ಅಡೆತಡೆ, ದ್ರೋಹ ಮೆಟ್ಟಿ ನಿಂತು ಅಮೆರಿಕನ್ ಪೌರತ್ವ ಪಡೆದ ಕನ್ನಡಿಗ: ಟೆಕ್ ಉದ್ಯಮಿ ಸೈಮನ್ ಶೆಟ್ಟಿ ಸ್ಪೂರ್ತಿದಾಯಕ ಕಥೆ

Published : Aug 15, 2026, 02:42 PM IST
Saiman Shetty

ಸಾರಾಂಶ

ಕರ್ನಾಟಕದ ಟೆಕ್ ಉದ್ಯಮಿ ಸೈಮನ್ ಶೆಟ್ಟಿ ಅವರು ಸಾಲ, ವೀಸಾ ಸಮಸ್ಯೆಗಳು ಮತ್ತು ವೈಯಕ್ತಿಕ ದ್ರೋಹದಂತಹ ಅನೇಕ ಅಡೆತಡೆಗಳನ್ನು ದಾಟಿ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ತಮ್ಮ ಕಠಿಣ ಹೋರಾಟದ ಕಥೆಯನ್ನು ಹಂಚಿಕೊಂಡ ಅವರು, ಸಂಕಷ್ಟದಲ್ಲಿರುವ ಇತರ ವಲಸಿಗರಿಗೆ ಸ್ಫೂರ್ತಿ ತುಂಬಿ, ಅವರ ಪರವಾಗಿ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.

ಬೆಂಗಳೂರು: ವರ್ಷಗಳ ಕಾಲ ವ್ಯವಸ್ಥಿತ ವಲಸೆ ಅಡೆತಡೆಗಳು, ಸಾಲದ ಹೊರೆ ಹಾಗೂ ಆತ್ಮೀಯರೆನ್ನಿಸಿಕೊಂಡವರಿಂದಲೇ ಎದುರಾದ ವೈಯಕ್ತಿಕ ದ್ರೋಹಗಳನ್ನು ಮೆಟ್ಟಿ ನಿಂತ ಕರ್ನಾಟಕದ ಟೆಕ್ ಉದ್ಯಮಿಯೊಬ್ಬರು ಕೊನೆಗೂ ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯ ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಅಮೆರಿಕಕ್ಕೆ ಕಾಲಿಟ್ಟ ಸೈಮನ್ ಶೆಟ್ಟಿ, ಶಿಕ್ಷಣಕ್ಕಾಗಿ ಮಾಡಿದ ಭಾರಿ ಪ್ರಮಾಣದ ಸಾಲ, ಉದ್ಯೋಗ ನಿರಾಕರಣೆಯ ಕಹಿ ಅನುಭವಗಳು, ಎಚ್-1ಬಿ (H1B) ವೀಸಾ ಲಾಟರಿ ಸೋಲುಗಳು ಮತ್ತು ಪರಿಚಿತರೇ ಫೆಡರಲ್ ವಲಸೆ ಅಧಿಕಾರಿಗಳಿಗೆ ನೀಡಿದ ದುರುದ್ದೇಶಪೂರಿತ ದೂರುಗಳನ್ನು ಎದುರಿಸಿ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಈ ಸುದೀರ್ಘ ಹಾಗೂ ಕಠಿಣ ಪಯಣವನ್ನು ಸ್ಮರಿಸಿಕೊಂಡಿರುವ ಅವರು, ಸಂಕೀರ್ಣ ವೀಸಾ ವ್ಯವಸ್ಥೆಯಲ್ಲಿ ಹೆಣಗಾಡುತ್ತಿರುವ ಸಹ-ವಲಸಿಗರ ಪರವಾಗಿ ಸದಾ ಧ್ವನಿಯೆತ್ತುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

"ಕರ್ನಾಟಕದ ಸಣ್ಣ ಹಳ್ಳಿಯಿಂದ ಅರಿಜೋನಾದ ಬಿಸಿ ಮರುಭೂಮಿಯವರೆಗೆ"

