Bihar Boy Success Story: ಕನ್ನಡದ ಕಂಪು ಬೀರಿದ ಬಿಹಾರಿ ಕಂದ; ಹೆತ್ತವರಿಗೆ ಕನ್ನಡ ಬರಲ್ಲ, ಆದರೆ ಮಗ ಮಾತ್ರ ಕನ್ನಡ ಕ್ಲಾಸ್ ಟಾಪರ್!

Published : Aug 16, 2026, 06:15 PM IST
Bihar Migrant Student Topper 1

ಸಾರಾಂಶ

ಬಿಹಾರದಿಂದ ವಲಸೆ ಬಂದ ಕೂಲಿ ಕಾರ್ಮಿಕ ದಂಪತಿಯ 14 ವರ್ಷದ ಮಗ ಸತ್ಯಕುಮಾರ್ ಪಾಸ್ವಾನ್, ಭಾಷೆಯ ತಡೆಗೋಡೆ, ಬಡತನದಂತಹ ಎಲ್ಲಾ ಅಡೆತಡೆಗಳನ್ನು ಮೀರಿ ಕಾರವಾರದ ಕನ್ನಡ ಮಾಧ್ಯಮ ಶಾಲೆಯಲ್ಲಿ ತರಗತಿಯ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಬರಿಗಾಲಲ್ಲಿ ಶಾಲೆಗೆ ನಡೆದು ಹೋಗುತ್ತಿದ್ದ ಈತನ ಕಲಿಕೆಯ ಹಸಿವನ್ನು ಕಂಡು, ಸ್ಥಳೀಯರು ಬೈಸಿಕಲ್ ಕೊಡುಗೆ ನೀಡಿ ಪ್ರೋತ್ಸಾಹಿಸಿದ್ದಾರೆ.

ಬದುಕಿನ ಬಂಡಿ ಸಾಗಿಸಲು ಹುಟ್ಟಿದೂರನ್ನು ತೊರೆದು ಸಾವಿರಾರು ಕಿಲೋಮೀಟರ್ ದೂರದ ಕರಾವಳಿ ಕರ್ನಾಟಕದ ಕಾರವಾರಕ್ಕೆ ಬಂದಿಳಿದಾಗ, ಆ ಕೂಲಿ ಕಾರ್ಮಿಕ ದಂಪತಿಗೆ ಎದುರಾಗಿದ್ದು ಭಾಷೆಯ ದೊಡ್ಡ ತಡೆಗೋಡೆ. ಬಿಹಾರದ ಸಮಸ್ತಿಪುರದ ಸಂತೋಷ್ ಕುಮಾರ್ ಪಾಸ್ವಾನ್ ಮತ್ತು ಅಭಾದೇವಿ ದಂಪತಿ ಮುಡಿಗೇರೆಯ ಹೈನುಗಾರಿಕೆ ಫಾರಂನಲ್ಲಿ ದನ ಕಾಯುವ ಕಾಯಕಕ್ಕೆ ಸೇರಿಕೊಂಡಾಗ, ಅವರಿಗೆ ಕನ್ನಡದ ಒಂದೇ ಒಂದು ಅಕ್ಷರವೂ ಬರುತ್ತಿರಲಿಲ್ಲ. ಆದರೆ, ಅದೇ ಮಣ್ಣಿನಲ್ಲಿ ಬೆಳೆದ ಅವರ 14 ವರ್ಷದ ಮಗ ಸತ್ಯಕುಮಾರ್ ಪಾಸ್ವಾನ್, ಇಂದು ಇಡೀ ಆಸ್ನೋಟಿ ಗ್ರಾಮವೇ ಹೆಮ್ಮೆ ಪಡುವಂತೆ ಕನ್ನಡ ತರಗತಿಯ ಟಾಪರ್ ಆಗಿ ಹೊರಹೊಮ್ಮಿದ್ದಾನೆ.

ಸುಲಭವಾಗಿರಲಿಲ್ಲ ಆರಂಭದ ದಿನಗಳು!

ಅಸನೋಟಿಯ ಶಿವಾಜಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಸತ್ಯಕುಮಾರ್‌ಗೆ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಮನೆಯಲ್ಲಿ ಹಿಂದಿ-ಮೈಥಿಲಿ ವಾತಾವರಣ, ಸುತ್ತಲೂ ಕೊಂಕಣಿ ಪ್ರಭಾವಿತ ಪ್ರದೇಶ. ಆದರೂ ಈ ಪುಟ್ಟ ಬಾಲಕನಿಗೆ ಕನ್ನಡ ಭಾಷೆಯ ಮೇಲೆ ಎಲ್ಲೆಯಿಲ್ಲದ ಪ್ರೀತಿ ಮೂಡಿತು. ಅಕ್ಷರಗಳನ್ನು ತಿದ್ದಿ ತೀಡುತ್ತಾ, ದಿನವೂ ಶಾಲೆಗೆ 6 ಕಿಲೋಮೀಟರ್ ದೂರ ಬರಿಗಾಲಲ್ಲಿ ಹಾಗೂ ನಡೆದುಕೊಂಡೇ ಸಾಗುತ್ತಿದ್ದ ಈತನ ನಿಷ್ಠೆ ಮತ್ತು ಹಠ ಎಂತವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಮಗನ ಈ ಕಲಿಕೆಯ ಹಸಿವನ್ನು ಕಂಡ ಶಿಕ್ಷಣ ಪ್ರೇಮಿಗಳು ಹಾಗೂ ಎನ್‌ಜಿಒ ಗ್ರೂಪ್, ಸ್ವಾತಂತ್ರ್ಯ ದಿನಾಚರಣೆಯಂದು ಆತನಿಗೆ ಶಾಲಾ ಪ್ರಯಾಣಕ್ಕಾಗಿ ಹೊಸ ಬೈಸಿಕಲ್ ಕೊಡುಗೆಯಾಗಿ ನೀಡಿದ್ದಾರೆ.

