20 ವರ್ಷ ವೈದ್ಯೆ; ಈಗ ಬನ್ ಅಂಗಡಿ ಮಾಲಕಿ! ‘ಡಾಕ್ಟರ್ ಆಗಿದ್ದಾಗಿಗಿಂತ ಈಗ ಹೆಚ್ಚು ಖುಷಿಯಾಗಿದ್ದೇನೆ ಎಂದಿದ್ದೇಕೆ?’

Published : Sep 23, 2026, 07:38 AM IST
She Was a Doctor for 20 Years, Now Runs a Bun Shop and Says She’s Happier

ಸಾರಾಂಶ

20 ವರ್ಷಗಳ ಕಾಲ ವೈದ್ಯೆಯಾಗಿ ಕೆಲಸ ಮಾಡಿದ್ದ ಚೀನಾದ ಡಾ. ಡಾಂಗ್ ಮಿನ್, ವೈದ್ಯಕೀಯ ವೃತ್ತಿಯ ಒತ್ತಡದಿಂದ ಹೊರಬಂದು ಸ್ಟೀಮ್ ಬನ್ ಅಂಗಡಿ ಆರಂಭಿಸಿದ್ದಾರೆ. 2023ರಲ್ಲಿ ಆರಂಭವಾದ ಈ ಹೊಸ ಪಯಣ ಈಗ ಯಶಸ್ವಿಯಾಗಿದ್ದು, ವುಹಾನ್‌ನಲ್ಲಿ ಎರಡನೇ ಅಂಗಡಿಯನ್ನೂ ತೆರೆದಿದ್ದಾರೆ. ದಿನಕ್ಕೆ 10 ಗಂಟೆ ಕೆಲಸ ಮಾಡಿದರೂ ವೈದ್ಯೆಯಾಗಿದ್ದಕ್ಕಿಂತ ಈಗ ಹೆಚ್ಚು ಸಂತೋಷ ಮತ್ತು ನೆಮ್ಮದಿ ಇದೆ ಎನ್ನುತ್ತಾರೆ.

20 ವರ್ಷ ವೈದ್ಯೆ; ಈಗ ಬನ್ ಅಂಗಡಿ ಮಾಲೀಕೆ! ‘ಡಾಕ್ಟರ್ ಆಗಿದ್ದಾಗಿಗಿಂತ ಈಗ ಹೆಚ್ಚು ಖುಷಿಯಾಗಿದ್ದೇನೆ’

ಎರಡು ದಶಕಗಳ ವೈದ್ಯಕೀಯ ವೃತ್ತಿಗೆ ವಿದಾಯ

ವೈದ್ಯರಾಗಬೇಕು ಎಂಬುದು ಅನೇಕರ ಕನಸು. ಆದರೆ ಸುಮಾರು 20 ವರ್ಷಗಳ ಕಾಲ ವೈದ್ಯೆಯಾಗಿ ಕೆಲಸ ಮಾಡಿದ ಚೀನಾದ ಡಾ. ಡಾಂಗ್ ಮಿನ್, ತಮ್ಮ ವೃತ್ತಿಜೀವನಕ್ಕೆ ಅನಿರೀಕ್ಷಿತ ತಿರುವು ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರವನ್ನು ತೊರೆದು ಇದೀಗ ಅವರು ಸ್ಟೀಮ್ ಮಾಡಿದ ಬನ್‌ಗಳನ್ನು ಮಾರಾಟ ಮಾಡುವ ಅಂಗಡಿ ನಡೆಸುತ್ತಿದ್ದಾರೆ.

48 ವರ್ಷದ ಡಾಂಗ್ ಮಿನ್ ಅವರು ವುಹಾನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದರು. 1999ರಲ್ಲಿ ಶೆನ್ಜೆನ್‌ನಲ್ಲಿ ಸ್ತ್ರೀರೋಗ ತಜ್ಞೆಯಾಗಿ ವೃತ್ತಿ ಆರಂಭಿಸಿದ್ದರು. ನಂತರ ಹುಬೈಗೆ ಮರಳಿ ಕುಟುಂಬದ ಖಾಸಗಿ ಕ್ಲಿನಿಕ್ ನಿರ್ವಹಣೆಯಲ್ಲೂ ತೊಡಗಿಸಿಕೊಂಡಿದ್ದರು.

