
ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಎ.ಜಿ. ನೂರಾನಿ ಸ್ಮಾರಕ ಉಪನ್ಯಾಸದಲ್ಲಿ 'ದಿ ಆರ್‌ಎಸ್‌ಎಸ್; ಎ ಮೆನೇಸ್ ಟು ಇಂಡಿಯಾ' ಪುಸ್ತಕವನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ದೇಶದಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೇಳಿಕೆಯನ್ನು ಪುನರುಚ್ಚರಿಸಿದ್ದ ಅನ್ಸಾರಿ, "ಹಿಂದೂ ಬಲಪಂಥೀಯ ಕೋಮುವಾದವು ಭಾರತಕ್ಕೆ ಕಮ್ಯುನಿಸಂಗಿಂತ ದೊಡ್ಡ ಬೆದರಿಕೆ" ಎಂದು ಬಣ್ಣಿಸಿದ್ದರು. ಈ ಹೇಳಿಕೆಯು ನೆಹರೂ ಅವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳ ಮೇಲಿನ ಹಳೆಯ ಚರ್ಚೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಈ ಚರ್ಚೆಗಳ ಬೆನ್ನಲ್ಲೇ, 1959 ರಲ್ಲಿ ವಾಸ್ತುಶಿಲ್ಪದ ಕುರಿತು ನೆಹರೂ ನೀಡಿದ್ದ ಹೇಳಿಕೆಯೊಂದು ಮತ್ತೆ ಬೆಳಕಿಗೆ ಬಂದಿದೆ. ದಕ್ಷಿಣ ಭಾರತದ ಬೃಹತ್ ದೇವಾಲಯಗಳು ಮತ್ತು ಆಗ್ರಾದ ತಾಜ್ ಮಹಲ್ ಅನ್ನು ಹೋಲಿಸಿ ಅವರು ನೀಡಿದ್ದ ಹೇಳಿಕೆ ನೆಹರೂ ಅವರ ವೈಯಕ್ತಿಕ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ.
ಮಾರ್ಚ್ 17, 1959 ರಂದು ದೆಹಲಿಯ ಅಖಿಲ ಭಾರತ ಲಲಿತಕಲೆ ಮತ್ತು ಕರಕುಶಲ ಸಮಾಜದಲ್ಲಿ ನಡೆದ ವಾಸ್ತುಶಿಲ್ಪ ವಿಚಾರ ಸಂಕಿರಣದಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಮಾತನಾಡಿದ್ದರು. ಅಂದಿನ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಹುಮಾಯೂನ್ ಕಬೀರ್ ಅವರ ಪ್ರಸ್ತಾಪಕ್ಕೆ ಸ್ಪಂದಿಸುತ್ತಾ ನೆಹರೂ ಅವರು ದಕ್ಷಿಣ ಭಾರತದ ದೇವಾಲಯಗಳು ಹಾಗೂ ತಾಜ್ ಮಹಲ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
"ದಕ್ಷಿಣದ ಮಹಾನ್ ದೇವಾಲಯಗಳು ತುಂಬಾ ಸುಂದರವಾಗಿವೆ. ಆದಾಗ್ಯೂ, ಕೆಲವು ದೇವಾಲಯಗಳು ಅವುಗಳ ಸೌಂದರ್ಯದ ಹೊರತಾಗಿಯೂ ನನ್ನನ್ನು ಹಿಮ್ಮೆಟ್ಟಿಸುತ್ತವೆ. ನಾನು ಅವುಗಳನ್ನು ಸಹಿಸಲಾರೆ, ನನಗೆ ಏಕೆ ತಿಳಿದಿಲ್ಲ... ಆದರೆ ಅವು ದಬ್ಬಾಳಿಕೆಯನ್ನುಂಟುಮಾಡುತ್ತವೆ, ನನ್ನ ಚೈತನ್ಯವನ್ನು ನಿಗ್ರಹಿಸುತ್ತವೆ. ಕತ್ತಲೆಯಾದ ಕಾರಿಡಾರ್‌ಗಳು ನನ್ನನ್ನು ಮೇಲೇರಲು ಬಿಡುವುದಿಲ್ಲ, ಕೆಳಗೆ ಇಡುತ್ತವೆ. ನನಗೆ ಸೂರ್ಯ ಮತ್ತು ಗಾಳಿ ಇಷ್ಟ, ಕತ್ತಲೆಯ ಕಾರಿಡಾರ್‌ಗಳಲ್ಲ..."
