
ನೀವು ಜಗತ್ತಿನ ಅತ್ಯಂತ ಹಳೆಯ ಜೀವಿಯನ್ನು ನೋಡಿದ್ದೀರಾ? ಇವತ್ತು ನಾವು ಅದನ್ನು ನಿಮಗೆ ತೋರಿಸ್ತೀವಿ ನೋಡಿ. ಆದರೆ ಅದು ಮನುಷ್ಯನಲ್ಲ, ಆಮೆ. ಹೌದು, ಜೊನಾಥನ್ ಎಂಬ ಆಮೆ ವಿಶ್ವದ ಅತ್ಯಂತ ಹಳೆಯ ಜೀವಿ, ಅದರ ವಯಸ್ಸು 193 ವರ್ಷಗಳು. ಯಾವುದೇ ಜನನ ಪ್ರಮಾಣಪತ್ರ ಅಸ್ತಿತ್ವದಲ್ಲಿಲ್ಲದಿದ್ದರೂ, ವೈಜ್ಞಾನಿಕ ದೃಷ್ಟಿಕೋನದಿಂದ, ಆಮೆಯ ಚಿಪ್ಪನ್ನು ನೋಡಿದರೆ ಅದು ಎಷ್ಟು ಹಳೆಯದು ಎಂದು ತಿಳಿಯಬಹುದು. ಜೊನಾಥನ್ 193 ವರ್ಷ ವಯಸ್ಸಿನವನೆಂದು ಹೇಳಲಾಗುತ್ತದೆ ಮತ್ತು 1832 ರ ಸುಮಾರಿಗೆ ಜನಿಸಿದನೆಂದು ನಂಬಲಾಗಿದೆ. ಅಂದರೆ ಇದು ಟೆಲಿಫೋನ್ ಯುಗಕ್ಕೂ ಮೊದಲು ಜನಿಸಿ, ಇದೀಗ ಎಐ ಯುಗದಲ್ಲೂ ಜೀವಿಸುತ್ತಿರುವ ಜೀವಿ.
ಜೊನಾಥನ್ ಬಗ್ಗೆ ಇನ್ನೂ ಕೆಲವು ಆಸಕ್ತಿದಾಯಕ ಸಂಗತಿಗಳು ಇವೆ. ಈ ಆಮೆ ವಿಶೇಷ ಸ್ಥಳದಲ್ಲಿ ವಾಸಿಸುತ್ತದೆ. ಇದನ್ನು ಬ್ರಿಟನ್‌ನ ಸೇಂಟ್ ಹೆಲೆನಾ ಗವರ್ನರ್ ಅವರ ಅಧಿಕೃತ ನಿವಾಸವಾದ ಪ್ಲಾಂಟೇಶನ್ ಹೌಸ್‌ನಲ್ಲಿ ಇರಿಸಲಾಗಿದೆ. ಇತ್ತೀಚೆಗೆ, ಅಂದರೆ ಡಿಸೆಂಬರ್ ತಿಂಗಳಲ್ಲಿ ಜೊನಾಥನ್ ತನ್ನ 193 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಈ ಸಂದರ್ಭದಲ್ಲಿ ಅದಕ್ಕಾಗಿ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಯಿತು ಮತ್ತು ವಿಶೇಷ ಕೇಕ್ ಅನ್ನು ಕತ್ತರಿಸಲಾಯಿತು. ಜೊನಾಥನ್ ವಿಶ್ವದೆಲ್ಲೆಡೆ ಸಹ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಇದರ ಜನಪ್ರಿಯತೆ ಎಷ್ಟು ದೊಡ್ಡದೆಂದರೆ ಅದರ ಚಿತ್ರವನ್ನು ನಾಣ್ಯಗಳ ಮೇಲೂ ಕೆತ್ತಲಾಗಿದೆ.
ಜೊನಾಥನ್‌ಗೆ ಕಣ್ಣಿನ ಪೊರೆ ಇದೆ ಎಂದು ಹೇಳಲಾಗುತ್ತದೆ, ಹಾಗಾಗಿ ಆಮೆ ಕುರುಡಾಗಿದೆಯಂತೆ. ಆದರೆ ಅದರ ಶ್ರವಣವು ತುಂಬಾ ತೀಕ್ಷ್ಣವಾಗಿದೆ ಎಂದು ಹೇಳಲಾಗುತ್ತದೆ. ಜೊನಾಥನ್‌ಗಾಗಿ ವಿಶೇಷ ವೈದ್ಯರನ್ನು ಕೂಡ ನೇಮಿಸಲಾಗಿದೆ. ವಿಶೇಷ ಅಂದ್ರೆ ಜೋನಾಥನ ತನ್ನ ವೈದ್ಯರ ಧ್ವನಿಯನ್ನು ತಕ್ಷಣವೇ ಗುರುತಿಸುತ್ತಾನೆ. ಜೊನಾಥನ್‌ನನ್ನು 1882 ರಲ್ಲಿ 50 ವರ್ಷ ವಯಸ್ಸಿನವನಾಗಿದ್ದಾಗ ಸೇಂಟ್ ಹೆಲೆನಾಗೆ ಕರೆತರಲಾಯಿತು. ಆಮೆಯ ವೈಜ್ಞಾನಿಕ ಹೆಸರು ಅಲ್ಡಬ್ರಾಚೆಲಿಸ್ ಗಿಗಾಂಟಿಯಾ ಹೊಲೊಲಿಸಾ. ಅತ್ಯಂತ ಹಳೆಯ ಆಮೆಯ ಹಿಂದಿನ ದಾಖಲೆಯು 188 ವರ್ಷಗಳ ಕಾಲ ಬದುಕಿದ್ದ ತುಯಿ ಮಲಿಲಾ ಆಮೆಯದ್ದಾಗಿದ್ದು. ಅದು1965 ರಲ್ಲಿ ನಿಧನವಾಗಿತ್ತು
ಸೇಂಟ್ ಹೆಲೆನಾದಲ್ಲಿ ವಾಸಿಸುವ ಜೊನಾಥನ್ ಹೆಸರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಕೂಡ ದಾಖಲಾಗಿದೆ. ಜೋನಾಥನ್ ಜೊತೆ ಮತ್ತೆ ಎರಡು ಇತರ ಆಮೆಗಳನ್ನು ತರಲಾಯಿತು, ಆದರೆ ಜೊನಾಥನ್ ಮಾತ್ರ ಈಗ ಜೀವಂತವಾಗಿ ಉಳಿದಿದ್ದಾನೆ. ಇದು ಭೂಮಿಯ ಮೇಲಿನ ಅತ್ಯಂತ ಹಳೆಯ ಜಾತಿಯ ಆಮೆ ಎಂದು ಹೇಳಲಾಗುತ್ತದೆ. ಇನ್ನೂ ವಿಶೇಷ ಅಂದ್ರೆ ಜೊನಾಥನ್‌ಗೆ ಸ್ನೇಹಿತರು ಕೂಡ ಇದ್ದಾರೆ. ಅವು ಮನುಷ್ಯರಲ್ಲ, ಅವು ಕೂಡ ಆಮೆಗಳು. ಆ ಆಮೆಗಳ ಹೆಸರುಗಳು ಡೇವಿಡ್, ಸ್ಪೀಡಿ, ಎಮ್ಮಾ, ಫ್ರೆಡೆರಿಕಾ ಮತ್ತು ಮಾರ್ಟಿ.