
ಸಾರ್ವಜನಿಕ ಸ್ಥಳಗಳಲ್ಲಿ ನಾವು ಸರತಿ ಸಾಲಿನಲ್ಲಿ ನಿಲ್ಲುವುದು, ನಮ್ಮ ಸರದಿಗಾಗಿ ಕಾಯುವುದು ಸಾಮಾನ್ಯ. ಟಿಕೆಟ್ ಕೌಂಟರ್‌ಗಳಿಂದ ಹಿಡಿದು, ಬಸ್ ಹತ್ತುವವರೆಗೂ ಈ ಶಿಸ್ತು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ, 'ಕೈಲಾಗದವನು ಮೈ ಪರಚಿಕೊಂಡ' ಎಂಬಂತೆ ಗಲಾಟೆಗಳೇ ಶುರುವಾಗುತ್ತವೆ. ಇಂತಹದ್ದೇ ಒಂದು ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರ್ ತಾಲೂಕಿನ ಕರೇಗಾಂವ್ ಗ್ರಾಮದ ಸ್ವೀಟ್ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ, ಅಂಗಡಿಯ ನೌಕರನೊಬ್ಬ ಸಮೋಸಾಗಳನ್ನು ಒಂದು ಪೆಟ್ಟಿಗೆಗೆ ತುಂಬಿಸುತ್ತಿರುವುದು ಕಾಣಿಸುತ್ತದೆ. ಈ ವೇಳೆ, ಇಬ್ಬರು ಯುವಕರು ಅಲ್ಲಿಗೆ ಬಂದು ಆತನ ಬಳಿ ಏನೋ ಕೇಳುತ್ತಾರೆ. ಮರುಕ್ಷಣವೇ, ಆ ನೌಕರನ ಮೇಲೆ ಹಲ್ಲೆ ಮಾಡಲು ಶುರುಮಾಡುತ್ತಾರೆ.
ಒಬ್ಬ ಹೊಡೆಯಲು ಶುರುಮಾಡಿದರೆ, ಇನ್ನೊಬ್ಬನೂ ಜೊತೆ ಸೇರಿಕೊಳ್ಳುತ್ತಾನೆ. ಅವರ ಹೊಡೆತಕ್ಕೆ ನೌಕರ ಕೆಳಗೆ ಬೀಳುತ್ತಾನೆ. ಆದರೂ ಬಿಡದೆ, ಇಬ್ಬರೂ ಸೇರಿ ಆತನ ತಲೆ, ಹೊಟ್ಟೆ ಮತ್ತು ಬೆನ್ನಿಗೆ ಮನಬಂದಂತೆ ಒದೆಯುತ್ತಾರೆ. ಈ ಕ್ರೌರ್ಯ ಕೆಲವು ನಿಮಿಷಗಳ ಕಾಲ ಮುಂದುವರಿಯುತ್ತದೆ. ಅಷ್ಟೇ ಅಲ್ಲ, ಅಂಗಡಿಯಲ್ಲಿದ್ದ ಬೇರೆ ಗ್ರಾಹಕರು ಮತ್ತು ಸಿಬ್ಬಂದಿ ಇದನ್ನು ಸುಮ್ಮನೆ ನೋಡುತ್ತಾ ನಿಂತಿರುತ್ತಾರೆಯೇ ಹೊರತು, ಯಾರೊಬ್ಬರೂ ಆ ನೌಕರನನ್ನು ರಕ್ಷಿಸಲು ಮುಂದೆ ಬರುವುದಿಲ್ಲ. ನೋವಿನಿಂದ ನರಳುತ್ತಾ ನೌಕರ ಚೀರುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಹಲ್ಲೆಗೊಳಗಾದ ನೌಕರ ರಾಜು ಲಾಭುರಾಮ್ ದೇವಸಿ, ಈ ಸಿಸಿಟಿವಿ ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ರಂಜನ್‌ಗಾಂವ್ ಎಂಐಡಿಸಿ ಪೊಲೀಸರು ರಂಗನಾಥ್ ನವಲೆ ಮತ್ತು ಸಾಯಿ ಲಕ್ಷ್ಮಣ್ ನವಲೆ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ರಂಗನಾಥ್ ಮತ್ತು ಸಾಯಿ ಲಕ್ಷ್ಮಣ್ ಅಂಗಡಿಗೆ ಬಂದು ಸಮೋಸಾಗೆ ಆರ್ಡರ್ ಮಾಡಿದ್ದಾರೆ. ಆದರೆ, ಆ ಸಮಯದಲ್ಲಿ ನೌಕರ ರಾಜು ಬೇರೊಂದು ದೊಡ್ಡ ಆರ್ಡರ್ ಪ್ಯಾಕ್ ಮಾಡುತ್ತಿದ್ದರು. ಹೀಗಾಗಿ, ಇವರಿಗೆ ಸಮೋಸ ಕೊಡಲು ಸ್ವಲ್ಪ ತಡವಾಗಿದೆ. ಇದೇ ಕೋಪದಲ್ಲಿ ಇಬ್ಬರೂ ರಾಜು ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಜನರಿಗೆ ಕಾನೂನಿನ ಮೇಲೆ ನಂಬಿಕೆ ಇಲ್ಲದಂತಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
'Serve Us First!': Fight Over Who Gets Samosas First Turns Violent At Pune Sweet Shop | WATCH pic.twitter.com/VpGVXfQ9Ie
— Varad Bhatkhande | Journalist (@VaradBhatkhande) July 15, 2026