ಅದೇ ಭಾಷಣದಲ್ಲಿ ತಾಜ್ ಮಹಲ್ ಅನ್ನು ಮುಕ್ತಕಂಠದಿಂದ ಹೊಗಳಿದ ನೆಹರೂ, "ತಾಜ್ ಮಹಲ್ ಪ್ರಪಂಚದ ಅತ್ಯಂತ ಸುಂದರವಾದ ವಸ್ತುಗಳಲ್ಲಿ ಒಂದಾಗಿದೆ. ಅದನ್ನು ನೋಡುವುದು ಕಣ್ಣು ಮತ್ತು ಆತ್ಮ ಎರಡಕ್ಕೂ ಆನಂದ ನೀಡುತ್ತದೆ" ಎಂದು ಬಣ್ಣಿಸಿದ್ದರು.
ದೇವಾಲಯಗಳು ಹಿಂದೂ ಸಮಾಜದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆತ್ಮವನ್ನು ಪ್ರತಿನಿಧಿಸುತ್ತವೆ, ಆದರೆ ತಾಜ್ ಮಹಲ್ ಒಂದು ಸಮಾಧಿಯಾಗಿದೆ. ದಕ್ಷಿಣದ ತಂಜಾವೂರಿನ ಬೃಹದೀಶ್ವರ ದೇವಸ್ಥಾನದಂತಹ ಮಹಾನ್ ವಾಸ್ತುಶಿಲ್ಪದ ಸೌಂದರ್ಯವನ್ನು ಒಪ್ಪಿಕೊಳ್ಳುತ್ತಲೇ, ಅದರ ಮುಚ್ಚಿದ ಹಾಗೂ ಬೆಳಕಿಲ್ಲದ ಕಾರಿಡಾರ್‌ಗಳ ಬಗ್ಗೆ ನೆಹರೂ ವ್ಯಕ್ತಪಡಿಸಿದ ಅಸ್ವಸ್ಥತೆ ಕೇವಲ ವಾಸ್ತುಶಿಲ್ಪದ ಅಭಿರುಚಿಯೇ ಅಥವಾ ಹಿಂದೂ ಧರ್ಮದ ಬಗ್ಗೆ ಅವರಿಗಿದ್ದ ವೈಯಕ್ತಿಕ ದೃಷ್ಟಿಕೋನವೇ ಎಂಬ ಪ್ರಶ್ನೆ ಮೂಡುತ್ತದೆ.
1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನ; "ನಾನು ಹಿಂದೂವಾಗಿ ಹುಟ್ಟಿದ್ದೆ, ಆದರೆ ನನ್ನನ್ನು ನಾನು ಹಿಂದೂ ಎಂದು ಕರೆದುಕೊಳ್ಳುವುದರಲ್ಲಿ ಎಷ್ಟರ ಮಟ್ಟಿಗೆ ಸಮರ್ಥನೆ ಇದೆಯೋ ತಿಳಿಯದು" ಎಂದು ಹೇಳಿದ್ದರು.
1953 & 1954; ಹಿಂದೂ ಸಮಾಜದ ಜಾತಿ ಪದ್ಧತಿ, ಆಚರಣೆಗಳು ಹಾಗೂ ಆರ್‌ಎಸ್‌ಎಸ್, ಹಿಂದೂ ಮಹಾಸಭಾಗಳನ್ನು ತೀವ್ರವಾಗಿ ಟೀಕಿಸಿದ್ದರು.
1955; ಭಾರತದ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ನೀಡಬೇಕೆಂದು ಪ್ರತಿಪಾದಿಸಿದ್ದರು.
ಹಮೀದ್ ಅನ್ಸಾರಿ ಅವರ ಇತ್ತೀಚಿನ ಹೇಳಿಕೆ ಕೋಮುವಾದ ಮತ್ತು ರಾಜಕೀಯಕ್ಕೆ ಸಂಬಂಧಿಸಿದೆ. ಆದರೆ 1959 ರ ನೆಹರೂ ಭಾಷಣ ವಾಸ್ತುಶಿಲ್ಪದ ಮೇಲಿನ ವೈಯಕ್ತಿಕ ಇಷ್ಟ-ಅನಿಷ್ಟಗಳಿಗೆ ಸಂಬಂಧಿಸಿದ್ದು. ಈ ಎರಡೂ ಸಂದರ್ಭಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವುದು ಸರಿಯೇ ಎಂಬ ಪ್ರಶ್ನೆಯೂ ಇದೆ. ಆದಾಗ್ಯೂ, ನೆಹರೂ ಅವರು ಹಿಂದೂ ಸಂಪ್ರದಾಯದ ಶ್ರೀಮಂತಿಕೆಗಿಂತ ಹೆಚ್ಚಾಗಿ ಅದರ ಲೋಪದೋಷಗಳನ್ನೇ ಎತ್ತಿ ತೋರಿಸುತ್ತಿದ್ದರೇ ಎಂಬ ಚರ್ಚೆಗೆ ಈ ಐತಿಹಾಸಿಕ ದಾಖಲೆಗಳು ಹೊಸ ತಿರುವು ನೀಡುತ್ತಿರುವುದಂತೂ ನಿಜ.