಿಷಕಾರಿಯೇ ಅಥವಾ ವಿಷವಿಲ್ಲದ ಹಾವೇ ಎಂಬುದು ಖಚಿತವಾಗಿಲ್ಲ. ಆದರೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಯುವಕನ ಧೈರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾವು ಯಾವುದು ಎಂದು ಗುರುತಿಸುವುದಕ್ಕಾಗಿ ಆತ ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದಿರುವುದು ಮೆಚ್ಚಬೇಕಾದ ವಿಚಾರವೇ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇನ್ನು ಕೆಲವರು ಆಸ್ಪತ್ರೆಯಲ್ಲಿ ಯುವಕ ಹಾವಿನೊಂದಿಗೆ ಬಂದ ನಂತರ ಅಲ್ಲಿದ್ದವರು ಗೊಂದಲಕ್ಕೊಳಗಾಗಿದ್ದನ್ನು ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ.
ಇನ್ನು ಹಾವು ಕಚ್ಚಿದ ಯುವಕನ ಸ್ಥಿತಿ ಸ್ಥಿರವಾಗಿದ್ದು, ಆತನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಈ ನಡುವೆ ಆಸ್ಪತ್ರೆ ಸಿಬ್ಬಂದಿ ವನ್ಯಜೀವಿ ತಜ್ಞರನ್ನು ಕೂಡ ಸ್ಥಳಕ್ಕೆ ಕರೆಸಿದ್ದು, ಈ ಹಾವನ್ನು ಸುರಕ್ಷಿತವಾಗಿ ಅವರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.