
ಕೊಚ್ಚಿ (ಆ.27) ತಂತ್ರಜ್ಞಾನ ಮೂಲಕ ಅದರಲ್ಲೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ (ಎಐ) ಮೂಲಕ ಹಲವು ಸ್ಟಾರ್ಟ್ ಅಪ್ ಉದ್ಯಮಗಳು ನಡೆಯುತ್ತಿದೆ. ಉದ್ಯಮ ಮಾರ್ಕೆಟಿಂಗ್, ಡಿಸ್ಟ್ರಿಬ್ಯೂಶನ್ ಸೇರಿದಂತೆ ಎಲ್ಲಾ ಹಂತದಲ್ಲೂ ಎಐ ಬಳಕೆ ಮಾಡಲಾಗುತ್ತಿದೆ. ಹೀಗೆ ಎಐ ತಂತ್ರಜ್ಞಾನದಲ್ಲಿ ಪಳಗಿರುವ ಭಾರತದ 16ರ ಪೋರ ರಾಲ್ ಜಾನ್ ಅಜು ವಿಶ್ವದಲ್ಲೇ ಗಮನ ಸೆಳೆದಿದ್ದಾನೆ. ಈತ ಆರಂಭಿಸಿದ ಎಐ ಸ್ಟಾರ್ಟ್ಆಪ್ ಉದ್ಯಮ ಇದೀಗ ಭರ್ಜರಿ ಲಾಭ ಪಡೆಯುತ್ತಿದೆ. ವಿಶೇಷ ಅಂದರೆ ಈ 16ರ ಪೋರ ತನ್ನ ತಂದೆಗೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ನೀಡುತ್ತಿದ್ದಾನೆ.
ಕೇರಳದ ಕೊಚ್ಚಿ ಮೂಲದ ಪಿಯುಸಿ ವಿದ್ಯಾರ್ಥಿ ರಾಲ್ ಜಾನ್ ಅಜು, ಭಾರತದ ವಂಡರ್ ಎಐ ಕಿಡ್ ಎಂದೇ ಜನಪ್ರಿಯನಾಗಿದ್ದಾನೆ. ಕಾಮರ್ಸ್ ವಿದ್ಯಾರ್ಥಿಯಾಗಿರುವ ಅಜು ಎಐ ತಂತ್ರಜ್ಞಾನದಲ್ಲಿ ಪಳಗಿದ್ದಾನೆ. ಈತ ಎಐ ಬಳಸಿಕೊಂಡು ಸ್ಟಾರ್ಟ್ಅಪ್ ಉದ್ಯಮ ಆರಂಭಿಸಿದ್ದಾನೆ. ಈತನ ಸ್ಟಾರ್ಟ್ಅಪ್‌ನಲ್ಲಿ 15 ಜನ ಕೆಲಸ ಮಾಡುತ್ತಿದ್ದಾರೆ. ವಿಶೇಷ ಅಂದರೆ ಇದೇ ಬಾಲಕ ಅಜು ತಂದೆ ಕೂಡ ಕೆಲಸ ಮಾಡುತ್ತಿದ್ದಾರೆ.
ಶಾಲೆ, ಕಾಲೇಜು ಮಟ್ಟದಲ್ಲಿ ಪೋಷಕರು ಮಕ್ಕಳಿಗೆ ಪಾಕೆಟ್ ಮನಿ ನೀಡುತ್ತಾರೆ. ಇಲ್ಲಿ ಅಜು ವಯಸ್ಸು 16. ಜೊತೆಗೆ ಪಿಯುಸಿ ವಿದ್ಯಾರ್ಥಿ. ಈತ ತಂದೆಯಿಂದ ಪಾಕೆಟ್ ಮನಿ ಪಡೆದುಕೊಳ್ಳುವ ಬದಲು , ಈತನ ಕಂಪನಿಯಲ್ಲೇ ತಂದೆ ನೌಕರರಾಗಿದ್ದಾರೆ. ಪ್ರತಿ ತಿಂಗಳು ತಂದೆಗೆ ವೇತನ ನೀಡುತ್ತಿದ್ದಾನೆ. ಪ್ರತಿ ತಿಂಗಳು ತಂದೆಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿದ್ದಾನೆ.
9ನೇ ವಯಸ್ಸಿನಲ್ಲಿ ಅಜು ತನ್ನ ಟೆಕ್ ಜ್ಞಾನ ಬಳಸಿಕೊಂಡಿದ್ದಾನೆ. 9ನೇ ವಯಸ್ಸಿಗೆ ಎಐನಲ್ಲಿ ಪರಿಣಿತನಾಗಿದ್ದ. ಬಳಿಕ ಎಐ ಸ್ಟಾರ್ಟ್ಅಪ್ ಕಂಪನಿ ಆರಂಭಿಸಿದ್ದ. ಇದೀಗ ವಿಶ್ವಾದ್ಯಂತ 5 ಲಕ್ಷ ವಿದ್ಯಾರ್ಥಿಗಳಿಗೆ ಈ ಬಾಲಕನ ಕಂಪನಿ ತರಬೇತಿ ನೀಡಿದೆ. ಶಾಲೆಯಲ್ಲಿರುವಾಗಲೇ ಮೀಬಾಟ್ ಅನ್ನೋ ರೋಬೋಟ್ ತಯಾರಿಸಿ ಎಲ್ಲರ ಗಮನಸೆಳೆದಿದ್ದ. ತಂದೆಯಿಂದ ಹಲವು ಮಾರ್ಕೆಟಿಂಗ್ ಸೇರಿದಂತೆ ಅಡೋಬ್ ಟೂಲ್‌ಗಳನ್ನು ಕಲಿತುಕೊಂಡು ಕಂಪನಿ ಆರಂಭಿಸಿದೆ. ಇದೀಗ ಕಂಪನಿ ಯಶಸ್ವಾಗಿ ಮುನ್ನಡೆಯುತ್ತಿದೆ ಎಂದಿದ್ದಾನೆ.
ಈ ಬಾಲಕ ಈಗಾಗಲೇ 15ಕ್ಕೂ ಹೆಚ್ಚು ಎಐ ಟೂಲ್ ಅಬಿವೃದ್ಧಿಪಡಿಸಿದ್ದಾನೆ. RESQ AI, MeBot, ZapGap, Investo AI ಸೇರಿದಂತೆ ಹಲವು ಟೂಲ್‌ಗಳು ಈಗಾಗಲೇ ಜನಪ್ರಿಯವಾಗಿದೆ. ಇದೀಗ ಕಂಪನಿ ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದಾನೆ.