'ಯಾವ ಮಗುವಿಗೂ ಇಂಥ ಗುಡ್‌ಬೈ ಸಿಗಬಾರದು..' ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರನ್ನೂ ಕಾಡಿದ ವಿಡಿಯೋ!

Published : Jul 29, 2026, 07:53 PM IST
heartbreaking video of a cancer-stricken father giving his final message to his young son goes viral

ಸಾರಾಂಶ

ಕ್ಯಾನ್ಸರ್‌ನಿಂದ ಸಾವಿನಂಚಿನಲ್ಲಿರುವ ತಂದೆಯೊಬ್ಬರು ತನ್ನ ಪುಟ್ಟ ಮಗನಿಗೆ ಕೊನೆಯ ವಿದಾಯ ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಅಮ್ಮನ ಮಾತು ಕೇಳು, ತಂಗಿಯರನ್ನು ಚೆನ್ನಾಗಿ ನೋಡಿಕೋ' ಎಂದು ತಂದೆ ಹೇಳುವ ಮಾತು ನೆಟ್ಟಿಗರನ್ನು ಭಾವುಕವಾಗಿಸಿದೆ.

ಬೆಂಗಳೂರು (ಜು.29): ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಇಂದು ಬಹುತೇಕ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಅದಕ್ಕೆ ಕಾರಣ ವಿಡಿಯೋದಲ್ಲಿನ ಕಂಟೆಂಟ್‌. ಕ್ಯಾನ್ಸರ್‌ ಖಾಯಿಲೆಯಿಂದಾಗಿ ಸಾವಿನ ಹಾದಿಯಲ್ಲಿರುವ ತಂದೆ ತನ್ನ ಪುಟ್ಟ ಮಗನಿಗೆ ಕೊನೆಯ ಗುಡ್‌ಬೈ ಹೇಳುವ ವಿಡಿಯೋ. ಗುಜರಾತಿ ಭಾಷೆಯಲ್ಲಿರುವ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದು, ನೋಡಿದ ಎಲ್ಲರ ಕಣ್ಣಾಲಿಯನ್ನು ಒದ್ದೆ ಮಾಡಿದೆ. ಯಾವ ಮಗುವಿಗೂ ಕೂಡ ಇಂಥ ಚಿಕ್ಕ ವಯಸ್ಸಲ್ಲಿ ಈ ರೀತಿಯ ಗುಡ್‌ಬೈ ಸಿಗಬಾರದು ಎಂದು ಹೆಚ್ಚಿನವರು ಹೇಳಿದ್ದರೆ, ಇನ್ನೂ ಕೆಲವರು ತಮ್ಮ ತಂದೆಯನ್ನು ಕಳೆದುಕೊಂಡ ದಿನದ ಕೊನೇ ಮಾತುಕತೆಯನ್ನೂ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಇದ್ದಿದ್ದೇನು?

ಕ್ಯಾನ್ಸರ್‌ನಿಂದಾಗಿ ಕೊನೆಯುಸಿರೆಳೆಯುವ ಮುನ್ನ, ಅಪ್ಪ ತನ್ನ ಮಗನಿಗೆ ಹೇಳಿದ ಮಾತುಗಳಿವು, 'ಮಂತ್ರ, ನಾನು ಎಲ್ಲಾದರೂ ದೂರ ಹೋದರೆ, ನಿಮ್ಮ ಅಮ್ಮ ಹೇಳಿದಂತೆ ಕೇಳು. ಅಮ್ಮನನ್ನು ಚೆನ್ನಾಗಿ ನೋಡಿಕೋ. 'ಪಪ್ಪ ಎಲ್ಲಿದ್ದಾರೆ?' ಎಂದು ಕೇಳಬೇಡ. ನಿನಗಿಬ್ಬರು ತಂಗಿಯರನ್ನು ಚೆನ್ನಾಗಿ ನೋಡಿಕೋ. ನಿನಗೆ ಎಂದಾದರೂ ನನ್ನ ನೆನಪಾದರೆ, ನಾನು ನಿನ್ನ ಪಕ್ಕದಲ್ಲೇ ಇರುತ್ತೇನೆ' ಎಂದು ಆ ವಿಡಿಯೋದಲ್ಲಿದೆ.

ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗೆ ಸಾಕಷ್ಟು ರಿಪ್ಲೈಗಳು ಬಂದಿವೆ. ಅದರಲ್ಲಿ ಸೂರಜ್‌ ಕುಮಾರ್‌ ಎನ್ನುವ ವ್ಯಕ್ತಿ, 'ನನ್ನ ತಂದೆ ಕೂಡ ಬಾಯಿ ಕ್ಯಾನ್ಸರ್‌ನಿಂದ (Oral Cancer) ಬಳಲುತ್ತಿದ್ದರು. ಅವರು ತೀರಿಕೊಳ್ಳುವ ಒಂದು ದಿನ ಮುಂಚೆ ನನಗೆ ಹೀಗೆ ಹೇಳಿದ್ದರು. 'ಸೂರಜ್, ನಾನು ಬಹಳ ಬೇಗ ಈ ಲೋಕವನ್ನು ಬಿಟ್ಟು ಹೋಗಲಿದ್ದೇನೆ. ನೀನು ಈ ಮನೆಯ ಹಿರಿಯ ಮಗ, ನಿಮ್ಮ ಅಮ್ಮನನ್ನು ಚೆನ್ನಾಗಿ ನೋಡಿಕೋ, ಅದರಲ್ಲೂ ಮುಖ್ಯವಾಗಿ ನಿನ್ನ ತಮ್ಮನನ್ನು ಜಾಗರೂಕತೆಯಿಂದ ನೋಡಿಕೋ. ಇನ್ಮುಂದೆ ನನ್ನ ಜಾಗದಲ್ಲಿ ನಿಂತು ನೀನೇ ಮನೆಯ ಹೊಣೆ ಹೊರಬೇಕು.' ಇದನ್ನು ಕೇಳಿ ನನಗೆ ಕಣ್ಣೀರು ತಡೆಯಲಾಗಲಿಲ್ಲ. 'ದಯವಿಟ್ಟು ಈ ರೀತಿ ಮಾತನಾಡಬೇಡಿ, ನೀವು ಖಂಡಿತ ಇನ್ನೂ ಬಹಳ ಕಾಲ ಜೀವಿಸುತ್ತೀರಿ' ಎಂದು ಕಣ್ಣೀರಿಡುತ್ತಾ ಕೇಳಿಕೊಂಡೆ. ಆದರೆ, ಅವರು ನಮ್ಮನ್ನು ಬೇಗನೇ ಅಗಲಲಿದ್ದಾರೆ ಎಂಬುದು ನಮಗೆ ತಿಳಿದಿತ್ತು, ಏಕೆಂದರೆ ವೈದ್ಯರು ಈಗಾಗಲೇ ಆ ವಿಷಯವನ್ನು ನಮಗೆ ತಿಳಿಸಿದ್ದರು. ಆದರೂ ಆ ಕ್ಷಣ ಇಂದಿಗೂ ನನ್ನ ನೆನಪಿನಲ್ಲಿ ಹಸಿಯಾಗಿದೆ.

ಮರು ದಿನವೇ ಅವರು ತಮ್ಮ ಕೊನೆಯುಸಿರೆಳೆಯುವುದನ್ನು ನನ್ನ ಕಣ್ಣಾರೆ ಕಂಡೆ. ಅದು ನನಗೆ ಅತ್ಯಂತ ವೇದನಾಮಯ ಕ್ಷಣವಾಗಿತ್ತು. ಆದರೆ ಇನ್ನೊಂದೆಡೆ, ಕ್ಯಾನ್ಸರ್ ವಿರುದ್ಧದ ಆ ಭೀಕರ ನೋವಿನ ಹೋರಾಟದಿಂದ ಅವರಿಗೆ ಕೊನೆಗೂ ಮುಕ್ತಿ ಸಿಕ್ಕಿತಲ್ಲ, ಇನ್ಮುಂದೆ ಅವರು ಆ ಯಾತನೆಯನ್ನು ಅನುಭವಿಸಬೇಕಿಲ್ಲವಲ್ಲ ಎಂಬ ಸಮಾಧಾನವೂ ನನಗಿತ್ತು' ಎಂದು ಬರೆದುಕೊಂಡಿದ್ದಾರೆ.

