
ಲಾಟರಿ ಅಂದರೇನೇ ಹಾಗೆ, ಯಾರನ್ನು ಯಾವ ಸಮಯದಲ್ಲಿ ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಮಾಡುತ್ತೋ ಗೊತ್ತಾಗುವುದಿಲ್ಲ. ಇಲ್ಲೊಬ್ಬ ಆಟೋ ಚಾಲಕನಿಗೆ ಲಾಟರಿ ಹೊಡೆದು ಬರೋಬ್ಬರಿ 25 ಕೋಟಿ ರೂ. ಹಣವನ್ನು ಗೆದ್ದಿದ್ದಾನೆ. ಆದರೆ, ಈತ ಕೋಟ್ಯಾಧಿಪತಿಯಾಗಿ 3 ವರ್ಷಗಳು ಕಳೆದರೂ ಇನ್ನೂ ಮಿಡ್ಲ್ ಕ್ಲಾಸ್ ಜೀವನ ಮಾಡುತ್ತಿದ್ದಾನೆ. ಲಾಟರಿ ಹಣವನ್ನೆಲ್ಲಾ ಬ್ಯಾಂಕ್‌ನಲ್ಲಿಟ್ಟು ಬಡ್ಡಿ ಹಣದಲ್ಲಿ ಜೀವನ ಮಾಡುತ್ತಿದ್ದಾನೆ.
ನಾವು ಹೇಳುತ್ತಿರುವುದು ಕಳೆದ 2022ರಲ್ಲಿ ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂಪಾಯಿಗಳ ಮೊದಲ ಬಹುಮಾನ ಗೆದ್ದ ತಿರುವನಂತಪುರಂನ ಶ್ರೀಕಂಠೇಶ್ವರಂ ಮೂಲದ ಸಾಮಾನ್ಯ ಆಟೋ ಚಾಲಕನಾಗಿದ್ದ ಅನೂಪ್ ಬಗ್ಗೆ. ಈತ ಆಟೋ ಓಡಿಸುತ್ತಾ ಜೀವನ ಮಾಡುತ್ತಿದ್ದು, ಮದುವೆ ಹಾಗೂ ಒಂದು ಮಗುವೂ ಇದೆ. ಈತ ತನ್ನ ದುಡಿಮೆಯಲ್ಲಿ ಒಂಚೂರು ಹಣವನ್ನು ಲಾಟರಿ ಖರೀದಿಗೂ ಹಡಿಕೆ ಮಾಡುತ್ತಿದ್ದನು.
ಆದರೆ, ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳ ಸರ್ಕಾರದಿಂದ ಬಿಡುಗಡೆ ಮಾಡಿದ್ದ 25 ಕೋಟಿ ರೂ. ಮೌಲ್ಯದ ಲಾಟರಿಯನ್ನು ಖರೀದಿ ಮಾಡಿದ್ದನು. ಈ ವೇಳೆ ಆಟೋ ಚಾಲಕನಿಗೆ ಬಂಪರ್ ಲಾಟರಿ ಬಂದಿತ್ತು. ಇದಾದ ಒಂದೇ ದಿನದಲ್ಲಿ ಒಂದು ಲಕ್ಷಕ್ಕೆ ಪರದಾಡುತ್ತಿದ್ದ ಅನೂಪ್ 25 ಕೋಟಿ ರೂ. ಒಡೆಯನಾದನು. ಅಂದಿನಿಂದ ಆಟೋ ಚಾಲಕನ ಬದುಕೇ ಬದಲಾಗಿದೆ. ಒಬ್ಬ ಸಾಮಾನ್ಯ ಆಟೋ ಚಾಲಕ ಕೋಟ್ಯಾಧಿಪತಿಯಾದ ಕಾರಣ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಅನೂಪ್ ಲಾಟರಿ ಗೆದ್ದ ಬಳಿಕ ಅವರ ಸಹಾಯ ಕೇಳುವ ಮಂದಿ ಹೆಚ್ಚಾಗಿದ್ದರು. ಹೀಗೆ ಸಹಾಯ ಕೇಳಿಕೊಂಡು ಬಂದವರಿಗೆ ಆರಂಭದಲ್ಲಿ ತನಗೆ ಕೈಲಾದ ಸಹಾಯ ಮಾಡಿದ್ದಾನೆ.
