
ಧಾರವಾಡ (ಸೆ.21): ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮತ್ತು ಹಿಂದೂ ಯುವತಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ. ಮುಕಳೆಪ್ಪ ವಿರುದ್ಧದ 'ಲವ್ ಜಿಹಾದ್' ಆರೋಪಗಳನ್ನು ತಳ್ಳಿಹಾಕಿರುವ ಅವರ ಪತ್ನಿ ಗಾಯತ್ರಿ ಜಾಲಿಹಾಳ ಅವರು ಸ್ವತಃ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ತಮ್ಮ ಹೇಳಿಕೆಯಲ್ಲಿ, ಗಾಯತ್ರಿ ಅವರು ತಾವು ಸ್ವಇಚ್ಛೆಯಿಂದಲೇ ಮುಕಳೆಪ್ಪ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾಗಿ ಸ್ಪಷ್ಟಪಡಿಸಿದ್ದಾರೆ. 'ನಾನು ನನ್ನ ಸ್ವಂತ ಬುದ್ಧಿಯಿಂದ, ಸ್ವಂತ ಇಚ್ಛೆಯಿಂದಲೇ ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರನ್ನು ವಿವಾಹವಾಗಿದ್ದೇನೆ. ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಲವ್ ಜಿಹಾದ್' ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ತಾಯಿಯ ಹೇಳಿಕೆ ಸುಳ್ಳು ಎಂದ ಗಾಯತ್ರಿ:
ಈ ಹಿಂದೆ ಗಾಯತ್ರಿ ಅವರ ತಾಯಿ ಮಾಧ್ಯಮಗಳ ಮುಂದೆ ಮಗಳು ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗಾಯತ್ರಿ, 'ನಮ್ಮ ತಾಯಿ ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಯಾರೋ ಬೇರೆಯವರು ಕಲಿಸಿಕೊಟ್ಟಿದ್ದಾರೆ. ಮದುವೆಯಾದ ಬಳಿಕವೂ ನಮ್ಮ ತಾಯಿಯವರು ನಮಗೆ ಬೆಂಬಲ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಅನೇಕ ಸಾಕ್ಷಿ ವಿಡಿಯೋಗಳಿದ್ದು, ಅವುಗಳನ್ನು ನಾನು ನಿಮಗೆಲ್ಲರಿಗೂ ತೋರಿಸುತ್ತೇನೆ. ಆದ್ರೆ, ನಮ್ಮವ್ವ ಈಗ ಇದ್ದಕ್ಕಿದ್ದಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗಾಯತ್ರಿ ಅವರು ತಮ್ಮ ಮತ್ತು ಪತಿ ಮುಕಳೆಪ್ಪ ಅವರ ಜೀವನಕ್ಕೆ ಏನಾದರೂ ಅಪಾಯವಾದರೆ ಕಾನೂನಿನ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಮ್ಮ ತಾಯಿಯವರ ಹೇಳಿಕೆಗಳಿಗೆ ದಯವಿಟ್ಟು ಯಾರು ಬೆಲೆ ಕೊಡಬೇಡಿ. ನಾನು ನನ್ನ ಸಂಪೂರ್ಣ ಪ್ರಜ್ಞೆಯಿಂದಲೇ ಈ ಹೇಳಿಕೆಯನ್ನು ನೀಡುತ್ತಿದ್ದೇನೆ' ಎಂದು ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ. ಈ ವಿಡಿಯೋ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಕರ್ನಾಟಕದ ಜನಪ್ರಿಯ ಯೂಟ್ಯೂಬರ್ ಮುಕುಳೆಪ್ಪ (ಖ್ವಾಜಾ) ಮತ್ತು ಹಿಂದೂ ಯುವತಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ದೊರಕಿದೆ. ಮುಕುಳೆಪ್ಪ ವಿರುದ್ಧ ಯುವತಿಯ ಪೋಷಕರು ಗಂಭೀರ ಆರೋಪಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಮಗಳನ್ನು 'ಲವ್ ಜಿಹಾದ್' ಮೂಲಕ ಮುಕುಳೆಪ್ಪ ಕರೆದುಕೊಂಡು ಹೋಗಿ ಮೋಸದಿಂದ ಮದುವೆಯಾಗಿದ್ದಾರೆ ಎಂದು ಪೋಷಕರು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಗಳು ದೊಡ್ಡ ಮಟ್ಟದ ಯೂಟ್ಯೂಬರ್ ಆಗಿ ಬೆಳೆಯುತ್ತಾಳೆ ಎಂಬ ಆಸೆಯಿಂದ ಮುಕುಳೆಪ್ಪ ಅವರೊಂದಿಗೆ ವಿಡಿಯೋ ಮಾಡಲು ಅನುಮತಿ ನೀಡಿದ್ದು ತಮ್ಮ ಜೀವನದ ದೊಡ್ಡ ತಪ್ಪು ಎಂದು ಪೋಷಕರು ಹೇಳಿಕೊಂಡಿದ್ದಾರೆ. "ಚಿತ್ರೀಕರಣವಿದೆ ಎಂದು ಹೇಳಿ ಮುಕುಳೆಪ್ಪ ಮೂರ್ನಾಲ್ಕು ದಿನಗಳ ಕಾಲ ಟೂರ್‌ಗೆ ಕರೆದುಕೊಂಡು ಹೋಗುತ್ತಿದ್ದ. ಆತ ನಮ್ಮ ಮಗಳ ತಲೆ ಕೆಡಿಸುತ್ತಿದ್ದಾನೆ ಎಂದು ನಮಗೆ ಗೊತ್ತಾಗಲೇ ಇಲ್ಲ. ನಮ್ಮಿಂದ ದೊಡ್ಡ ತಪ್ಪಾಗಿದೆ. ಈ ತಪ್ಪಿಗೆ ಹಿಂದೂ ಸಮಾಜ ನಮಗೆ ಬೇಕಾದ ಶಿಕ್ಷೆ ನೀಡಲಿ" ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.
ಮುಕುಳೆಪ್ಪನ ಮೋಸಕ್ಕೆ ತಮ್ಮ ಮಗಳು ಬಲಿಯಾಗಿದ್ದಾಳೆ ಎಂದು ಆರೋಪಿಸಿರುವ ಪೋಷಕರು, ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಗಾಯತ್ರಿ ಜಾಲಿಹಾಳ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ತಮ್ಮ ಮದುವೆ ಸ್ವಇಚ್ಛೆಯಿಂದ ನಡೆದಿದೆ ಎಂದು ಹೇಳಿದ್ದರು. ಆದರೆ, ಪೋಷಕರ ಈ ಹೊಸ ವಿಡಿಯೋ ಹೇಳಿಕೆ ಪ್ರಕರಣವನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿದೆ. ಯೂಟ್ಯೂಬರ್ ಮದುವೆ ಪ್ರಕರಣವು ಸದ್ಯ ಸಾಮಾಜಿಕ ಮತ್ತು ಕಾನೂನು ವಲಯಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.