Viral Video: 5ರೂ ಪಾರ್ಲೆ-ಜಿ ಬಿಸ್ಕೆಟ್, ಯುದ್ಧಪೀಡಿತ ಗಾಜಾದಲ್ಲಿ ₹2342!, ಸಕ್ಕರೆಗೆ ₹5000ರೂ!

Kannadaprabha News   | Kannada Prabha
Published : Jun 08, 2025, 04:28 AM IST
Gaza Father Rs 2300 Parle G Act of Love for Daughter s Smile Goes Viral rav

ಸಾರಾಂಶ

ಯುದ್ಧಗ್ರಸ್ತ ಗಾಜಾಪಟ್ಟಿಯಲ್ಲಿ ಆಹಾರದ ಬೆಲೆಗಳು ಗಗನಕ್ಕೇರಿವೆ. ₹100 ಮೌಲ್ಯದ ಪಾರ್ಲೆಜಿ ಬಿಸ್ಕತ್ತು ಪ್ಯಾಕ್ ₹2342ಕ್ಕೆ ಮಾರಾಟವಾಗುತ್ತಿದೆ. ಸಕ್ಕರೆ, ಎಣ್ಣೆ, ಉಪ್ಪು ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ.

ಗಾಜಾಪಟ್ಟಿ (ಜೂ.8): ಇಸ್ರೇಲ್‌ ದಾಳಿಯಿಂದ ನಲುಗಿರುವ ಯುದ್ಧಗ್ರಸ್ತ ಗಾಜಾಪಟ್ಟಿಯಲ್ಲಿ ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ. ಜನ ಇರುವ ದುಡ್ಡನ್ನೆಲ್ಲಾ ಹೊಟ್ಟೆ ತುಂಬಿಸಿಕೊಳ್ಳಲು ಸುರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಗಾಜಾದಲ್ಲೂ ಭಾರತದ ಪಾರ್ಲೆಜಿ ಸಿಗುತ್ತಿದ್ದು, 100 ರು.ಗೆ ಸಿಗುವ ಪಾರ್ಲೆಜಿ ಪ್ಯಾಕ್‌ನ ಒಂದು ಬಂಡಲ್‌ ದರ 2342 ರು, ಆಗಿದೆ.

ದಿನಬಳಕೆಯ ವಸ್ತುಗಳಾದ ಸಕ್ಕರೆಯ ಬೆಲೆ ಕೆ.ಜಿ.ಗೆ 5000 ರು. ಸಮೀಪಿಸಿರೆ, ಎಣ್ಣೆಯ ದರ 4000 ರು. ದಾಟಿದೆ. ಅಡುಗೆಗೆ ಅತ್ಯಗತ್ಯವಾದ ಉಪ್ಪಿಗೆ 491 ರು., ಬೇಳೆ-ಕಾಳುಗಳಿಗೆ 850 ರು. ಆಗಿದೆ. 1 ಕಪ್‌ ಕಾಫಿಗೆ 4,423 ರು. ತೆರಬೇಕಾಗಿದೆ. 1 ಪೆಟ್ಟಿಗೆ ಮೇಕೆ ಮಾಂಸದ ಬೆಲೆ 4,914 ರು. ಆಗಿದೆ. ಉಳಿದಂತೆ ಟೊಮೆಟೋ, ಆಲೂಗಡ್ಡೆ, ಈರುಳ್ಳಿ, ಬದನೆಕಾಯಿ, ಬೆಂಡೆಕಾಯಿ ಸೇರಿದಂತೆ ತರಕಾರಿಗೆ ಕೆ.ಜಿ.ಗೆ 1000 ರು.ಗಿಂತಲೂ ಅಧಿಕ ಪಾವತಿಸಬೇಕಾಗಿ ಬಂದಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ, ವ್ಯಕ್ತಿಯೊಬ್ಬ ತನ್ನ ಮಗಳಿಗೆ ಇಷ್ಟವೆಂದು, 100 ರು. ಬೆಲೆಯ ಪಾರ್ಲೆಜಿ ಬಿಸ್ಕತ್ತಿನ ಪ್ಯಾಕ್‌ಗಳಿರುವ ಒಂದು ಬಂಡಲ್‌ ಅನ್ನು 2342 ರು. ಕೊಟ್ಟು ಖರೀದಿಸಬೇಕಾಗಿದೆ. ಇದು ಅಲ್ಲಿನ ಜನರ ಶೋಚನೀಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ. 

 

 

ಪಾರ್ಲೆಜಿ ದರ 2342 ರು!:

‘ಬಹುಕಾಲದ ಕಾಯುವಿಕೆಯ ಬಳಿಕ ನನ್ನ ಮಗಳು ರವಿಫ್‌ಗಾಗಿ ಅವಳಿಷ್ಟದ ಪಾರ್ಲೆಜಿ ಬಿಸ್ಕತ್ತುಗಳನ್ನು ತಂದೆ. 100 ರು. ಮೂಲ ಬೆಲೆಯುಳ್ಳ ಪಾರ್ಲೆ ದೊಡ್ಡ ಪ್ಯಾಕ್‌ ಬೆಲೆ ಪ್ಯಾಲೆಸ್ತೀನ್‌ನಲ್ಲಿ 2342 ರು. ಆಗಿದೆ. ಆದರೂ ಅವಳಿಗೆ ಕೊಡಿಸದೆ ಇರಲಾಗಲಿಲ್ಲ’ ಎಂದು ಮೊಹಮ್ಮದ್‌ ಜವಾದ್‌ ಎಂಬಾತ ತಮ್ಮ ಮಗಳು ಬಿಸ್ಕತ್ತು ತಿನ್ನುವ ವಿಡಿಯೋವನ್ನೂ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನು ಕಂಡು ಭಾರತೀಯರೊಬ್ಬರು ಹರ್ಷಿತರಾಗಿದ್ದು, ‘ಆ ಮಗು ಭಾರತದ ನೆಚ್ಚಿನ ಬಿಸ್ಕತ್‌ ತಿನ್ನುತ್ತಿದೆ. ಯುದ್ಧದ ವಿಷಯದಲ್ಲಿ ನಾವು ತಟಸ್ಥರಾಗಿದ್ದೇವೆ. ಆದರೂ ಪ್ಯಾಲೆಸ್ತೀನ್‌ಗೆ ಇನ್ನಷ್ಟು ಪಾರ್ಲೆಜಿ ಕಳಿಸಬಹುದೇ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಟ್ಯಾಗ್‌ ಮಾಡಿ ಕಮೆಂಟ್‌ ಮಾಡಿದ್ದಾರೆ.ಈ ಸ್ಥಿತಿಗೆ ತಮ್ಮ ಮೇಲೆ ನಿರಂತರ ಆಕ್ರಮಣ ನಡೆಸುತ್ತಿರುವ ಇಸ್ರೇಲ್‌ ಕಾರಣ ಎಂದು ಗಾಜಾದ ಜನ ದೂಷಿಸಿದರೆ, ಇಸ್ರೇಲ್‌ ಮಾತ್ರ ಹಮಾಸ್‌ ಉಗ್ರರತ್ತ ಬೊಟ್ಟು ಮಾಡಿ, ‘ಗಾಜಾಗೆ ನೆರವು ಕಳಿಸಲಾದ ಟ್ರಕ್‌ಗಳನ್ನು ಅವರು ಲೂಟಿ ಮಾಡುತ್ತಿದ್ದಾರೆ’ ಎಂದು ಆರೋಪಿಸುತ್ತಿದೆ

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್