
ಒಬ್ಬ ಮಾರ್ಕೆಟಿಂಗ್ ಇಂಟರ್ನ್ ರೆಡ್ಡಿಟ್-ನಲ್ಲಿ ಹಾಕಿರೋ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತನಗೆ ಮಾತು ಕೊಟ್ಟಂತೆ ಸ್ಟೈಪೆಂಡ್ ನೀಡಿಲ್ಲ, ಬದಲಾಗಿ ಅರ್ಧದಷ್ಟು ಮಾತ್ರ ನೀಡಿ, ನಿಗದಿಗಿಂತ ಹೆಚ್ಚು ದುಡಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದು, ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. "ಇಂಟರ್ನ್‌ಶಿಪ್‌ಗೆ 10 ಸಾವಿರ ಕೊಡ್ತೀವಿ ಅಂದ್ರು, 5 ಸಾವಿರ ಕೊಟ್ಟರು, ಕೆಲಸದಲ್ಲಿ ಇರಬೇಕಾ? ಬಿಡಬೇಕಾ?" ಎಂಬ ಶೀರ್ಷಿಕೆಯ ಈ ಪೋಸ್ಟ್‌ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಇಂತಹ ಶೋಷಣೆಯ ಕೆಲಸವನ್ನು ತಕ್ಷಣ ಬಿಟ್ಟುಬಿಡು ಎಂದು ಸಲಹೆ ನೀಡಿದ್ದಾರೆ.
ನಾಲ್ಕನೇ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಇವರು, ಕಳೆದ ತಿಂಗಳು ಈ ಇಂಟರ್ನ್‌ಶಿಪ್‌ಗೆ ಸೇರಿದ್ದರು. ವಾರಕ್ಕೆ ಮೂರು ದಿನ ಮಾತ್ರ ಕೆಲಸ, ತಿಂಗಳಿಗೆ 10,000 ರೂಪಾಯಿ ಸ್ಟೈಪೆಂಡ್ ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು. ಆದರೆ, ಕೆಲಸಕ್ಕೆ ಸೇರಿದ ಮೇಲೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು.
"ಮೊದಲ ದಿನದಿಂದಲೇ ನಾನು ಪ್ರತಿದಿನ ಕೆಲಸ ಮಾಡಿದ್ದೇನೆ, ಕೆಲವೊಮ್ಮೆ ಭಾನುವಾರ ಕೂಡಾ ಕೆಲಸ ಮಾಡಿದ್ದೇನೆ. ರಿಮೋಟ್ ಆಗಿ ಕೂಡಾ ಟಾಸ್ಕ್ ಕೊಟ್ಟಿದ್ದಾರೆ. ಆಫೀಸ್ ಸಮಯ ಬೆಳಗ್ಗೆ 10:30 ರಿಂದ ಸಂಜೆ 6 ಗಂಟೆ ತನಕ ಅಂತ ಹೇಳಿದ್ದರು. ಆದರೆ ನಾನು ರಾತ್ರಿ 7:30-9 ಗಂಟೆಯವರೆಗೂ ಇರಬೇಕಾಗಿತ್ತು. ಮನೆಗೆ ಬಂದ ಮೇಲೂ ಕೆಲಸದ ಬಗ್ಗೆ ಮೆಸೇಜ್ ಬರುತ್ತಿತ್ತು. ನನ್ನ ಜವಾಬ್ದಾರಿಗಳಲ್ಲದ ಹೆಚ್ಚುವರಿ ಕೆಲಸಗಳನ್ನೂ ನನ್ನ ಮೇಲೆ ಹೇರಿದ್ದರು," ಎಂದು ಆ ಇಂಟರ್ನ್ ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇಷ್ಟೆಲ್ಲಾ ಹೆಚ್ಚು ಗಂಟೆಗಳ ಕಾಲ ದುಡಿದು, ಹೆಚ್ಚುವರಿ ಜವಾಬ್ದಾರಿಗಳನ್ನು ಹೊತ್ತರೂ, ತಿಂಗಳ ಕೊನೆಗೆ ಕೇವಲ 5,000 ರೂಪಾಯಿ ಮಾತ್ರ ಸಿಕ್ಕಿದೆ ಎಂದು ಇಂಟರ್ನ್ ಹೇಳಿದ್ದಾರೆ. ಸರಿಯಾಗಿ ಆಫೀಸ್‌ಗೆ ಬಂದಿಲ್ಲ ಎಂಬ ಕಾರಣ ನೀಡಿ ಮ್ಯಾನೇಜ್‌ಮೆಂಟ್ ಉಳಿದ ಹಣವನ್ನು ತಡೆಹಿಡಿದಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
"ಜುಲೈ 5 ರಂದು ನನ್ನ ಖಾತೆಗೆ ಕೇವಲ 5,000 ರೂಪಾಯಿ ಜಮಾ ಆಗಿದೆ. ಮ್ಯಾನೇಜರ್ ಹೇಳುವ ಪ್ರಕಾರ, ನಾನು ನಿಯಮಿತವಾಗಿ ಆಫೀಸ್‌ಗೆ ಬಂದಿಲ್ಲವಂತೆ. ಆದರೆ ನಾನು ಪ್ರತಿದಿನ ಕೆಲಸ ಮಾಡಿದ್ದೇನೆ. ಅವರ ಲೆಕ್ಕಾಚಾರದ ಪ್ರಕಾರ, ನನಗೆ ಕನಿಷ್ಠ 7,500 ರೂಪಾಯಿ ಬರಬೇಕಿತ್ತು. ಪ್ರತಿದಿನ 30 ಕಿ.ಮೀ. ಪ್ರಯಾಣಕ್ಕೆ ಮೂರು ಗಂಟೆ ಸಮಯ ಬೇಕು."
