
ಬಾಲಿವುಡ್‌ನ ಪ್ರತಿಭಾವಂತ ನಟ ಅಕ್ಷಯ್ ಖನ್ನಾ ಅಭಿನಯದ ಇತ್ತೀಚಿನ 'ಧುರಂಧರ್' ಚಿತ್ರದ ದೃಶ್ಯವೊಂದು ಸದ್ಯ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸುತ್ತಿದೆ. ಚಿತ್ರದಲ್ಲಿ 'ರೆಹಮಾನ್ ಡಕಾಯತ್' ಅಲಿಯಾಸ್ 'ಶೇರ್-ಎ-ಬಲೋಚ್' ಎಂಬ ಪವರ್‌ಫುಲ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಬಹ್ರೇನ್ ಮೂಲದ ಖ್ಯಾತ ರಾಪರ್ ಫ್ಲಿಪ್ರಾಚಿ ಅವರ ‘FA9LA’ ಎಂಬ ಅರೇಬಿಕ್ ಹಿಪ್-ಹಾಪ್ ಟ್ರ್ಯಾಕ್‌ಗೆ ಅಕ್ಷಯ್ ನೀಡಿದ ಅಬ್ಬರದ ಎಂಟ್ರಿ ಸೀನ್ ಪ್ರೇಕ್ಷಕರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿದೆ. ಈ ಖಲೀಜಿ ಶೈಲಿಯ ಎನರ್ಜಿಟಿಕ್ ಹಾಡು 2024 ರಲ್ಲಿ ಬಿಡುಗಡೆಯಾಗಿದ್ದರೂ, ಅಕ್ಷಯ್ ಅವರ ನೃತ್ಯದ ನಂತರ ಭಾರತದಲ್ಲಿ ಇದು ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಿದೆ.
ಅಕ್ಷಯ್ ಖನ್ನಾ ಅವರ ಈ ವಿಭಿನ್ನ ನೃತ್ಯ ಶೈಲಿ (Hook Step) ಎಷ್ಟರಮಟ್ಟಿಗೆ ವೈರಲ್ ಆಗಿದೆಯೆಂದರೆ, ಜನರು ಇದನ್ನು 2025ರ ಅತಿದೊಡ್ಡ 'ಹುಕ್ ಸ್ಟೆಪ್' ಎಂದು ಕರೆಯುತ್ತಿದ್ದಾರೆ. ಇದೀಗ ಎಕ್ಸ್ (X) ನಲ್ಲಿ @TheSidMathur ಎಂಬ ಬಳಕೆದಾರರು ಹಂಚಿಕೊಂಡಿರುವ ಮೀಮ್ ವಿಡಿಯೋವೊಂದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಈ ವಿಡಿಯೋಗೆ "ಈ ವ್ಯಕ್ತಿ ತನ್ನ ಇಡೀ ವೃತ್ತಿಜೀವನದಲ್ಲಿ ಇದೇ ಒಂದು ಸ್ಟೆಪ್ ಅನ್ನು ಪುನರಾವರ್ತಿಸುತ್ತಾ ಬಂದಿದ್ದಾರೆ, ಆದರೆ ಅದು ಈಗ ವೈರಲ್ ಆಗಿದೆ" ಎಂಬ ತಮಾಷೆಯ ಅಡಿಬರಹ ನೀಡಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಅಕ್ಷಯ್ ಅವರು ತಮ್ಮ ಹಳೆಯ ಚಿತ್ರಗಳಲ್ಲೂ ಇದೇ ಮಾದರಿಯ ನೃತ್ಯ ಮಾಡುತ್ತಿರುವುದನ್ನು ಬಹಳ ಚಾಣಾಕ್ಷತನದಿಂದ ಎಡಿಟ್ ಮಾಡಿ ತೋರಿಸಲಾಗಿದೆ.
