
ಹರ್ದೋಯಿ (ಆ.16) ವಿಷಕಾರಿ ಹಾವು ಕಚ್ಚಿದ ಪರಿಣಾಮ ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ತಮ್ಮ ಜೀವ ಉಳಿಸಲು ಸಹೋದರು 1 ಗಂಟೆಯಲ್ಲಿ150 ಬಾರಿ ಕೆನ್ನಗೆ ಹೊಡೆದು ಎಚ್ಚರವಿರಿಸಿದ ಘಟನೆ ಉತ್ತರ ಪ್ರದೇಶದ ಹರ್ದೋಯಿನಲ್ಲಿ ನಡೆದಿದೆ. ಹೊಲದಿಂದ ಆಸ್ಪತ್ರೆ ದಾಖಲಿಸಿ ಆರಂಭಿಕ ಚಿಕಿತ್ಸೆ ನೀಡುವವರೆಗೆ ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳುವ ಮೂಲಕ ತಮ್ಮನ ಜೀವ ಉಳಿಸಿದ ಘಟನೆ ನಡೆದಿದೆ. ಅಣ್ಣನ ಸಮಯ ಪ್ರಜ್ಞೆ, ವೈದ್ಯರ ಸತತ ಪ್ರಯತ್ನಗಳ ಮೂಲಕ ಸದ್ಯ ಹಾವು ಕಡಿದ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ.
ಕಚೋನಾ ಪ್ರದೇಶದ ಗಮನಪುರ ನಿವಾಸಿ ಅರವಿಂದ್ ಹಾಗೂ ಆತನ ಸಹೋದರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಡಿದಿದೆ. 22ರ ಹರೆಯದ ಅರವಿಂದ್ ಹಾವು ಕಚ್ಚಿದ ಬೆನ್ನಲ್ಲೇ ಅಸ್ವಸ್ಥಗೊಂಡಿದ್ದಾನೆ. ಹಾವು ಕಡಿಯಿತು ಎಂದು ಕೂಗಿಕೊಂಡಾಗ ಸೋಹದರ ರಾಮ್ ಪ್ರಕಾಶ್ ಸ್ಥಳಕ್ಕೆ ಧಾವಿಸಿದ್ದಾನೆ. ಹಾವು ಅತ್ಯಂತ ವಿಷಕಾರಕವಾಗಿತ್ತು. ತಕ್ಷಣವೇ ಅರವಿಂದ್‌ನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾನೆ. ಜಿಲ್ಲಾ ಆಸ್ಪತ್ರೆ ಕೆಲ ದೂರ ಇದ್ದ ಕಾರಣ ಆತಂಕವೂ ಹೆಚ್ಚಾಗಿತ್ತು.
ವೈದ್ಯರ ಪ್ರಕಾರ ಹಾವು ಕಡಿದ ವ್ಯಕ್ತಿ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದರೆ ಅಪಾಯ ಹೆಚ್ಚು. ಹಾವಿನ ವಿಷ ಮೆದುಳು ಹಾಗೂ ಹೃದಯದ ಮೇಲೆ ಅತ್ಯಂತ ವೇಗವಾಗಿ ಪ್ರಭಾವ ಬೀರುತ್ತದೆ. ಇದರಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಇತ್ತ ಆಸ್ಪತ್ರೆ ದೂರವಿದ್ದ ಕಾರಣ ತಮ್ಮ ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಲು ರಾಮ ಪ್ರಕಾಶ್ 1 ಗಂಟೆಯಲ್ಲಿ 150 ಬಾರಿ ಕೆನ್ನಗೆ ಹೊಡೆದಿದ್ದಾನೆ. ಅರವಿಂದ್ ಕಣ್ಣುಗಳು ಮುಚ್ಚುತ್ತಿದ್ದಂತೆ ಆತನ ಮುಖಕ್ಕೆ ಹೊಡೆದು ಎಬ್ಬಿಸಿದ್ದಾನೆ. ಆಸ್ಪತ್ರೆ ದಾಖಲಿಸಿ ಒಂದೆಡೆ ವೈದ್ಯರು ಚಿಕಿತ್ಸೆ ಆರಂಭಿಸುತ್ತಿದ್ದಂತೆ ರಾಮ್ ಪ್ರಕಾಶ್ ಕೆನ್ನಗೆ ಹೊಡೆಯುವ ಮೂಲಕ ಪ್ರಜ್ಞೆ ತಪ್ಪದಂತೆ ನೋಡಿಕೊಂಡಿದ್ದಾನೆ.
ವಿಷಕಾರಿ ಹಾವಾಗಿದ್ದ ಕಾರಣ ವೈದ್ಯರು ತಕ್ಷಣವೇ ಆ್ಯಂಟಿ ವೆನಮ್ ಇಂಜೆಕ್ಷನ್ ನೀಡಿದ್ದಾರೆ. 15 ಇಂಜೆಕ್ಷನ್ ನೀಡಲಾಗಿದೆ. ಇತ್ತ ಸಹೋದರ ಪ್ರಜ್ಞೆ ತಪ್ಪದಂತೆ ನೋಡಿಕೊಂಡಿದ್ದಾನೆ. ಇದರ ಪರಿಣಾಮ ಹಾವಿನ ವಿಷ ಮೆದಳು ಹಾಗೂ ಹೃದಯದ ಮೇಲೆ ತೀವ್ರ ಪರಿಣಾಮ ಬೀರದಂತೆ ನೋಡಿಕೊಂಡಿದ್ದಾನೆ. ಪರಿಣಾಮ ಅರವಿಂದ್ ಪ್ರಾಣ ಉಳಿದಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರವಿಂದ್ ನಿಧನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ.
ಯುವಕ ಪ್ರಜ್ಞಾವಸ್ಥೆಯಲ್ಲೇ ಇದ್ದ, ಇತತ್ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಯುವಕ ಬದುಕುಳಿದಿದ್ದಾನೆ ಎಂದು ಹರ್ದೋಯಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. 25 ಗಂಟೆಗಳ ಕಾಲ ಇಂಜೆಕ್ಷನ್ ನೀಡಲಾಗಿದೆ. ಅಪಾಯದಿಂದ ಪಾರಾಗಿರುವ ಅರವಿಂದ್‌ಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇತ್ತ ಪ್ರಜ್ಞೆ ಕಳೆದುಕೊಳ್ಳದಂತೆ ನೋಡಿಕೊಂಡು ತಮ್ಮನ ಪ್ರಾಣ ಉಳಿಸಿದ ರಾಮ್ ಪ್ರಕಾಶ್ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.