
ಸಾಮಾನ್ಯವಾಗಿ ಬಾರ್ ಒಳಗೆ ಹೋಗುವ ಪ್ರತಿಯೊಬ್ಬರೂ ಮದ್ಯ ಖರೀದಿ ಮಾಡಿ, ಅಲ್ಲಿ ಕುಡಿಯಲು ವ್ಯವಸ್ಥೆ ಇದ್ದರೆ ಕುಡಿದು ಬರುತ್ತಾರೆ. ಇಲ್ಲವೆಂದರೆ ಮದ್ಯ ಖರೀದಿಸಿ ತರುತ್ತಾರೆ. ಇನ್ನು ಬಾರ್‌ಗೆ ಮದ್ಯ ಸೇವನೆಗೆ ಹೋದವರ ಜೊತೆಯಲ್ಲಿ ಸುಮ್ಮನೇ ಹೋಗುವ ಸ್ನೇಹಿತರೂ ಇರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಾರ್ ಒಳಗೆ ಹೋಗಿ ಮದ್ಯ ಖರೀದಿ ಮಾಡದೇ, ಮದ್ಯ ಸೇವಿಸದೇ ಕೇವಲ ಟಾಯ್ಲೆಟ್ ಬಳಕೆ ಮಾಡಿ ಬಂದಿದ್ದಾನೆ. ಆತನಿಗೆ ಬಾರ್ ಮಾಲೀಕರು ಬರೋಬ್ಬರಿ ₹1000 ರೂ. ಬಿಲ್ ನೀಡಿದ್ದಾರೆ.
ಯುಕೆಯ (United Kingdom) ಕುಂಬ್ರಿಯಾದಲ್ಲಿರುವ ಒಂದು ಕಾಕ್‌ಟೈಲ್ ಬಾರ್‌ನಲ್ಲಿ ಟಾಯ್ಲೆಟ್ ಬಳಸಿದ ವ್ಯಕ್ತಿಗೆ 1000 ರೂಪಾಯಿ ಬಿಲ್ ಬಂದಿದೆ. ಉಲ್ವರ್‌ಸ್ಟನ್ ನಗರದ ಮಧ್ಯಭಾಗದಲ್ಲಿರುವ ಇಗ್ನಿಷನ್ ಕಾಕ್‌ಟೈಲ್ ಬಾರ್‌ನಲ್ಲಿ ಈ ಘಟನೆ ನಡೆದಿದೆ ಎಂದು ದಿ ಮಿರರ್ ವರದಿ ಮಾಡಿದೆ. ಬಾರ್‌ಗೆ ಬಂದ ವ್ಯಕ್ತಿ ಏನನ್ನೂ ಆರ್ಡರ್ ಮಾಡದೆ ನೇರವಾಗಿ ಟಾಯ್ಲೆಟ್‌ಗೆ ಹೋಗಿದ್ದಾನೆ. ಟಾಯ್ಲೆಟ್ ಬಳಸಿದ ನಂತರ ಆತ ಹೊರಗೆ ಹೋಗಲು ಪ್ರಯತ್ನಿಸಿದಾಗ ಮ್ಯಾನೇಜರ್ 10 ಯುರೋಗಳ (ಸುಮಾರು 1,000 ರೂಪಾಯಿ) ಬಿಲ್ ನೀಡಿದ್ದಾರೆ ಎಂದು ವರದಿಯಾಗಿದೆ. ಬಿಲ್‌ನಲ್ಲಿ 'ಶಿ@# ಟ್ಯಾಕ್ಸ್' ಎಂದು ಬರೆಯಲಾಗಿತ್ತು. ಈ ಘಟನೆಯ ಬಗ್ಗೆ ಬಾರ್ ಮ್ಯಾನೇಜ್‌ಮೆಂಟ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ.
