ಕಳ್ಳತನ ತಡೆಯಲು ರಾಶಿ ರಾಶಿ ನೋಟುಗಳನ್ನ ಹೊಲದಲ್ಲಿ ಹೂತಿಟ್ಟ ರೈತ.. ವರ್ಷದ ಬಳಿಕ ಏನಾಯ್ತು..?

Published : Aug 10, 2026, 12:02 PM ISTUpdated : Aug 11, 2026, 12:57 PM IST
Farmer Lost his 5 Lakh Rupees Year after He Buried in His Farm

ಸಾರಾಂಶ

ರಾಜಸ್ಥಾನದ ಬಲೋತ್ರಾ ಜಿಲ್ಲೆಯ ರೈತ ಮಂಗಿಲಾಲ್ ಮೇಘವಾಲ್ ಜಮೀನು ಮಾರಾಟದಿಂದ ಬಂದ ₹5 ಲಕ್ಷವನ್ನು ಮನೆಯಲ್ಲಿ ಇಡುವ ಬದಲು ಹೊಲದಲ್ಲಿ ಪಾಲಿಥಿನ್ ಚೀಲದಲ್ಲಿ ಹೂತಿಟ್ಟಿದ್ದರು. ಬಳಿಕ ಹಣ ಹೂತ ಜಾಗವನ್ನೇ ಮರೆತರು. ಸುಮಾರು ಒಂದು ವರ್ಷದ ಬಳಿಕ ಹಣ ಪತ್ತೆಯಾದಾಗ ಗೆದ್ದಲುಗಳು ನೋಟುಗಳ ಬಹುತೇಕ ಭಾಗವನ್ನು ನಾಶಪಡಿಸಿದ್ದವು.

ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಹಣವನ್ನು ಸುರಕ್ಷಿತವಾಗಿ ಇಡಬೇಕೆಂಬ ಆತುರವೇ ಕೆಲವೊಮ್ಮೆ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು ಎಂಬುದಕ್ಕೆ ವಿಚಿತ್ರ ಉದಾಹರಣೆಯಾಗಿದೆ.

ಪಚ್ಪದ್ರಾ ನಿವಾಸಿ ಮಂಗಿಲಾಲ್ ಮೇಘವಾಲ್ ತಮ್ಮ ಜಮೀನು ಮಾರಾಟದಿಂದ ಸುಮಾರು ₹5 ಲಕ್ಷ ಪಡೆದಿದ್ದರು. ಆ ಹಣದಿಂದ ಹೊಲದಲ್ಲಿ ಒಂದು ಕೋಣೆ ನಿರ್ಮಿಸುವ ಉದ್ದೇಶ ಹೊಂದಿದ್ದರು. ಆದರೆ ಹಣವನ್ನು ಮನೆಯಲ್ಲಿ ಇಟ್ಟರೆ ಕುಟುಂಬದವರು ಕದ್ದುಬಿಡಬಹುದು ಅಥವಾ ಖರ್ಚು ಮಾಡಬಹುದು ಎಂಬ ಆತಂಕ ಅವರಲ್ಲಿತ್ತು. ಹೀಗಾಗಿ ಬ್ಯಾಂಕ್‌ನಲ್ಲಿ ಇಡುವ ಬದಲು ಹಣವನ್ನು ಯಾರಿಗೂ ತಿಳಿಯದಂತೆ ಹೊಲದಲ್ಲೇ ಬಚ್ಚಿಡಲು ನಿರ್ಧರಿಸಿದರು.

ಪಾಲಿಥಿನ್ ಚೀಲದಲ್ಲಿ ₹5 ಲಕ್ಷ... ನೆಲದೊಳಗೆ ರಹಸ್ಯವಾಗಿ ಹೂತಿಟ್ಟರು!

ಒಂದು ರಾತ್ರಿ ₹5 ಲಕ್ಷವನ್ನು ಪಾಲಿಥಿನ್ ಚೀಲದಲ್ಲಿ ಹಾಕಿ, ಹೊಲದಲ್ಲಿ ಗುಂಡಿ ತೆಗೆದು ಅದನ್ನು ನೆಲದೊಳಗೆ ಹೂತಿಟ್ಟರು. ಆದರೆ ನಂತರ ಹಣ ಬೇಕಾದಾಗ ಅದನ್ನು ನಿಖರವಾಗಿ ಯಾವ ಜಾಗದಲ್ಲಿ ಹೂತಿದ್ದರು ಎಂಬುದೇ ಅವರಿಗೆ ನೆನಪಾಗಲಿಲ್ಲ.

ಸುಮಾರು 10 ಬಿಘಾ ಜಮೀನಿನಲ್ಲಿ ಹಲವು ದಿನಗಳ ಕಾಲ ಹುಡುಕಾಟ ನಡೆಸಿದರೂ ಹಣ ಸಿಗಲಿಲ್ಲ. ಕೊನೆಗೆ ಈ ವಿಚಾರವನ್ನು ಪತ್ನಿ ಮತ್ತು ಪುತ್ರರಿಗೆ ತಿಳಿಸಿದರು. ಕುಟುಂಬದವರೂ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಹಣದ ಸುಳಿವು ಸಿಗದ ಹಿನ್ನೆಲೆಯಲ್ಲಿ ಹುಡುಕಾಟವನ್ನೇ ಕೈಬಿಡಬೇಕಾಯಿತು.

