₹200 ವಂಚಿಸಿದ ಆರೋಪಿಯನ್ನು 30 ವರ್ಷಗಳ ನಂತರ ಬಂಧಿಸಿದ ಶಿರಸಿ ಪೊಲೀಸರು!

Published : Jul 01, 2025, 07:56 PM ISTUpdated : Jul 01, 2025, 08:10 PM IST
Sirsi 200 Rupees Fraud Case

ಸಾರಾಂಶ

ಶಿರಸಿಯಲ್ಲಿ 30 ವರ್ಷಗಳ ಹಿಂದೆ ಸರ್ಕಾರಿ ಕೆಲಸ ಕೊಡಿಸುವುದಾಗಿ ₹200 ಪಡೆದು ವಂಚನೆ ಮಾಡಿದ್ದ ಪ್ರಕರಣವನ್ನು ಶಿರಸಿ ಗ್ರಾಮೀಣ ಪೊಲೀಸರು ಬೇಧಿಸಿದ್ದಾರೆ. ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರವಾರ (ಜು.01): ಕಳೆದ ಮೂವತ್ತು ವರ್ಷಗಳ ಹಿಂದೆ ನೌಕರಿ ನೀಡುವುದಾಗಿ ನಂಬಿಸಿ ₹200 ರೂ. ವಂಚನೆ ಮಾಡಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಪೊಲೀಸರು ತೀವ್ರ ಹುಡುಕಾಟದ ಬಳಿಕ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ವಂಚನೆಯ ಮೊತ್ತಕ್ಕಿಂತ, ಪ್ರಕರಣದ ಗಂಭೀರತೆ ಮತ್ತು ಕಾಲಾವಧಿ ಗಮನಸೆಳೆಯುತ್ತಿದೆ.

ಘಟನೆ ಹಿನ್ನಲೆ:

ಉತ್ತರಕನ್ನಡ ಜಿಲ್ಲೆಯ ಶಿರಸಿ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ 30 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಆರೋಪಿ ₹200 ರೂ. ತೆಗೆದುಕೊಂಡಿದ್ದನು. ಆದರೆ, ನೌಕರಿ ನೀಡದೆ ವಂಚಿಸಿದ್ದನ್ನು ಅಂದಿನ ದೂರುದಾರ ಗಂಭೀರವಾಗಿ ತೆಗೆದುಕೊಂಡು ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದನು. ಇದರೊಂದಿಗೆ ಈ ಪ್ರಕರಣ 'ಪತ್ತೆಯಾಗದ ಅರ್ಜಿ'ಯಾಗಿ ಉಳಿದಿತ್ತು.

ಆರೋಪಿ ಪತ್ತೆ ಹಚ್ಚಿದ ಪೊಲೀಸರು:

ಈ ಹಿಂದೆ ಕಣ್ಣು ತಪ್ಪಿಸಿಕೊಂಡಿದ್ದ ಬೈಂದೂರಿನ ಬಿ.ಕೆ. ರಾಮಚಂದ್ರ ರಾವ್ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷ್ ಕುಮಾರ್ ಎಂ. ಹಾಗೂ ಸಿಬ್ಬಂದಿ ಅಶೋಕ್ ರಾಠೋಡ್ ನೇತೃತ್ವದ ತಂಡವು ಬೆಂಗಳೂರು ಬಳೆಪೇಟೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದೆ. ಬಂಧನ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಘವೇಂದ್ರ ಜಿ. ಹಾಗೂ ಮಾರುತಿ ಗೌಡ ಸಹಭಾಗಿಯಾಗಿದ್ದರು. ಬಂಧಿತ ಆರೋಪಿಯನ್ನು ಶಿರಸಿಗೆ ಕರೆದೊಯ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ನೀಡಲಾಗಿದೆ.

₹200ರ ಹಳೆಯ ವಂಚನೆ ಪ್ರಕರಣವೋ, ನಿಷ್ಠೆ ಮತ್ತು ಕಾನೂನು ಪಾಲನೆಯ ವಿಜಯವೋ ಎಂಬಂತೆ 30 ವರ್ಷದ ಬಳಿಕವೂ ಪೊಲೀಸ್ ಇಲಾಖೆ ಆರೋಪಿಯನ್ನು ಪತ್ತೆ ಹಚ್ಚಿರುವುದು ಶ್ಲಾಘನೀಯ. ಇದು ‘ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಸಂದೇಶವನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

PREV
Read more Articles on
click me!

Recommended Stories

ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!