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಮೆರಿಕನ್ ಪೌರತ್ವ ಪಡೆದ ಸಂಭ್ರಮವನ್ನು ಹಂಚಿಕೊಂಡ ಸೈಮನ್ ಶೆಟ್ಟಿ, ನನ್ನ ಜೀವನದುದ್ದಕ್ಕೂ ಅನುಭವಿಸಿದ್ದ USCIS (ಯುನೈಟೆಡ್ ಸ್ಟೇಟ್ಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್) ಜೊತೆಗಿನ ಅಲೆದಾಟ ಅಧಿಕೃತವಾಗಿ ಮುಗಿದಿದೆ. ಇಂದಿನಿಂದ ನಾನು ಅಮೆರಿಕನ್ ಪೌರ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಅವರು "ನನ್ನ ಈ ಸುದೀರ್ಘ ಪಯಣ ಪ್ರಾರಂಭವಾಗಿದ್ದು ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ. ಗೂಗಲ್ ಮ್ಯಾಪ್‌ನಲ್ಲೂ ಸಿಗದಂತಹ ಕುಗ್ರಾಮದಿಂದ, ಕೈಯಲ್ಲಿ ಹಣವಿಲ್ಲದೆ, ಕೇವಲ ಒನ್‌ವೇ ಟಿಕೆಟ್‌ ಹಿಡಿದು ಅಮೆರಿಕದ ಅರಿಜೋನಾದ ಉರಿಯುವ ಮರುಭೂಮಿಗೆ ಬಂದು ಇಳಿದಿದ್ದೆ. ಹೊಸ ದೇಶ, ಹೊಸ ಭಾಷೆ, ಎಲ್ಲವೂ ಸಂಪೂರ್ಣ ಹೊಸದಾಗಿತ್ತು. ನಮ್ಮ ಇಡೀ ಕುಟುಂಬದಲ್ಲೇ ಪ್ರಪಂಚದ ಈ ಭಾಗಕ್ಕೆ ಕಾಲಿಟ್ಟ ಮೊದಲ ವ್ಯಕ್ತಿ ನಾನು. ಜತೆಗೆ ಇರಲು ಸ್ನೇಹಿತರಿರಲಿಲ್ಲ, ಬೆಂಬಲಕ್ಕೆ ಸುರಕ್ಷತಾ ಜಾಲವಿರಲಿಲ್ಲ, ಯಾವುದೇ 'ಪ್ಲಾನ್ ಬಿ' ಕೂಡ ಇರಲಿಲ್ಲ."

ಪ್ರತಿಯೊಂದು ತಿರುವಿನಲ್ಲೂ ಪರೀಕ್ಷೆ ಒಡ್ಡಿದ ಅಮೆರಿಕ

ಅಮೆರಿಕದ ದಿನಗಳು ತನಗೆ ಸುಲಭವಾಗಿರಲಿಲ್ಲ ಎಂದಿರುವ ಶೆಟ್ಟಿ, "ಅಮೆರಿಕ ನನಗಾಗಿ ರೆಡ್ ಕಾರ್ಪೆಟ್ ಹಾಸಿರಲಿಲ್ಲ. ಪ್ರತಿಯೊಂದು ತಿರುವಿನಲ್ಲೂ ನನ್ನನ್ನು ಪರೀಕ್ಷಿಸಿತು. ಹೇಗೆ ತೀರಿಸಬೇಕೆಂದು ತಿಳಿಯದ ಸಾಲದ ಹೊರೆ, ಸತತವಾಗಿ 'ನೋ' ಎಂದ ಕಂಪನಿಗಳು, ಕೈತಪ್ಪಿದ ಎಚ್-1ಬಿ (H1B) ವೀಸಾ ಲಾಟರಿಗಳು... ಕೊನೆಗೆ ಸ್ವಂತ ಉದ್ಯಮ ಕಟ್ಟಲು ಸಿಲಿಕಾನ್ ವ್ಯಾಲಿಯ ಆಕರ್ಷಕ ಸಂಬಳದ ಕೆಲಸವನ್ನೇ ತೊರೆದೆ. ಪ್ರತಿಯೊಂದು ಹೆಜ್ಜೆಯಲ್ಲೂ ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿತ್ತು," ಎಂದು ಬರೆದಿದ್ದಾರೆ.

ಅಸೂಯೆಯಿಂದ ನಕಲಿ ದೂರು ನೀಡಿದ್ದ ಪರಿಚಿತರು!

