ಮನೆಯ ಗೋಡೆ ಕೊರೆಯುತ್ತಿದ್ದಾಗ ಸುರಿದ ಬಂಗಾರದ ನಾಣ್ಯಗಳು! ಕಾರ್ಮಿಕರಿಗೆ ಸಿಕ್ತು ಬರೋಬ್ಬರಿ ₹100 ಕೋಟಿ ಚಿನ್ನದ ನಿಧಿ!

Published : Aug 15, 2026, 01:35 PM IST
Gold treasure an Old House

ಸಾರಾಂಶ

ಹಳೆಯ ಮನೆಯೊಂದರ ದುರಸ್ತಿ ವೇಳೆ ಕಾರ್ಮಿಕರಿಗೆ ಗೋಡೆಯೊಳಗೆ ₹100 ಕೋಟಿ ಮೌಲ್ಯದ ಚಿನ್ನದ ನಿಧಿ ಪತ್ತೆಯಾಗಿದೆ. ತಮ್ಮ ಪ್ರಾಮಾಣಿಕತೆಯನ್ನು ಮೆರೆದ ಕಾರ್ಮಿಕರು ಅದನ್ನು ಪೊಲೀಸರಿಗೆ ಒಪ್ಪಿಸಿದ್ದು, ಇದೀಗ ಕಾನೂನಿನ ಪ್ರಕಾರ ಅದರ ಮಾಲೀಕರಿಗಾಗಿ ಕಾಯಲಾಗುತ್ತಿದೆ.

ಸಿನಿಮಾಗಳಲ್ಲಿ ಹಳೆಯ ಕಟ್ಟಡ ಅಥವಾ ಕೋಟೆಗಳ ಗೋಡೆ ಒಡೆದಾಗ ಚಿನ್ನದ ನಿಧಿ ಸಿಗುವುದನ್ನು ನೋಡಿರುತ್ತೇವೆ. ಆದರೆ, ಇಂತಹದ್ದೇ ಒಂದು ನಂಬಲಸಾಧ್ಯ ಘಟನೆ ನಿಜ ಜೀವನದಲ್ಲೂ ನಡೆದಿದೆ! ಬೆಲ್ಜಿಯಂನ ಈಸ್ಟ್ ಫ್ಲಾಂಡರ್ಸ್‌ನಲ್ಲಿ ಹಳೆಯ ಮನೆಯೊಂದರ ರಿಪೇರಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬರೋಬ್ಬರಿ ₹100 ಕೋಟಿ (ಅಂದಾಜು 9 ಮಿಲಿಯನ್ ಯುರೋ) ಮೌಲ್ಯದ ಬೃಹತ್ ಚಿನ್ನದ ನಿಧಿ ಸಿಕ್ಕಿದೆ!

ಘಟನೆ ನಡೆದಿದ್ದು ಹೇಗೆ? ನಾಣ್ಯವೆಂದು ಭಾವಿಸಿದ್ದ ವಿದ್ಯಾರ್ಥಿ!

ಈಸ್ಟ್ ಫ್ಲಾಂಡರ್ಸ್‌ನ ಡೆಂಡರ್‌ಮೊಂಡೆ ಪ್ರದೇಶದಲ್ಲಿರುವ ಹಳೆಯ ಕಟ್ಟಡವೊಂದರಲ್ಲಿ ಒಳಚರಂಡಿ (Sewage) ಪೈಪ್ ಅಳವಡಿಸುವ ಕೆಲಸ ನಡೆಯುತ್ತಿತ್ತು. ಕಾರ್ಮಿಕರು ನೆಲಮಾಳಿಗೆಯ ಗೋಡೆಯನ್ನು ಡ್ರಿಲ್ಲಿಂಗ್ ಮೆಷಿನ್‌ನಿಂದ ಕೊರೆಯುತ್ತಿದ್ದಾಗ, ಒಳಗಿನಿಂದ ಬಂಗಾರದ ನಾಣ್ಯಗಳು ಉದುರಲು ಪ್ರಾರಂಭಿಸಿದವು.

