ಆಟೋದಲ್ಲಿ ಮಿನಿ ಲೈಬ್ರರಿ; ಎಲ್ಲರೂ ಫೋನ್‌ನಲ್ಲೇ ಮುಳುಗಿರುವ ಕಾಲದಲ್ಲಿ ಈ ಚಾಲಕನ ಕಾರ್ಯ ಚೆನ್ನಾಗಿದೆ ಅಲ್ವಾ?

Published : Jul 20, 2025, 04:17 PM ISTUpdated : Jul 21, 2025, 10:45 AM IST
mini library in auto

ಸಾರಾಂಶ

ಮೈಸೂರಿನ ಆಟೋ ಚಾಲಕ ಡೇನಿಯಲ್ ಮರಡೋನ ತಮ್ಮ ಆಟೋವನ್ನೇ ಮಿನಿ ಲೈಬ್ರರಿಯನ್ನಾಗಿ ಪರಿವರ್ತಿಸಿದ್ದಾರೆ. ಪ್ರಯಾಣಿಕರಿಗೆ ಓದಲು ಅನುಕೂಲವಾಗುವಂತೆ ವಿವಿಧ ಪುಸ್ತಕಗಳನ್ನು ಇರಿಸಿ, ಓದುವ ಹವ್ಯಾಸ ಬೆಳೆಸಲು ಪ್ರೋತ್ಸಾಹಿಸುತ್ತಿದ್ದಾರೆ. ಈ ವಿಶಿಷ್ಟ ಉಪಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಸಣ್ಣ ಸಣ್ಣ ಕೆಲಸಗಳಿಂದಲೇ ನಮ್ಮನ್ನು ಅಚ್ಚರಿಗೊಳಿಸುವ ಜನ ನಮ್ಮ ಸುತ್ತಮುತ್ತ ಇದ್ದಾರೆ. ಅಂಥವರೊಬ್ಬರ ಬಗ್ಗೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೈಸೂರಿನ ಆಟೋ ಚಾಲಕರೊಬ್ಬರು ತಮ್ಮ ಆಟೋವನ್ನೇ ಮಿನಿ ಲೈಬ್ರರಿಯನ್ನಾಗಿ ಮಾಡಿದ್ದಾರೆ.

ಪ್ರಯಾಣಿಕರಿಗೆ ಓದಲು ಅನುಕೂಲವಾಗುವಂತೆ ಚಿಕ್ಕ ಚಿಕ್ಕ ಪ್ರಯಾಣದಲ್ಲೂ ಓದಲು ಸಿಗುವಂತೆ ಆಟೋದಲ್ಲಿ ಪುಸ್ತಕಗಳನ್ನು ಇಟ್ಟಿದ್ದಾರೆ. ಪ್ರಸಿದ್ಧ ದಾರ್ಶನಿಕರು, ಕವಿಗಳು, ಸಾಹಿತಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು, ಇತಿಹಾಸಕಾರರು, ಶಿಕ್ಷಣ ತಜ್ಞರು, ರಾಜಕೀಯ ಮೇಧಾವಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳ ಸಂದೇಶಗಳನ್ನು ಬುಕ್‌ಮಾರ್ಕ್ ಮಾಡಿ ಇಟ್ಟಿದ್ದಾರೆ. ಇತ್ತೀಚೆಗೆ ಈ ಆಟೋದಲ್ಲಿ ಪ್ರಯಾಣಿಸಿದ ಯುವತಿಯೊಬ್ಬರು ಈ ವಿಶೇಷ ಆಟೋದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಲಿಸಿಯ ಎಂಬ ಕಲಾವಿದೆ ಈ ಆಟೋ ಮತ್ತು ಚಾಲಕನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 30 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಆಟೋದಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವ ಪುಸ್ತಕಗಳನ್ನು ಮತ್ತು ಆಟೋವನ್ನು ಮಿನಿ ಲೈಬ್ರರಿ ಮಾಡುವಂತಹ ಐಡಿಯಾ ಮಾಡಿದ ಆಟೋ ಚಾಲಕನನ್ನೂ ಕೂಡ ವಿಡಿಯೋದಲ್ಲಿ ನೋಡಬಹುದು. ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಖ್ಯಾತಿಯ ಮೈಸೂರು ನಗರದಲ್ಲಿ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಊಬರ್ ಆಪ್ ಮೂಲಕ ಆಟೋ ಬುಕಿಂಗ್ ಮಾಡಿದ ಕಲಾವಿದೆ ಲಿಸಿಯ, ತನ್ನ ಪ್ರಯಾಣದಲ್ಲಿ ಕಂಡ ದೃಶ್ಯ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನು ಆಟೋ ಚಾಲಕನ ಪರಿಚಯಕ್ಕೆ ಬರುವುದಾದರೆ ಈತನ ಹೆಸರು ಡೇನಿಯಲ್ ಮರಡೋನ. ಈತ ಎಲ್ಲರಂತೆ ಕನ್ನಡ ಮಾಧ್ಯಮದಲ್ಲಿಯೇ ಓದಿಕೊಂಡು ಸ್ನಾತಕೋತ್ತರ ಪದವಿಯನ್ನೂ ಮಾಡಿದ್ದಾರೆ. ಆದರೆ, ತನ್ನ ವಿದ್ಯಾಭ್ಯಾಸ ಮತ್ತು ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಕೆಲಸಲ್ಲಾಗಿ ಅಲೆದಾಡಿರೂ ಎಲ್ಲಿಯೂ ಕೆಲಸ ಸಿಗದಿದ್ದಾಗ, ಸ್ವಂತ ದುಡಿಮೆಗಾಗಿ ಆಟೋ ಓಡಿಸಲು ಮುಂದಾಗಿದ್ದಾರೆ. ಆಟೋ ಓಡಿಸುವ ಮೂಲಕವೇ ಮಾಸಿಕ 40 ಸಾವಿರ ರೂ. ದುಡಿಮೆ ಮಾಡುತ್ತಿದ್ದಾರೆ.