ಲಾಟರಿ ಹಣದಿಂದ ಬರುವ ಬಡ್ಡಿಯಲ್ಲಿ ಜೀವನ:
ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಆಟೋ ಚಾಲಕ ಅನೂಪ್, ಸರ್ಕಾರದ ಓಣಂ ಹಬ್ಬದ 25 ಕೋಟಿ ರೂ. ಮೌಲ್ಯದ ಲಾಟರಿ ಗೆದ್ದರೂ ತನ್ನ ಕೈಗೆ ಬಂದಿದ್ದು ಕೇವಲ 15 ಕೋಟಿ ರೂ. ಮಾತ್ರ. ಉಳಿದ ಹಣ ಕೇಂದ್ರ ಮತ್ತು ರಾಜ್ಯದ ತೆರಿಗೆಯಾಗಿ ಕಡಿತ ಮಾಡಲಾಯಿತು. ಹೀಗೆ ಬಂದ ಹಣದಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೇಳಿದ್ದಕ್ಕೆ, ನಾನು ಗೆದ್ದ ಹಣದಿಂದ ಇಂದಿಗೂ ಏನನ್ನೂ ಮಾಡಿಲ್ಲ. ಬದಲಾಗಿ ಅದರಿಂದ ಬರುತ್ತಿರುವ ಬಡ್ಡಿಯ ಹಣದ ಮೇಲೆ ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಒಂದು ಸಣ್ಣ ಉದ್ಯಮ ಪ್ರಾರಂಭಿಸಿದ್ದೇನೆ. ಜೊತೆಗೆ ಲಾಟರಿ ಹಣದಿಂದ ಪಡೆದ ಬಡ್ಡಿಯಲ್ಲಿ ಬೇರೊಬ್ಬರು ನಿರ್ಮಿಸಿದ ಹಳೆಯ ಮನೆಯನ್ನು ಖರೀದಿಸಿದ್ದೇನೆ. ನನಗೆ ಯಾವಾಗಲೂ BMW ಕಾರು ಖರೀದಿಸಬೇಕೆಂದು ಆಸೆ ಇದೆ. ಪ್ರಸ್ತುತ ನನ್ನ ಬಳಿ ಹಣವಿದ್ದರೂ ಅದನ್ನು ಖರೀದಿಸಿಲ್ಲ. ಇನ್ನು ನಾನು ಲಾಟರಿ ಗೆದ್ದಾಗ ಹೇಳಿದಂತೆ ಹೋಟೆಲ್ ಆರಂಭಿಸಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಅದರಂತೆ ನಾನು ಇತ್ತೀಚೆಗೆ ಕೈತಮುಕ್ಕುವಿನಲ್ಲಿ 'ಹ್ಯಾಪಿ' ಎಂಬ ಹೋಟೆಲ್ ತೆರೆದಿದ್ದಾಗಿ ಹೇಳಿಕೊಂಡಿದ್ದಾರೆ.
ಅನೂಪ್ ಹೋಟೆಲ್ ಉದ್ಯಮಕ್ಕೂ ಮೊದಲು ಮಣಕಾಡ್‌ನಲ್ಲಿ ಲಾಟರಿ ವ್ಯವಹಾರ ನಡೆಸುತ್ತಿದ್ದರು. ಸಮಯದ ಕೊರತೆಯಿಂದಾಗಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ, ಇಂದಿಗೂ ಸಹ, ಅನೂಪ್ ಲಾಟರಿ ಆಡುತ್ತಾರೆ. ಅಲ್ಲದೆ, ನಿತ್ಯವೂ ಸಾಕಷ್ಟು ಮಂದಿ ನನ್ನ ಬಳಿ ಸಹಾಯ ಕೇಳಲು ಬರುತ್ತಿರುತ್ತಾರೆ. ನನಗೆ ಸಹಾಯ ಮಾಡುವಂತೆ ಕೇಳಿಕೊಂಡು ಹಲವು ಫೋನ್ ಕರೆಗಳು ಕೂಡ ಬರುತ್ತವೆ. ನಾನು ಯಾರಾರಿಗೆ ಅಂತಾ ಸಹಾಯ ಮಾಡಲಿ ಹೇಳಿ? ಇದ್ದಷ್ಟು ಹಣವನ್ನು ಖರ್ಚು ಮಾಡದೇ ಉಳಿತಾಯ ಮಾಡಿಕೊಂಡು ಹೋಗುತ್ತಿದ್ದು, ಉದ್ಯಮದಲ್ಲಿ ಹೂಡಿಕೆ ಮಾಡಲು ಆಲೋಚನೆ ಮಾಡುತ್ತಿರುವುದಾಗಿ ಅನೂಪ್ ಹೇಳಿಕೊಂಡಿದ್ದಾರೆ.