ಈ ಕಾಮಗಾರಿಯಲ್ಲಿ ಸಮ್ಮರ್ ಜಾಬ್ (ರಜಾ ದಿನದ ಕೆಲಸ) ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿ ಕೋಬೆ (Kobe) ಎಂಬಾತ ಮೊದಲಿಗೆ ಇವುಗಳನ್ನು ಸಾಮಾನ್ಯ 1 ಯುರೋ ನಾಣ್ಯಗಳು ಎಂದುಕೊಂಡಿದ್ದ. ಆದರೆ, ಡ್ರಿಲ್ಲಿಂಗ್ ಮುಂದುವರಿದಂತೆ ದೊಡ್ಡ ದೊಡ್ಡ ಚಿನ್ನದ ಗಟ್ಟಿಗಳು (Gold Bars) ಮತ್ತು ನಾಣ್ಯಗಳ ರಾಶಿಯೇ ಹೊರಬರಲಾರಂಭಿಸಿತು. ಆಗಲೇ ಕಾರ್ಮಿಕರಿಗೆ ತಾವು ನಿಂತಿರುವ ಜಾಗದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿಧಿಯಿದೆ ಎಂಬ ಅರಿವಾಗಿದ್ದು!

ತಟ್ಟೆ ತುಂಬಾ ಚಿನ್ನ: ಕಾರ್ಮಿಕರ ಅಪರೂಪದ ಪ್ರಾಮಾಣಿಕತೆ!

ಗೋಡೆಯ ಒಳಗಡೆಯಿಂದ ಪರಾತ್‌ಗಳ (ತಟ್ಟೆಗಳ) ತುಂಬ ಚಿನ್ನದ ನಾಣ್ಯಗಳು ಹಾಗೂ ಗಟ್ಟಿಗಳು ಪತ್ತೆಯಾಗಿವೆ. ಇಷ್ಟೊಂದು ಪ್ರಮಾಣದ ಚಿನ್ನವನ್ನು ಕಂಡು ಕಾರ್ಮಿಕರು ಕ್ಷಣಕಾಲ ಆಶ್ಚರ್ಯಚಕಿತರಾದರು.

ಆದರೆ, ಕಿಂಚಿತ್ತೂ ದುರಾಸೆಗೆ ಬೀಳದ ಸೈಟ್ ಮ್ಯಾನೇಜರ್ ಮಾರಿಯೋ ಹಾಗೂ ಅವರ ತಂಡ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತು. 'ಇಷ್ಟೊಂದು ಬೃಹತ್ ಪ್ರಮಾಣದ ಚಿನ್ನವನ್ನು ನಾವೇ ಇಟ್ಟುಕೊಳ್ಳುವುದು ಅಸಾಧ್ಯವಾಗಿತ್ತು. ಅಷ್ಟೇ ಅಲ್ಲದೆ ಅದು ಕಳ್ಳತನವಾಗುತ್ತಿತ್ತು. ಹಾಗಾಗಿ ತಕ್ಷಣ ಪೊಲೀಸರಿಗೆ ಒಪ್ಪಿಸಿದೆವು' ಎಂದು ಮ್ಯಾನೇಜರ್ ಹೇಳಿದ್ದಾರೆ.

ಈ ₹100 ಕೋಟಿ ಚಿನ್ನ ಯಾರಿಗೆ ಸೇರಿದ್ದು?

ಈ ಚಿನ್ನ ಪತ್ತೆಯಾದ ಆಸ್ತಿಯು ‘CAW Oost-Vlaanderen’ ಎಂಬ ಸಮಾಜ ಸೇವಾ ಸಂಸ್ಥೆಗೆ ಸೇರಿದ್ದಾಗಿದೆ.

5 ವರ್ಷಗಳ ಗಡುವು: ಬೆಲ್ಜಿಯಂ ಕಾನೂನಿನ ಪ್ರಕಾರ, ಈ ನಿಧಿಯ ಮೂಲ ಮಾಲೀಕರು ಯಾರೆಂದು ಪತ್ತೆಹಚ್ಚಲು ಮತ್ತು ಅವರು ಕ್ಲೈಮ್ ಮಾಡಲು 5 ವರ್ಷ (1,823 ದಿನಗಳು) ಕಾಲಾವಕಾಶ ನೀಡಲಾಗುತ್ತದೆ.

