
ಅಪ್ಪ-ಮಗಳ ಸಂಬಂಧವೇ ಹಾಗೆ! ಮಗಳು ಕೇಳಿದ್ದನ್ನೆಲ್ಲ ಕೊಡಿಸುವ ಸಾಹುಕಾರ ಎಂಬ ಮಾತಿದೆ. ಅಂತೆಯೇ ದುಬೈನ ಶೇಖ್ ಒಬ್ಬರು ತಮ್ಮ ಪುಟ್ಟ ಮಗಳ ಆಸೆ ಈಡೇರಿಸಲು ಜಸ್ಟ್ 5 ನಿಮಿಷಗಳಲ್ಲಿ ಬರೋಬ್ಬರಿ 3.85 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
ಅಬುಧಾಬಿ ಅಂತಾರಾಷ್ಟ್ರೀಯ ಬೇಟೆ ಮತ್ತು ಕುದುರೆ ಸವಾರಿ ಪ್ರದರ್ಶನದಲ್ಲಿ (ADIHEX) ಅಪರೂಪದ ಘಟನೆ ನಡೆದಿದೆ. ಅಮೆರಿಕಾದಲ್ಲಿ ಬೆಳೆಸಲಾದ 'ಖಾರ್ಮೌಶಾ ಪ್ಯೂರ್ ಅಲ್ಟ್ರಾ ವೈಟ್' (Kharmousha Pure Ultra White) ಎಂಬ ಅಪರೂಪದ ಬಿಳಿ ಫಾಲ್ಕನ್ (ಡೇಗೆ) ಹರಾಜಿನಲ್ಲಿ ಬರೋಬ್ಬರಿ 1.5 ಮಿಲಿಯನ್ ಯುಎಇ ದಿರ್ಹಮ್‌ಗಳಿಗೆ ಮಾರಾಟವಾಗಿದೆ. ಭಾರತೀಯ ರೂಪಾಯಿಗಳಲ್ಲಿ ಇದರ ಮೌಲ್ಯ ಸುಮಾರು 3.85 ಕೋಟಿ ರೂಪಾಯಿಗಳು!
ಈ ವರ್ಷದ ADIHEX ಹರಾಜಿನಲ್ಲಿ ಈ ಹಕ್ಕಿ ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟವಾದ ದಾಖಲೆ ಬರೆದಿದೆ. ಇದರ ವಿಶೇಷತೆಗಳನ್ನ ನೋಡೋದಾದ್ರೆ ಇದು ಸಂಪೂರ್ಣವಾಗಿ ಬಿಳಿ ಬಣ್ಣದ ಗರಿಗಳನ್ನು ಹೊಂದಿದ್ದು, ನೋಡಲು ಅತ್ಯಂತ ಆಕರ್ಷಕವಾಗಿದೆ.
ಇದರ ತೂಕ ಸುಮಾರು 1,000 ಗ್ರಾಂ ಇದ್ದು, 16.5 ಇಂಚು ಉದ್ದ ಮತ್ತು 16.5 ಇಂಚು ಅಗಲವಿದೆ. ಅಮೆರಿಕಾದ ಮಾರ್ಕ್ ಮೊಗ್ಲಿಚ್ ಫಾಲ್ಕನ್ ಫಾರ್ಮ್‌ನಲ್ಲಿ ಇದನ್ನು ವಿಶೇಷವಾಗಿ ಬೆಳೆಸಲಾಗಿದೆ. ಇದರ ಶಾರೀರಿಕ ರಚನೆ ಮತ್ತು ಬೇಟೆಯಾಡುವ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದು ಹೇಳಲಾಗುತ್ತಿದೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ADIHEX ಪ್ರದರ್ಶನವು ವಿಶ್ವದಾದ್ಯಂತ ಫಾಲ್ಕನ್ ಪ್ರೇಮಿಗಳನ್ನು ಸೆಳೆಯುತ್ತದೆ. ಈ ಬಾರಿ ನಡೆದ 5ನೇ ಸುತ್ತಿನ ಹರಾಜಿನಲ್ಲಿ ಈ ಬಿಳಿ ಡೇಗೆ ಪ್ರಮುಖ ಆಕರ್ಷಣೆಯಾಗಿತ್ತು. ಈ ಪ್ರದರ್ಶನದಲ್ಲಿ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸುಮಾರು 55 ಫಾಲ್ಕನ್ ಸಾಕಣೆ ಕೇಂದ್ರಗಳು ಭಾಗವಹಿಸಿದ್ದವು. ಕಳೆದ ವರ್ಷಕ್ಕಿಂತ ಈ ಬಾರಿ ಭಾಗಿಗಳ ಸಂಖ್ಯೆ 20 ಪ್ರತಿಶತದಷ್ಟು ಹೆಚ್ಚಾಗಿದೆ.
ಅರಬ್ ರಾಷ್ಟ್ರಗಳಲ್ಲಿ ಫಾಲ್ಕನ್‌ಗಳನ್ನು ಸಾಕುವುದು ಕೇವಲ ಹವ್ಯಾಸವಲ್ಲ, ಅದು ಅವರ ಸಂಪ್ರದಾಯ ಮತ್ತು ಪ್ರತಿಷ್ಠೆಯ ಸಂಕೇತ. ತನ್ನ ಮಗಳು ಈ ಅಪರೂಪದ ಹಕ್ಕಿಯನ್ನು ಕಂಡು ಇಷ್ಟಪಟ್ಟಿದ್ದರಿಂದ, ಆ ತಂದೆ ಎಷ್ಟೇ ಹಣವಾದರೂ ಪರವಾಗಿಲ್ಲ ಎಂದು ಕೇವಲ 5 ನಿಮಿಷಗಳಲ್ಲಿ ಹರಾಜನ್ನು ಗೆದ್ದು ಮಗಳ ಆಸೆಯನ್ನು ಪೂರೈಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ತಂದೆಯ ಪ್ರೀತಿ ಅಳೆಯಲಾಗದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.