“ನಾನು ಜುಲೈ 9 ರಂದು ಈ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದೇನೆ. ಅವರು 2,000 ರೂಪಾಯಿ ಹೆಚ್ಚಿಸಿದರೆ, ನಾನು ಕೆಲಸದಲ್ಲಿ ಮುಂದುವರಿಯಬಹುದು. ಇಲ್ಲದಿದ್ದರೆ, ನಾನು ಕೆಲಸ ಬಿಡುತ್ತೇನೆ. ಆದರೆ, ಇಲ್ಲಿನ ರಿಕ್ರೂಟರ್ (ತುಂಬಾ ಪ್ರಭಾವಿ ವ್ಯಕ್ತಿ) ನನ್ನ ಮುಂದಿನ ಪ್ಲೇಸ್‌ಮೆಂಟ್ ಮೇಲೆ ಪರಿಣಾಮ ಬೀರಬಹುದೇ ಎಂಬ ಚಿಂತೆ ಕಾಡುತ್ತಿದೆ. ಇಲ್ಲಿಯವರೆಗೆ, ನಾನು ಯಾವುದೇ ಕೌಶಲ್ಯವನ್ನು ಕಲಿತಿಲ್ಲ, ಬರೀ ಸುಸ್ತಾಗಿದ್ದಷ್ಟೇ," ಎಂದು ಅವರು ಹೇಳಿದ್ದಾರೆ.
ಈ ಪೋಸ್ಟ್ ವೇಗವಾಗಿ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮುಂದುವರಿಸುವ ಬದಲು ರಾಜೀನಾಮೆ ನೀಡುವುದೇ ಉತ್ತಮ ಎಂದು ಹಲವರು ಸಲಹೆ ನೀಡಿದ್ದಾರೆ.
"10 ಸಾವಿರದ ಭರವಸೆ ಕೊಟ್ಟು 5 ಸಾವಿರ ಕೊಟ್ಟಿದ್ದಾರೆ. ಇದು ದೊಡ್ಡ 'ರೆಡ್ ಫ್ಲ್ಯಾಗ್'. ತಕ್ಷಣ ನಿನ್ನ ರಾಜೀನಾಮೆ ಕಳಿಸು," ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಇನ್ನೊಬ್ಬರು, "ತಕ್ಷಣ ಕೆಲಸ ಬಿಡು. ಆ ಸ್ಟಾರ್ಟಪ್ ನಿನಗೆ ಮೋಸ ಮಾಡಿದೆ. ಇದು ಅವರ ನಿಜವಾದ ಬಣ್ಣವನ್ನು ತೋರಿಸುತ್ತದೆ. ಅವರು ತಮ್ಮೆಲ್ಲಾ ಉದ್ಯೋಗಿಗಳನ್ನು ಹೀಗೆಯೇ ನಡೆಸಿಕೊಳ್ಳುತ್ತಾರೆ," ಎಂದು ಕಾಮೆಂಟ್ ಮಾಡಿದ್ದಾರೆ.
ಮೂರನೇ ಬಳಕೆದಾರರು, "ಈ ಕಂಪನಿ ಎಷ್ಟು ದೊಡ್ಡದು? 10 ಜನರಿಗಿಂತ ಕಡಿಮೆ ಸಿಬ್ಬಂದಿ ಇದ್ದರೆ, ಖಂಡಿತ ಕೆಲಸ ಬಿಡು. ಆ ರಿಕ್ರೂಟರ್ ಏನೂ ಮಾಡಲು ಸಾಧ್ಯವಿಲ್ಲ. ಅವರು ಕಾಲೇಜಿನ ಬೇರೆ ಪ್ಲೇಸ್‌ಮೆಂಟ್ ಡ್ರೈವ್‌ಗಳಲ್ಲಿ ನಿನ್ನನ್ನು ತಡೆಯಬಹುದು ಅಷ್ಟೇ. ಅವರೊಂದಿಗೆ ಮಾತನಾಡಿ, ನೀನೂ ಸ್ವಂತವಾಗಿ ಕೆಲಸ ಹುಡುಕಲು ಪ್ರಾರಂಭಿಸು," ಎಂದು ಹೇಳಿದ್ದಾರೆ.
ನಾಲ್ಕನೆಯವರು, "ಕೆಲಸ ಬಿಟ್ಟುಬಿಡು. ಉಳಿದ ಹಣಕ್ಕಾಗಿ ಜಗಳವಾಡುತ್ತಾ ಕೂರಬೇಡ, ಅವರು ಕೊಡಲ್ಲ. ಯಾವ ರಿಕ್ರೂಟರ್ ಕೂಡ ನಿನ್ನ ಪ್ಲೇಸ್‌ಮೆಂಟ್‌ಗಳನ್ನು ಹಾಳು ಮಾಡಲು ಸಾಧ್ಯವಿಲ್ಲ. ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ. ಎಲ್ಲವೂ ಸರಿ ಹೋಗುತ್ತದೆ. ನಿನಗೆ ಹೀಗಾಗಿದ್ದು ಬೇಸರದ ಸಂಗತಿ, ಆದರೆ ಈ ಸ್ಟಾರ್ಟಪ್‌ಗಳು ಅಸಹ್ಯ ಹುಟ್ಟಿಸುತ್ತವೆ," ಎಂದು ಸೇರಿಸಿದ್ದಾರೆ.