ಮಾಲೀಕರು ಬಾರದಿದ್ದರೆ ಪಾಲು: ಒಂದು ವೇಳೆ 5 ವರ್ಷಗಳಲ್ಲಿ ಯಾರೂ ಸೂಕ್ತ ಪುರಾವೆಯೊಂದಿಗೆ ಹಕ್ಕು ಚಲಾಯಿಸದಿದ್ದರೆ ಮತ್ತು ಇದು ಯಾವುದೇ ಅಪರಾಧ ಕೃತ್ಯಕ್ಕೆ ಸಂಬಂಧಿಸಿಲ್ಲ ಎಂದು ಸಾಬೀತಾದರೆ, ಸಿವಿಲ್ ಕಾನೂನಿನ ಅನ್ವಯ ಈ ನಿಧಿಯನ್ನು ಆಸ್ತಿಯ ಮಾಲೀಕರು (ಸಂಸ್ಥೆ) ಮತ್ತು ನಿಧಿ ಪತ್ತೆಹಚ್ಚಿದ ಕಾರ್ಮಿಕರ ನಡುವೆ ಹಂಚಿಕೆ ಮಾಡಲಾಗುತ್ತದೆ.

ಸ್ಥಳಕ್ಕೆ ಸಾರ್ವಜನಿಕರ ದಂಡು: ಪೊಲೀಸರಿಂದ ಎಚ್ಚರಿಕೆ & ವೈರಲ್ ಡಿಪಿ!

ಮನೆಯ ಗೋಡೆಯಲ್ಲಿ ₹100 ಕೋಟಿ ನಿಧಿ ಸಿಕ್ಕ ಸುದ್ದಿ ಹರಡುತ್ತಿದ್ದಂತೆ, ಮತ್ತಷ್ಟು ಚಿನ್ನ ಹುಡುಕಲು ಜನರು ಸ್ಥಳಕ್ಕೆ ಧಾವಿಸಲು ಶುರುಮಾಡಿದರು. ತಕ್ಷಣ ಎಚ್ಚೆತ್ತ ಪೊಲೀಸರು, ಇಡೀ ಕಟ್ಟಡವನ್ನು ಸಂಪೂರ್ಣ ತಪಾಸಣೆ ಮಾಡಲಾಗಿದ್ದು, ಎಲ್ಲ ಚಿನ್ನವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸಾರ್ವಜನಿಕರು ಅಲ್ಲಿಗೆ ಬಂದು ಸಮಯ ಹಾಳುಮಾಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕುತೂಹಲದ ಸಂಗತಿಯೆಂದರೆ, ಸ್ಥಳೀಯ ಪೊಲೀಸ್ ಠಾಣೆಯು ಈ ರೋಚಕ ಘಟನೆಯ ನೆನಪಿಗಾಗಿ ತಮ್ಮ ಅಧಿಕೃತ ಫೇಸ್‌ಬುಕ್ ಪ್ರೊಫೈಲ್ ಚಿತ್ರವನ್ನೇ ಚಿನ್ನದ ನಾಣ್ಯದ ಫೋಟೋಗೆ ಬದಲಾಯಿಸಿ ಸಂಭ್ರಮಿಸಿದೆ!

PREV
Read more Articles on
click me!

Recommended Stories

ಕೇವಲ ಎತ್ತಲ್ಲ… ರೈತ ಕುಟುಂಬದ ‘ಮಗ’ನಾಗಿದ್ದ ಎತ್ತು! 5 ಸಾವಿರ ಜನರಿಗೆ ತಿಥಿ ಊಟ ಹಾಕಿ ಅಂತಿಮ ವಿದಾಯ
ಬ್ರೇಕಪ್ ಸುದ್ದಿ ಬೆನ್ನಲ್ಲೇ ಮತ್ತೆ ತ್ರಿಶಾ ಪ್ರತ್ಯಕ್ಷ! ಯಾರ ಜೊತೆ ಎಲ್ಲಿ ಬಂದು ಚಮಕ್ ಕೊಟ್ರು ನೋಡಿ!