
ಸುಮಾರು ಆರೇಳು ವರ್ಷದ ಒಬ್ಬ ಪುಟ್ಟ ಬಾಲಕ ಸುಂದರವಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಿದ್ದ ವಯಸ್ಕ ಹುಡುಗಿಗೆ (ಸುಮಾರು 20 ವರ್ಷ) 'ಓ ಲಾಲ್ ಪರಿ, ಕೋನ್ ಹೈ ತು, ಚಲೇಗಿ ಕ್ಯಾ? (ಯಾರು ನೀನು? ನೀನು ನನ್ನೊಂದಿಗೆ ಬರುತ್ತೀಯಾ?) ಎಂದು ಕೂಗಿದನು. ಅಂದರೆ, ಏ..., ಕೆಂಪು ದೇವತೇ.., ಯಾರು ನೀನು? ನಂಜೊತೆಗೆ ಬರ್ತೀಯಾ? ಎಂದು ಕೇಳಿದ್ದಾನೆ. ಇನ್ನೂ ಸರಿಯಾಗಿ ಚಡ್ಡಿ ಹಾಕಿಕೊಳ್ಳಲು ಬಾರದ ವಯಸ್ಸಿನ ಚಿಕ್ಕ ಬಾಲಕ ಹೀಗೆ ಹೇಳಿದ್ದನ್ನು ಕೇಳಿ ತಬ್ಬಿಬ್ಬಾದ ಯುವತಿ ಮುಂದೆ ಏನು ಮಾಡಿದ್ದಾಳೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಸಾಮಾನ್ಯವಾಗಿ ಕೆಲವು ಪರಿಚಯಸ್ಥ ಹುಡುಗರು ತಮಗೆ ಗೊತ್ತೊರುವವರಿಗೆ ರೇಗಿಸಲು ಕೆಲವೊಂದು ಪದಗಳನ್ನು ಬಳಸುತ್ತಾರೆ. ಇನ್ನು ಕಾಲೇಜು ದಿನಗಳಲ್ಲಿ ಹುಡುಗಿಯರನ್ನು ರ್ಯಾಗಿಂಗ್ ಮಾಡುವುದನ್ನೂ ನೋಡಿರುತ್ತೇವೆ. ಆದರೆ, ಇಲ್ಲಿ ಇನ್ನೂ ಸರಿಯಾಗಿ ಚಡ್ಡಿಯನ್ನು ಗಟ್ಟಿಯಾಗಿ ಹಾಕಿಕೊಳ್ಳಲು ಬಾರದ 6 ರಿಂದ 7 ವರ್ಷದ ಬಾಲಕ ಒಬ್ಬ ವಯಸ್ಕ ಯುವತಿಗೆ ಹೀಗೆ ರೇಗಿಸಿದ್ದಾನೆ ಎಂದರೆ ನಂಬಲಾಗುತ್ತಿಲ್ಲ. ಅಷ್ಟಕ್ಕೂ ಈ ಘಟನೆ ನಡೆದಾಗ ಅಲ್ಲಿ ಸೆಕ್ಯೂರಿಟಿ ಸಿಬ್ಬಂದಿಯೂ ಇದ್ದು, ಈ ದೃಶ್ಯವನ್ನು ನೋಡಿ ನಕ್ಕಿದ್ದಾರೆ. ಅಷ್ಟಕ್ಕೂ 'ಓ ಲಾಲ್ ಪರಿ' ಎಂಬುದು ಹಿಂದಿ ಭಾಷಿಕ ಪದವಾಗಿದ್ದು, ಹಲವು ಸಂದರ್ಭಗಳಲ್ಲಿ ಇದನ್ನು ಬಳಸುತ್ತಾರೆ. ಕೆಂಪು ವೈನ್, ಓ ಕೆಂಪು ದೇವತೆ, ಕೆಂಪು ಸುಂದರಿ ಹಾಗೂ ಜನಪ್ರಿಯ ಮಾದಕ ವಸ್ತುಗಳಿಗೆ ಈ ಪದವನ್ನು ಬಳಸುತ್ತಾರೆ.