'ನನ್ನ ಶತ್ರುವಿಗೂ ನಾನು ಇಂಥದ್ದನ್ನು ಬಯಸೋದಿಲ್ಲ. ಆ ಮಗುವಿಗೆ ಒಳ್ಳೆಯದಾಗಲಿ' ಎಂದು ಒಬ್ಬರು ಬರೆದುಕೊಂಡಿದ್ದಾರೆ. 'ಇದು ನನಗೆ ಕಣ್ಣೀರು ತರಿಸಿತು. ಮಗು ನಿನಗೆ ದೇವರು ಒಳ್ಳೆಯದು ಮಾಡಲಿ. ಆ ತಂದೆ ಆ ಮಗುವನ್ನು ದೇವರ ರೀತಿ ಕಾಯುತ್ತಾನೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ನನ್ನ ತಂದೆಯೊಂದಿಗೂ ನನ್ನ ಇದೇ ರೀತಿ ಮಾತುಕತೆಯಾಗಿತ್ತು. ಆದರೆ, ಅದಕ್ಕೂ ಮುನ್ನ ನನ್ನ ಜೀವನದ ಅರ್ಧವನ್ನು ಅವರೊಂದಿಗೆ ಕಳೆದಿದ್ದೆ' ಎಂದು ಮಹಿಳೆಯೊಬ್ಬರು ಬರೆದಿದ್ದಾರೆ.

'ಜಗತ್ತಿನಲ್ಲಿ ಎಷ್ಟೆಲ್ಲಾ ವಿಜ್ಞಾನಿಗಳಿದ್ದಾರೆ, ಸಂಶೋಧಕರಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳಿವೆ. ಆದರೆ, ಯಾರೂ ಕೂಡ ಕ್ಯಾನ್ಸರ್‌ಗೆ ಯಾಕೆ ಔಷಧಿಯನ್ನು ಕಂಡುಹಿಡಿಯೋ ಪ್ರಯತ್ನ ಮಾಡೋದಿಲ್ಲ' ಎಂದು ಮತ್ತೊಬ್ಬರು ಈ ವಿಡಿಯೋ ನೋಡಿ ಬೇಸರಪಟ್ಟುಕೊಂಡಿದ್ದಾರೆ.

'ತನ್ನ ಮಗನಿಗೆ ಈ ಮಾತನ್ನು ಹೇಳುವಾಗ ಆ ತಂದೆಯ ನೋವನ್ನು ನನಗೆ ಅರ್ಥಮಾಡಿಕೊಳ್ಳಲು ಸಹಿತ ಸಾಧ್ಯವಾಗುತ್ತಿಲ್ಲ. ಈ ವಿಡಿಯೋ ನನ್ನ ಘಾಸಿಗೊಳಿಸಿದೆ' ಎಂದು ಕಾಮೆಂಟ್‌ ಮಾಡಲಾಗಿದೆ.

 

 

PREV
Read more Articles on
click me!

Recommended Stories

ವಿಜಯ್ ಸೂರ್ಯ-ವೈಷ್ಣವಿ ಗೌಡ 'ಜೋಡಿ'ಯಾಗಿ ಗೆದ್ದಿರೋದು ಹೌದು! ಆದ್ರೆ ಈಗ 'ಬೇರೆ-ಬೇರೆ' ಯಾಗಿ ಗೆಲ್ಲೋದು ಯಾರು?
ಟೆಕ್ಕಿಗಳಾಗಿ ₹35 ಲಕ್ಷ ದುಡಿಯುವ ಕೆಲಸ ತೊರೆದು, ಕಂಟೆಂಟ್ ಕ್ರಿಯೇಟರ್ಸ್ ಆಗಿ ಕೋಟಿ, ಕೋಟಿ ಗಳಿಸುವ ಜೋಡಿ!