'ಆತಿಥ್ಯದ ವಿಷಯದಲ್ಲಿ ಇದು ಕಷ್ಟಕರವಾಗಿದೆ, ಆದರೆ ನಮ್ಮ ಸ್ಥಳಕ್ಕೆ ಒಮ್ಮೆಯೂ ಬಂದಿರದ ವ್ಯಕ್ತಿ ನೇರವಾಗಿ ಹೋಗಿ ನಮ್ಮ ಟಾಯ್ಲೆಟ್ ಬಳಸಿ ನಂತರ ಒಂದು ನೀರು ಕೂಡ ಖರೀದಿಸದೆ ಹೊರಗೆ ಹೋಗಲು ಪ್ರಯತ್ನಿಸಿದ್ದಾನೆ. ಇದು ಮುಂದುವರಿಯುವುದರಿಂದ ಬೇಸರವಾಗಿದೆ. ನೀರಿನ ದರಗಳು ನಮಗೂ ಅನ್ವಯಿಸುತ್ತವೆ' ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಾರ್ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ಹಣನಾ ಅಥವಾ ಕಾರ್ಡ್‌ನಾ ಎಂದು ಕೇಳಿದಾಗ, ಕಾಂಟ್ಯಾಕ್ಟ್‌ಲೆಸ್ ಎಂದು ಆತ ಉತ್ತರಿಸಿದ್ದಾನೆ. ಆತನ ತಮಾಷೆಯ ಕ್ರಮಕ್ಕೆ 10 ಯುರೋ ವೆಚ್ಚವಾಗಿದೆ ಮತ್ತು ದಯವಿಟ್ಟು ಇತರರಿಗೂ ಎಚ್ಚರಿಕೆ ನೀಡಿ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಬಾರ್‌ನ ಈ ಪೋಸ್ಟ್ ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕರು ಬಾರ್‌ಗೂ ವಿವಿಧ ತೆರಿಗೆಗಳಿವೆ ಮತ್ತು ಆದ್ದರಿಂದ ಟಾಯ್ಲೆಟ್ ಬಳಸಿದರೂ ಏನನ್ನಾದರೂ ಖರೀದಿಸುವುದು ಸಾಮಾನ್ಯ ಸೌಜನ್ಯ ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ ಬಾರ್‌ನ ಕ್ರಮ ಅನ್ಯಾಯ ಎಂದು ಅನೇಕರು ಬರೆದಿದ್ದಾರೆ. ತುರ್ತಾಗಿ ಬಾರ್‌ಗೆ ಬಂದ ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿವೆಯೇ ಎಂದು ವಿಚಾರಿಸಿದ್ದೀರಾ ಎಂಬ ಪ್ರಶ್ನೆಗಳೂ ಎದ್ದಿವೆ. ಹೆಚ್ಚಿನ ಸಮಯ ಸಾರ್ವಜನಿಕ ಶೌಚಾಲಯಗಳು ಮುಚ್ಚಲ್ಪಟ್ಟಿರುತ್ತವೆ ಮತ್ತು ಅಲ್ಲಿಯೂ ಹಣ ಪಾವತಿಸಬೇಕಾಗುತ್ತದೆ ಎಂದು ಕೆಲವರು ಗಮನಸೆಳೆದಿದ್ದಾರೆ. ಆದರೆ, ಎಲ್ಲರ ಬಳಿಯೂ ಹಣ ಇರುವುದಿಲ್ಲ ಎಂದು ಇತರರು ಗಮನಸೆಳೆದಿದ್ದಾರೆ. ತಮ್ಮ ಪೋಸ್ಟ್‌ಗೆ ಬಾರ್‌ನ ಕ್ರಮವನ್ನು ಟೀಕಿಸುವ ಅನೇಕ ಕಾಮೆಂಟ್‌ಗಳು ಬಂದ ನಂತರ ಬಾರ್ ಪೋಸ್ಟ್ ಅಳಿಸಿದೆ ಎಂದು ವರದಿಯಾಗಿದೆ.