ಕನ್ನಡ ಶಾಲೆಗೆ ಸೇರಿಸಿದ ಪೋಷಕರು!

ತಂದೆ-ತಾಯಿಗೆ ಕನ್ನಡದ ಓದು-ಬರಹ ಬರದಿದ್ದರೂ, ತಮ್ಮ ಮಕ್ಕಳಿಬ್ಬರನ್ನೂ ಕನ್ನಡ ಮಾಧ್ಯಮ ಶಾಲೆಗೇ ಸೇರಿಸಿ ಬೆಳೆಸುತ್ತಿರುವ ಆ ಪೋಷಕರ ತ್ಯಾಗ ಅಪಾರ. ಶಾಲೆಯ ಮುಖ್ಯಾಧ್ಯಾಪಕರಾದ ಗಣೇಶ್ ಬಿಷ್ಟಣ್ಣವರ್ ಅವರ ಮಾತುಗಳಲ್ಲಿ ಇದು ಕೇವಲ ಸಾಧನೆಯಲ್ಲ, ಒಂದು ಪವಾಡ. ಕೊಂಕಣಿ ಪ್ರಾಬಲ್ಯವಿರುವ ಮತ್ತು ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಈ ಪ್ರದೇಶದಲ್ಲಿ, ಬಿಹಾರದಿಂದ ಬಂದ ಕೂಲಿ ಕಾರ್ಮಿಕನ ಮಗ ಕನ್ನಡದಲ್ಲೇ ಪ್ರಥಮ ಸ್ಥಾನ ಗಳಿಸಿದ್ದು ನಮ್ಮೆಲ್ಲರಿಗೂ ಭಾವನಾತ್ಮಕ ಕ್ಷಣ ಎಂದು ಅವರು ಗಂಟಲುಬ್ಬಿ ನೆನಪಿಸಿಕೊಳ್ಳುತ್ತಾರೆ.

ಕನ್ನಡ ತಾಯಿ ಮಡಿಲಲ್ಲಿ ಅರಳಿದ ಕುಸುಮ!

ಕಷ್ಟಗಳು, ಬಡತನ ಮತ್ತು ಭೌಗೋಳಿಕ ಗಡಿಗಳು ಮನುಷ್ಯನ ಪ್ರತಿಭೆಗೆ ಅಡ್ಡಿಯಾಗಲಾರವು ಎಂಬುದಕ್ಕೆ ಸತ್ಯಕುಮಾರ್ ಜೀವಂತ ನಿದರ್ಶನ. ಯಾವುದೇ ಸೌಲಭ್ಯಗಳಿಲ್ಲದೆ, ಬರಿಗಾಲಲ್ಲಿ ಹೆಜ್ಜೆ ಹಾಕುತ್ತಾ ಕನ್ನಡ ತಾಯಿಯ ಮಡಿಲಲ್ಲಿ ಅರಳಿದ ಈ ಕುಸುಮ, ಭಾಷೆಯ ಗಡಿಗಳನ್ನು ಮೀರಿ ಪ್ರತಿಯೊಬ್ಬ ಕನ್ನಡಿಗನ ಹೃದಯ ಗೆದ್ದಿದೆ.

PREV
Read more Articles on
click me!

Recommended Stories

'ಯಶ್ ಜೊತೆ ಫ್ರೆಂಡ್‌ಶಿಪ್ ಮಾಡ್ಬೇಡಿ, ಅವ್ರು ಕ್ಲಾಶ್ ಮಾಡ್ತಾರೆ' ಅಂದಿದ್ರಾ ರಣವೀರ್ ಸಿಂಗ್? ಇದಕ್ಕೆ ಯಶ್ ಹೇಳಿದ್ದೇನು? ಇಲ್ಲೊಂದು ಟ್ವಿಸ್ಟ್ ಇದೆ!!
ಪಾತ್ರೆ ತೊಳೆದು ದಿನಕ್ಕೆ 3 ರೂಪಾಯಿ ದುಡಿದ ಬಾಲಕ ಈಗ ₹160 ಕೋಟಿ ಕಂಪನಿ ಮಾಲೀಕ