
ಪಶ್ಚಿಮ ಘಟ್ಟಗಳು ಜಗತ್ತಿನ ಅತ್ಯಂತ ಅಪರೂಪದ ಜೀವವೈವಿಧ್ಯಗಳ ತಾಣ. ನಮ್ಮ ಮಲೆನಾಡಿನ ದಟ್ಟ ಕಾಡುಗಳಲ್ಲಿ ಮಾತ್ರವೇ ಕಾಣಸಿಗುವ ಎಷ್ಟೋ ಜೀವಿಗಳ ಬಗ್ಗೆ ಇಂದಿಗೂ ನಮಗೆ ಸರಿಯಾದ ಮಾಹಿತಿಯಿಲ್ಲ. ಇತ್ತೀಚೆಗೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಜನಸಾಮಾನ್ಯರ ಕಣ್ಣಿಗೆ ಬಿದ್ದ ಅಪರೂಪದ ಹಾವೊಂದು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ನೋಡಲು ಅಕ್ರಮವಾಗಿ ಕೋಟ್ಯಂತರ ರೂಪಾಯಿಗೆ ಮಾರಾಟವಾಗುವ ‘ಕೆಂಪು ಮಣ್ಣುಮುಕ್ಕ’ (Red Sand Boa) ಹಾವಿನಂತೆಯೇ ಕಂಡ ಆ ಜೀವಿಯನ್ನು ಹಿಡಿದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಕೂಡಿಹಾಕಲಾಗಿತ್ತು.
ಆದರೆ, ಅರಣ್ಯ ಇಲಾಖೆ ತಜ್ಞರು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ! ಅದು ಮಣ್ಣುಮುಕ್ಕನಲ್ಲ, ಬದಲಿಗೆ ನಮ್ಮ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ, ಸಂಪೂರ್ಣ ವಿಷರಹಿತ ‘ಕವಚ ಬಾಲದ ಹಾವು’ (Shieldtail Snake) ಎಂಬುದು ದೃಢಪಟ್ಟಿದೆ.
ಪಶ್ಚಿಮ ಘಟ್ಟದ ತಪ್ಪಲಿನ ಗಡಿಭಾಗದ ಕೇರಳ ರಾಜ್ಯದ ತಾಮರಕುಳಂ ಎಂಬಲ್ಲಿ ಅಂಗಡಿಯೊಂದರ ಜಗಲಿಯಲ್ಲಿ ಈ ಹಾವು ಕಾಣಿಸಿಕೊಂಡಿತ್ತು. ಅದರ ಆಕಾರ ಹಾಗೂ ಬಾಲವನ್ನು ನೋಡಿ ಜನ 'ಇದು ಅವೈಜ್ಞಾನಿಕವಾಗಿ ಜನರು ಮಾರಾಟ ಮಾಡುವ, ದುಬಾರಿ ಬೆಲೆಯ ಮಣ್ಣುಮುಕ್ಕ ಇರಬಹುದು' ಎಂದು ಭಾವಿಸಿ, ಕುತೂಹಲದಿಂದ ಅದನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಬಂಧಿಸಿದ್ದರು. ನಂತರ ಸ್ಥಳೀಯ ಜನಪ್ರತಿನಿಧಿಗಳು ಅರಣ್ಯ ಇಲಾಖೆಗೆ ಹಾವಿನ ಫೋಟೋ ಮತ್ತು ವಿಡಿಯೋ ಕಳುಹಿಸಿದರು. ತಜ್ಞರು ಪರಿಶೀಲಿಸಿ, ಇದು ಮಣ್ಣುಮುಕ್ಕ ಹಾವಲ್ಲ, ಯಾವುದೇ ಅಪಾಯವಿಲ್ಲದ 'ಶೀಲ್ಡ್‌ಟೇಲ್' ಎಂದು ಸ್ಪಷ್ಟಪಡಿಸಿದ ನಂತರವಷ್ಟೇ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕೊಡಗಿನ ಪಶ್ಚಿಮ ಘಟ್ಟದ ಅಂಚಿನಲ್ಲಿ ವಾಸಿಸುವ ಜನರು ಇಂತಹ ಹಾವುಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಕೆಂಪು ಮಣ್ಣುಮುಕ್ಕನಿಗೆ (ಎರಡು ತಲೆ ಹಾವು) ಇರುವಂತೆಯೇ ಈ ಹಾವಿಗೂ ಬಾಲದ ತುದಿ ಮೊಂಡಾಗಿರುತ್ತದೆ. ಆದರೆ, ಶೀಲ್ಡ್‌ಟೇಲ್ ಹಾವಿನ ಬಾಲದಲ್ಲಿ ಮಣ್ಣು ತೋಡಲು ಅನುಕೂಲವಾಗುವಂತೆ ಗಟ್ಟಿಯಾದ ‘ಕವಚ’ದಂಥ (Shield) ರಚನೆ ಇರುತ್ತದೆ. ಹೀಗಾಗಿ ಇದನ್ನು ‘ಕವಚ ಬಾಲದ ಹಾವು’ ಎನ್ನುತ್ತಾರೆ.