ವೈದ್ಯೆಯಾಗಿದ್ದಾಗ ಕೆಲಸಕ್ಕಿಂತ ಒತ್ತಡವೇ ಹೆಚ್ಚು!

ಡಾಂಗ್ ಮಿನ್ ಅವರ ವೃತ್ತಿ ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸೀಮಿತವಾಗಿರಲಿಲ್ಲ. ಆಸ್ಪತ್ರೆಯ ಆಡಳಿತ, ವಿವಿಧ ಸರ್ಕಾರಿ ಇಲಾಖೆಗಳ ಪರಿಶೀಲನೆ, ದಾಖಲೆಗಳು ಹಾಗೂ ವೈದ್ಯಕೀಯ ವಿವಾದಗಳನ್ನು ನಿಭಾಯಿಸುವ ಜವಾಬ್ದಾರಿಯೂ ಅವರ ಮೇಲಿತ್ತು.

ಆಸ್ಪತ್ರೆಯ ಕಾನೂನು ಪ್ರತಿನಿಧಿಯಾಗಿದ್ದ ಕಾರಣ, ಯಾವುದೇ ವಿವಾದ ಉಂಟಾದಾಗ ಅದರ ಜವಾಬ್ದಾರಿಯೂ ತಮ್ಮ ಮೇಲೆಯೇ ಬರುತ್ತಿತ್ತು ಎಂದು ಅವರು ಹೇಳಿದ್ದಾರೆ. ಈ ನಿರಂತರ ಒತ್ತಡ ಕ್ರಮೇಣ ಮಾನಸಿಕವಾಗಿ ಸಾಕಷ್ಟು ಕಾಡತೊಡಗಿತ್ತು.

2023ರಲ್ಲಿ ಬದಲಾದ ಜೀವನದ ದಾರಿ

2023ರಲ್ಲಿ ಸ್ನೇಹಿತರ ಕುಟುಂಬ ನಡೆಸುತ್ತಿದ್ದ ಬನ್ ಅಂಗಡಿಯಲ್ಲಿ ಡಾಂಗ್ ಮಿನ್ ಹೂಡಿಕೆ ಮಾಡಿದ್ದರು. ಕೆಲವೇ ದಿನಗಳಲ್ಲಿ ಅಂಗಡಿಯ ಅಡುಗೆ ಮಾಡುವ ಸಿಬ್ಬಂದಿ ಕೆಲಸ ಬಿಟ್ಟರು. ಆಗ ತಾತ್ಕಾಲಿಕವಾಗಿ ಡಾಂಗ್ ಅವರೇ ಬನ್ ತಯಾರಿಸುವುದನ್ನು ಕಲಿಯಲು ಮುಂದಾದರು.

ಆದರೆ ತಾತ್ಕಾಲಿಕವಾಗಿ ಆರಂಭಿಸಿದ್ದ ಕೆಲಸವೇ ಅವರಿಗೆ ಹೊಸ ಆಸಕ್ತಿಯಾಗಿ ಬದಲಾಯಿತು. ಬನ್ ತಯಾರಿಸುವ ಕೆಲಸವನ್ನು ಅವರು ಇಷ್ಟಪಡಲು ಆರಂಭಿಸಿದರು. ಕೊನೆಗೆ ವೈದ್ಯಕೀಯ ವೃತ್ತಿಯನ್ನೇ ಸಂಪೂರ್ಣವಾಗಿ ತೊರೆದು ಆಹಾರ ಉದ್ಯಮಕ್ಕೆ ಕಾಲಿಡಲು ನಿರ್ಧರಿಸಿದರು.

