
ಇದೇನೂ ಬಾಡಿ ಶೇಮಿಂಗ್ ಅಲ್ಲ- ಆದರೆ ಇವರ ಮುಖ ನೋಡುವಾಗ ನಮಗೇ ಮೈ ಜುಮ್ಮೆನ್ನುತ್ತದೆ. ವ್ಯಕ್ತಿಯ ಮುಖ ಇಷ್ಟೊಂದು ವಿಲಕ್ಷಣವಾಗಿ ಇರುವುದು ಸಾಧ್ಯವಾ ಅಂತಲೂ ಅನಿಸುತ್ತದೆ. ಆದರೆ ಅವರು ಆತ್ಮವಿಶ್ವಾಸದಿಂದ ಬದುಕಿದ್ದಾರೆ. ಮತ್ತು ಅವರನ್ನು ಒಬ್ಬಳು ಪ್ರೇಮಿಸಿ ಮದುವೆಯಾಗಿದ್ದಾಳೆ. ಈಗ ಈ ವ್ಯಕ್ತಿಯ ಜೀವನದ ಕತೆಯ ಬಗ್ಗೆ ಕುತೂಹಲ ಮೂಡಿತಲ್ಲವೆ? ಬನ್ನಿ, ಇವರ ಬಗ್ಗೆ, ಇವರ ಲವ್ ಸ್ಟೋರಿ ಬಗ್ಗೆ ತಿಳಿಯೋಣ.
ಅಮಿತ್ ಗೋಸ್ ಅಸ್ಸಾಂನ ಸಿಲ್ಚಾರ್ ನಗರದಲ್ಲಿ ಜನಿಸಿದರು. ಅವರು ನಾಲ್ಕು ಸಹೋದರ-ಸಹೋದರಿಯರಲ್ಲಿ ಕಿರಿಯವರು. ಅವರ ತಂದೆ ಆ ಸಮಯದಲ್ಲಿ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಭಾರತಕ್ಕೆ ಮರಳುವ ಯೋಜನೆ ಮಾಡಿಕೊಂಡಿದ್ದರು.
ಆದರೆ ಅಮಿತ್ ಕೆಲವೇ ತಿಂಗಳು ವಯಸ್ಸಿನವರಾಗಿದ್ದಾಗ ಅವರಿಗೆ “ನ್ಯೂರೋಫೈಬ್ರೋಮ್ಯಾಟೋಸಿಸ್” ಎಂಬ ರೋಗ ಇರುವುದಾಗಿ ತಿಳಿಯಿತು. ಈ ರೋಗದಲ್ಲಿ ಚರ್ಮ, ಮೆದುಳು ಮತ್ತು ಮೆದುಳುದಂಡದ ನರಗಳ ಮೇಲೆ ಗಡ್ಡೆಗಳು ಬೆಳೆಯುತ್ತವೆ. ಅವು ಸಾಮಾನ್ಯವಾಗಿ ಕ್ಯಾನ್ಸರ್ ಅಲ್ಲ. ಆದರೆ ನೋವು ಇರುತ್ತದೆ ಮತ್ತು ಮುಖದ ರೂಪ ಬದಲಾಗುವಂತೆ ಮಾಡಬಹುದು. ಈ ರೋಗಕ್ಕೆ ಇಂದಿಗೂ ಪೂರ್ಣ ಚಿಕಿತ್ಸೆ ಇಲ್ಲ.
ಈ ಕಾರಣದಿಂದ ಅವರ ತಂದೆ ಭಾರತಕ್ಕೆ ಬರುವ ಯೋಜನೆಯನ್ನು ಮುಂದೂಡಿದರು. ಸಂಪೂರ್ಣ ಕುಟುಂಬವನ್ನು ಯುಕೆಗೆ ಕರೆದುಕೊಂಡು ಹೋದರು. ಅಮಿತ್ ಲಂಡನ್‌ನಲ್ಲಿ ಬೆಳೆದರು. ಆದರೆ ಶಾಲೆಯಲ್ಲಿ ಅವರಿಗೆ ತುಂಬಾ ಕಿರುಕುಳ ಎದುರಾಯಿತು. “ನನಗೆ ಹೆಚ್ಚು ಸ್ನೇಹಿತರು ಇರಲಿಲ್ಲ. ಮಕ್ಕಳು ನನಗೆ ‘ವಿಚಿತ್ರ ಮುಖದ ಹುಡುಗ’ ಎಂದು ಕರೆದರು. ತುಂಬಾ ಕೆಟ್ಟ ಮಾತುಗಳನ್ನು ಕೇಳಬೇಕಾಯಿತು. ಅದು ನನ್ನ ಮನಸ್ಸನ್ನು ಹಾಳುಮಾಡುತ್ತಿತ್ತು,” ಎಂದು ಅವರು ಹೇಳುತ್ತಾರೆ.