ಈ ಬಗ್ಗೆ ಯುವತಿ ಹೇಳಿದಂತೆ, ಆಕೆ ಬಿಳಿ ಬಣ್ಣದ ಉದ್ದನೆಯ ಸ್ಕರ್ಟ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದಳು. ಈ ಯುವತಿ ನೋಡಿದಾಕ್ಷಣ ಬಾಲಕ 'ಓ ಲಾಲ್ ಪರಿ' ಎಂದು ಕಾಮೆಂಟ್ ಮಾಡಿದ್ದಾನೆ. ಈ ಪುಟ್ಟ ಬಾಲಕನ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ಸುಮ್ಮನಾಗಿದ್ದಾಳೆ. ಇದನ್ನು ನೋಡಿ, ಸೆಕ್ಯೂರಿಟಿ ಗಾರ್ಡ್ ನಕ್ಕಾಗ ಯುವತಿಗೆ ಮತ್ತಷ್ಟು ಕೋಪ ಬಂದಿದೆ. ಇದಾದ ನಂತರ ಯುವತಿ ಬಾಲಕನ ಬಳಿ ಬಂದಾಗ 'ಕೋನ್ ಹೈ ತು, ಚಲೇಗಿ ಕ್ಯಾ? (ಯಾರು ನೀನು? ನನ್ನೊಂದಿಗೆ ಬರುತ್ತೀಯಾ?) ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಬಾಲಕನ ಬಳಿ ಹೋಗಿ ತರಾಟೆ ತೆಗೆದುಕೊಂಡು ಕಿವಿ ಹಿಂಡಿದ್ದಾಳೆ. ಆಗ ಸ್ಥಳಕ್ಕೆ ಬಂದ ಸೆಕ್ಯುರಿಟಿ ಗಾರ್ಡ್ ಬಾಲಕನಿಗೆ ಕ್ಷಮೆ ಕೇಳುವಂತೆ ಹೇಳಿದ್ದಾನೆ. ಆಗ ಬಾಲಕ 'ಕ್ಷಮಿಸಿ' ಎಂದು ಹೇಳಿ, ಅಲ್ಲಿಂದ ಓಡಿಹೋದನು.
ಈ ಬಗ್ಗೆ ಯುವತಿ ತನಗಾದ ಅನುಭವವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನನ್ನದೇ ಅಪಾರ್ಟ್‌ಮೆಂಟ್‌ನಲ್ಲಿ ನಾನು ನಡೆದುಕೊಂಡು ಹೋಗುತ್ತಿದ್ದಾಗ, 6 ರಿಂದ 7 ವರ್ಷದ ಬಾಲಕನೊಬ್ಬ ನನ್ನನ್ನು ಓ ಲಾಲ್ ಪರಿ, ಚಲೇಗಿ ಕ್ಯಾ? ಎಂದು ಕರೆದನು. ಬೀದಿಗಳಲ್ಲಿ ಪೊರ್ಕಿಗಳು ಮಹಿಳೆಯರಿಗೆ ಕಿರುಕುಳ ನೀಡಲು ಬಳಸುವ ಪದವನ್ನು ಬಾಲಕ ಬಳಸಿದ್ದಾನೆ. ಆಗ ಸುತ್ತಲಿನ ಎಲ್ಲರೂ ನಕ್ಕಾಗ ನನಗೆ ತಮಾಷೆಯಾಗಿ ಕಾಣಲಿಲ್ಲ. ಆ ಮಗು ಅಂತಹ ಪದಗಳನ್ನು ಹೇಳುವುದಕ್ಕೂ ಮೊದಲು ಅವನು ಆ ಪದಗಳನ್ನು ಕೇಳಿರಬೇಕು ಅಥವಾ ನೋಡಿರಬೇಕು. ಈಗ ತಾನೂ ಅನುಕರಣೆ ಮಾಡುತ್ತಿದ್ದಾನೆ. ಈಗಲೇ ಸರಿಪಡಿಸದಿದ್ದರೆ, ಈಗ ತಮಾಷೆಗೆ ಮಾಡಿದ ಪದಬಳಕೆ ಕಿರುಕುಳವಾಗಿ ಪರಿಣಮಿಸುತ್ತದೆ ಎಂದು ಯುವತಿ ಕಿರಣ್ ಗ್ರೆವಾಲ್ ಇನ್‌ಸ್ಟಾಗ್ರಾಂ ಖಾಯೆತಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.