
'ಮನೆಗೆಲಸಕ್ಕೆ ಹೆಂಡತಿಗೆ ಸಂಬಳ ನೀಡಬೇಕಾ?.., ಇದು ಬಹಳ ದಿನಗಳಿಂದ ನಡೆಯುತ್ತಿರುವ ತೀವ್ರ ಚರ್ಚೆಯ ವಿಷಯ. ಸಾಮಾನ್ಯವಾಗಿ ಗೃಹಿಣಿಯರ ದಿನವಿಡೀ ದುಡಿಮೆಯನ್ನು 'ಕರ್ತವ್ಯ'ವೆಂದು ಭಾವಿಸಿ ಕಡೆಗಣಿಸುವುದೇ ಹೆಚ್ಚು. ಆದರೆ, ಇಲ್ಲೊಬ್ಬರು ಪತಿರಾಯ ತಮ್ಮ ಗೃಹಿಣಿ ಪತ್ನಿ ಮಾಡುವ ಮನೆಗೆಲಸ ಹಾಗೂ ಅಡುಗೆಗಾಗಿ ಪ್ರತಿ ತಿಂಗಳು ತಪ್ಪದೇ ನಿಯಮಿತ ಸಂಬಳ (Salary) ನೀಡುತ್ತಿದ್ದಾರೆ! ಈ ವಿಶಿಷ್ಟ ವಿಚಾರ ಈಗ ರೆಡ್ಡಿಟ್ (Reddit) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.
ರೆಡ್ಡಿಟ್‌ನ 'TwentiesIndia' ಗ್ರೂಪ್‌ನಲ್ಲಿ ಬಳಕೆದಾರರೊಬ್ಬರು ತಮ್ಮ ಸರ್ಕಾರಿ ನೌಕರ ಅಣ್ಣನ ವೈವಾಹಿಕ ಜೀವನದ ನಿಯಮವೊಂದನ್ನು ಹಂಚಿಕೊಂಡಿದ್ದಾರೆ. ಅವರ ಅಣ್ಣ ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿದ್ದು, ಅವರ ಪತ್ನಿ ಗೃಹಿಣಿಯಾಗಿದ್ದಾರೆ. ತಮ್ಮ ಪತ್ನಿ ಪ್ರತಿದಿನ ಮಾಡುವ ಅಡುಗೆ, ಮನೆ ಸ್ವಚ್ಛಗೊಳಿಸುವಿಕೆ ಮತ್ತು ಮನೆ ನಿರ್ವಹಣೆಗಾಗಿ ಗಂಡ ಪ್ರತಿ ತಿಂಗಳು ಒಂದು ನಿಗದಿತ ಮೊತ್ತವನ್ನು 'ವೇತನ'ದ ರೂಪದಲ್ಲಿ ನೀಡುತ್ತಾರೆ. ವಿಶೇಷವೆಂದರೆ, ಈ ಸಂಬಳದ ಹಣದಿಂದ ಪತ್ನಿ ಮನೆಯ ಯಾವುದೇ ದಿನಸಿ, ಕರೆಂಟ್ ಬಿಲ್ ಅಥವಾ ಮಕ್ಕಳ ಖರ್ಚನ್ನು ನೋಡಿಕೊಳ್ಳಬೇಕಿಲ್ಲ. ಮನೆಯ ಸಮಸ್ತ ಖರ್ಚು-ವೆಚ್ಚಗಳನ್ನು ಗಂಡನೇ ಪ್ರತ್ಯೇಕವಾಗಿ ನಿಭಾಯಿಸುತ್ತಾರೆ. ಪತ್ನಿಗೆ ನೀಡುವ ಸಂಬಳ ಕೇವಲ ಆಕೆಯ ವೈಯಕ್ತಿಕ ಹಣವಾಗಿರುತ್ತದೆ.
