ಓಲಾ ಸ್ಕೂಟರ್ ರಿಪೇರಿಗೆ ಕೊಟ್ಟು 1,114 ದಿನವಾಯ್ತು, ಇನ್ನೂ ರಿಪೇರಿಯಾಗಿಲ್ಲ; ಗ್ರಾಹಕನ ಆಕ್ರೋಶದ ವಿಡಿಯೋ ವೈರಲ್!

Published : Sep 27, 2025, 06:05 PM IST
Ola Scooter Service Center

ಸಾರಾಂಶ

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ 1,114 ದಿನಗಳಿಂದ ಸೇವೆ ಸಿಗದ ಗ್ರಾಹಕರೊಬ್ಬರ ಆಕ್ರೋಶವು ಕಂಪನಿ ಕಳಪೆ ಸೇವೆಯನ್ನು ಬಯಲುಮಾಡಿದೆ. ರಾಷ್ಟ್ರವ್ಯಾಪಿ ಇದೇ ರೀತಿಯ ದೂರುಗಳು, ಶೋರೂಂಗಳಿಗೆ ಬೆಂಕಿ ಹಚ್ಚಿದ ಘಟನೆಗಳು ಮತ್ತು ಸರ್ಕಾರದ ತನಿಖೆಯ ಆದೇಶವು ಓಲಾ ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟನ್ನು ಸೂಚಿಸುತ್ತದೆ.

ಬೆಂಗಳೂರು (ಸೆ.27): ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್ (Ola Electric), ಗುಣಮಟ್ಟ ಮತ್ತು ಮಾರಾಟದ ನಂತರದ ಸೇವಾ (After-sales Service) ಕೊರತೆಯಿಂದಾಗಿ ಗ್ರಾಹಕರ ನಿರಂತರ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಇತ್ತೀಚೆಗೆ ವೆಂಕಟರಾಘವನ್ ಟಿ ಎಂಬ ಗ್ರಾಹಕರೊಬ್ಬರು ತಮ್ಮ ಸ್ಕೂಟರ್‌ಗೆ 1,114 ದಿನಗಳಿಂದ ಸೇವೆ ಲಭಿಸಿಲ್ಲ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಓಲಾ ಎಲೆಕ್ಟ್ರಿಕ್‌ನ ಕಳಪೆ ಸೇವಾ ನೀತಿಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

ನಮಗೆ ದುರಸ್ತಿಯಲ್ಲಿರುವ ಸ್ಕೂಟರ್ ಬೇಕಾಗಿಲ್ಲ, ಓಡಿಸಲು ಯೋಗ್ಯವಾಗಿರುವ ಸ್ಕೂಟರ್ ಬೇಕು. ಕಳೆದ ಮೂರು ವರ್ಷಗಳಿಂದ ಯಾವುದೇ ಸೇವೆ ಇಲ್ಲ. ನಮಗೆ ಹಣ ಮರುಪಾವತಿ (Refund) ಮಾಡಿ' ಎಂದು ಗ್ರಾಹಕ ವೆಂಕಟರಾಘವನ್ ಅವರು ತಮ್ಮ ಟ್ವೀಟ್‌ನಲ್ಲಿ (ಈಗಿನ X) ಕಂಪನಿಯನ್ನು ಟ್ಯಾಗ್ ಮಾಡಿದ್ದಾರೆ. ಈ ದೀರ್ಘಾವಧಿಯ ನಿರ್ಲಕ್ಷ್ಯವು ಓಲಾ ಎಲೆಕ್ಟ್ರಿಕ್‌ನ ಗ್ರಾಹಕ ಸೇವೆಯು ಯಾವ ಮಟ್ಟದಲ್ಲಿದೆ ಎಂಬುದನ್ನು ಸೂಚಿಸುತ್ತದೆ.

ಸ್ಕೂಟರ್ ಸರ್ವಿಸ್ ಕೊರತೆ, ವಿಳಂಬ ಮತ್ತು ಗ್ರಾಹಕರ ಆಕ್ರೋಶ:

ಕೇವಲ ಒಬ್ಬ ಗ್ರಾಹಕರಷ್ಟೇ ಅಲ್ಲ, ಓಲಾ ಎಲೆಕ್ಟ್ರಿಕ್‌ನ ಸೇವಾ ವಿಳಂಬ ಮತ್ತು ಸ್ಕೂಟರ್‌ಗಳ ಗುಣಮಟ್ಟದ ಸಮಸ್ಯೆಗಳು ರಾಷ್ಟ್ರವ್ಯಾಪಿ ವ್ಯಾಪಕವಾಗಿ ವರದಿಯಾಗುತ್ತಿವೆ. ಇಂತಹ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದ್ದವು. ಓಲಾ ಬೈಕ್‌ ಶೋ ರೂಮಿಗೆ ಬೆಂಕಿ ಹಚ್ಚಿದ ಮತ್ತು ಓಲಾ ಸ್ಕೂಟರ್ ಅನ್ನು ಶೋ ರೂಮಿನ ಮುಂದೆ ನಿಲ್ಲಿಸಿ ಮನಸ್ಸಿಗೆ ಬಂದಂತೆ ಬಡಿಗೆಯಿಂದ ಹೊಡೆದು ಹಾಕಿದ್ದ ಘಟನೆಗಳೂ ನಡೆದಿದ್ದವು. ಈ ಬಗ್ಗೆ ವಿಡಿಯೋಗಳು ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓಲಾ ಖರೀದಿ ಮಾಡಬೇಡಿ ಎಂಬ ಅಭಿಯಾನವೇ ಶುರುವಾಗಿತ್ತು.

