
ಬೆಂಗಳೂರು (ಆ.16): ಪ್ರಕೃತಿಯಲ್ಲಿ ಅಚ್ಚರಿಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಮಾತ್ರ ನಮ್ಮ ಕಣ್ಣಿಗೆ ಬೀಳುತ್ತವೆ. ಅಂಥದ್ದೇ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿ (Indian National Animal Tiger) ಮತ್ತು ರಾಷ್ಟ್ರೀಯ ಪಕ್ಷಿಯಾದ ನವಿಲು (National Bird Peacock) ಒಂದೇ ವಿಡಿಯೊ ಫ್ರೇಮ್‌ನಲ್ಲಿ ಸೆರೆಯಾಗಿರುವುದು ಈಗ ನೆಟಿಜನ್‌ಗಳ ಗಮನ ಸೆಳೆದಿದೆ.
ಸಾಮಾನ್ಯವಾಗಿ ಕಾಡಿನ ರಾಜ ಎಂದು ಕರೆಸಿಕೊಳ್ಳುವ ಹುಲಿ ಮತ್ತು ತನ್ನ ಸೌಂದರ್ಯದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸುವ ನವಿಲು, ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಭಾರತೀಯ ಅರಣ್ಯದಲ್ಲಿ ಸೆರೆಹಿಡಿಯಲಾದ ಈ ದೃಶ್ಯದಲ್ಲಿ, ರಸ್ತೆಯ ಒಂದು ಬದಿಯಲ್ಲಿ ಹುಲಿ ಗಂಭೀರವಾಗಿ ನಡೆದುಕೊಂಡು ಹೋಗುತ್ತಿದ್ದರೆ, ಮತ್ತೊಂದೆಡೆ ನವಿಲು ತನ್ನ ಎಂದಿನ ಗಾಂಭೀರ್ಯದಲ್ಲಿ ನಿಂತಿರುವುದು ಕಂಡುಬಂದಿದೆ.
ಯಾವುದೇ ರೀತಿಯ ಘರ್ಷಣೆ ಅಥವಾ ಪರಸ್ಪರ ಹೆದರಿಕೆಯಿಲ್ಲದೆ ಈ ಎರಡೂ ಪ್ರಾಣಿಗಳು ತಮ್ಮ ದಾರಿಯಲ್ಲಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಾಣಿಗಳ ದಟ್ಟಣೆಯನ್ನು ತಪ್ಪಿಸಲು ರಸ್ತೆಯನ್ನು ದಾಟುತ್ತಿರುವ ಹುಲಿ ಮತ್ತು ಅದನ್ನು ಶಾಂತವಾಗಿ ವೀಕ್ಷಿಸುತ್ತಿರುವ ನವಿಲು, ಪ್ರಕೃತಿಯ ಅಚ್ಚರಿಯನ್ನು ತೆರೆದಿಟ್ಟಿದೆ.
ವನ್ಯಜೀವಿಧಾಮದ ಹಾದಿಯಲ್ಲಿ ಹುಲಿ ಮತ್ತು ನವಿಲು ಶಾಂತವಾಗಿ ನಡೆಯುವ ದೃಶ್ಯ ಪ್ರಕೃತಿಶಾಸ್ತ್ರಜ್ಞ ರಾಕೇಶ್ ಭಟ್ ಚಿತ್ರೀಕರಿಸಿದ ಈ ವಿಡಿಯೋ ಆಗಿದೆ. ಇದನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ.