
ಗದಗ: ಪ್ರಾಣಿಗಳಲ್ಲಿ ನಾಯಿ ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ಪ್ರಾಣಿ ಎಂಬುದು ನಮಗೆಲ್ಲ ಗೊತ್ತು. ಆದರೆ ಇಲ್ಲೊಂದು ಬೀದಿ ನಾಯಿ ಕೇವಲ ನಿಷ್ಠೆಯನ್ನಷ್ಟೇ ಅಲ್ಲ, ಮನುಷ್ಯರೇ ಬೆರಗಾಗುವಂತಹ ವಿಶಿಷ್ಟ ಸಂಸ್ಕಾರ ಹಾಗೂ ವಿಚಿತ್ರ ವರ್ತನೆಯನ್ನು ಪ್ರದರ್ಶಿಸುವ ಮೂಲಕ ಇಡೀ ಜಿಲ್ಲೆಯ ಗಮನ ಸೆಳೆದಿದೆ. ಯಾಕೆಂದರೆ ಈ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಮೊದಲಿಗೆ ಅವರ ಮನೆ ಬಾಗಿಲಿಗೆ ಹೋಗೋ ನಾಯಿ. ಬಳಿಕ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ಸ್ಮಶಾನದವರೆಗೆ ನಡೆದು ಬರುತ್ತಿದ್ದು ಈಗ ಭಾರಿ ಸುದ್ದಿಯಾಗಿದೆ. ಈ ಅಚ್ಚರಿಯ ಘಟನೆ ವರದಿಯಾಗಿರುವುದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಐತಿಹಾಸಿಕ ಡಂಬಳ ಗ್ರಾಮದಲ್ಲಿ.
ಸಾಮಾನ್ಯವಾಗಿ ಪ್ರಾಣಿಗಳಿಗೆ ಸಾವು-ನೋವುಗಳ ಮುನ್ಸೂಚನೆ ಬೇಗ ಸಿಗುತ್ತದೆ ಎನ್ನಲಾಗುತ್ತದೆ. ಅದಕ್ಕೆ ಪೂರಕವೆಂಬಂತೆ ಡಂಬಳ ಗ್ರಾಮದ ಈ ಮೂಕಪ್ರಾಣಿ ನಡೆದುಕೊಳ್ಳುತ್ತಿದೆ. ಗ್ರಾಮದಲ್ಲಿ ಯಾವುದೇ ಧರ್ಮ, ಜಾತಿಯ ವ್ಯಕ್ತಿ ಮೃತಪಟ್ಟರೂ ಸಾಕು, ಈ ಶ್ವಾನವು ಯಾರೂ ಕರೆಯದಿದ್ದರೂ ತಾನಾಗಿಯೇ ಆ ಸೂತಕದ ಮನೆಯ ಮುಂದೆ ಬಂದು ಹಾಜರಾಗುತ್ತದೆ. ಮೃತರ ಶವಯಾತ್ರೆ ಆರಂಭವಾಗುತ್ತಿದ್ದಂತೆ, ಗ್ರಾಮಸ್ಥರ ಗುಂಪಿನೊಂದಿಗೆ ಈ ಶ್ವಾನವೂ ಕೂಡ ಹೆಜ್ಜೆ ಹಾಕುತ್ತಾ ಸಾಗುತ್ತದೆ. ಇಡೀ ಅಂತಿಮ ಯಾತ್ರೆಯುದ್ದಕ್ಕೂ ಅತ್ಯಂತ ಗಂಭೀರವಾಗಿ ಜನರ ಜೊತೆಗೇ ನಡೆದುಕೊಂಡು ಹೋಗುವುದು ಇದರ ವೈಶಿಷ್ಟ್ಯ.
ಮೃತದೇಹಕ್ಕೆ ಅಂತಿಮ ವಿಧಿವಿಧಾನಗಳು ಪ್ರಕ್ರಿಯೆಗಳು ಮುಗಿಯುವವರೆಗೂ ಈ ಶ್ವಾನವು ಸ್ಮಶಾನದಲ್ಲೇ ಶಾಂತವಾಗಿ ಕುಳಿತುಕೊಳ್ಳುತ್ತದೆ. ಎಲ್ಲ ಪ್ರಕ್ರಿಯೆಗಳು ಮುಗಿದು ಗ್ರಾಮಸ್ಥರು ತಮ್ಮ ಮನೆಗಳತ್ತ ಮುಖ ಮಾಡಿದಾಗ, ಅವರ ಜೊತೆಯಲ್ಲೇ ಮರಳಿ ಗ್ರಾಮಕ್ಕೆ ವಾಪಸ್ ಆಗುತ್ತದೆ.
ಗುರುವಾರವಾದ ಇಂದು ಕೂಡ ಗ್ರಾಮದ ಹಿರಿಯರಾದ ಪಾರಮ್ಮ ಎಂಬುವವರು ವೃದ್ಧಾಪ್ಯದಿಂದ ನಿಧನರಾಗಿದ್ದರು.ಪಾರಮ್ಮ ಅವರ ಅಂತಿಮ ಯಾತ್ರೆಯಲ್ಲೂ ಈ ಶ್ವಾನವು ಎಂದಿನಂತೆ ಭಾಗಿಯಾಗಿ, ಸ್ಮಶಾನದವರೆಗೆ ಬಂದು ತನ್ನ ಮೂಕ ನಮನ ಸಲ್ಲಿಸಿದೆ.
ಗ್ರಾಮಸ್ಥರ ಪ್ರಕಾರ, ಈ ನಾಯಿ ಯಾವುದೋ ಒಂದು ದಿನ ಅಥವಾ ಕೇವಲ ಪರಿಚಿತರ ಸಾವಿನ ಮನೆಗೆ ಮಾತ್ರ ಹೀಗೆ ಮಾಡುತ್ತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಸಾವು ಸಂಭವಿಸಿದರೂ ಇದೇ ರೀತಿ ವರ್ತಿಸುತ್ತಿದೆ. ತನಗೆ ನಿತ್ಯ ಅನ್ನ ಹಾಕುವವರಷ್ಟೇ ಅಲ್ಲದೆ, ಇಡೀ ಗ್ರಾಮದ ಪ್ರತಿಯೊಬ್ಬರೊಂದಿಗೂ ಇದು ಆತ್ಮೀಯ ಭಾವನೆ ಹೊಂದಿರುವಂತೆ ತೋರುತ್ತಿದೆ. ಮನುಷ್ಯರೇ ಸಂಬಂಧಗಳನ್ನು ಮರೆಯುತ್ತಿರುವ ಈ ಕಲಿಯುಗದಲ್ಲಿ, ಮನುಷ್ಯನ ಸಾವಿಗೆ ಮರುಗುವ ಈ ಶ್ವಾನದ ಸಂಸ್ಕಾರ ನಿಜಕ್ಕೂ ಶ್ಲಾಘನೀಯ. ಪ್ರಾಣಿ ಪ್ರಪಂಚದ ಈ ಅಚ್ಚರಿಯ ನಡವಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.