ಓಲಾ ಶೋ ರೂಂಗಳಿಗೆ ಬೆಂಕಿ, ಗ್ರಾಹಕ ನ್ಯಾಯಾಲಯದ ಆದೇಶ:

ಕಲಬುರಗಿಯಂತಹ ನಗರಗಳಲ್ಲಿ, ರಿಪೇರಿ ಆಗದ ಸ್ಕೂಟರ್‌ನಿಂದಾಗಿ ಹತಾಶಗೊಂಡ ಗ್ರಾಹಕನೊಬ್ಬ ಶೋರೂಂಗೆ ಬೆಂಕಿ ಹಚ್ಚಿದಂತಹ ಆಘಾತಕಾರಿ ಘಟನೆಗಳೂ ನಡೆದಿವೆ. ಮಂಗಳೂರಿನಲ್ಲಿ ಕೂಡ ದೋಷಯುಕ್ತ ಸ್ಕೂಟರ್ ಮತ್ತು ಕಳಪೆ ಸೇವೆಗಾಗಿ ಗ್ರಾಹಕರೊಬ್ಬರು ಗ್ರಾಹಕ ನ್ಯಾಯಾಲಯವನ್ನು (Consumer Court) ಸಂಪರ್ಕಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗವು ಸ್ಕೂಟರ್ ಅನ್ನು ರಸ್ತೆ ಸಂಚಾರಕ್ಕೆ ಯೋಗ್ಯವಾಗುವಂತೆ ದುರಸ್ತಿ ಮಾಡಲು ಅಥವಾ ₹1.17 ಲಕ್ಷ ಮರುಪಾವತಿಸಲು ಓಲಾ ಎಲೆಕ್ಟ್ರಿಕ್‌ಗೆ ಆದೇಶಿಸಿತ್ತು.

 

ಸ್ಕೂಟರ್‌ಗಳ ಸಮಾಧಿ ಕೇಂದ್ರಗಳಾದ ಸರ್ವಿಸ್ ಸೆಂಟರ್‌ಗಳು:

ಹಲವು ಸೇವಾ ಕೇಂದ್ರಗಳಲ್ಲಿ ನೂರಾರು ಸ್ಕೂಟರ್‌ಗಳು ದುರಸ್ತಿಗಾಗಿ ತಿಂಗಳಿಂದ ಬಿದ್ದಿದ್ದು, ಅವು 'ಸಮಾಧಿ ಭೂಮಿ'ಯಂತೆ (Graveyard) ಕಾಣುತ್ತಿವೆ ಎಂದು ಅತೃಪ್ತ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಂತಹ ನಗರಗಳಲ್ಲಿ ಸೇವಾ ಕೇಂದ್ರವೇ ದಿಢೀರ್ ಮುಚ್ಚಿ, ಸಿಬ್ಬಂದಿ ನಾಪತ್ತೆಯಾದ ಕಾರಣ ಗ್ರಾಹಕರು ತಮ್ಮ ಸ್ಕೂಟರ್‌ಗಳನ್ನು ಪಡೆಯಲು ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿತ್ತು.

ಕೇಂದ್ರ ಸರ್ಕಾರದ ತನಿಖಾ ಆದೇಶ:

ಓಲಾ ಎಲೆಕ್ಟ್ರಿಕ್ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ (NCH) ಹತ್ತು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA)ವು ಕಂಪನಿಯ ಉತ್ಪನ್ನ ಮತ್ತು ಸೇವೆಗಳ ಕುರಿತು ತನಿಖೆ ನಡೆಸಲು ಭಾರತೀಯ ಮಾನದಂಡ ಮಂಡಳಿಗೆ (BIS) ಆದೇಶಿಸಿದೆ.

ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳ ಮಾರಾಟ ಮತ್ತು ಮಾರಾಟದ ನಂತರದ ತ್ವರಿತ ಸೇವೆಗಳನ್ನು ಒದಗಿಸುವುದು ಯಾವುದೇ ಕಂಪನಿಯ ಮೂಲ ಜವಾಬ್ದಾರಿಯಾಗಿದೆ. ಆದರೆ, ಓಲಾ ಎಲೆಕ್ಟ್ರಿಕ್‌ನ ನಿರಂತರ ನಿರ್ಲಕ್ಷ್ಯವು ವಿದ್ಯುತ್ ವಾಹನ ಮಾರುಕಟ್ಟೆಯಲ್ಲಿ ಕಂಪನಿಯ ವಿಶ್ವಾಸಾರ್ಹತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸಮಸ್ಯೆಗಳು ಬಗೆಹರಿಯದಿದ್ದರೆ, ಮುಂದಿನ ದಿನಗಳಲ್ಲಿ ಗ್ರಾಹಕರು ಕಂಪನಿಯ ವಿರುದ್ಧ ದೊಡ್ಡ ಮಟ್ಟದ ಕಾನೂನು ಕ್ರಮಗಳಿಗೆ ಮುಂದಾಗುವ ಸಾಧ್ಯತೆ ಇದೆ.

PREV
Read more Articles on
click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!