ಕುಟುಂಬದ ವಿರೋಧದ ನಡುವೆಯೂ ಹೊಸ ಉದ್ಯಮ

ವೈದ್ಯ ವೃತ್ತಿ ಗೌರವ ಮತ್ತು ಸ್ಥಿರತೆಯನ್ನು ಹೊಂದಿರುವುದರಿಂದ ಕುಟುಂಬದವರು ಆರಂಭದಲ್ಲಿ ಅವರ ನಿರ್ಧಾರವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಡಾಂಗ್ ಮಿನ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಇತರರು ಏನು ನಿರೀಕ್ಷಿಸುತ್ತಾರೆ ಎಂಬುದಕ್ಕಿಂತ, ತಮಗೆ ನಿಜವಾಗಿಯೂ ಸಂತೋಷ ನೀಡುವ ಕೆಲಸವನ್ನು ಮಾಡಬೇಕು ಎಂದು ಅವರು ನಿರ್ಧರಿಸಿದರು. ಇದೀಗ ಅವರ ಮೊದಲ ಬನ್ ಅಂಗಡಿ ಯಶಸ್ವಿಯಾಗಿದ್ದು, ವುಹಾನ್‌ನ ಹುಬೈ ಪ್ರಾಂತ್ಯದಲ್ಲಿ ಎರಡನೇ ಅಂಗಡಿಯನ್ನೂ ಆರಂಭಿಸಿದ್ದಾರೆ.

ದಿನಕ್ಕೆ 10 ಗಂಟೆ ಕೆಲಸ, ಆದರೂ ನೆಮ್ಮದಿ!

ವೈದ್ಯೆಯಾಗಿದ್ದಾಗ ಎದುರಿಸುತ್ತಿದ್ದ ಒತ್ತಡಕ್ಕೆ ಹೋಲಿಸಿದರೆ, ಈಗ ದಿನಕ್ಕೆ 10 ಗಂಟೆಗೂ ಹೆಚ್ಚು ಅಂಗಡಿಯಲ್ಲಿ ಕೆಲಸ ಮಾಡಿದರೂ ತಾನು ಹೆಚ್ಚು ನೆಮ್ಮದಿಯಾಗಿದ್ದೇನೆ ಎಂದು ಡಾಂಗ್ ಮಿನ್ ಹೇಳಿದ್ದಾರೆ.

ವೈದ್ಯಕೀಯ ವೃತ್ತಿಯಿಂದ ಆಹಾರ ಉದ್ಯಮಕ್ಕೆ ಬದಲಾದ ಅವರ ಕಥೆ, ಹೆಚ್ಚಿನ ಗೌರವ ಅಥವಾ ಸ್ಥಿರ ವೃತ್ತಿಗಿಂತ ವೈಯಕ್ತಿಕ ಸಂತೋಷ ಮತ್ತು ನೆಮ್ಮದಿಗೂ ಜೀವನದಲ್ಲಿ ಮಹತ್ವವಿದೆ ಎಂಬ ಚರ್ಚೆಗೆ ಕಾರಣವಾಗಿದೆ.

PREV
Read more Articles on
click me!

Recommended Stories

Viral: ಕ್ಲಾಸ್‌ ನಡೆಯುತ್ತಿತ್ತು, ಹೊರಗಿನಿಂದ ಸಾಗಿದ ಡಿಜೆ ಮೆರವಣಿಗೆ, ಕೆಲವೇ ಹೊತ್ತಿನಲ್ಲಿ 7 ವರ್ಷದ ವಿದ್ಯಾರ್ಥಿನಿ ಸಾವು!
Viral: '2031 ಸಿಎಂ' ನಂಬರ್ ಪ್ಲೇಟ್ ವೈರಲ್! ಇಲ್ಲಿದೆ ಫ್ಯಾನ್ಸಿ ನಂಬರ್ ಬುಕಿಂಗ್ ಮಾಡುವ ವಿಧಾನ!