ಆದರೆ ಒಂದು ವಿಷಯ ಅವರ ಬದುಕನ್ನು ಉಳಿಸಿತು - ಅವರಿಗೆ ಕ್ರಿಕೆಟ್ ತುಂಬಾ ಇಷ್ಟ. ಸುಮಾರು 10-11 ವರ್ಷದಾಗಿದ್ದಾಗ ಒಂದು ಪಂದ್ಯದಲ್ಲಿ ಚೆನ್ನಾಗಿ ಆಡಿದರು. “ಆ ದಿನದಿಂದ ನನ್ನ ಗುರುತು ಬದಲಾಗಿತು. ‘ವಿಚಿತ್ರ ಮುಖದ ಹುಡುಗ’ ಅಲ್ಲ, ‘ಚೆನ್ನಾಗಿ ಕ್ರಿಕೆಟ್ ಆಡುವ ಹುಡುಗ’ ಎಂದು ಜನ ನೋಡಲು ಶುರುಮಾಡಿದರು. ಕ್ರಿಕೆಟ್ ನನಗೆ ಆತ್ಮವಿಶ್ವಾಸ ಕೊಟ್ಟಿತು,” ಎಂದು ಅವರು ನೆನಪಿಸುತ್ತಾರೆ.
ಅಮಿತ್ ಪದವಿ ಪಡೆದರು, ಕೆಲಸ ಪಡೆದರು. ನಂತರ ಮದುವೆಯ ಬಗ್ಗೆ ಯೋಚನೆ ಶುರುವಾಯಿತು. ಅವರ ಎಲ್ಲ ಸಹೋದರ-ಸಹೋದರಿಯರೂ ಮದುವೆಯಾಗಿದ್ದರು. “ನಾನು ಸ್ನೇಹಿತರ ಮದುವೆಗಳಿಗೆ ಮಾತ್ರ ಹೋಗುತ್ತಿದ್ದೆ. ನಾನು ಮದುವೆಯಾಗುವುದಿಲ್ಲ ಎಂದು ಒಪ್ಪಿಕೊಂಡಿದ್ದೆ,” ಎಂದು ಅವರು ಹೇಳುತ್ತಾರೆ.
ಆದರೂ ಅವರು ಮದುವೆಯಾಗಲು ತುಂಬಾ ಪ್ರಯತ್ನಿಸಿದರು. ಬ್ಲೈಂಡ್ ಡೇಟ್‌ಗಳಿಂದ ಹಿಡಿದು ಶಾದಿ ಡಾಟ್ ಕಾಂ ವರೆಗೆ ಪ್ರಯತ್ನಿಸಿದರು. “ಆದರೆ ನನ್ನ ಮುಖವೇ ಅಡ್ಡಿಯಾಗುತ್ತಿತ್ತು,” ಎಂದು ಅವರು ಬೇಸರದಿಂದ ಹೇಳುತ್ತಾರೆ.
ಒಮ್ಮೆ ಸ್ನೇಹಿತನ ಮದುವೆಯಲ್ಲಿ ಒಬ್ಬ ಆಂಟಿ ಇವರಲ್ಲಿ ಸಹಾನುಭೂತಿ ತೋರಿಸಿ ಮಾತನಾಡಿದರು. “ನಿನಗೆ ಮಗಳು ಇದ್ದರೆ, ನಿನ್ನಂತವನಿಗೆ ಅವಳನ್ನು ಮದುವೆ ಮಾಡುತ್ತಿಯಾ?” ಎಂದು ಕೇಳಿದರು. ಆ ಮಾತು ಅಮಿತ್ ಅವರಿಗೆ ತುಂಬಾ ನೋವು ತಂದಿತು. “ಆ ದಿನ ನಾನು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದೆ,” ಎಂದು ಅವರು ಹೇಳುತ್ತಾರೆ.