 

ಆಟೋ ಚಾಲಕ ಡೇನಿಯಲ್‌ಗೆ ಓದುವ ವಿಪರೀತ ಹವ್ಯಾಸವಿದ್ದು, ಪ್ರತಿನಿತ್ಯ ಇಂಗ್ಲೀಷ್ ಮತ್ತು ಕನ್ನಡ ಪತ್ರಿಕೆ ಹಾಗೂ ಇಂಗ್ಲೀಷ್ ಪುಸ್ತಕಗಳನ್ನು ಓದುವುದನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ, ಡೇನಿಯಲ್ ತನ್ನ ಓದುವ ಅಭ್ಯಾಸವನ್ನು ಇತರರಿಗೂ ಮೈಗೂಡಿಸಿಕೊಳ್ಳಲು ನೆರವಾಗಬೇಕು ಎನ್ನುವ ದೃಷ್ಟಿಕೋನದಿಂದ ತನ್ನ ಆಟೋವನ್ನೇ ಮಿನಿ ಲೈಬ್ರರಿಯಾಗಿ ಮಾಡಿದ್ದಾರೆ. ಇಲ್ಲಿ ಪ್ರಯಾಣಿಕರು ತನ್ನ ಆಟೋ ಹತ್ತಿದ ತಕ್ಷಣ ಓದುತ್ತಾ ಕುಳಿತಲ್ಲಿ ಟ್ರಾಫಿಕ್ ಮರೆತು ತಾವಿರುವ ಜಾಗ ತಲುಪುವವರೆಗೂ ಒಂದಷ್ಟು ಜ್ಞಾನ ಪಡೆಯುವ ಕೆಲಸವಾಗಬೇಕು ಎನ್ನುವುದು ಇವರ ಆಶಯವಾಗಿದೆ. ಹೆಚ್ಚಾಗಿ ಇಂಗ್ಲೀಷ್ ಪುಸ್ತಕಗಳಿದ್ದು, ಕನ್ನಡ ಪುಸ್ತಕಗಳನ್ನೂ ಇಟ್ಟುಕೊಂಡಿದ್ದಾರೆ.

ಇನ್ನು ಆಟೋ ಪ್ರಯಾಣಿಕಳಾಗಿದ್ದ ಲಿಸಿ ಕೂಡ ತನ್ನ ಪ್ರಯಾಣದ ವೇಳೆ ಪುಸ್ತಕ ಓದು ಮತ್ತು ದಾರ್ಶನಿಕರ ನುಡಿಗಳನ್ನು ಓದುವ ಮೂಲಕ ಆಟೋ ಚಾಲಕನ ಕಾರ್ಯಕ್ಕೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ನೂರಾರು ಪ್ರಯಾಣಿಕರು ಅವರ ಈ ಓದುವ ಹವ್ಯಾಸಕ್ಕೆ ಹಾಗೂ ಆಟೋವನ್ನು ಮಿನಿ ಲೈಬ್ರರಿ ಮಾಡಿದ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಅಭಿಪ್ರಾಯಗಳನ್ನೂ ಕೂಡ ಪತ್ರದ ಮೂಲಕ ಬರೆದುಕೊಟ್ಟಿದ್ದಾರೆ. ಡೇನಿಯಲ್ ಕೂಡ ಆಟೋ ಪ್ರಯಾಣಿಕರು ಕೊಟ್ಟ ಮೆಚ್ಚುಗೆಯ ಮಾತುಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರೂ ಫೋನ್‌ನಲ್ಲೇ ಮುಳುಗಿರುವ ಈ ಕಾಲದಲ್ಲಿ ಈ ಚಾಲಕ ಮಾಡಿರುವುದು ಚೆನ್ನಾಗಿದೆ ಅಲ್ವಾ? ಎಂಬ ಮಾತುಗಳು ಕೇಳಿಬರುತ್ತಿವೆ.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!