ಒಂದು ವರ್ಷದ ಬಳಿಕ ಸಿಕ್ಕಿತು ಹಣ... ಆದರೆ ನೋಟುಗಳ ಸ್ಥಿತಿ..!

ಸುಮಾರು ಒಂದು ವರ್ಷದ ಬಳಿಕ ಮಳೆಗಾಲದಲ್ಲಿ ಹೊಲವನ್ನು ಬಿತ್ತನೆಗೆ ಸಿದ್ಧಪಡಿಸುವ ಕೆಲಸ ಆರಂಭವಾಯಿತು. ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡುವಾಗ ಮಣ್ಣಿನೊಳಗಿದ್ದ ಚೀಲ ಮೇಲಕ್ಕೆ ಬಂದಿತ್ತು. ಮರುದಿನ ಹೊಲದ ಬೇಲಿ ದುರಸ್ತಿ ಮಾಡುವ ವೇಳೆ ಕುಟುಂಬದವರಿಗೆ ಆ ಚೀಲ ಸಿಕ್ಕಿತು.

ಚೀಲ ತೆರೆದಾಗ ಅವರಿಗೆ ಹಣ ಸಿಕ್ಕಿದ್ದರೂ, ₹500 ಮುಖಬೆಲೆಯ ನೋಟುಗಳು ಗೆದ್ದಲುಗಳ ಪಾಲಾಗಿದ್ದವು. ದೀರ್ಘಕಾಲ ಮಣ್ಣಿನೊಳಗೆ ಇದ್ದ ಕಾರಣ ನೋಟುಗಳು ಹರಿದು, ತುಂಡು-ತುಂಡಾಗಿದ್ದವು. ₹5 ಲಕ್ಷದ ಬಹುಪಾಲು ಹಣ ಬಳಕೆಗೆ ಬಾರದ ಸ್ಥಿತಿಗೆ ತಲುಪಿತ್ತು.

ಬ್ಯಾಂಕ್ ಮೊರೆ ಹೋದರೂ ಸಿಗಲಿಲ್ಲ ಪರಿಹಾರ!

ಹಾನಿಗೊಳಗಾದ ನೋಟುಗಳ ಅವಶೇಷಗಳನ್ನು ಕುಟುಂಬದವರು ಪಚ್ಪದ್ರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ತೆಗೆದುಕೊಂಡು ಹೋದರು. ಆದರೆ ನೋಟುಗಳ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಅವುಗಳನ್ನು ಸ್ವೀಕರಿಸಲು ಬ್ಯಾಂಕ್ ನಿರಾಕರಿಸಿತು. ನಂತರ ಬಲೋತ್ರಾದ ಮುಖ್ಯ ಶಾಖೆಯನ್ನು ಸಂಪರ್ಕಿಸಿದರೂ, ಹೆಚ್ಚಿನ ಪ್ರಕ್ರಿಯೆಗಾಗಿ ಜೈಪುರದ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು.

ಕುಟುಂಬದವರಿಗೂ ಆಘಾತ..!

ಮಂಗಿಲಾಲ್ ಅವರ ಕುಟುಂಬದ ಪ್ರಕಾರ, ಹಣವನ್ನು ಮೊದಲೇ ಮನೆಯವರಿಗೆ ತಿಳಿಸಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ರಹಸ್ಯವಾಗಿ ಹಣವನ್ನು ಮರೆಮಾಚಿದ್ದು, ಬಳಿಕ ಸ್ಥಳ ನೆನಪಿಲ್ಲದಿರುವುದೇ ಈ ಭಾರಿ ನಷ್ಟಕ್ಕೆ ಕಾರಣವಾಗಿದೆ.

ಈ ಘಟನೆ ಈಗ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದ್ದು, ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಾಗಲಿ, ಹೊಲದಲ್ಲಾಗಲಿ ಅಸುರಕ್ಷಿತವಾಗಿ ಬಚ್ಚಿಡುವುದಕ್ಕಿಂತ ಸುರಕ್ಷಿತ ಹಣಕಾಸು ವ್ಯವಸ್ಥೆ ಬಳಸುವುದು ಎಷ್ಟು ಮುಖ್ಯ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

PREV
Read more Articles on
click me!

Recommended Stories

Job ಹುಡುಕುತ್ತಿದ್ದ ಮಹಿಳೆ ಈಗ Eggs Product Manager, 6 ಕೋಳಿ ಮರಿಗಳಿಂದ ಶುರುವಾಯ್ತು ಬಿಸಿನೆಸ್
ಸಂಶೋಧನೆಗೆಂದು ಪತಿಯ ಮೃತದೇಹ ದಾನ ಮಾಡಿದ ಪತ್ನಿಗೆ ಕಾದಿತ್ತು ಘೋರ ಆಘಾತ: ಸೇನೆ ಮಾಡಿದ್ದೇನು ಗೊತ್ತಾ?!