ಈ ಫನ್ನಿ ವಿಡಿಯೋ ಕಂಡು ಅಭಿಮಾನಿಗಳು ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒರ್ವ ಬಳಕೆದಾರರು, "ಇದು ಅಕ್ಷಯ್ ಖನ್ನಾ ಅವರ ನೈಜ ಸಿಗ್ನೇಚರ್ ಸ್ಟೆಪ್, ನಿರ್ದೇಶಕ ಆದಿತ್ಯ ಧರ್ ಅವರು ಈ ಸಣ್ಣ ವಿವರವನ್ನೂ ಅದ್ಭುತವಾಗಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ" ಎಂದು ಪ್ರಶಂಸಿಸಿದ್ದಾರೆ. ಮತ್ತೊಬ್ಬರು, "ಸರಿಯಾದ ಸಮಯ ಮತ್ತು ಸರಿಯಾದ ವೇದಿಕೆ ಸಿಕ್ಕಾಗ ಮಾತ್ರ ಹಳೆಯ ಶ್ರಮಕ್ಕೂ ದೊಡ್ಡ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅಕ್ಷಯ್ ಅವರ ಈ ನೃತ್ಯಕ್ಕೆ ಮಾರುಹೋಗಿದ್ದು, ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಇದನ್ನು ಅನುಕರಣೆ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ.
ತಂದೆ ವಿನೋದ್ ಖನ್ನಾ ಅವರ ನೆನಪು ಮತ್ತು ಹೋಲಿಕೆ
ಅರೇಬಿಕ್ ಬೀಟ್ಸ್ ಮತ್ತು ಅಕ್ಷಯ್ ಅವರ ಈ ವಿಶಿಷ್ಟ ಖದರ್ ನೋಡಿ ಜನರು ಇದನ್ನು 'ಅನಿಮಲ್' ಚಿತ್ರದ 'ಜಮಾಲ್ ಕುಡು' ಹಾಡಿಗೆ ಹೋಲಿಸುತ್ತಿದ್ದಾರೆ. ಕುತೂಹಲಕಾರಿ ವಿಷಯವೆಂದರೆ, ಅಕ್ಷಯ್ ಅವರ ಈ ನೃತ್ಯ ಶೈಲಿಯು ಅವರ ತಂದೆ, ಬಾಲಿವುಡ್‌ನ ದಂತಕಥೆ ವಿನೋದ್ ಖನ್ನಾ ಅವರ ಹಳೆಯ ನೃತ್ಯ ಶೈಲಿಯಿಂದ ಪ್ರೇರಿತವಾಗಿದೆ ಎಂದು ಹಲವರು ಗುರುತಿಸಿದ್ದಾರೆ. ವಿನೋದ್ ಖನ್ನಾ ಅವರು ಕೂಡ ಹಿಂದೆ ಕೆಲವು ಹಾಡುಗಳಲ್ಲಿ ಇದೇ ರೀತಿ ಭುಜ ಮತ್ತು ಕೈಗಳನ್ನು ವಿಶಿಷ್ಟವಾಗಿ ಆಡಿಸುತ್ತಾ ನರ್ತಿಸುತ್ತಿದ್ದರು. ಈ ಹೋಲಿಕೆಯು ಪ್ರಸ್ತುತ ವೈರಲ್ ಆಗಿರುವ ವಿಡಿಯೋಗೆ ಇನ್ನಷ್ಟು ಮೆರುಗು ನೀಡಿದೆ. ಒಟ್ಟಿನಲ್ಲಿ, ಅಕ್ಷಯ್ ಖನ್ನಾ ಅವರ ಈ ನ್ಯಾಚುರಲ್ ಡಾನ್ಸ್ ಈಗ ಸಾಮಾಜಿಕ ಜಾಲತಾಣದ ಹೊಸ ಸೆನ್ಸೇಷನ್ ಆಗಿ ಹವಾ ಸೃಷ್ಟಿಸುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