
ಬೆಂಗಳೂರು (ಸೆ.27): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕನ್ನಡ ವಿರೋಧಿ ದರ್ಪ ಪ್ರದರ್ಶನಗೊಂಡಿರುವ ಘಟನೆ ನಡೆದಿದೆ. ಕರ್ತವ್ಯ ನಿರತ ಮಹಿಳಾ ಪಿಎಸ್‌ಐ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುವಂತೆ ಹಠ ಹಿಡಿದು, ಕನ್ನಡ ಮಾತನಾಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆರೋಪದ ಮೇಲೆ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಸೆಪ್ಟೆಂಬರ್ 25 ರಂದು ರಾತ್ರಿ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಂಚಾರ ನಿಯಮ ಉಲ್ಲಂಘನೆ ಮತ್ತು ಕುಡಿದು ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಮೂಲಕ ರಸತೆಯಲ್ಲಿ ಕುಡಿದುಬಂದು ವಾಹನ ಚಾಲನೆ ಮಾಡಿದ್ದಲ್ಲದೇ ನ್ಯೂಸೆನ್ಸ್ ಕ್ರಿಯೇಟ್ ಮಾಡಿ ಪೊಲೀಸರ ಕರ್ತವ್ಯಕ್ಕೆ ಹಾಗೂ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ.
ಘಟನೆ ನಡೆದ ದಿನ ಜೆ.ಬಿ. ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಕವಿತಾ ಅವರು ತಮ್ಮ ಸಿಬ್ಬಂದಿಯೊಂದಿಗೆ ರಸ್ತೆಯಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ (DD) ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಾಹನ ಚಲಾಯಿಸುತ್ತಿದ್ದ ಆದಿತ್ಯಾ ಅಗರ್ವಾಲ್ ಎಂಬಾತ ಕುಡಿದಿರುವುದು ಕಂಡುಬಂದಿದೆ. ಪೊಲೀಸರು ಆದಿತ್ಯಾ ಅಗರ್ವಾಲ್‌ನನ್ನು ತಡೆದು, ಬ್ಲೋವರ್ ಮಿಷನ್ (Alcohol Meter) ನಲ್ಲಿ ಊದುವಂತೆ ಸೂಚಿಸಿದ್ದಾರೆ. ಆದರೆ ಆರೋಪಿ ಆ ಆದೇಶವನ್ನು ಪಾಲಿಸಲು ನಿರಾಕರಿಸಿದ್ದಾನೆ. ಕರ್ತವ್ಯ ನಿರತ ಪಿಎಸ್‌ಐ ಕವಿತಾ ಅವರು ಕನ್ನಡದಲ್ಲಿ ಆತನಿಗೆ ಸೂಚನೆಗಳನ್ನು ನೀಡುತ್ತಿದ್ದಾಗ, ಆದಿತ್ಯಾ ಅಗರ್ವಾಲ್ ಏಕಾಏಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಪಿಎಸ್‌ಐ ಕವಿತಾ ಅವರು ಕನ್ನಡದಲ್ಲಿ ಮಾತನಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆರೋಪಿ, 'ನನಗೆ ಕನ್ನಡ ಬರಲ್ಲ, ಹಿಂದಿ ಮಾತನಾಡು ಎಂದು ಹಠ ಹಿಡಿದಿದ್ದಾನೆ. ಕವಿತಾ ಅವರು ಸಂಯಮದಿಂದಲೇ ನಿಯಮಗಳನ್ನು ವಿವರಿಸಲು ಮುಂದಾದರೂ, ಆರೋಪಿ ಹಿಂದಿ, ಹಿಂದಿ ಎಂದು ಜೋರಾಗಿ ಕಿರುಚಾಡಿ ರಸ್ತೆಯಲ್ಲಿ ಪೂರ್ಣ ಪ್ರಮಾಣದ ಗೊಂದಲವನ್ನು ಸೃಷ್ಟಿಸಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದಾನೆ.
ಅಂತಿಮವಾಗಿ, ಈ ವರ್ತನೆ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿದ ಪೊಲೀಸರು, ಆರೋಪಿ ಆದಿತ್ಯಾ ಅಗರ್ವಾಲ್‌ನನ್ನು ವಶಕ್ಕೆ ಪಡೆದಿದ್ದಾರೆ. ಪಿಎಸ್‌ಐ ಕವಿತಾ ಅವರು ನೀಡಿದ ದೂರಿನ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸರು ಆರೋಪಿ ಆದಿತ್ಯಾ ಅಗರ್ವಾಲ್‌ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಾನೂನು ಪಾಲನೆಗೆ ಅಡ್ಡಿಪಡಿಸುವುದಲ್ಲದೆ, ಸ್ಥಳೀಯ ಭಾಷೆ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಈ ಘಟನೆಯು ಬೆಂಗಳೂರಿನಲ್ಲಿ ಸ್ಥಳೀಯರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಪ್ರಸಂಗಗಳು ಪದೇ ಪದೇ ನಡೆಯುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.