ಸಂಪೂರ್ಣ ವಿಷರಹಿತ ಮತ್ತು ಸಾಧು ಸ್ವಭಾವ: ಈ ಹಾವುಗಳಿಗೆ ವಿಷವಿರುವುದಿಲ್ಲ. ಮನುಷ್ಯರನ್ನು ಕಚ್ಚುವುದೂ ಇಲ್ಲ. ಇವು ಹೆಚ್ಚಾಗಿ ಭೂಮಿಯ ಆಳದಲ್ಲಿ, ತೇವಾಂಶವಿರುವ ಮಣ್ಣಿನಲ್ಲಿ ಹುಳು-ಉಪ್ಪಟೆಗಳನ್ನು ತಿಂದು ಬದುಕುತ್ತವೆ. ಮಣ್ಣಿನ ಫಲವತ್ತತೆ ಕಾಪಾಡಲು ಇವು ರೈತನ ಮಿತ್ರನಿದ್ದಂತೆ. ಇವು ಭೂಮಿಯೊಳಗೇ ಹೆಚ್ಚಾಗಿ ಜೀವಿಸುವುದರಿಂದ ಮನುಷ್ಯರ ಕಣ್ಣಿಗೆ ಬೀಳುವುದು ತೀರ ಅಪರೂಪ. ಭಾರಿ ಮಳೆ ಬಂದಾಗ ಅಥವಾ ಮಣ್ಣು ಸಡಿಲಗೊಂಡಾಗ ಮಾತ್ರ ಇವು ಹೊರಬರುತ್ತವೆ.
ನಮ್ಮ ಪಶ್ಚಿಮ ಘಟ್ಟದಲ್ಲಿ ಇಂತಹ ಅದೆಷ್ಟೋ ವಿಶಿಷ್ಟ ಜೀವಿಗಳಿವೆ. ಮಣ್ಣುಮುಕ್ಕ ಎಂಬ ತಪ್ಪು ಕಲ್ಪನೆಯಿಂದ ಇವುಗಳನ್ನು ಹಿಂಸಿಸುವುದು, ಅಕ್ರಮ ಮಾರಾಟಕ್ಕೆ ಯತ್ನಿಸುವುದು ಅಥವಾ ವಿಷಕಾರಿ ಎಂದು ಭಾವಿಸಿ ಕೊಲ್ಲುವುದು ತಪ್ಪು. ನಿಮ್ಮ ಮನೆ ಸುತ್ತಮುತ್ತ ಇಂತಹ ಅಪರೂಪದ ಹಾವುಗಳು ಕಂಡರೆ ಭಯಪಡದೆ, ತಕ್ಷಣವೇ ಅರಣ್ಯ ಇಲಾಖೆಗೆ ಅಥವಾ ವನ್ಯಜೀವಿ ರಕ್ಷಕರಿಗೆ ಮಾಹಿತಿ ನೀಡಿ.