ಇದರ ಮಧ್ಯೆ ಅವರ ತಂದೆ ನಿಧನರಾದರು. “ಅವರು ನನ್ನನ್ನು ಬೆಂಬಲಿಸಿದ್ದರು. ನನ್ನನ್ನು ಇತರ ಮಕ್ಕಳಂತೆ ಸಾಮಾನ್ಯವಾಗಿ ನೋಡಿದವರು ಅವರು ಮಾತ್ರ. ಓದಲು ಒತ್ತಾಯಿಸಿದರು, ಸ್ವತಂತ್ರವಾಗಲು ಕಲಿಸಿದರು. ಅವರ ಕಣ್ಣಲ್ಲಿ ನನ್ನ ಬಗ್ಗೆ ಕಾಳಜಿ ಕಾಣಿಸುತ್ತಿತ್ತು,” ಎಂದು ಅವರು ಭಾವುಕರಾಗಿ ಹೇಳುತ್ತಾರೆ.
ಅಮಿತ್‌ಗೆ ಭಾರತದ ಜೊತೆ ಗಾಢ ನಂಟು ಇತ್ತು. 2013ರಿಂದ ಅವರು ಪ್ರತಿ ವರ್ಷ ಭಾರತಕ್ಕೆ ಬರುತ್ತಿದ್ದರು. ಒಂದು ಬಾರಿ ಭಾರತದಲ್ಲಿದ್ದಾಗ ಸ್ನೇಹಿತನಿಗೆ “ನಾನು ಇನ್ನು ಮದುವೆಯಾಗುವುದಿಲ್ಲ” ಎಂದು ಹೇಳಿದರು. ಲಂಡನ್‌ಗೆ ಮರಳಿದ ನಂತರ ಆ ಸ್ನೇಹಿತ ಕರೆ ಮಾಡಿ, “ಒಬ್ಬ ಹುಡುಗಿ ನಿನ್ನೊಂದಿಗೆ ಮಾತನಾಡಲು ಆಸಕ್ತಿ ಹೊಂದಿದ್ದಾಳೆ” ಎಂದ. ಅಮಿತ್ "ಮೊದಲೇ ನನ್ನ ಫೋಟೋ ತೋರಿಸು. ಜನ ನನ್ನ ಮುಖ ನೋಡಿದ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೆ,” ಎಂದು ಹೇಳಿದರು.
ಆ ಹುಡುಗಿ ಭಾರತದಲ್ಲಿದ್ದ ಮೇಕಪ್ ಕಲಾವಿದೆ. ಲಂಡನ್‌ಗೆ ಬರುವ ಆಸೆ ಇರಲಿಲ್ಲ. ಆದರೂ ಸ್ನೇಹಿತ ಒತ್ತಾಯಿಸಿದ. ಅಮಿತ್ ಸಂದೇಶ ಕಳುಹಿಸಿದರು. ಮೊದಲ ದಿನ ಉತ್ತರ ಬರಲಿಲ್ಲ. ಮರುದಿನ ಉತ್ತರ ಬಂತು. ಆಕೆ ಹೆಸರು ಪಿಯಾಲಿ. ಇಬ್ಬರೂ ಸಂದೇಶಗಳಲ್ಲಿ ಮಾತನಾಡಲು ಶುರುಮಾಡಿದರು. ನಂತರ ಫೋನ್‌ನಲ್ಲಿ ಮಾತನಾಡಲು ಆರಂಭಿಸಿದರು.
ಒಂದು ದಿನ ಪಿಯಾಲಿ ವಿಡಿಯೋ ಕಾಲ್ ಮಾಡಲು ಕೇಳಿದರು. ಅಮಿತ್ ತುಂಬಾ ನರ್ವಸ್ ಆಗಿದ್ದರು. ಕಾರಿನಲ್ಲಿ ಕುಳಿತು, ತಮ್ಮ ಮುಖದ ಒಂದು ಭಾಗವನ್ನು ಮುಚ್ಚಿಕೊಂಡು ಮಾತನಾಡಿದರು. ಕೆಲವು ದಿನಗಳ ನಂತರ ಪಿಯಾಲಿ ಹೇಳಿದರು: “ನಾವು ಗಂಭೀರವಾಗಿ ಮುಂದುವರಿಯಬೇಕಾದರೆ, ನಿನ್ನ ಪೂರ್ಣ ಮುಖವನ್ನು ತೋರಿಸಬೇಕು.” ಅಮಿತ್ ತಮ್ಮ ಪೂರ್ಣ ಮುಖ ತೋರಿಸಿದರು.
“ಅವಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಂಪೂರ್ಣವಾಗಿ ಒಪ್ಪಿಕೊಂಡಳು,” ಎನ್ನುತ್ತಾರೆ ಅಮಿತ್. ಆದರೆ ಸಮಸ್ಯೆಗಳು ಅಲ್ಲಿ ಮುಗಿಯಲಿಲ್ಲ. ಅಮಿತ್ ಅವರ ಕುಟುಂಬ ಸಂತೋಷಪಟ್ಟರೂ, ಪಿಯಾಲಿಯ ತಂದೆ ಒಪ್ಪಲಿಲ್ಲ. “ಮುಖದ ಸಮಸ್ಯೆ ಇರುವವನಿಗೆ ನನ್ನ ಮಗಳನ್ನು ಕೊಡಲ್ಲ” ಎಂದರು. ಕೆಲವು ಸಮಯ ಪಿಯಾಲಿ ಮಾತನಾಡುವುದನ್ನೇ ನಿಲ್ಲಿಸಿದರು. ನಾಲ್ಕು ತಿಂಗಳ ಪರಿಚಯಕ್ಕಾಗಿ ಕುಟುಂಬದ ವಿರುದ್ಧ ಹೋಗಲು ಇಷ್ಟಪಡಲಿಲ್ಲ. ನಂತರ ಮತ್ತೆ ಮಾತನಾಡಲು ಶುರುಮಾಡಿದರು.
ಅಮಿತ್ ಅವರ ಸಹೋದರಿ, ಪಿಯಾಲಿಯ ಮನೆ ಸಮೀಪ ವಾಸವಾಗಿದ್ದವರು, ಕೊನೆಗೆ ಅವರ ಕುಟುಂಬವನ್ನು ಒಪ್ಪಿಸಿದರು. ಇಬ್ಬರೂ ಸರಳ ಸಮಾರಂಭದಲ್ಲಿ ಮದುವೆಯಾದರು. ಪಿಯಾಲಿ ಲಂಡನ್‌ಗೆ ಬಂದು ಅಮಿತ್ ಜೊತೆ ಬದುಕು ಆರಂಭಿಸಿದರು.
“ಪಿಯಾಲಿ ಬಂದ ನಂತರ ನನ್ನ ಜೀವನ ಬದಲಾಗಿದೆ,” ಎಂದು ಅಮಿತ್ ಹೇಳುತ್ತಾರೆ. ಮೊದಲು ಅವರು ತಮ್ಮ ಮುಖದ ಬಗ್ಗೆ ತುಂಬಾ ಜಿಗುಪ್ಸೆ ಹೊಂದಿದ್ದರು. ಆದರೆ ಪಿಯಾಲಿ ಅವರ ಕಥೆಯನ್ನು ಜಗತ್ತಿಗೆ ಹೇಳು ಎಂದು ಪ್ರೇರೇಪಿಸಿದರು. ಅವಳ ಸಲಹೆಯಿಂದ ಅಮಿತ್ ಮೊದಲ TikTok ವಿಡಿಯೋ ಮಾಡಿದರು. ಅದು ವೈರಲ್ ಆಯಿತು. ನಂತರ ಆತ್ಮವಿಶ್ವಾಸದ ಕುರಿತು ಹಲವು ವಿಡಿಯೋಗಳನ್ನು ಹಾಕಲು ಶುರುಮಾಡಿದರು.
ಒಮ್ಮೆ ಅಮೆರಿಕಾಕ್ಕೆ ಹೋಗಿ 300-400 ಜನರ ಮುಂದೆ ಭಾಷಣ ಮಾಡಲು ಆಹ್ವಾನ ಬಂತು. ನಂತರ ಶಾಲೆ, ಕಾಲೇಜುಗಳಲ್ಲಿ ಉಪನ್ಯಾಸ ನೀಡಲು ಆರಂಭಿಸಿದರು. ನಂತರ National Health Service (NHS) ಅಧಿಕಾರಿಯೊಬ್ಬರು ಅವರನ್ನು inclusivity ಕುರಿತು ಕೆಲಸ ಮಾಡಲು ಆಹ್ವಾನಿಸಿದರು. ಪರೀಕ್ಷೆ ಪಾಸಾಗಿ ಆ ಕೆಲಸವನ್ನೂ ಪಡೆದರು.
ಅಮಿತ್ ಜೀವನ ನಮಗೆ ಒಂದು ದೊಡ್ಡ ಪಾಠ. ಏನೆಂದರೆ, ಯಶಸ್ಸಿನ ಮೊದಲ ಹೆಜ್ಜೆ ಆತ್ಮಸ್ವೀಕಾರ. ನಿಮ್ಮನ್ನು ನೀವು ಒಪ್ಪಿ ಅಪ್ಪಿಕೊಳ್ಳದಿದ್ದರೆ, ಜಗತ್ತೂ ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ.