
ರಾಂಚಿ: ಸೇತುವೆಯಿಂದ ಟ್ರಕ್ಕೊಂದು ಕೆಳಗೆ ಬಿದ್ದ ಪರಿಣಾಮ ಜೀವ ಉಳಿಸಿಕೊಳ್ಳಲು ಟ್ರಕ್ ಸವಾರ ಟ್ರಕ್‌ನ ಟೈರ್ ಮೇಲೆ ನಿಂತು ಗಂಟೆಗಟ್ಟಲೇ ರಕ್ಷಣೆಗಾಗಿ ಕಾದಂತಹ ಘಟನೆ ನಡೆದಿದೆ. ಕೊನೆಗೂ ಹಲವು ಗಂಟೆಗಳ ಪ್ರಯತ್ನದ ಬಳಿಕ ಆತನನ್ನು ರಕ್ಷಿಸಲಾಗಿದೆ. ಜಾರ್ಖಂಡ್‌ನ ಗಿರಿಧ್‌ನಲ್ಲಿಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ವೈರಲ್ ಆಗಿದೆ.
ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತ ನಡೆದ ಸ್ಥಳದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಕೊಡೆರ್ಮಾ ಗ್ರಾಮದ ನಿವಾಸಿ ಅಖೀಲ್ ನವಾಜ್ ಖಾನ್ ಅವರು ಟ್ರಕ್‌ನಲ್ಲಿ ಪೈಪ್‌ಗಳನ್ನು ತುಂಬಿಕೊಂಡು ಬರುವ ವೇಳೆ ಅಪಘಾತ ಸಂಭವಿಸಿದೆ. ಟ್ರಕ್ ಅವರ ನಿಯಂತ್ರಣ ತಪ್ಪಿ ಸೇತುವೆಯಿಂದ 40 ಅಡಿ ಆಳದ ನದಿಗೆ ಬಿದ್ದಿದೆ.
ಈ ವೇಳೆ ಅದೃಷ್ಟವಶಾತ್ ಚಾಲಕ ಅಖೀಲ್ ನವಾಜ್ ಅವರು ತಮ್ಮ ಚಾಲಕ ಸೀಟಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಚಲಾಯಿಸುತ್ತಿದ್ದ ಟ್ರಕ್ ಬಹುತೇಕ ನೀರಿನಲ್ಲಿ ಮುಳುಗಿದ್ದರೆ, ಅದರ ಒಂದು ಕಡೆ ಟೈರ್ ನೀರಿನಿಂದ ಮೇಲೆ ನಿಂತಿದೆ. ಹೀಗಾಗಿ ಅಖೀಲ್ ನವಾಜ್ ಅವರು ರಕ್ಷಣಾ ತಂಡ ತಮ್ಮನ್ನು ರಕ್ಷಿಸಲು ಬರುವವರೆಗೂ ಗಂಟೆಗಳ ಕಾಲ ಆ ಟೈರ್ ಮೇಲೆ ನಿಂತು ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಹೀಗೆ ಟೈರ್ ಮೇಲೆ ನಿಂತ ಅವರು ಬಳಿಕ ಸಹಾಯಕಾಗಿ ಅನೇಕರನ್ನು ಕೂಗಿ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ನದಿ ದಂಡೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಇವರ ಧ್ವನಿ ಕೇಳಿದೆ. ಆದರೆ ಕತ್ತಲಾಗಿದ್ದರಿಂದ ಆ ವ್ಯಕ್ತಿ ಟಾರ್ಚ್ ಲೈಟ್ ಹಾಕಿದ್ದಾರೆ. ಆತ ಹಾಕಿದ ಟಾರ್ಚ್ ಲೈಟ್‌ನಿಂದಾಗಿ ಖಾನ್ ತಮ್ಮ ಚಾಲಕ ಸೀಟಿನಿಂದ ಹೊರಬಂದು ಟೈರ್ ಮೇಲೆ ನಿಂತಿದ್ದಾರೆ ಎಂದು ವರದಿಯಾಗಿದೆ.
ಇದಾದ ನಂತರ ರಾತ್ರಿ 2 ಗಂಟೆ ವೇಳೆ ಆ ಟಾರ್ಚ್ ಹಾಕಿದ ವ್ಯಕ್ತಿ ಕರೆ ಮಾಡಿ ಹೇಳಿದ್ದಾರೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಘಟನೆ ನಡೆದ ಸುಮಾರು 4 ಗಂಟೆ ಬಳಿಕ ಅವರನ್ನು ಸಮುದ್ರದ ನಡುವಿನಿಂದ ರಕ್ಷಿಸಲಾಗಿದೆ. ಮಳೆಯಿಂದಾಗಿ ಟೈರ್ ಸ್ಲಿಪ್ ಆಗಿ ಘಟನೆ ಸಂಭವಿಸಿದೆ ಎಂದು ಅವರು ವರದಿಗಾರರಿಗೆ ಹೇಳಿದ್ದಾರೆ.
ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ನದಿಯ ಬಲವಾದ ಪ್ರವಾಹದಿಂದಾಗಿ ಅವರನ್ನು ರಕ್ಷಿಸುವುದು ಕಷ್ಟಕರವಾಗಿತ್ತು. ಎರಡು ಗಂಟೆಗಳ ಕಾಲ ಪ್ರಯತ್ನಿಸಿದ ನಂತರ ನಾವು ಜೀವರಕ್ಷಕರನ್ನು ಕರೆಸಿದೆವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.