ತಮ್ಮ ಯಶಸ್ಸನ್ನು ಸಹಿಸದ ಕೆಲವು ಪರಿಚಿತರೇ ತಮ್ಮ ವಿರುದ್ಧ ವಲಸೆ ಅಧಿಕಾರಿಗಳಿಗೆ (USCIS) ದೂರು ನೀಡಿದ್ದ ಘಟನೆಯನ್ನು ಸಂಸ್ಥಾಪಕ ಹಾಗೂ ಸಿಇಒ ಸೈಮನ್ ನೆನಪಿಸಿಕೊಂಡಿದ್ದಾರೆ. "ಕೆಲವು ಅಸೂಯಾಪರ ವ್ಯಕ್ತಿಗಳು ನಾನು ವಂಚಕ ಎಂದು ಬಿಂಬಿಸಿ, ನನ್ನ ವಿರುದ್ಧ ಒಂದು ಬಲೆ ಹೆಣೆದರು. ಅದನ್ನು ಸುಂದರವಾಗಿ ಅಲಂಕರಿಸಿ USCIS ಗೆ ತಲುಪಿಸಿದರು. ಒಂದು ಕ್ಷಣ, ಪ್ರಪಂಚದ ಅತ್ಯಂತ ಶಕ್ತಿಶಾಲಿ ವಲಸೆ ವ್ಯವಸ್ಥೆಯು ಆ ಸುಳ್ಳು ದೂರಿಗೆ ಮರುಳಾಗುವ ಹಂತಕ್ಕೆ ತಲುಪಿತ್ತು. ಆದರೆ, ಈ ದೇಶವು ಕೊನೆಗೂ ನ್ಯಾಯಕ್ಕೆ ಹೆಸರುವಾಸಿ ಎಂಬುದನ್ನು ನಿರೂಪಿಸಿತು. ಅಂತಿಮವಾಗಿ ನನಗೆ ನ್ಯಾಯ ಸಿಕ್ಕಿತು."

ಸಹ-ವಲಸಿಗರಿಗೆ ಮತ್ತು ಕನಸುಗಾರರಿಗೆ ನೀಡಿದ ಸಂದೇಶ

ತಮ್ಮ ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಪ್ರಮುಖ ಕಾರಣವೇ ಇತರರಿಗೆ ಭರವಸೆ ತುಂಬುವುದು ಎಂದು ತಿಳಿಸಿರುವ ಅವರು, ಕಷ್ಟಪಡುತ್ತಿರುವ ವಲಸಿಗರಿಗೆ ಈ ಕೆಳಗಿನಂತೆ ಸಂದೇಶ ನೀಡಿದ್ದಾರೆ:

"ನೀವು ಎಫ್-1 (F1) ವಿದ್ಯಾರ್ಥಿ ವೀಸಾದಲ್ಲಿದ್ದು, ಮನೆಯಿಂದ ಸಾವಿರಾರು ಮೈಲಿ ದೂರದಲ್ಲಿದ್ದು ಭಯದಲ್ಲಿದ್ದರೆ... ಈ ಯಶಸ್ಸು ನಿಮಗಾಗಿ."

"ನೀವು H1B, O1, L1 ವೀಸಾದಲ್ಲಿದ್ದು, ಸಮಯದ ಗಡಿಯಾರ ನೋಡುತ್ತಾ ಲಾಟರಿ ಫಲಿತಾಂಶಕ್ಕೆ ಪ್ರಾರ್ಥಿಸುತ್ತಿದ್ದರೆ... ಇದು ನಿಮಗಾಗಿ."

"ಎಂದಿಗೂ ಮುಗಿಯದ ಗ್ರೀನ್ ಕಾರ್ಡ್ (Green Card) ಕಾಯುವಿಕೆಯಲ್ಲಿ ಸಿಲುಕಿಕೊಂಡಿದ್ದರೆ... ಇದು ನಿಮಗಾಗಿ."

"ನಿಮಗೆ ಸಿಕ್ಕ ಸಾಮಾನ್ಯ ಜೀವನಕ್ಕಿಂತ ದೊಡ್ಡದಾದ ಕನಸನ್ನು ಕಾಣುವ ಧೈರ್ಯ ನಿಮಗಿದ್ದರೆ... ಇದು ಖಂಡಿತ ನಿಮಗಾಗಿ."