ಎಂ. ಧಕಾತೆ (IFS) ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನವಿಲು ನಡೆಯುತ್ತಿರುವುದು ಕಾಣುತ್ತದೆ. ಅದರ ತುಸು ದೂರದ ಹಿಂದೆಯೇ ಹುಲಿ ನಡೆಯುತ್ತಿದೆ. ಹುಲಿ ಮತ್ತು ನವಿಲು ಎರಡೂ ಶಾಂತವಾಗಿವೆ ಎಂದು ವಿಡಿಯೋ ನೋಡಿದಾಗ ಅರ್ಥವಾಗುತ್ತದೆ. ಇನ್ನು ಕೆಲವು ನೆಟ್ಟಿಗರು ಹುಲಿ ಉದ್ದೇಶವೇ ಬೇರೆ ಇರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೊವನ್ನು ಟ್ವಿಟರ್ (ಎಕ್ಸ್) ಖಾತೆಯಲ್ಲಿ ಹಂಚಿಕೊಂಡ ನಂತರ, ವಿಶ್ವಾದ್ಯಂತ ನೆಟ್ಟಿಗರು ಇದನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. 'ಇದು ನಂಬಲು ಅಸಾಧ್ಯವಾದ ದೃಶ್ಯ, ಪ್ರಕೃತಿಯ ಸೌಂದರ್ಯಕ್ಕೆ ಇದು ಒಂದು ಉತ್ತಮ ಉದಾಹರಣೆ, ಹುಲಿಯ ಗಾಂಭೀರ್ಯ ಮತ್ತು ನವಿಲಿನ ಸೌಂದರ್ಯ ಒಂದೇ ದೃಶ್ಯದಲ್ಲಿರುವುದು ವಿಸ್ಮಯಕಾರಿ' ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಈ ಅಪರೂಪದ ದೃಶ್ಯ ಪ್ರಕೃತಿ ಪ್ರಿಯರಿಗೆ ಸಂತಸ ತಂದಿದ್ದು, ಭಾರತದ ಶ್ರೀಮಂತ ವನ್ಯಜೀವಿ ಸಂಪತ್ತನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದೆ. ವನ್ಯಜೀವಿಗಳ ಸಂರಕ್ಷಣೆಯ ಮಹತ್ವವನ್ನು ಈ ವಿಡಿಯೊ ಮತ್ತಷ್ಟು ಒತ್ತಿ ಹೇಳುತ್ತದೆ.
ಬೆಂಗಳೂರು ಸಿಟಿಯಲ್ಲಿಯೂ ನವಿಲು: ಬೆಂಗಳೂರು ನಗರದ ಸುತ್ತಲೂ ಎಷ್ಟೇ ಬೆಳವಣಿಗೆ ಆಗುತ್ತಿದ್ದರೂ ಗಿಡ-ಮರಗಳು, ಕೆರೆ ಕಾಲುವೆಗಳಿಗೇನೂ ಕಡಿಮೆಯಿಲ್ಲ. ಉದ್ಯಾನ ನಗರಿಯೂ ಆಗಿರುವ ಬೆಂಗಳೂರಿನಲ್ಲಿ ನವಿಲುಗಳು ಕೂಡ ವಾಸವಾಗಿವೆ. ಕೇವಲ ಕಾಡಿನಲ್ಲಿ ನವಿಲುಗಳು ವಾಸವಿದ್ದರೂ, ಬೆಂಗಳೂರಿನಂತಹ ಜನ ನಿಬಿಡ ಪ್ರದೇಶಗಳಿಗೂ ಕೆಲವೊಮ್ಮೆ ಆಹಾರವನ್ನರಸಿ ದಾಂಗುಡಿ ಇಡುತ್ತವೆ. ಕೆಂಗೇರಿ, ಪೀಣ್ಯ, ತುರಹಳ್ಳಿ ಫಾರೆಸ್ಟ್, ನೈಸ್ ರಸ್ತೆಗಳ ಬದಿಗಳಲ್ಲಿರುವ ಸ್ಥಳದಲ್ಲಿ ನವಿಲುಗಳು ಹೆಚ್ಚಾಗಿ ಕಾಣಸಿಗುತ್ತವೆ. ಈ ಹಿಂದೆ ತುರಹಳ್ಳಿ ಫಾರೆಸ್ಟ್ ಪಕ್ಕದಲ್ಲಿರುವ ಮನೆಗಳು ಹಾಗೂ ಕೆಂಗೇರಿ ಕೆರೆಯ ಬಳಿಯಿರುವ ಮನೆಗಳ ಮಹಡಿಗೆ ನವಿಲುಗಳು ಬಂದು ಕುಳಿತುಕೊಂಡಿದ್ದ ವಿಡಿಯೋಗಳು ಕೂಡ ವೈರಲ್ ಆಗಿದ್ದವು.