
ಬೆಂಗಳೂರು/ಮೈಸೂರು (ಸೆ.21): ಮೈಸೂರು ದಸರಾ ಮಹೋತ್ಸವಕ್ಕೆ ಬಂದಿರುವ ಆನೆಗಳ ಪೈಕಿ ಒಂದು ಆನೆ ಲದ್ದಿ ಹಾಕಿದಾಕ್ಷಣ ಒಬ್ಬ ವ್ಯಕ್ತಿ ಆನೆ ಲದ್ದಿಯ ಮೇಲೆ ಬರಿಗಾಲಿನಲ್ಲಿ ನಿಂತುಕೊಂಡು ಅದನ್ನು ತುಳಿದಿದ್ದಾನೆ. ಜೊತೆಗೆ, ಈ ಸಂಬಂಧಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆನೆ ಲದ್ದಿಯನ್ನು ಬರಿಗಾಲಿನಲ್ಲಿ ತುಳಿಯುವುದರಿಂದ ಏನಾದರೂ ಉಪಯೋಗವಿದೆಯೇ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಹಲವು ನೆಟ್ಟಿಗರು ಅನೇಕ ಸಲಹೆಗಳನ್ನು ನೀಡಿದ್ದಾರೆ.
ಪ್ರಕೃತಿ ಚಿಕಿತ್ಸೆ ಮತ್ತು ಜಾನಪದ ವೈದ್ಯಕೀಯ ಪದ್ಧತಿಗಳು ನಮ್ಮ ದೇಶದ ಸಂಸ್ಕೃತಿಯಲ್ಲಿ ಹಾಸುಹೊಕ್ಕಿವೆ. ಇವುಗಳಲ್ಲಿ ಹಲವು ನಂಬಿಕೆಗಳು ಮತ್ತು ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಅಂತಹ ವಿಶಿಷ್ಟ ನಂಬಿಕೆಗಳಲ್ಲಿ ಆನೆ ಲದ್ದಿಯನ್ನು ಬರಿಗಾಲಿನಲ್ಲಿ ತುಳಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಒಂದು. ಈ ವಿಚಿತ್ರ ಆಚರಣೆಯ ಕುರಿತು ಹಲವು ಜನರಲ್ಲಿ ಕುತೂಹಲ ಮತ್ತು ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ಮೈಸೂರಿನ ಯುವಕ ಹಂಚಿಕೊಂಡಿರುವ ವಿಡಿಯೋ ಭಾರೀ ವೈರಲ್ ಆಗಿದ್ದು, ಆನೆ ಲದ್ದಿಯ ಉಪಯೋಗಗಳ ಬಗ್ಗೆ ಭಾರೀ ಚರ್ಚೆ ಮಾಡಿದ್ದಾರೆ.
ಆನೆ ಲದ್ದಿ ಬರಿಗಾಲಲ್ಲಿ ತುಳಿಯೋದರಿಂದ ಆಗುವ ಉಪಯೋಗ ಏನು? ಎಂಬ ಪ್ರಶ್ನೆಗೆ ನೆಟ್ಟಿಗರ ಕಾಮೆಂಟ್‌ಗಳು:
ಆನೆಗಳು ಕಾಡಿನಲ್ಲಿ ಸಿಗುವ ಹಲವು ಬಗೆಯ ಔಷಧೀಯ ಗುಣಗಳಿರುವ ಸೊಪ್ಪುಗಳನ್ನು ಮತ್ತು ಗಿಡಮೂಲಿಕೆಗಳನ್ನು ತಿನ್ನುತ್ತವೆ. ಅವು ಜೀರ್ಣವಾದ ನಂತರ ಹೊರಬರುವ ಲದ್ದಿಯಲ್ಲೂ ಈ ಗಿಡಮೂಲಿಕೆಗಳ ಗುಣಗಳು ಉಳಿದಿರುತ್ತವೆ ಎಂಬುದು ಈ ನಂಬಿಕೆಯ ಮೂಲ. ಹಾಗಾಗಿ, ಈ ಲದ್ದಿಯನ್ನು ತುಳಿಯುವುದು ಅಥವಾ ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಹಲವು ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ತಲೆನೋವು, ಹಲ್ಲುನೋವು, ಸೈನಸ್ ಮತ್ತು ಮೂಗಿನಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳೂ ನಿಯಂತ್ರಣಕ್ಕೆ ಬರುತ್ತವೆ ಎಂದು ಕೆಲವು ಜನ ಹೇಳುತ್ತಾರೆ.
ವೈಜ್ಞಾನಿಕವಾಗಿ ಈ ನಂಬಿಕೆಗಳಿಗೆ ಯಾವುದೇ ಪುರಾವೆಗಳಿಲ್ಲ. ಯಾವುದೇ ವೈದ್ಯಕೀಯ ಅಥವಾ ವೈಜ್ಞಾನಿಕ ಅಧ್ಯಯನಗಳು ಆನೆ ಲದ್ದಿ ತುಳಿಯುವುದರಿಂದ ಮಾನವನ ಆರೋಗ್ಯಕ್ಕೆ ಪ್ರಯೋಜನಗಳಿವೆ ಎಂದು ದೃಢಪಡಿಸಿಲ್ಲ. ಈ ರೀತಿಯ ಆಚರಣೆಗಳನ್ನು ಅನುಸರಿಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ, ಏಕೆಂದರೆ ಪ್ರಾಣಿಗಳ ಲದ್ದಿಯು ಸೋಂಕು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇದು ರೋಗಗಳಿಗೆ ಕಾರಣವಾಗಬಹುದು.