ಮನೆಗೆಲಸವನ್ನು ಹೆಂಡತಿಯ ಬಾಧ್ಯತೆ ಎಂದು ಭಾವಿಸಿ ಯಾವುದೇ ಪ್ರತಿಫಲ ನೀಡದಿರುವುದನ್ನು ಈ ಗಂಡ ಸಾರಾಸಾಗಟಾಗಿ ತಿರಸ್ಕರಿಸಿದ್ದಾರೆ. ಅವರ ಪ್ರಕಾರ, ನಾವು ಹೊರಗಿನಿಂದ ಅಡುಗೆಯವರನ್ನೋ ಅಥವಾ ಮನೆಗೆಲಸದವರನ್ನೋ (House Manager) ನೇಮಿಸಿಕೊಂಡರೆ ಮಾರುಕಟ್ಟೆ ದರದಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿ ಹಣ ಕೊಡುತ್ತೇವೆ. ಹಾಗಿರುವಾಗ ಅದೇ ಕೆಲಸವನ್ನು ಅತ್ಯಂತ ಪ್ರೀತಿ ಮತ್ತು ಜವಾಬ್ದಾರಿಯಿಂದ ಮಾಡುವ ಸ್ವಂತ ಹೆಂಡತಿಯ ಶ್ರಮದ ಮೌಲ್ಯ ಶೂನ್ಯವಾಗುವುದೇಕೆ? ಈ ಪ್ರಶ್ನೆಗೆ ನ್ಯಾಯ ಒದಗಿಸುವ ಸಲುವಾಗಿಯೇ ಅವರು ಪತ್ನಿಗೆ ಪ್ರತಿ ತಿಂಗಳು ಅಧಿಕೃತವಾಗಿ ಸಂಬಳ ನೀಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.
'ಇದು ಗೃಹಿಣಿಯರಿಗೆ ಗೌರವ ನೀಡುವ ಅತ್ಯುತ್ತಮ ನಿರ್ಧಾರ. ಭಾರತದಲ್ಲಿ ಮಹಿಳೆಯರು ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಬೇಕಾದರೂ ಗಂಡನ ಮುಂದೆ ಕೈಚಾಚಬೇಕಾದ ಸ್ಥಿತಿ ಇದೆ. ಈ ವ್ಯವಸ್ಥೆಯಿಂದ ಗೃಹಿಣಿಯರ ಅಗೋಚರ ಶ್ರಮಕ್ಕೆ ಮಾನ್ಯತೆ ಸಿಗುವುದರ ಜೊತೆಗೆ, ಅವರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನ ಸಿಗುತ್ತದೆ' ಎಂದು ಹಲವರು ಶ್ಲಾಘಿಸಿದ್ದಾರೆ.
ಇನ್ನು ಕೆಲವರು ಈ ವಿಧಾನವನ್ನು ವಿರೋಧಿಸಿದ್ದು, 'ಮದುವೆ ಎಂಬುದು ಪರಸ್ಪರ ಪ್ರೀತಿ ಮತ್ತು ಸಮಾನತೆಯ ಸಂಬಂಧ. ಇಲ್ಲಿ ಸಂಬಳ ನೀಡುವುದರಿಂದ ಸಂಸಾರವು 'ಬಾಸ್ ಮತ್ತು ಉದ್ಯೋಗಿ' (Employer-Employee) ಮಾದರಿಯಾಗಿ ಬದಲಾಗುವ ಅಪಾಯವಿದೆ. ಪತ್ನಿಗೆ ಹಣ ನೀಡುವುದು ತಪ್ಪಲ್ಲ, ಆದರೆ ಅದನ್ನು 'ಮನೆಗೆಲಸದ ಸಂಬಳ' ಎಂದು ಕರೆಯುವುದು ಸಂಬಂಧದ ಮೌಲ್ಯವನ್ನು ಕುಗ್ಗಿಸುತ್ತದೆ. ಅಲ್ಲದೆ ಇದು ನೈಜ ವೃತ್ತಿಜೀವನಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ' ಎಂದು ವಾದಿಸಿದ್ದಾರೆ.
ಒಟ್ಟಿನಲ್ಲಿ, ಮನೆಯಲ್ಲಿ ಕೆಲಸ ಗೃಹಿಣಿಯರ ಶ್ರಮಕ್ಕೆ ಆರ್ಥಿಕ ಮೌಲ್ಯ ಮತ್ತು ಮಾನ್ಯತೆ ನೀಡುವ ಬಗ್ಗೆ ಈ ಪೋಸ್ಟ್ ಮತ್ತೊಮ್ಮೆ ಸಮಾಜದಲ್ಲಿ ಗಂಭೀರ ಚಿಂತನೆಗೆ ಕಾರಣವಾಗಿದೆ.