ಮುಂದುವರಿದು, ನೀವು ಸಾಗುತ್ತಿರುವ ಅದೇ ಕಠಿಣ ಹಾದಿಯಲ್ಲಿ ನಾನೂ ನಡೆದು ಬಂದಿದ್ದೇನೆ. ಈ ಅನುಭವವು ವಲಸಿಗರ ಪರವಾಗಿ ನಿಲ್ಲುವ ನನ್ನ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ. ನನ್ನನ್ನು ಗಡೀಪಾರು ಮಾಡಬೇಕೆಂದು ಬಯಸಿದ್ದ ಟ್ರೋಲ್‌ಗಳ ಮಧ್ಯೆ, ನಾನು ಇವತ್ತು ಅಮೆರಿಕನ್ ಪೌರನಾಗಿದ್ದೇನೆ. ಆದರೆ ಮಾನಸಿಕವಾಗಿ ನಾನು ಇಂದಿಗೂ ವಲಸಿಗನೇ. ನಮಗಾಗಿ ನಾನು ಸದಾ ಹೋರಾಡುತ್ತೇನೆ. ಕಾನೂನನ್ನು ಗೌರವಿಸಿ, ಸರಿಯಾದ ಹಾದಿಯಲ್ಲಿ ಸಾಗಿ, ಕಷ್ಟಪಟ್ಟು ಕೆಲಸ ಮಾಡುತ್ತಿರಿ ಎಂದು ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ

ಸೈಮನ್ ಶೆಟ್ಟಿ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

"ಅಭಿನಂದನೆಗಳು ಸೈಮನ್! ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದಾಗಿನಿಂದ ಇಲ್ಲಿಯವರೆಗೆ ನೀವು ಬೆಳೆದು ಬಂದ ಹಾದಿ ನೋಡಿ ಹೆಮ್ಮೆಯಾಗುತ್ತದೆ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ನಿಮಗೆ ಅಮೆರಿಕನ್ ಪೌರತ್ವ ಸಿಗಲು ಒಟ್ಟು ಎಷ್ಟು ವರ್ಷಗಳು ಬೇಕಾದವು?" ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ. ಇನ್ನು ಹಲವರು "ಇದು ನಿಜಕ್ಕೂ ಸ್ಪೂರ್ತಿದಾಯಕ ಸಾಹಸ, ಹಾಗೂ ನಿಮ್ಮ ಸಾಧನೆಗೆ ಶುಭಾಶಯಗಳು ಸಹೋದರ," ಎಂದು ಅಭಿನಂದಿಸಿದ್ದಾರೆ.

ಯಾರೀ ಸೈಮನ್ ಶೆಟ್ಟಿ?

ಲಿಂಕ್ಡ್‌ಇನ್ (LinkedIn) ಪ್ರೊಫೈಲ್ ಪ್ರಕಾರ, ಸೈಮನ್ ಶೆಟ್ಟಿ ಅವರು ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (VTU) ಎಂಜಿನಿಯರಿಂಗ್ ಪದವಿ ಮುಗಿಸಿದ ನಂತರ, ಅಮೆರಿಕದ ಪ್ರತಿಷ್ಠಿತ ಅರಿಜೋನಾ ಸ್ಟೇಟ್ ವಿಶ್ವವಿದ್ಯಾಲಯದಿಂದ (Arizona State University) ಸ್ನಾತಕೋತ್ತರ ಪದವಿ (MS) ಪೂರೈಸಿದರು.

ತಮ್ಮ ವೃತ್ತಿಜೀವನವನ್ನು ಬಿಎಸ್ಎನ್ಎಲ್ (BSNL) ಸಂಸ್ಥೆಯಲ್ಲಿ ಇಂಟರ್ನ್ ಆಗಿ ಪ್ರಾರಂಭಿಸಿದ ಅವರು, ನಂತರ ಅಮೆರಿಕದ ದೈತ್ಯ ಕಂಪನಿಗಳಾದ ಟೆಸ್ಲಾ (Tesla) ಮತ್ತು ಲಿಫ್ಟ್ (Lyft) ನಂತಹ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಬಳಿಕ 2023 ರಲ್ಲಿ ತಮ್ಮದೇ ಆದ ಸ್ವಂತ ಟೆಕ್ ಕಂಪನಿಯನ್ನು ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

PREV
Read more Articles on
click me!

Recommended Stories

ಮನೆಯ ಗೋಡೆ ಕೊರೆಯುತ್ತಿದ್ದಾಗ ಸುರಿದ ಬಂಗಾರದ ನಾಣ್ಯಗಳು! ಕಾರ್ಮಿಕರಿಗೆ ಸಿಕ್ತು ಬರೋಬ್ಬರಿ ₹100 ಕೋಟಿ ಚಿನ್ನದ ನಿಧಿ!
ಕೇವಲ ಎತ್ತಲ್ಲ… ರೈತ ಕುಟುಂಬದ ‘ಮಗ’ನಾಗಿದ್ದ ಎತ್ತು! 5 ಸಾವಿರ ಜನರಿಗೆ ತಿಥಿ ಊಟ ಹಾಕಿ ಅಂತಿಮ ವಿದಾಯ